ವಿಜಯ ದರ್ಪಣ ನ್ಯೂಸ್….
ದಿನದ ಸಣ್ಣ ಹೆಜ್ಜೆ, ಸಾಧನೆಯ ಗೆಜ್ಜೆ

ಜಯಶ್ರೀ.ಜೆ. ಅಬ್ಬಿಗೇರಿ ಇಂಗ್ಲಿಷ್ ಉಪನ್ಯಾಸಕರು, ಪ್ಲಾಟ್ ನಂ.124, ‘ಇಂಚರ’ ಚಂದ್ರಮೌಳಿ ಕಾಲೋನಿ, ಕಣಬರ್ಗಿ ರಸ್ತೆ, ಬೆಳಗಾವಿ-17,ಮೊ.9449234142
ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರೆಂದು ಕರೆಯುತ್ತಾರೆ. ಹಾಗಾದರೆ ಆ ರೀತಿಯ ಶ್ರೇಷ್ಠ ಸಾಧನೆ ಹಿಂದಿನ ಗುಟ್ಟೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಅಂಥ ದೊಡ್ಡ ಸಾಧನೆ ಒಂದೇ ದಿನದಲ್ಲಿ ಮಾಡಿದ್ದಲ್ಲ ಎಂಬ ಸಂಗತಿ ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಪಂದ್ಯ ಇರಲಿ ಇಲ್ಲದಿರಲಿ ಪ್ರತಿದಿನ ಬೆಳಿಗ್ಗೆ ಬ್ಯಾಟಿಂಗ್ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಅವರ ಅವಿರತ ಶ್ರಮ ಅಂದರೆ ದಿನ ನಿತ್ಯದ ಶಿಸ್ತು ಅವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಲು ಕೇವಲ ಜಾಣತನ ಅಥವಾ ಅದೃಷ್ಟ ಇದ್ದರೆ ಸಾಲದು ಬದಲಿಗೆ ನಿರಂತರ ಪ್ರಯತ್ನ ಮಾಡಲೇಬೇಕು. ಸಾಧಕರ ಸಾಧನೆಯ ಹಿಂದೆ ಅವರ ಕಠಿಣ ಪರಿಶ್ರಮದ ಜೊತೆಗೆ ಸ್ಥಿರತೆಯೂ ಇರುತ್ತದೆ ನಿತ್ಯ ಮಾಡುವ ಸಣ್ಣ ಸಣ್ಣ ಪ್ರಯತ್ನಗಳೇ ಮುಂದೊಂದು ದಿನ ದೊಡ್ಡ ಗೆಲುವಿಗೆ ದಾರಿ ಮಾಡಿಕೊಡುತ್ತದೆ. ಎಂಬುದನ್ನು ನೆನಪಿನಲ್ಲಿಡಬೇಕು.
ಸ್ಥಿರತೆ ಎಂದರೇನು?
ಅರಿಸ್ಟಾಟಲ್ ಉಲ್ಲೇಖದಂತೆ ‘ನಾವು ಪದೇ ಪದೇ ಏನನ್ನು ಮಾಡುತ್ತೇವೆಯೋ ಅದೇ ನಾವು ಆಗಿರುತ್ತೇವೆ. ಹಾಗಾಗಿ ಶ್ರೇಷ್ಠತೆ ಎನ್ನುವುದು ಕೇವಲ ಒಂದು ಕೆಲಸವಲ್ಲ. ಅದು ನಮ್ಮ ದೈನಂದಿನ ಅಭ್ಯಾಸ.’ ಒಂದು ದಿನ ಏಳೆಂಟು ಗಂಟೆ ಓದಿ ತಿಂಗಳು ಬಿಟ್ಟು ಮತ್ತೆ ಓದುವುದಕ್ಕಿಂತ ಪ್ರತಿದಿನ ಒಂದು ಗಂಟೆಯಂತೆ ಓದುವುದೇ ನಿಜವಾದ ಸ್ಥಿರತೆ. ಅಂದರೆ ಒಂದು ದಿನ ಮಾಡಿ ಮತ್ತೆಂದೋ ನೆನಪಾದಾಗ ಮಾಡಲು ಪ್ರಯತ್ನಿಸುವುದಲ್ಲ. ಸರಳವಾಗಿ ಹೇಳಬೇಕೆಂದರೆ ‘ನಿನ್ನೆ ಮಾಡಿದ್ದನ್ನು ಇಂದು ಮಾಡುವುದು ಮತ್ತೆ ನಾಳೆಯೂ ಮಾಡುವುದು.’ ಸಾಧನೆ ಎನ್ನುವುದು ಒಮ್ಮೊಮ್ಮೆ ಮಾಡುವ ಕೆಲಸವಲ್ಲ, ಅದನ್ನು ಪ್ರತಿದಿನ ನಿರಂತರವಾಗಿ ಮಾಡುವ ಅಭ್ಯಾಸವಾಗಿಸಿಕೊಳ್ಳಬೇಕು.
