ವಿಜಯ ದರ್ಪಣ ನ್ಯೂಸ್……
ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನಕ್ಕೆ ಚಾಲನೆ: ಜಿಲ್ಲೆಯಾದ್ಯಂತ ವಿಶೇಷ ಶಿಬಿರಗಳ ಆಯೋಜನೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅ.29:
ಪ್ರತಿಯೊಬ್ಬ ನಾಗರಿಕನಿಗೆ ಹಣಕಾಸು ಸೇವೆಗಳ ಸುಲಭವಾಗಿ ಹಾಗೂ ಸಾರ್ವಜನಿಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನದ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ವಾಸಂತಿ ಅಮರ್ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಅಭಿಯಾನ ಆಯೋಜಿಸಲಾಗಿದೆ. ಈ ವಿಶೇಷ ಅಭಿಯಾನವು ಈಗಾಗಲೇ ಅಕ್ಟೋಬರ್ 21 ರಿಂದ ಪ್ರಾರಂಭವಾಗಿದ್ದು, ಡಿಸೆಂಬರ್ 31 ರವರೆಗೆ ನಡೆಯಲಿದೆ.
ಶಿಬಿರದಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಗೆ ಹೊಸ ನೋಂದಣಿ ಮತ್ತು ಆಧಾರ್ ಜೋಡಣೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅರ್ಜಿಗಳ ಸಂಗ್ರಹಣೆ ನಡೆಯಲಿದೆ.

ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಈ ವಿಶೇಷ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ವಿವಿಧ ಹಣಕಾಸು ಸೇವೆಗಳು ಹಾಗೂ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ನಾಯಕ್, ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.









