ವಿಜಯ ದರ್ಪಣ ನ್ಯೂಸ್……
ಶಿವನಾಪುರದಲ್ಲಿ ಬಿ.ಎನ್. ಬಚ್ಚೇಗೌಡರ ಹೆಸರಿನಲ್ಲಿ ಮೂರನೇ ವರ್ಷದ ಕ್ರಿಕೆಟ್ ಟೂರ್ನಿ ಎಂಎಂಎಸ್ ಕ್ರಿಕೆಟರ್ಸ್ ತಂಡಕ್ಕೆ ಪ್ರಥಮ ಬಹುಮಾನ
ಯುವಕರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಿ – ಎಚ್ ಎಮ್ ಸುಬ್ಬರಾಜು

ತಾವರೆಕೆರೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮದಲ್ಲಿ ಹಿರಿಯ ಕ್ರೀಡಾಪಟುಗಳ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಬಿ.ಎನ್. ಬಚ್ಚೇಗೌಡ ಅವರ ಹೆಸರಿನಲ್ಲಿ ಸತತ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಎಂಎಂಎಸ್ ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನ ಪಡೆದು ₹70,000 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎಆರ್ ಕಿಂಗ್ಸ್ ತಂಡ ದ್ವಿತೀಯ ಸ್ಥಾನ ಪಡೆದು ₹35,000 ನಗದು ಬಹುಮಾನ ಹಾಗೂ ಟ್ರೋಫಿ ಗಳಿಸಿತು. ಬಿಎಸ್ಸಿಸಿ ತಂಡ ತೃತೀಯ ಸ್ಥಾನ ಪಡೆದು ₹20,000 ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.
ಕಿರಣ್ ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ, ರೋಹಿತ್ ಅತ್ಯುತ್ತಮ ಬೌಲರ್ ಪ್ರಶಸ್ತಿ ಹಾಗೂ ಮಂಜುನಾಥ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಚ್.ಎಂ. ಸುಬ್ಬರಾಜು ಮಾತನಾಡಿ, “ತಾಲೂಕಿನಲ್ಲಿ ಸುದೀರ್ಘ ಕಾಲ ರಾಜಕೀಯ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ ಬಿ.ಎನ್. ಬಚ್ಚೇಗೌಡ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಕ್ರಿಕೆಟ್ ಪಂದ್ಯಾವಳಿ ಉತ್ತಮವಾಗಿ ಮೂಡಿಬಂದಿದೆ. ಇಂದಿನ ಯುವಜನತೆ ಕ್ರಿಕೆಟ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕಬಡ್ಡಿ, ವಾಲಿಬಾಲ್, ಖೋ-ಖೋ ಸೇರಿದಂತೆ ಇತರ ಕ್ರೀಡೆಗಳ ಕಡೆಗೂ ಗಮನ ಹರಿಸಬೇಕು. ಕ್ರಿಕೆಟ್ಗೆ ನೀಡುವ ಪ್ರೋತ್ಸಾಹವನ್ನು ಇತರ ಕ್ರೀಡೆಗಳಿಗೂ ನೀಡುವ ಅಗತ್ಯವಿದೆ” ಎಂದು ಹೇಳಿದರು.
ಉದ್ಯಮಿ ಹಾಗೂ ಸಮಾಜಸೇವಕ ಗಂಗಾಧರ್ ಶೆಟ್ಟಿ ಮಾತನಾಡಿ, ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಶುಭ ಹಾರೈಸಿದರು. ಗ್ರಾಮೀಣ ಪ್ರದೇಶದ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಇಂತಹ ಕ್ರೀಡಾಕೂಟಗಳು ಹೆಚ್ಚಿನ ಪ್ರೋತ್ಸಾಹ ನೀಡಲಿವೆ ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಹರೀಶ್ ಚಕ್ರವರ್ತಿ ಮಾತನಾಡಿ, ಇಂದಿನ ಯುವಜನತೆ ಮಾದಕ ವಸ್ತುಗಳು, ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಚಟುವಟಿಕೆಗಳಿಂದ ದೂರವಿರಬೇಕು. ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹಾಗೂ ಸದೃಢ ದೇಹವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯುವ ಮುಖಂಡ ಮಂದೀಪ್ ಗೌಡ ಮಾತನಾಡಿ, ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಉಜ್ವಲ ಭವಿಷ್ಯವಿದ್ದು, ವಿಜೇತ ತಂಡಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಒಬಿಸಿ ಜಿಲ್ಲಾಧ್ಯಕ್ಷ ಸಿ. ಮುನಿಯಪ್ಪ, ಎಸ್ಎಫ್ಎಸ್ಸಿಎಸ್ ಅಧ್ಯಕ್ಷ ಕಲ್ಲಪ್ಪ, ಮಾಜಿ ಅಧ್ಯಕ್ಷರಾದ ರವಿ ಹಾಗೂ ಅರಸೇಗೌಡ, ಮಾಜಿ ಉಪಾಧ್ಯಕ್ಷರಾದ ಚಂದ್ರಶೇಖರ್, ಅಂಬರೀಶ್, ಧನಂಜಯ, ಹೆತ್ತಕ್ಕಿ ಜಗದೀಶ್, ಎಸ್ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ರವಿಚಂದ್ರ, ಅಮ್ಜದ್ ಪಾಶ, ದೇವೇಗೌಡ, ಸಹದೇವ್, ಪ್ರಸಾದ್, ಸುಧಾಕರ್, ನರಸಿಂಹಮೂರ್ತಿ, ಖಾಜಾ, ಮಂಜಣ್ಣ ಹಾಗೂ ರಾಜಪ್ಪ ಸೇರಿದಂತೆ ಹಲವು ಗಣ್ಯರು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.








