ಯೂರಿಯಾ ಮಿತವಾಗಿ ಬಳಕೆಗೆ ಕೃಷಿ ಇಲಾಖೆ ಸಲಹೆ
ವಿಜಯ ದರ್ಪಣ ನ್ಯೂಸ್…..
ಯೂರಿಯಾ ಮಿತವಾಗಿ ಬಳಕೆಗೆ ಕೃಷಿ ಇಲಾಖೆ ಸಲಹೆ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾಂ.ಜಿಲ್ಲೆ. ಸೆ,02: ಯೂರಿಯಾ ಗೊಬ್ಬರವು ಸಸ್ಯಗಳಿಗೆ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ, ಯೂರಿಯಾ ಸಾರಜನಕವನ್ನು ಮಾತ್ರ ಒದಗಿಸುತ್ತದೆ ಮತ್ತು ರಂಜಕ ಮತ್ತು ಪೊಟ್ಯಾಷಿಯಂ ನಂತಹ ಇತರೆ ಅಗತ್ಯ ಅಂಶಗಳನ್ನು ಪೂರೈಸುವುದಿಲ್ಲ. ಆದರೆ ಇದರ ಬಳಕೆ ಹೆಚ್ಚಾದಷ್ಟು ಅಮೃತವು ವಿಷವಾಗುತ್ತೆ, ಎನ್ನುವುದು ವಾಸ್ತವಾಂಶ ಆದ್ದರಿಂದ ಆದಷ್ಟು ಕಡಿಮೆ ಪ್ರಮಾಣದಲ್ಲಿ ಯೂರಿಯಾ ಬಳಸುವುದು ಉತ್ತಮ ಎಂದು ಕೃಷಿ ಇಲಾಖೆ ತಿಳಿಸಿದೆ.
ಯೂರಿಯಾ ಗೊಬ್ಬರವು ಸಸ್ಯಗಳಿಗೆ ಸಾರಜನಕದ ಸಾಮಾನ್ಯ ಮೂಲವಾಗಿದ್ದರೂ, ಹಲವಾರು ಅನಾನುಕೂಲ ಹೊಂದಿದೆ. ಯೂರಿಯಾ ತ್ವರಿತವಾಗಿ ಅಮೋನಿಯಾ ಅನಿಲವಾಗಿ ಪರಿವರ್ತನೆಗೊಂಡು ಬಾಷ್ಪೀಕರಣದ ಮೂಲಕ ವಿಶೇಷವಾಗಿ ಶುಷ್ಕ ಅಥವಾ ಕ್ಷಾರೀಯ ಪರಿಸ್ಥಿತಿಗಳಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕಾಲಾಂತರದಲ್ಲಿ ಯೂರಿಯಾ ಬಳಕೆಯಿಂದ ಮಣ್ಣಿನ pH ಪ್ರಮಾಣವು ಸುಮಾರು 0.5-1.0 ರಷ್ಟು ಕಡಿಮೆ ಆಗುವುದು, ಇದರಿಂದ ಮಣ್ಣಿನಲ್ಲಿ ಆಮ್ಲೀಕರಣವಾಗಿ ಸಸ್ಯಗಳ ಬೆಳವಣಿಗೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಹಾನಿಯಾಗುತ್ತದೆ. ಯೂರಿಯಾವು ಮಣ್ಣಿನಲ್ಲಿ ಲವಣಗಳ ಬೆಳವಣಿಗೆಗೆ ಕಾರಣವಾಗಬಹುದು, ಇದರಿಂದ ಮಣ್ಣಿನ ರಚನೆಯಲ್ಲಿ ವ್ಯತ್ಯಾಸವಾಗಿ ಬೇರು ವಲಯಕ್ಕೆ ಗಾಳಿ ಮತ್ತು ನೀರಿನ ಪ್ರವೇಶವನ್ನು ಮಿತಗೊಳಿಸಿ ಸಸ್ಯಗಳ ಬೆಳವಣಿಗೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.
