ವಿಜಯ ದರ್ಪಣ ನ್ಯೂಸ್…
ಸ್ವಲ್ಪ ಡ್ರಿಂಕ್ಸ್ ತಗೊಂಡಿದೀನಿ……
ಲೇಖನ: ವಿವೇಕಾನಂದ ಎಚ್ ಕೆ
ಸಾರಿ ಫ್ರೆಂಡ್ಸ್, ಸ್ವಲ್ಪ ಕುಡಿದಿದ್ದೇನೆ. ಕುಡಿದ ಮೇಲೆ ಸುಳ್ಳು ಹೇಳಬಾರದು. ನಾನು ಜಾಸ್ತಿನೇ ಕುಡಿದಿದ್ದೀನಿ. ಯಾಕೋ ಮನಸ್ಗೆ ಬಹಳ ಬೇಜಾರಾಯ್ತು. ನಮ್ಮಪ್ಪ, ಅಮ್ಮ, ಪಾಠ ಮಾಡಿದ ಮೇಷ್ಟ್ರುಗಳು, ಸುತ್ತಮುತ್ತ ಇದ್ದ ಹಿರಿಯರು, ಹಿತೈಷಿಗಳು, ಡಾಕ್ಟ್ರುಗಳು, ಪೊಲೀಸರು, ಡ್ರೈವರ್ಗಳು, ಕಂಡಕ್ಟರ್ ಗಳು, ಟೈಲರ್ಗಳು, ಕಸ ಗುಡಿಸೋರು ಎಲ್ಲಾ ನೆನಪಾಗುತ್ತಿದ್ದಾರೆ.
ಅವಾಗೆಲ್ಲ ಸಂಬಂಧಗಳು ಅಂದರೆ ಎಷ್ಟೊಂದು ಪ್ರೀತಿ ಇರ್ತಾ ಇತ್ತು. ಅಭಿಮಾನ ಇರ್ತಾ ಇತ್ತು. ಎಲ್ಲರೂ ಒಟ್ಟಿಗೆ ಸೇರಿಸಿಕೊಂಡು ಬದುಕಬೇಕು ಅನ್ನೋ ಆಸೆ ಇತ್ತು. ಜಗಳ ಇರ್ಲಿಲ್ಲ ಅಂತಲ್ಲ, ಜಗಳ ಇದ್ರೂ ಸ್ವಲ್ಪ ದಿನಕ್ಕೆ ಸರಿ ಹೋಗ್ತಾ ಇತ್ತು. ಯಾವುದೋ ಶುಭ ಸಮಾರಂಭದಲ್ಲಿ ಎಲ್ಲಾ ಮರೆಯುತ್ತಾ ಇದ್ರು. ಆದರೆ ಈಗ ಎಲ್ಲರೂ, ಎಲ್ಲಾ ಸಂದರ್ಭದಲ್ಲೂ, ಎಲ್ಲಾ ಸಂಬಂಧಗಳನ್ನು ಒಡಿಯೋದುಕ್ಕೆ ಪ್ರಯತ್ನಿಸುತ್ತಿದ್ದಾರೆ.
ಫ್ರೆಂಡ್ಸ್ ಬೇಕಾದ್ರೆ ನೀವು ಟಿವಿ ರಿಯಾಲಿಟಿ ಶೋ ಗಳನ್ನು ನೋಡಿ. ಅದು ಯಾವುದೋ ಕಿತ್ತೋದ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಜನಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಅಗ್ನಿಪರೀಕ್ಷೆ ಅಂತ ಕಾರ್ಯಕ್ರಮ ಇದೆ. ಅದರಲ್ಲಿ ಕೆಲವರನ್ನು ಸೆಲೆಕ್ಟ್ ಮಾಡ್ತಾವ್ರೆ..
