ಮಕ್ಕಳ ರಕ್ಷಣೆ-ಪೋಷಣೆ ನಮ್ಮೆಲ್ಲರ ಜವಾಬ್ದಾರಿ: ಕೆ.ನಾಗಣ್ಣ ಗೌಡ

ವಿಜಯ ದರ್ಪಣ ನ್ಯೂಸ್….

ಮಕ್ಕಳ ಸಹಾಯವಾಣಿ ಸಂಖ್ಯೆ-1098 ಎಲ್ಲಾ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ನಾಮಫಲಕ ಪ್ರದರ್ಶನ ಕಡ್ಡಾಯ

ಬಾಲ್ಯ ವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಿ

ಮಕ್ಕಳ ರಕ್ಷಣೆ-ಪೋಷಣೆ ನಮ್ಮೆಲ್ಲರ ಜವಾಬ್ದಾರಿ: ಕೆ.ನಾಗಣ್ಣ ಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲೆ.ಆಗಸ್ಟ್29:ಮಕ್ಕಳು ದೇಶದ ಅಸ್ತಿ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಿದ್ದು ಇಲಾಖೆಗಳ ಸಮನ್ವಯತೆಯಿಂದ ಮಕ್ಕಳ ರಕ್ಷಣೆ ಪೋಷಣೆ ಸಾಧ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣ ಗೌಡ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಆರ್.ಟಿ.ಇ 2009, ಪೋಕ್ಸೋ 2012 ಹಾಗೂ ಬಾಲನ್ಯಾಯ ಕಾಯ್ದೆ 2015 ರ ಅನುಷ್ಠಾನದ ಕುರಿತು ವಿವಿಧ ಇಲಾಖೆ ಭಾಗಿದಾರರೊಂದಿಗೆ ಪ್ರಗತಿ ಪರಿಶೀಲನಾ ಸಭೆ ಮತ್ತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಸಿಗುವಂತಹ ಆಹಾರ,ವಸತಿ, ವಿದ್ಯಾಬ್ಯಾಸ ಇನ್ನಿತರ ಸರ್ಕಾರಿ ಸೌಲಭ್ಯಗಳು ಉತ್ತಮ ರೀತಿಯಲ್ಲಿ ದೊರೆಯುವಂತೆ ಮಾಡಬೇಕು. ಶಾಲೆ,ವಸತಿ ನಿಲಯಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ವಿದ್ಯಾಬ್ಯಾಸ, ಆರೋಗ್ಯ, ಒಳ್ಳೆಯ ವಾತಾವರಣ ಕಲ್ಪಿಸಿ ಎಂದರು. ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಇಲಾಖೆಗಳ ಸಂಪರ್ಕ ಹಾಗೂ ಸಮನ್ವಯತೆ ಮುಖ್ಯ. ಎಲ್ಲಾ ಅಧಿಕಾರಿಗಳು ಮಕ್ಕಳ ರಕ್ಷಣೆ ಪೋಷಣೆಗೆ ಸದಾ ಜಾಗೃತರಾಗಿರಿ ಎಂದರು.

ಆಯೋಗದ ಸದಸ್ಯರುಗಳು ಮಾತನಾಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ಘಟಕಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿ, ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕ ಜೊತೆಗೆ ಆಸ್ಪತ್ರೆಗೆಗಳಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಲು ಸೂಚಿಸಿದರು. ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಇಂತಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಿ. ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯುವಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿದ್ದು ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.

ಪ್ರತಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನಾಮಫಲಕ ಕಾಡ್ಡಾಯವಾಗಿ ಪ್ರದರ್ಶಿಸಬೇಕು, ಜೊತೆಗೆ ದೂರು ಪೆಟ್ಟಿಗೆಯನ್ನು ಇರಿಸಬೇಕು ಹಾಗೂ ಮಕ್ಕಳ ರಕ್ಷಣಾ ಸಮಿತಿಯನ್ನು ಕಡ್ದಾಯವಾಗಿ ರಚಿಸಲು ಹೇಳಿದರು. ಶಾಲೆಗೆ ಹಾಜರಾಗುತ್ತಿರುವ ಮಕ್ಕಳು ಮತ್ತು ಶಾಲೆಗೆ ಬರದೇ ಇರುವ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಶಾಲೆಗೆ ಬರದೇ ಇರುವ ಮಕ್ಕಳು ಕಂಡು ಬಂದಾಗ ಆ ಮಗುವು ಶಾಲೆಗೆ ಬರದೇ ಇರಲು ಕಾರಣ ತಿಳಿದು ಅದನ್ನು ಪರಿಹರಿಸಬೇಕು.