ಅತಿಯಾದ ಬಳಕೆಯಿಂದ ಸಸ್ಯಗಳ ಬೆಳವಣಿಗೆ ದುರ್ಬಲವಾಗಿ ಹೂವು ಮತ್ತು ಹಣ್ಣಿನ ಇಳುವರಿಯ ಕುಂಠಿತವಾಗುವುದರ, ಜೊತೆಗೆ ಕೀಟಗಳು ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ವೈವಿಧ್ಯತೆ ಮತ್ತು ಪರಿಸರದ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ.
ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು
ಯೂರಿಯಾ ಗೊಬ್ಬರವು ರೂಪಾಂತರಗೊಳ್ಳುವುದರಿಂದ ನೈಟ್ರೇಟ್ ಗಳು ಅಂತರ್ಜಲ ಸೇರಿ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತದೆ. ಯೂರಿಯಾ ಹೆಚ್ಚಾಗಿ ಬಳಸಿದಾಗ ಬೆಳೆದ ತರಕಾರಿ, ಹಣ್ಣುಗಳು ಹಾಗೂ ಧಾನ್ಯಗಳಲ್ಲಿ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವುಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಅದರಿಂದ ಮಾನವನಿಗೆ ವಿಷಕಾರಿಯಗಿ ಹೊಟ್ಟೆ ನೋವು, ವಾಂತಿ ಮುಂತಾದ ಕಾಯಿಲೆಗಳು ಸಂಭವಿಸಬಹುದು. ಆಹಾರದಲ್ಲಿ ನೈಟ್ರೇಟ್ ಗಳು ಹೆಚ್ಚಾಗಿದ್ದಾರೆ ಅವು ನೈಟ್ರೋಸಾಮೈನ್ಗಳಾಗಿ ಪರಿವರ್ತನೆಯಾಗಿ ಕ್ಯಾನ್ಸರ್ ಗೆ ಕಾರಣವಾಗಬಹುದು, ಶಿಶುಗಳಲ್ಲಿ ‘ಬ್ಲೂ ಬೇಬಿ ಸಿಂಡ್ರೋಮ್’ ಎಂಬ ಸಮಸ್ಯೆ ಉಂಟಾಗಬಹುದು. ಇದು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಪರಿಸರದ ಮೇಲಿನ ದುಷ್ಪರಿಣಾಮ ಮತ್ತು ಇತರೆ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಸೂಕ್ತ. ಶಿಫಾರಸ್ಸಿನಂತೆ ಅಗತ್ಯವಿರುವಷ್ಟೇ ಸಮತೋಲನದ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸಿ.
ಬೆಳವಣಿಗೆ ಹಂತದಲ್ಲಿ ಅವಶ್ಯವಿದ್ದಲ್ಲಿ ಶೇಕಡಾ 100ರಷ್ಟು ನೀರಿನಲ್ಲಿ ಕರಗುವ ಸಂಯುಕ್ತ ರಸಗೊಬ್ಬರಗಳ / ನ್ಯಾನೋ ಯೂರಿಯಾ ಪ್ಲಸ್ ಸಿಂಪರಣೆ / ಡ್ರಿಪ್ ಮೂಲಕ ನೀಡುವುದು.
ರಾಗಿ ಬೆಳೆಗೆ ಗೊಬ್ಬರವಾಗಿ ಶಿಫಾರಸ್ಸಿನ ಪ್ರಮಾಣದ ಶೇಕಡಾ 50 ರಷ್ಟು ಸಾರಜನಕವನ್ನು ಯೂರಿಯಾ ರೂಪದಲ್ಲಿ ಸಿಂಪರಣೆ ಮಾಡಬೇಕು.
