ವಿಜಯ ದರ್ಪಣ ನ್ಯೂಸ್….
ನಾನು ಕಾಂಗ್ರೆಸ್ ಸರ್ಕಾರದ ಟಾರ್ಗೆಟ್: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕೇತಗಾನಹಳ್ಳಿ ಜಮೀನು ಸರ್ವೇ ಕುರಿತು ಮಂಗಳವಾರ ಕಿಡಿ ಕಾರಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ‘ನಾನು ಸರಕಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ನನ್ನ ಜೀವನದಲ್ಲಿ ನಾನು ಯಾವುದೇ ಅಪರಾಧ ಅಥವಾ ಅಕ್ರಮ ಎಸಗಿಲ್ಲ. ಭೂಮಿಯನ್ನು 40 ವರ್ಷಗಳ ಹಿಂದೆ ಖರೀದಿಸಲಾಗಿತ್ತು” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ “ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಯಾವುದೇ ಅಕ್ರಮ ಮಾಡಿಲ್ಲ. 40 ವರ್ಷಗಳ ಹಿಂದೆ ರೈತನಾಗಿ ಬದುಕಲು ನಾನು ಖರೀದಿಸಿದ ಭೂಮಿ ಅದು. ಸಾಮಾನ್ಯ ನಾಗರಿಕನಿಗೆ ಹದಿನೈದು ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಕೇತಗಾನಹಳ್ಳಿಯಲ್ಲಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ನನಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಅಥವಾ ಸೂಚನೆ ನೀಡಿಲ್ಲ” ಎಂದು ಕಿಡಿ ಕಾರಿದರು.
“ಈ ಸರಕಾರದ ದಬ್ಬಾಳಿಕೆ ಯಾವ ಮಟ್ಟಕ್ಕೆ ಇದೆ ಎಂದು ಎಲ್ಲರಿಗೂ ಗೊತ್ತು. ಬೆಂಗಳೂರು ನಗರವನ್ನು ಲೂಟಿ ಮಾಡುತ್ತಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕರಣಕ್ಕೆ ಎಸ್‌ಐಟಿ ರಚನೆಯಾಗಿದೆ. ನಾನು ಕಾಂಗ್ರೆಸ್ ಸರಕಾರದ ಟಾರ್ಗೆಟ್ ಆಗಿದ್ದೇನೆ” ಎಂದು ಕಿಡಿ ಕಾರಿದರು.
“ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. 40 ವರ್ಷಗಳ ಹಿಂದೆ ಖರೀದಿಸಲಾದ ಭೂಮಿಯನ್ನು ನೂರು ಬಾರಿ ತನಿಖೆ ಮಾಡಲಾಗಿದೆ. ತನಿಖೆ 40 ವರ್ಷಗಳಿಂದ ನಡೆಯುತ್ತಿದೆ. ನನ್ನ ಪರಿಸ್ಥಿತಿ ಹೀಗಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು?” ಎಂದು ಕೇಂದ್ರ ಸಚಿವ ಪ್ರಶ್ನಿಸಿದರು.