ಸಣ್ಣ ಸಣ್ಣ ಪ್ರಯತ್ನಗಳನ್ನು ದೈನಂದಿನ ಜೀವನದಲ್ಲಿ ದಿನಾಲೂ ಹೇಗೆ ಜಾರಿಯಲ್ಲಿಡುವುದು? ಸ್ಥಿರತೆಯನ್ನು ಹೇಗೆ ಕಾಯ್ದುಕೊಳ್ಳುವುದು? ಎನ್ನುವ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಇಲ್ಲಿವೆ ಕೆಲ ಸರಳ ಸಲಹೆಗಳು.
ರೂಪಿಸಿ
ಯಶಸ್ಸಿಗೆ ಶಿಸ್ತಿನ ಮಂತ್ರ ಬೇಕು. ಸ್ಥಿರತೆಗೂ ಶಿಸ್ತಿನ ಮಂತ್ರವೇ ಬೇಕು. ‘ಶಿಸ್ತು ಎನ್ನುವುದು ನೀವು ನಿಜವಾಗಿ ಬಯಸುವ ಗುರಿ ಮತ್ತು ಈಗ ನೀವು ಬಯಸುವ ಸೌಕರ್ಯಗಳ ನಡುವಿನ ಸೇತುವೆಯಾಗಿದೆ.’ ಎಂದಿದ್ದಾರೆ ಜಿಮ್ ರೋನ್, ಪ್ರತಿದಿನ ಒಂದು ನಿರ್ಧಿಷ್ಟ ಸಮಯದಲ್ಲಿ ನಿಮ್ಮ ಕೆಲಸವನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಮೆದುಳಿಗೆ ಆ ಕೆಲಸವನ್ನು ಮಾಡಲು ಪ್ರೇರೇಪಿಸುತ್ತದೆ. ಆರಂಭದಲ್ಲಿ ಕಷ್ಟವೆನಿಸಿದರೂ ಕಾಲಕ್ರಮೇಣ ಅದು ನಿಮ್ಮ ಜೀವನದ ಭಾಗವಾಗುತ್ತದೆ. ಜಾನ್.ಸಿ. ಮಾಕ್ಸ್‌ವೆಲ್ ಹೇಳಿದಂತೆ ‘ನಿಮ್ಮ ದೈನಂದಿನ ದಿನಚರಿಯನ್ನು ಬದಲಾಯಿಸುವವರೆಗೂ ನೀವು ನಿಮ್ಮ ಜೀವನವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಯಶಸ್ಸಿನ ರಹಸ್ಯವು ನಿಮ್ಮ ದಿನಚರಿಯಲ್ಲಿದೆ.’ ಕೇವಲ ಒಂದು ಹನಿ ನೀರಿಗೆ ಶಕ್ತಿ ಇರುವುದಿಲ್ಲ. ಆದರೆ ಅದೇ ಒಂದು ನೀರಿನ ಹನಿಗಳು ವರ್ಷಗಟ್ಟಲೆ ಒಂದೇ ಬಂಡೆಯ ಮೇಲೆ ನಿರಂತರವಾಗಿ ಬೀಳುತ್ತಿದ್ದರೆ ಕಠಿಣ ವಾದ ಬಂಡೆಯೂ ಸೀಳುತ್ತದೆ.
