ವಿಜಯ ದರ್ಪಣ ನ್ಯೂಸ್……
ಬಸವೇಶ್ವರ ನಗರ – ಕನಕಶ್ರೀ ಲೇಔಟ್ ಸಂಪರ್ಕ ರಸ್ತೆ ದುಸ್ಥಿತಿ: ಸಾರ್ವಜನಿಕರ ಪರದಾಟ

ಬೆಂಗಳೂರು: ಬಾಬಸಾಹೇಬಪಾಳ್ಯ ಬಸವೇಶ್ವರ ನಗರ, ರಾಮೇಗೌಡ ಲೇಔಟ್, ಕೆಂಪೇಗೌಡ ಲೇಔಟ್ ಹಾಗೂ ಕನಕಶ್ರೀ ಲೇಔಟ್ಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಮಳೆ ನೀರು ತುಂಬಿ ಸಾರ್ವಜನಿಕರು ಪರದಾಡುವಂತಾಗಿದೆ.
ಈ ರಸ್ತೆ ನಿತ್ಯ ನೂರಾರು ವಾಹನ ಸವಾರರು, ಶಾಲಾ ಮಕ್ಕಳು, ವಯೋವೃದ್ಧರು ಓಡಾಡುವ ಪ್ರಮುಖ ರಸ್ತೆಯಾಗಿದೆ. ಕಳೆದ ಕೆಲ ತಿಂಗಳಿನಿಂದ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿ, ಸ್ವಲ್ಪ ಮಳೆಯಾದರೂ ನೀರು ನಿಂತು ಕೆಸರುಮಯವಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಘಟನೆಗಳು ನಡೆಯುತ್ತಿವೆ. ರಾತ್ರಿ ವೇಳೆ ವಾಹನ ಚಾಲನೆಗೆ ತೀವ್ರ ತೊಂದರೆಯಾಗುತ್ತಿದೆ.
ಸ್ಥಳೀಯ ನಾಗರಿಕರು ತಿಳಿಸಿರುವಂತೆ, “ಮಕ್ಕಳನ್ನು ಶಾಲೆಗೆ ಕಳಿಸೋದೇ ಕಷ್ಟ ಆಗಿದೆ. ಗುಂಡಿಯಲ್ಲಿ ನೀರು ತುಂಬಿ ವಾಹನಗಳು ಹಾಳಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ರಸ್ತೆ ದುರಸ್ತಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಹಲವು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.