ಫ್ರೆಂಡ್ಸ್, ಸಾರೀ ಸ್ವಲ್ಪ ಜಾಸ್ತಿ ಕುಡಿದಿದ್ದೇನೆ. ಅಲ್ಲಿ ಪ್ರತಿಯೊಬ್ಬ ಆಯ್ಕೆಗೆ ಬಂದಿರುವ ಸ್ಪರ್ಧಿಗಳಿಗೆ ಚಿತ್ರಹಿಂಸೆ ಕೊಡುತ್ತಾ ಇದ್ದಾರೆ. ಒಬ್ಬರಿಗೊಬ್ಬರು ತಂದಿಡ್ತಾವ್ರೆ. ಮನರಂಜನೆ ಅಂತ ಹೇಳಿ ವಿಕೃತ ಮೆರೀತಾ ಅವರೇ. ಅದನ್ನು ನೋಡಕ್ ಆಗ್ತಿಲ್ಲ ಫ್ರೆಂಡ್ಸ್. ಆದ್ರೂ ನಮ್ ಜನಕ್ಕೆ ಬುದ್ಧಿ ಬಂದಿಲ್ಲ. ಅಲ್ಲಿರೋ ಪಾರ್ಟಿಸಿಪೆಂಟು ಆ ಚಾನೆಲ್ ಅವರ ಜೀತದಾಳುವಿನಂತೆ ಅವರು ಹೇಳಿದಂಗೆ ಕುಣಿಬೇಕು. ವಿಕೃತ ಮನಸ್ಥಿತಿಯನ್ನು ಪ್ರದರ್ಶನ ಮಾಡಬೇಕು.
ಅದರಲ್ಲಿ ಭಾಗಿಯಾಗುವವರಿಗೂ ಸ್ವಲ್ಪನೂ ಸ್ವಾಭಿಮಾನ ಇಲ್ವಲ್ಲ ಫ್ರೆಂಡ್ಸ್. ಎಲ್ಲಾ ಪ್ರಚಾರಕ್ಕೆ, ದುಡ್ಡಿಗೆ ಮಾರ್ಕೊಂಡ್ರೆ ಹೆಂಗೆ ಫ್ರೆಂಡ್ಸ್ ? ಇನ್ನೊಂದ್ಯಾವುದೋ ಕಿತ್ತೋದ್ ಕಾರ್ಯಕ್ರಮ ಬರುತ್ತೆ, ಪ್ಯಾಟೆ ಹುಡ್ಗೀರಾ ಹಳ್ಳಿ ಪವರ್ ಅಂತೆ. ಏನ್ ಫ್ರೆಂಡ್ಸ್ ಹಳ್ಳಿಯಾಗಲಿ, ಪ್ಯಾಟೆಯಾಗಲಿ, ಸಂಬಂಧಗಳು, ಜೀವನ ಶೈಲಿ ಅದೇ ಅಲ್ವಾ ಫ್ರೆಂಡ್ಸ್. ಪ್ಯಾಟೆಯಲ್ಲಿ ಒಂದಷ್ಟು ವಸ್ತುಗಳು ಜಾಸ್ತಿ ಇರಬಹುದು ಅಷ್ಟೇ. ಅದನ್ನೇ ದೊಡ್ಡದಾಗಿ ಹಳ್ಳಿಯವರು ಅಂದ್ರೆ ಏನು ಗೊತ್ತಿಲ್ಲದವರು ಅಂತ ಟ್ರೀಟ್ ಮಾಡಿ ಅಲ್ಲಿನೂ ಒಬ್ಬರಿಗೊಬ್ಬರಿಗೆ ಹಳ್ಳಿಯವ್ರ್ ಮುಂದೆ ಮಾನ ಕಳೀತರಲ್ಲ ಫ್ರೆಂಡ್ಸ್. ಇದನ್ನು ನಮ್ಮ ಮಕ್ಕಳಿಗೆ ಟಿವಿಯಲ್ಲಿ ನೋಡ್ಸ್ ಬೇಕಾ ಫ್ರೆಂಡ್ಸ್. ಹೋಗ್ಲಿ ಟಿವಿ ಆಫ್ ಮಾಡೋಣ ಅಂದ್ರೆ ಮಕ್ಕಳ ಗಲಾಟೆ. ಟಿವಿ ಅವರಿಗೂ ಬುದ್ಧಿ ಬೇಡ್ವಾ ಫ್ರೆಂಡ್ಸ್..