ಆರಂಭಿಸಿ
ದೊಡ್ಡದಾಗಿ ಸಾಧಿಸಬೇಕೆಂದು ಅಂದುಕೊಳ್ಳುತ್ತ ಅದನ್ನು ದಿನವೂ ಮುಂದೂಡಿದರೆ ಯಾವುದೇ ಪ್ರಯೋಜನವಿಲ್ಲ. ದೊಡ್ಡ ಗುರಿಗಳನ್ನು ಸಾಧಿಸುವಾಗ ಮೊದಲ ಹೆಜ್ಜೆ ಬಹಳ ಮುಖ್ಯ. ಒಂದೇ ಹೆಜ್ಜೆಯಲ್ಲಿ ಸಾವಿರ ಮೈಲಿ ಪಯಣ ಮುಗಿಸಲು ಸಾಧ್ಯವಿಲ್ಲ. ಅಂದರೆ ಒಂದೇ ದಿನದಲ್ಲಿ ಎಲ್ಲವನ್ನೂ ಬದಲಾ ಯಿಸಲು ಸಾಧ್ಯವಿಲ್ಲ. ಆದ್ದರಿಂದ ಸಣ್ಣ ಹೆಜ್ಜೆಯಿಂದಲೇ ಮೊದಲು ಆರಂಭಿಸಬೇಕು. ಆರಂಭ ಶೂರರಂತೆ ಮೊದಲು ಆರಂಭಿಸಿ ನಂತರ ಮರೆತು ಬಿಡುವ ಹಾಗಿಲ್ಲ. ಸಣ್ಣ ಪ್ರಯತ್ನಗಳ ಮೊತ್ತ ನಿತ್ಯ ಪುನರಾವರ್ತನೆ ಆಗಲೇಬೇಕು. ಇದನ್ನೇ ರಾಬಿನ್ ಶರ್ಮಾ ಹೀಗೆ ಹೇಳಿದ್ದಾರೆ’ ದೊಡ್ಡ ಸಾಧನೆ ಮಾಡಲು ಪ್ರತಿದಿನ ಸಣ್ಣ ಸಣ್ಣ ಪ್ರಯತ್ನಗಳನ್ನು ನಿರಂತರವಾಗಿ ಮಾಡಬೇಕು. ವರ್ಷದ ಕೊನೆಯಲ್ಲಿ ಆ ಸಣ್ಣ ಪ್ರಯತ್ನಗಳೇ ಒಂದು ದೊಡ್ಡ ಪವಾಡವಾಗಿ ಬದಲಾಗುತ್ತವೆ.’
ಕಲಿಯಿರಿ
ಕೆಲಸದಲ್ಲಿ ತಪ್ಪುಗಳು ಸಂಭವಿಸುವುದು ಸಹಜ. ಸಾಧನೆಯ ಹಾದಿಯಲ್ಲಿ ತಪ್ಪುಗಳು ಎದುರಾದಾಗ ಧೃತಿಗೆಡದೆ ಮುಂದುವರಿಯಬೇಕು. ಏಕೆಂದರೆ ಪ್ರತಿ ತಪ್ಪು ನಮಗೆ ಹೊಸ ಪಾಠವನ್ನು ಕಲಿಸುತ್ತದೆ. ಸ್ಥಿರವಾಗಿ ಪ್ರಯತ್ನಿಸುವ ದಾರಿಯಲ್ಲಿ ಸೋಲುಗಳು ಅಥವಾ ಹಿನ್ನೆಡೆಗಳು ಉಂಟಾಗುತ್ತವೆ.. ಒಂದು ದಿನ ಕೆಲಸ ಮಾಡಲು ಸಾಧ್ಯವಾಗದಿದ್ದರೆ ನಿರಾಸೆಗೊಳ್ಳಬೇಡಿ. ಮರುದಿನ ಮತ್ತೆ ಹೊಸ ಉತ್ಸಾಹದಿಂದ ಆರಂಭಿಸಿ. ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಅವುಗಳಿಂದ ಕಲಿಯುವ ಗುಣವನ್ನು ಬೆಳೆಸಿಕೊಳ್ಳಬೇಕು. ತಪ್ಪುಗಳನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮತ್ತೊಮ್ಮೆ ಅದೇ ತಪ್ಪನ್ನು ಪುನರಾವರ್ತಿಸದೆ ಮುನ್ನಡೆಯಬೇಕು.