ಬಾಲ್ಯ ವಿವಾಹ, ಭಿಕ್ಷಾಟನೆ, ಮಕ್ಕಳ ಮಾರಾಟ, ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ ಕಂಡು ಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಉಚಿತ ಕರೆ ಮಾಡಿ ದೂರು ನೀಡಬಹುದು. ಕಾಣೆಯಾದ ಅಥವಾ ಬಾಲಕಾರ್ಮಿಕ ಅಡಿಯಲ್ಲಿ ಪತ್ತೆಯಾದ ಮಕ್ಕಳನ್ನು ಕಾನೂನು ಅಡಿಯಲ್ಲಿ ಮಕ್ಕಳ ರಕ್ಷಣೆ ಆಗಬೇಕು. ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮಕ್ಕಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಮಕ್ಕಳ ಕಾಣೆಯಾದ ಬಗ್ಗೆ ದೂರು ಬಂದಲ್ಲಿ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಮಕ್ಕಳನ್ನು ಪತ್ತೆ ಮಾಡುವುದರ ಮೂಲಕ ಪೋಷಕರಿಗೆ ಒಪ್ಪಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಶ್ರೀ ಶೈಲ್ ಬಾಗಾಡಿ ಅವರು ಮಾತನಾಡಿ ಮಕ್ಕಳ ಹಿತ ರಕ್ಷಣೆ ಕಾಪಾಡುವುದು ನಮ್ಮ ಜವಾಬ್ದಾರಿ. ವಲಸೆ ಕಾರ್ಮಿಕರ ಮಕ್ಕಳು, ನಿರ್ಗತಿಕ ಮಕ್ಕಳನ್ನು ಮೊದಲು ಗುರುತಿಸಿ ಅವರಿಗೆ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಡಿಸಿ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ಕೈಗಾರಿಕಾ, ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ದೌರ್ಜನ್ಯಕ್ಕೊಳಗಾದ ಮಕ್ಕಳ ಆಂತರಿಕ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸುವುದು ನಮ್ಮ ಜವಾಬ್ದಾರಿ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರ್ ಗೌಡ, ಶಶಿಧರ್ ಕೋಸಂಬೆ, ಡಾ.ತಿಪ್ಪೇಸ್ವಾಮಿ, ಮಂಜುಳ, ವೆಂಕಟೇಶ್,ಅಪರ್ಣ, ಎಎಸ್ಪಿ ನಾಗರಾಜ್ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಆಗಸ್ಟ್29: 2025- 26 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾ ಸಂಸ್ಥೆಯಲ್ಲಿ ಒಂದನೇಯ ತರಗತಿಯಿಂದ ಅಂತಿಮ ವರ್ಷದ ಪದವಿ /ಡಿಪ್ಲೋಮಾ ಮತ್ತು ವೃತ್ತಿಪರ ಪದವಿ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ ಮಾರ್ಷಲ್ ಕೆ ಎಂ ಕಾರ್ಯಪ್ಪ ಭವನ ನಂ-58, ಫೀಲ್ಡ ಮಾರ್ಷಲ್ ಕೆ ಎಂ ಕಾರ್ಯಪ್ಪ ರಸ್ತೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು -25 ಅರ್ಜಿ ಸಲ್ಲಿಸಬೇಕು.

ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ಡಿಪ್ಲೋಮಾ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಅಕ್ಟೋಬರ್ 20 ರೊಳಗೆ ಮತ್ತು ವೃತ್ತಿಪರ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವವರು ನವೆಂಬರ್ 20 ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ,ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.