ಎಲ್ಲೋ ಅದ್ಯಾರೋ ಜಡ್ಜ್ ಗಳು ಅನ್ನೋರು ಬಾಯಿಗ್ ಬಂದಂಗ್ ಬೈತಾರೆ. ಇವರು ಬೈಸ್ಕೊಂಡು ಜೀತ್ದೋರ್ ತರಾ ಅದರಲ್ಲಿ ಭಾಗವಹಿಸ್ತಾರಲ್ಲ ಫ್ರೆಂಡ್ಸ್ ಇವ್ರ್ಗೆ ತಲೆ ಇದಿಯಾ…
ಫ್ರೆಂಡ್ಸ್ ಯಾಕೋ ಬಹಳ ಬೇಜಾರ್ ಆಗುತ್ತೆ ಫ್ರೆಂಡ್ಸ್. ಮನುಷ್ಯತ್ವ ಸತ್ತು ಹೋಗಿದೆ ಫ್ರೆಂಡ್ಸ್. ಸ್ವಾಭಿಮಾನ ಮರೆಯಾಗಿದೆ ಫ್ರೆಂಡ್ಸ್. ದುಡ್ಡು ಪ್ರಚಾರ ಏನು ಬೇಕಾದರೂ ಮಾಡಿಸುತ್ತೆ ಫ್ರೆಂಡ್ಸ್.
ಇನ್ನೂ ಒಂದೆರಡು ಪೆಗ್ ಹಾಕ್ತೀನಿ ಫ್ರೆಂಡ್ಸ್ ಕ್ಷಮಿಸಿ.
ಸಿನಿಮಾಗಳಲ್ಲಿ ನಟಿಸುವ ನಟನ ಪಾತ್ರವನ್ನು ಕೃತಕ ಎಂದು ಗೊತ್ತಿದ್ದರೂ ಆ ವ್ಯಕ್ತಿಯನ್ನು ನಿಜ ಜೀವನದ ಸೂಪರ್ ಹೀರೋ ಎಂದು ಮಾಧ್ಯಮಗಳ ಪತ್ರಕರ್ತರು ವರ್ಣಿಸುವುದನ್ನು ನೋಡಿದರೆ ಅಂಧ ಅಭಿಮಾನಿಗಳಿಗಿಂತ ಇವರೇ ಇಷ್ಟೊಂದು ವರ್ಣಿಸೋದು ನೋಡಿದರೆ ತುಂಬಾ ನೋವಾಗುತ್ತದೆ ಫ್ರೆಂಡ್ಸ್. ಹಿಂಸೆಯನ್ನು, ಲೈಂಗಿಕತೆಯನ್ನು ವಿಜೃಂಭಿಸಿ, ಸಿನಿಮಾಗಳನ್ನು ಯಶಸ್ವಿ ಮಾಡಿ, ನಮ್ಮ ಮಕ್ಕಳು ಹಾಗಾಗಬಾರದು ಎಂದು ಹೇಗೆ ನಿರೀಕ್ಷಿಸುವುದು ಫ್ರೆಂಡ್ಸ್…
ಈ ಕಾರ್ಯಕ್ರಮನಾ ನಿಲ್ಸಿ ಅಂತ ಒಬ್ಬ ಹೆಣ್ಣು ಮಗಳು, ಒಬ್ಬ ಗಂಡ ಮಗ ಯಾರು ಹೇಳ್ತಾ ಇಲ್ಲ ಫ್ರೆಂಡ್ಸ್. ಎಲ್ಲರೂ ಕುಡಿದು ಬಿಟ್ಟಿದ್ದಾರಾ ಅಥವಾ ಎಲ್ಲರೂ ಮಜಾ ತಗೊಂಡು ಕೆಟ್ಟೋಗಿದಾರಾ? ಅರ್ಥ ಆಗ್ತಾ ಇಲ್ಲ ಫ್ರೆಂಡ್ಸ್……
