--Ads--

ಶಿಕ್ಷಕರು ಶಿಕ್ಷಕರಾಗಿಯೇ ಉಳಿಯಲಿ

On: September 5, 2026 5:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಶಿಕ್ಷಕರು ಶಿಕ್ಷಕರಾಗಿಯೇ ಉಳಿಯಲಿ

ಲೇಖನ: ಜಯಂತಿ ರೈ

ಸೆಪ್ಟೆಂಬರ್ 5ನೇ ತಾರೀಖಿನಂದು ಶಿಕ್ಷಕರನ್ನು ಹಾಡಿ ಹೊಗಳಿ ಹೊನ್ನಶೂಲಕ್ಕೇರಿಸುವ ಮುನ್ನ ಇತ್ತ ಸ್ವಲ್ಪ ಗಮನ ಹರಿಸೋಣ.

ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಶ್ರೇಷ್ಠ ಹಾಗೂ ಪೂಜ್ಯನೀಯವಾದದ್ದಾಗಿದೆ. ಶಿಕ್ಷಕರು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ದಾರಿದೀಪಗಳು. ಅರಿವಿಲ್ಲದ ಕಂದಮ್ಮಗಳಿಗೆ ಅಮ್ಮನಂತೆ ಮುದ್ದಿಸಿ ಗದರಿಸಿ ಸರಿತಪ್ಪುಗಳ ವಿವೇಚನೆ ಹಾಗೂ ಮೌಲ್ಯಗಳನ್ನು ಕಲಿಸುವರು. ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನವನ್ನಲ್ಲದೆ ಜೀವನದ ಪಾಠಗಳನ್ನು ಕಲಿಸುವ ಮಾರ್ಗದರ್ಶಕರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಕಷ್ಟವನ್ನು ಎದುರಿಸುವ ಧೈರ್ಯ ತುಂಬುವವರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪರಿಶ್ರಮವೇ ಕಾರಣ.

ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಉತ್ತಮ ಶಿಕ್ಷಕರ ಪ್ರೇರಣೆಯಿರುತ್ತದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಹಂತದಲ್ಲಿ ಶಿಕ್ಷಕರ ನಡೆ ನುಡಿ ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಗುರುಗಳ ನಡೆ ನುಡಿಯನ್ನು ಅನುಸರಿಸುತ್ತಾರೆ. ನಾವು ನಮಗೆ ಶಿಕ್ಷಣ, ಜೀವನ ಪಾಠ ಕಲಿಸಿದ ಶಿಕ್ಷಕರನ್ನು ಗೌರವಿಸಬೇಕು ಮತ್ತು ಸ್ಮರಿಸಬೇಕು.

ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಮನಸ್ಥಿತಿಯು ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದ್ದ ಹಾಗೆ ಇಲ್ಲ. ಅಂದಿನ ಶಿಕ್ಷಕರು ಬೋಧನೆಗೆ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದರು ಮಕ್ಕಳ ಕಲಿಕಾ ಸಾಮರ್ಥ್ಯ ಕೂಡ ಹೆಚ್ಚಿತ್ತು. ಆದರೆ ಇಂದಿನ ಶಿಕ್ಷಕರ ಮನಸ್ಥಿತಿಯು ಹದಗೆಡುತ್ತಿದೆ ಕಾರಣ ಹುಡುಕುತ್ತಾ ಹೊರಟರೆ ಸಿಗುವ ಉತ್ತರ ಕೇಳಿ ಮನ ಭಾರವಾಗುತ್ತದೆ. ಹೌದು ಇಂದಿನ ಶಿಕ್ಷಕರ ಮನಸ್ಥಿತಿಯು ಬದಲಾಗಲು ವಿಪರೀತ ಒತ್ತಡಗಳು ಕಾರಣವಾಗಿದೆ. ಬಿಸಿಯೂಟ, ಜನಗಣತಿ, ಆರೋಗ್ಯ ಜಾಗೃತಿ ಕಾರ್ಯಕ್ರಮ, ಲೆಕ್ಕಪತ್ರ ನಿರ್ವಹಣೆ, ದಾಖಲೆ ನಿರ್ವಹಣೆ ಹಾಗೂ ವಿವಿಧ ವರದಿಗಳ ತಯಾರಿಯ ಒತ್ತಡದಲ್ಲಿ ಶಿಕ್ಷಕರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಒಂದು ಕಡೆ ತಮ್ಮ ವೈಯಕ್ತಿಕ ಬದುಕಿನ ಜವಾಬ್ಧಾರಿ ಇನ್ನೊಂದೆಡೆ ಅತಿಯಾದ ಆಡಳಿತಾತ್ಮಕ ಕೆಲಸಗಳ ಒತ್ತಡದಿಂದಾಗಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ.

