ವಿಜಯ ದರ್ಪಣ ನ್ಯೂಸ್….
ವಿಶೇಷಚೇತನ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಣೆ ಮಾಡಿದ ಶಾಸಕ ಬಿಎನ್ ರವಿಕುಮಾರ್

ಶಿಡ್ಲಘಟ್ಟ : ಸೊಣ್ಣಗಾನಹಳ್ಳಿಯ ವಿಶೇಷಚೇತನ ಮಹಿಳೆ ವೆಂಕಟರತ್ನಮ್ಮ ಅವರು ದ್ವಿಚಕ್ರ ವಾಹನಕ್ಕಾಗಿ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು ತೀವ್ರ ಅಂಗವಿಕಲತೆಯಿಂದಾಗಿ ದೈನಂದಿನ ಓಡಾಟಕ್ಕೂ ತಂದೆ ಹಾಗೂ ಸಹೋದರರ ನೆರವು ಪಡೆಯಬೇಕಾಗಿತ್ತು, ಇದೀಗ ವಾಹನ ದೊರೆತಿರುವುದರಿಂದ ಸ್ವತಂತ್ರವಾಗಿ ಓಡಾಡಲು ಅನುಕೂಲವಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2024-25ನೇ ಸಾಲಿನ ಯೋಜನೆಯಡಿ ಕ್ಷೇತ್ರದ ನಾಲ್ವರು ಅರ್ಹ ವಿಶೇಷಚೇತನ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಮುಂದುವರಿದಿದೆ ಈರೇಬಲ್ಲ ಶ್ಯಾಮಲ, ಗುಂಡ್ಲಹಳ್ಳಿ ಮಂಜುನಾಥ್, ಈ.ತಿಮ್ಮಸಂದ್ರ ಮುನಿರಾಜು ಹಾಗೂ ಸೊಣ್ಣಗಾನಹಳ್ಳಿಯ ವೆಂಕಟರತ್ನಮ್ಮ ಅವರಿಗೆ ವಾಹನಗಳನ್ನು ಹಸ್ತಾಂತರಿಸಲಾಗಿದೆ ಎಂದರು.
2025-26ನೇ ಸಾಲಿನಲ್ಲಿ ಶಾಸಕರ ಅನುದಾನದಡಿ 18 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೂ ಶೀಘ್ರದಲ್ಲೇ ದ್ವಿಚಕ್ರ ವಾಹನ ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ . ಹೇಮಾವತಿ, ವಿಕಲಚೇತನರ ಇಲಾಖೆಯ ಅಧಿಕಾರಿ ಜ್ಯೋತಿ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಮುಖಂಡರಾದ ತಾದೂರು ರಘು, ಕೆ.ಲಕ್ಷ್ಮಿಪತಿ, ಎಸ್.ಎಂ.ರಮೇಶ್,ಮಧು, ಮಂಜುನಾಥ್ ಮುಂತಾದವರು ಹಾಜರಿದ್ದರು.