ಅಲ್ ನೋಡಿದ್ರೆ ತೆರಿಗೆ ದುಡ್ಡಲ್ಲಿ ಈ ರಾಜಕಾರಣಿಗಳು ಮಜಾ ಉಡಾಯಿಸ್ತಾ, ಅವ್ನ್ ರಾಜೀನಾಮೆ ಕೊಡ್ಲಿ, ಇವನ್ ರಾಜೀನಾಮೆ ಕೊಡ್ಲಿ ಅಂತ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿಕೊಂಡು ಒಬ್ರಿಗೊಬ್ಬರು ಜಗಳ ಆಡಿ ನಮ್ಮ ದುಡ್ಡ ಹಾಳು ಮಾಡ್ತಾ ಇದ್ರು ಯಾರು ಏನು ಪ್ರತಿಭಟನೆ ಮಾಡ್ತಾ ಇಲ್ಲಾ. ಫ್ರೆಂಡ್ಸ್ ಮನಸ್ಸಿಗೆ ಬಹಳ ಬೇಜಾರಾಗುತ್ತೆ ಫ್ರೆಂಡ್ಸ್. ಇವ್ರನ್ನೆಲ್ಲಾ ಆಯ್ಕೆ ಮಾಡಿರೋ ನಾವು ಇನ್ಯಾವ ಕಿತ್ತೋದ್ ನನ್ ಮಕ್ಳು ಫ್ರೆಂಡ್ಸ್.
ಸಾರಿ ಫ್ರೆಂಡ್ಸ್,
ನಾಲಿಗೆ ಸ್ವಲ್ಪ ತೊ…ತೊ… ತೊ……ತೊದಲುತ್ತಿದೆ..
ಯಾಕೋ ತುಂಬಾ ನೋವಾಗಿ ಸ್ವಲ್ಪ ಜಾ…..ಸ್ತಿ ಎಣ್ಣೆ ತಗೊಂಡಿದ್ದೀನಿ…..
ಸಾರಿ ಫ್ರೆಂಡ್ಸ್ ಸಾರಿ ಸಾರಿ….
ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್……….
ತೋಳಗಳು ಮತ್ತು ಕುರಿಗಳ ಕಥೆ ಫ್ರೆಂಡ್ಸ್….
ಇದೊಂದು ವಿಚಿತ್ರ ಫ್ರೆಂಡ್ಸ್,
ನೆನಪಿಸಿಕೊಂಡ್ರೆ ಅಳು ಬರುತ್ತೆ ಅಳು, ತುಂಬಾ ಅಳು….
ಬಡ ರೈತ್ರು, ಅಂಗನವಾಡಿ ಕಾರ್ಯಕರತ್ರು, ಆಶಾ ಕಾರ್ಯಕರತ್ರು, ದಿನಗೂಲಿ ನೌಕರ್ರು, ಬೀದಿ ಬದಿಯ ಸಣ್ಣ ವ್ಯಾಪಾರಿಗ್ಲು, ಬಾಡಿಗೆ ವಾಹನ ಚಾಲಕ್ರು, ಸಣ್ಣ ಸಣ್ಣ ವೃತ್ತಿ ನಿರತ್ರ ಗೋಳು ಪಾಪ ಕೇಳೋಕಾಗಲ್ಲ ಫ್ರೆಂಡ್ಸ್, ನನ್ಗೆ ದಿನಾ ಅದೇ ಯೋಚ್ನೆ ಫ್ರೆಂಡ್ಸ್……
ನಮ್ದೇನೋ ಬಿಡಿ ಫ್ರೆಂಡ್ಸ್ ಕಿತ್ತೋದ್ ಲೈಪು, ಪಾಪ ಆ ಮುಗ್ಧ ಜನರ ಲೈಪ್ ಹೆಂಗೆ ಬಾಸ್….
ಪಾಪ ಹೊಟ್ಟೆ ಪಾಡಿಗಾಗಿ ಎಷ್ಟೊಂದು ಕಷ್ಟ ಪಡ್ತಾರೆ ಗೊತ್ತಾ ಫ್ರೆಂಡ್ಸ್. ಮಕ್ಕಳನ್ನ ಸಾಕಲಿಕ್ಕೆ, ಮನೆ ನಡೆಸಲಿಕ್ಕೆ ತುಂಬಾ ಕಷ್ಟ ಪಡ್ತಾರೆ ಫ್ರೆಂಡ್ಸ್….