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ಹೊಸ ಯೋಜನೆಗಳಿಂದಾಗಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಗುರಿಯನ್ನು ತಲುಪಲಾಗುತ್ತಿಲ್ಲ. ವೈಯಕ್ತಿಕ ಹಾಗೂ ಸರ್ಕಾರದ ವ್ಯವಸ್ಥೆಯ ಜವಬ್ಧಾರಿಯಿಂದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಾರೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಶಿಕ್ಷಕರ ಗೋಳು ಕೇಳುವವರಾರು?. ಸರ್ಕಾರ ಶಿಕ್ಷಕರನ್ನು ಶಿಕ್ಷಣೇತರ ಕೆಲಸಗಳಿಂದ ಮುಕ್ತಗೊಳಿಸದಿದ್ದರೆ ಶಿಕ್ಷಣ ತನ್ನ ಮೂಲ ಅರ್ಥವನ್ನು ಕಳೆದುಕೊಳ್ಳುತ್ತದೆ.

ಹಲವು ಇಲಾಖೆಗಳಲ್ಲಿ ಗುಮಾಸ್ತ, ಜವಾನ , ಲೆಕ್ಕಪತ್ರ ನಿರ್ವಾಹಕರೆಂಬ ಹುದ್ದೆಗಳಿದ್ದು ಸಿಬ್ಬಂದಿಯಿರುತ್ತಾರೆ ಆದರೆ ಶಾಲೆಯಲ್ಲಿ ಗುಮಾಸ್ತ, ಜವಾನ, ಪರಿಚಾರಕರ ಕೆಲಸವನ್ನು ಶಿಕ್ಷಕರೇ ಮಾಡಬೇಕಾಗಿರುತ್ತದೆ. ಇಷ್ಟೆಲ್ಲ ಜವಬ್ದಾರಿಗಳ ನಡುವೆ ಗುಣಮಟ್ಟದ ಬೋಧನೆಗೆ ಸಮಯ ಸಿಗುವುದು ಕಷ್ಟ. ಕೊನೆಯಲ್ಲಿ ಪರಿಣಾಮಕಾರಿಯಾದ ಫಲಿತಾಂಶ ಸಿಗದಿರುವಾಗ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿದಿದೆ ಎಂದು ಶಿಕ್ಷಕರನ್ನೇ ಗುರಿಯಾಗಿಸುತ್ತಾರೆ.

ಶಿಕ್ಷಕರು ಕೇವಲ ನೌಕರರಲ್ಲ ಅವರು ಸಮಾಜವನ್ನು ರೂಪಿಸುವ ಶಿಲ್ಪಿಗಳು ಆದರೆ ಇಂದಿನ ಶಿಲ್ಪಿಗಳು ಬಿಸಿಯೂಟ, ಮೊಟ್ಟೆ ,ಹಾಲು, ಜನಗಣತಿಯಯ ಲೆಕ್ಕಾಚಾರದ ಒತ್ತಡದಲ್ಲಿರುತ್ತಾರೆ.

ಶಿಕ್ಷಕರಿಗೆ ಬೋಧನೆ ಮಾಡಲು ಸಮಯ ಮತ್ತು ಗೌರವಯುತ ವಾತಾವರಣ ಕಲ್ಪಿಸುವುದು ಮುಖ್ಯ. ಮಕ್ಕಳ ಭವಿಷ್ಯ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.ಶಿಕ್ಷಕರು ಶಿಕ್ಷಕರಾಗಿ ಉಳಿದರೆ ಶಿಕ್ಷಣ ಉಳಿಯುತ್ತದೆ ಶಿಕ್ಷಣ ಉಳಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.

ಜಯಂತಿ. ರೈ
ಮಡಿಕೇರಿ

WhatsApp

Join Now

Telegram

Join Now

Instagram

Join Now