ರಾಗಿ ಬೆಳೆಗೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರ ಶಿಫಾರಸ್ಸಿತ ಸಾರಜನಕ ಪ್ರಮಾಣವು ಒಂದು ಎಕರೆಗೆ 20 ಕೆ.ಜಿ ಮಾತ್ರ, ಅಂದರೆ ಒಂದು ಎಕರೆಗೆ ಸುಮಾರು 45 ಕೆ.ಜಿ ಯೂರಿಯಾ ಸಿಂಪರಣೆ ಮಾಡಬೇಕು. ಈಗಾಗಲೇ ಬಿತ್ತನೆ ಸಮಯದಲ್ಲಿ ಅರ್ಧದಷ್ಟು ಸಾರಜನಕವನ್ನು ಯೂರಿಯಾ ಮತ್ತು ಡಿಎಪಿ ಮೂಲಕ ಸಿಂಪರಣೆ ಮಾಡುವುದರಿಂದ, ಉಳಿದ ಅರ್ಧದಷ್ಟು ಸಾರಜನಕವನ್ನು ಅಂದರೆ ಸುಮಾರು 22-23 ಕೆ.ಜಿ ಯೂರಿಯಾ ಗೊಬ್ಬರವನ್ನು 2 ಹಂತಗಳಲ್ಲಿ, ಅಂದರೆ ರಾಗಿ ಬೆಳವಣಿಗೆಯ 20-25 ದಿನದೊಳಗೆ ಒಮ್ಮೆ ಹಾಗೂ ಮತ್ತೊಮ್ಮೆ 30-45 ದಿನದೊಳಗೆ ಹಾಕಿದಾಗ ಉತ್ತಮ ಇಳುವರಿ ದೊರೆಯುತ್ತದೆ.
ರೈತರು ಆದಷ್ಟು ಬೇಸಾಯದ ಖರ್ಚು ಕಡಿಮೆ ಮಾಡಿಕೊಳ್ಳಲು ಹಾಗೂ ಪರಿಸರದ ಹಾನಿ ತಪ್ಪಿಸುವ ಸಲುವಾಗಿ ಶಿಫಾರಸ್ಸಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಖರೀದಿಸಲು ಪ್ರಕಟಣೆಯಲ್ಲಿ ಕೃಷಿ ಇಲಾಖೆ ತಿಳಿಸಿದೆ.
,&&&&&&₹₹₹₹₹₹₹₹######&&&&&&&&
ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ: ಜಿಲ್ಲಾಧಿಕಾರಿ ಎ.ಬಿ.ಬಸವರಾಜು
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ. ಸೆಪ್ಟೆಂಬರ್ 3: ಯುವನಿಧಿ ಯೋಜನೆಯಡಿ ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಫಲಾನುಭವಿಗಳ ಆಸಕ್ತಿ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೆರವು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ಕೌಶಲ್ಯ ತರಬೇತಿಗಳನ್ನು ನೀಡಿದರೆ ಭವಿಷ್ಯದಲ್ಲಿ ಅವರ ಸಾಮರ್ಥ್ಯಕ್ಕೆ ಅನುಸಾರ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ನೆರವು ಕಲ್ಪಿಸಬೇಕು. ತರಬೇತಿ ಸಂಸ್ಥೆಗಳ ಮೂಲಕ ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ಕಲ್ಪಿಸಿ ಎಂದರು.
ಜಿಲ್ಲೆಯಲ್ಲಿನ ಕೈಗಾರಿಕೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ವಿವರ ಪಡೆದು ಭರ್ತಿ ಮಾಡಿಕೊಳ್ಳಲು ಕೈಗಾರಿಕಾ ಮುಖ್ಯಸ್ಥರ ಸಭೆ ನಡೆಸಿ. ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜನೆಗೆ ಸಿದ್ಧತೆ ಕೈಗೊಳ್ಳಿ ಇದರಿಂದ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಒದಗಿಸಲು ಸಹಕಾರಿ ಆಗಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಮತ್ತು ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು, ಕೈಗಾರಿಕಾ ಸಂಘದ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.