ಸರ್ಕಾರ ಏನೇನುಕ್ಕೋ ಎಷ್ಟೊಂದು ದುಡ್ಡು ಖರ್ಚು ಮಾಡುತ್ತೆ. ಪಾಪ ಇವರಿಗೆ ಕೊಡೋಕೆ ಮಾತ್ರ ಆಗಲ್ಲ.
ಆ ನೋವು ನನ್ನನ್ನ ತುಂಬಾ ಕಾಡುತ್ತೆ ಫ್ರೆಂಡ್ಸ್. ಅದನ್ನ ಮರೆಯೋಕೆ ಇವತ್ತು ಸ್ವಲ್ಪ ಜಾ…..ಸ್ತಿ……
ಓ, ಸಾರಿ ಫ್ರೆಂಡ್ಸ್, ಕಥೆ ಹೇಳ್ತೀನಿ ಅಂತ ಏನೇನೋ ಪುರಾಣ ಹೇಳ್ತಾವ್ನೆ ಅಂತ ಅಂದ್ಕೋಬೇಡಿ ಸಾರಿ ಸಾರಿ…..
ಜನರು….ಆಡಳಿತ….ತೆರಿಗೆಗಳು…… ಚಳವಳಿಗಳು……ಪ್ರತಿಭಟನೆಗಳು…..
ಇದೇ ಇದೇ ಇದೇ ಜನ ನಮ್ಮ ಪ್ರತಿನಿಧಿಗಳಾಗಿ ಆಡಳಿತ ಮಾಡಲು ಅದೇ ಅದೇ ಅದೇ ಶಾಸಕರನ್ನು ಆಯ್ಕೆ ಮಾಡ್ತಾರೆ……
ಇದೇ ಇದೇ ಇದೇ ಜನ ಅದೇ ಅದೇ ಅದೇ ಶಾಸಕರ ಆಡಳಿತದ ವಿರುದ್ಧ ಚಳವಳಿ ಮಾಡ್ತಾರೆ, ಬೈತಾರೆ…..
ಅದೇ ಅದೇ ಅದೇ ಶಾಸಕರು, ಮಂತ್ರಿಗಳು, ಚುನಾವಣೆ ಸಮಯದಲ್ಲಿ ಇದೇ ಇದೇ ಇದೇ ಜನರ ಮನೆಬಾಗಿಲಿಗೆ ಬಂದು ಕೈಕಾಲು ಹಿಡಿದು ಮತ ಭಿಕ್ಷೆ ಕೇಳ್ತಾರೆ……
ಅದೇ ಅದೇ ಅದೇ ನಾಯಕರು ಅಧಿಕಾರ ಸಿಕ್ಕ ಮೇಲೆ ಇದೇ ಇದೇ ಇದೇ ಜನರ ಬೆನ್ನು, ಹೃದಯ, ನಂಬಿಕೆಗೆ ಚೂರಿ ಹಾಕ್ತಾರೆ….
ಅದೇ ಅದೇ ಅದೇ ನಾಯಕರು ಮತ್ತೆ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸ್ತಾರೆ. ಇದೇ ಇದೇ ಇದೇ ಜನರಿಗೆ ಮತ್ತೆ ಮತ್ತೆ ಮತ್ತೆ ಅವೇ ಅವೇ ಅವೇ ಭರವಸೆಗಳನ್ನು ಕೊಡ್ತಾರೆ…..
ಇದೇ ಇದೇ ಇದೇ ಜನ ಅದೇ ಅದೇ ಅದೇ ನಾಯಕರನ್ನು ಮತ್ತೆ ಮತ್ತೆ ಮತ್ತೆ ಚುನಾಯಿಸ್ತಾರೆ…..
ಅದೇ ಅದೇ ಅದೇ ಆಡಳಿತ,
ಇದೇ ಇದೇ ಇದೇ ಪ್ರತಿಭಟನೆ…….