ಗಮನವಿಡಿ
ಬ್ರೂಸ್ ಲೀ ಹೇಳಿದ ಮಾತು ಇಲ್ಲಿ ಬಹಳ ಸೂಕ್ತ ಎನಿಸುತ್ತದೆ. ‘ಒಂದೇ ಬಾರಿಗೆ 10,000 ವಿಭಿನ್ನ ಕಿಕ್‌ಗಳನ್ನು ಅಭ್ಯಾಸ ಮಾಡಿದವನಿಗೆ ನಾನು ಹೆದರುವುದಿಲ್ಲ. ಆದರೆ, ಒಂದೇ ಕಿಕ್ ಅನ್ನು 10,000 ಬಾರಿ ನಿರಂತರವಾಗಿ ಅಭ್ಯಾಸ ಮಾಡಿದವನಿಗೆ
ನಾನು ಹೆದರುತ್ತೇನೆ.’ ಮಾಡುವ ಕೆಲಸವನ್ನು ಪದೇ ಪದೇ ಬದಲಿಸುತ್ತಿದ್ದರೆ ನಿರೀಕ್ಷಿತ ಫಲ ಸಿಗುವುದಿಲ್ಲ. ಯಾವುದೇ ಒಂದು ಗುರಿಯ ಮೇಲೆ ಗುರಿಯಿಡಿ. ಅದರ ಮೇಲೆಯೇ ಗಮನವಿಡಬೇಕು. ಅದನ್ನು ಬಿಟ್ಟು ಫಲಿತಾಂಶದ ಮೇಲೆ ಗಮನವಿಟ್ಟರೆ ಒತ್ತಡ ಜಾಸ್ತಿಯಾಗುತ್ತದೆ. ಇಂದಿನ ಗುರಿಯ ಕಡೆ ಮಾತ್ರ ಗಮನವಿಡಿ. ಸ್ಥಿರತೆ ಕೆಡಲು ದೊಡ್ಡ ಶತ್ರುವೆಂದರೆ ಮೊಬೈಲ್. ಕೆಲಸದಲ್ಲಿರುವಾಗ ಫೋನ್ ಅನ್ನು ಫೋಕಸ್ ಮೋಡ್‌ಗೆ ಹಾಕಿ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಮೆದುಳು ತುಂಬಾ ಫ್ರೆಶ್ ಇರುತ್ತದೆ. ಹೀಗಾಗಿ ಆಗ ನೀವಂದುಕೊಂಡ ಕೆಲಸವನ್ನು ಆಗ ಮಾಡಿದರೆ ಉತ್ತಮ.
ಬದಲಿಸಿ
ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಭವಿಷ್ಯವನ್ನು ರೂಪಿಸಲು ಅಭ್ಯಾಸಗಳ ಪಾತ್ರ ತುಂಬಾ ಮುಖ್ಯವಾದುದು. ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದಂತೆ ‘ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಬಹುದು. ನಿಮ್ಮ ಅಭ್ಯಾಸಗಳು ಖಂಡಿತವಾಗಿಯೂ ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ..’ ಆದ್ದರಿಂದ ಇಂದಿನಿಂದಲೇ ಸಣ್ಣ ಹೆಜ್ಜೆಯನ್ನಿಡಿ. ಸ್ಥಿರತೆ ಎಂದರೆ ಒಂದೇ ದಿನ ದೊಡ್ಡ ಗುಡ್ಡವನ್ನು ಅಗೆಯುವುದಿಲ್ಲ. ಬದಲಿಗೆ ಪ್ರತಿದಿನ ಒಂದೊಂದು ಸಣ್ಣ ಕಲ್ಲನ್ನು ತೆಗೆದಿಡುವುದು. ಕೊನೆಗೆ ಆ ಗುಡ್ಡವೇ ಕರಗಿ ಹೋಗುತ್ತದೆ.
ಕೊನೆ ಹನಿ
ದಿನಾಲೂ ಮಾಡುವಾಗ ‘ಸ್ಥಿರತೆ ಎಂದರೆ ಯಾವುದೇ ಒಂದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸದೆ. ಪ್ರತಿದಿನ ನಿರಂತರವಾಗಿ ಮಾಡುವುದು’. ಒಂದೇ ರೀತಿಯ ಕೆಲಸವನ್ನು ಯಾವುದೇ ದೊಡ್ಡ ಬದಲಾವಣೆ ಕಾಣುವುದಿಲ್ಲ. ತಕ್ಷಣ ಫಲ ಸಿಗುವುದಿಲ್ಲ. ಆದರೆ ಧೃತಿಗೆಡದೆ ಪ್ರಯತ್ನವನ್ನು ದಿನವೂ ಮುಂದುವರೆಸಲೇಬೇಕು. ಫಲಿತಾಂಶದ ಬಗ್ಗೆ ಯೋಚಿಸಿದಾಗ ಬೇಗನೆ ಸುಸ್ತಾಗುತ್ತೇವೆ. ಆದರೆ ದಿನನಿತ್ಯದ ಕೆಲಸದ ಪ್ರಕ್ರಿಯೆಯನ್ನು ಪ್ರೀತಿಸಲು ಆರಂಭಿಸಿದಾಗ ಸ್ಥಿರತೆ ತಾನಾಗಿಯೇ ಹಿಂಬಾಲಿಸುತ್ತದೆ. ಸ್ಥಿರತೆಯನ್ನು ಸಾಧನೆ ಹಿಂಬಾಲಿಸುತ್ತದೆ.