ಅದೇ ಅದೇ ಅದೇ ಶಾಸಕರು
ಇದೇ ಇದೇ ಇದೇ ಜನರು……
ತಲೆ ಕೆಟ್ಟೋಗುತ್ತೆ ಫ್ರೆಂಡ್ಸ್…
ಕುರಿಗಳು ಸಾರ್, ಅಲ್ಲ ಅಲ್ಲ ಅಲ್ಲ,
ಕೋತಿಗಳು ಸಾರ್, ಅಲ್ಲ ಅಲ್ಲ,ಅಲ್ಲ,
ನರಿಗಳು ಸಾರ್, ಅಲ್ಲ ಅಲ್ಲ ಅಲ್ಲ
ಸಾರಿ ಸಾರಿ ಸಾರಿ ಅನಿಮಲ್ಸ್,
ನಾವು ಮನುಷ್ಯರು ಸಾರ್ ನಾವು ಮನುಷ್ಯರು ಸಾರ್ ನಾವು ಅನಾಗರಿಕ ಮನುಷ್ಯರು ಸಾರ್ ಪ್ರಾಣಿಗಳಷ್ಟು ನಾಗರಿಕರಲ್ಲ ಸಾರ್…..
ತೋಳ ಯಾರು ಕುರಿ ಯಾರು ಗೆಸ್ ಮಾಡಿ ಫ್ರೆಂಡ್ಸ್…..
ಒಂದು ಮನೆ,
ಒಂದು ಊರು,
ಒಂದು ರಾಜ್ಯ,
ಒಂದು ದೇಶ,
ಹಾಳಾಗೋದಕ್ಕೆ ಇಷ್ಟು ಸಾಕಲ್ವ ಬಾಸ್….
ಇನ್ನೊಂದು ವಿಚಿತ್ರ ಗೊತ್ತಾ ಫ್ರೆಂಡ್ಸ್ ನಿಮಗೆ…….
ಸರ್ಕಾರ ಅದೇ ಅದೇ ಅದೇ ಮಾಡೋದಾದ್ರೆ,
ವಿರೋಧ ಪಕ್ಷಗಳು ಇದೇ ಇದೇ ಇದೇ ಮಾಡೋದಾದ್ರೆ ವಿಧಾನಮಂಡಲದ ಚರ್ಚೆ ಯಾವ್ ನನ್ಮಗನಿಗೆ ಬೇಕು ಫ್ರೆಂಡ್ಸ್. ಅದಕ್ಕೆ ಅರ್ಥ ಇದೆಯಾ….
ಅದಕ್ಕಾಗಿ ಖರ್ಚು ಮಾಡೋ ಸಾಲ ಮಾಡಿ ಬಡ್ಡಿಗೆ ತಂದಿರುವ ಕೋಟ್ಯಾಂತರ ಹಣ ವೇಸ್ಟ್ ಅಲ್ವಾ ? ಅಷ್ಟು ಗೊತ್ತಾಗಲ್ವ ಆ ಮಂಕರಿಗೆ….
ಸಾರಿ ಫ್ರೆಂಡ್ಸ್, ಸಾರಿ, ಸ್ವಲ್ಪ ಜಾಸ್ತಿ ತಗೊಂಡಿದ್ದೀನಿ…
ನಾಲಿಗೆ ತೊ…..ತೊ…..ತೊ….ತೊದಲುತ್ತಿದೆ…
ಕುರಿಗಳು ಅಲ್ಲ ಅಲ್ಲ ಅಲ್ಲ ಸಾರಿ ಸಾರಿ ಸಾರಿ ಮತದಾರರು ಯೋಚಿಸ್ಬೇಕು…..
ಇನ್ನೊಂದು ವಿಷ್ಯಾ ಗೊತ್ತಾ ಫ್ರೆಂಡ್ಸ್,
ನೀವ್ ಎಷ್ಟೇ ಎಷ್ಟೇ ಎಷ್ಟೇ ಗಲಾಟೆ, ಬಂದ್ ಮಾಡಿದ್ರು ಸರ್ಕಾರ ನಿಮ್ ಮಾತು ಕೇಳಲ್ಲ ಫ್ರೆಂಡ್ಸ್. ಅದ್ಕೆ ಅಧಿಕಾರ ಮುಖ್ಯ. ಎಲೆಕ್ಷನ್ ನಲ್ಲಿ ಹೆಂಗೆ ಗೆಲ್ಬೇಕು ಅಂತ ಗೊತ್ತು ಬಾಸ್….
ನಮ್ ಜನ ಮಬ್ ನನ್ಮಕ್ಳು ಬಾಸ್,
ಸಾರಿ ಸಾರಿ ಸಾರಿ ಮುಗ್ದರು ಬಾಸ್,
ಅವರಿಗೆ ಏನೂ ಗೊತ್ತಾಗಲ್ಲ,
ಯೋಚನೇನೂ ಮಾಡಲ್ಲ,
ಪಾಪ ಜಾತಿ ಧರ್ಮ ದುಡ್ಡು ಹೆಂಡ
ಅ..ಹ…ಹ…ಹಾ.. ಸೀರೆ ಪಂಚೆ ಕೊಟ್ರೆ ಸಾಕು, ಓಟ್ ಹಾಕ್ಬುಡ್ತಾರೆ ಫ್ರೆಂಡ್ಸ್…….
ಈಗ್ ನೋಡಿದ್ರೇ ಇದೇ ಇದೇ ಇದೇ ಜನ ಅದೇ ಅದೇ ಅದೇ ಆಡಳಿತದ ವಿರುದ್ಧ ಬಂದ್ ಮಾಡ್ತಾರೆ ಬಾಸ್…
ಹೊಟ್ಟೆ ಉರಿಯುತ್ತೆ ಬಾಸ್, ಜನ ಎಷ್ಟೊಂದು ಕಷ್ಟ ಪಡ್ತಾರೆ ಬಾಸ್,
ಈ ಶಾಸಕರು ಮಾತ್ರ ಕೋಟಿಗಟ್ಟಲೆ ಹಣ ಮಾಡ್ತಾರೆ ಬಾಸ್…..
ತುಂಬಾ ನೋವಾಗುತ್ತೆ ಫ್ರೆಂಡ್ಸ್,
ಇದೆಲ್ಲಾ ಜ್ಞಾಪಿಸಿಕೊಂಡ್ರೆ,
ಬೇಗ ಸ್ವಲ್ಪ ಬುದ್ದಿ ಕಲೀರಿ ಫ್ರೆಂಡ್ಸ್,
ಒಳೊಳ್ಳೆ ಜನ ರಾಜಕೀಯಕ್ಕೆ ಬನ್ನಿ ಫ್ರೆಂಡ್ಸ್, ಏನಾದ್ರು ಸ್ವಲ್ಪ ಒಳ್ಳೇದು ಮಾಡೋಣ…..
ಸಾರಿ ಫ್ರೆಂಡ್ಸ್, ತುಂಬಾ ತಲೆ ತಿಂದ್ಬುಟ್ಟೆ,
ನಂಗೂ ಅಳು ಬರ್ತಾ ಇದೆ. ಇನ್ನೊಂದು ಪೆಗ್ ಹಾಕ್ ಬಿಡ್ತೀನಿ, ಎಲ್ಲಾ ಮರೆತು ಹೋಗುತ್ತೆ. ನಮ್ಮ ಹಿರಿಯರು ಹೇಳವ್ರೆ,
” ಸರ್ವ ರೋಗಕ್ಕೂ ಸಾರಾಯಿ
ಮದ್ದು ” ಮತ್ತೆ ನಾಳೆ ಸಿಕ್ತೀನಿ….
ಐ ಯಾಮ್ ವೆರಿ ಸಾರಿ ಫ್ರೆಂಡ್ಸ್.
ನೀವು ತಲೆ ಕೆಡಿಸ್ಕೋ ಬೇಡಿ.
ಟಿವಿ ನೋಡ್ಕಂಡು ಆರಾಮಾಗಿರಿ……
ಜನ, ಸಮಾಜ, ದೇಶ ಹಾಳಾಗೋದ್ರು ನಮಗೇನು…. ನೀವು ಆರಾಮಾಗಿರಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9844013068……
9663750451…..











