ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಗೆ ಮನವಿ
ವಿಜಯ ದರ್ಪಣ ನ್ಯೂಸ್….
ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಗೆ ಮನವಿ

ಶಿಡ್ಲಘಟ್ಟ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯನಿರ್ವಹಿಸುವಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಶಿಕ್ಷಕರು ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ಗಗನ ಸಿಂಧು ಅವರಿಗೆ ಮನವಿಯನ್ನು ಸಲ್ಲಿಸಿದರು.
ಸಮೀಕ್ಷಾ ಕಾರ್ಯದಲ್ಲಿ ಹಲವಾರು ತಾಂತ್ರಿಕ ದೋಷಗಳು ಮತ್ತು ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ,ಸಮೀಕ್ಷೆ ಕಾರ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಗಳು ಅವರ ವೈಯಕ್ತಿಕ ಮೊಬೈಲ್ ಮತ್ತು ನೆಟ್ ಬಳಸಿಕೊಳ್ಳಬೇಕಾಗಿದ್ದು, ಕೆಲವು ಶಿಕ್ಷಕರಿಗೆ ಸ್ಮಾರ್ಟ್ ಫೋನ್ ಬಳಕೆಯ ಜ್ಞಾನವಿರುವುದಿಲ್ಲ ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸರಸ್ವತಮ್ಮ ಹೇಳಿದರು.
ಶಿಕ್ಷಕರ ಸಮಸ್ಯೆ ಬಗೆಹರಿಸುವ ತನಕ ನಾವು ಗಣತಿ ಕಾರ್ಯ ಮಾಡಲು ಆಗುವುದಿಲ್ಲ ಮ್ಯಾಪಿಂಗ್ ಆಗುತ್ತಿಲ್ಲ, ಸರ್ವರ್ ಸಮಸ್ಯೆ ಇದೆ ,ಅನೇಕ ತಾಂತ್ರಿಕ ದೋಷಗಳ ನಡುವೆ ಗಣತಿ ಮಾಡೋದು ಹೇಗೆ ಎಂದರು.
ಮೊಬೈಲ್ ಆಪ್ ನಲ್ಲಿ ಹಲವಾರು ದೋಷಗಳು ಕಂಡುಬರುತ್ತಿದ್ದು, ಯು.ಎಚ್.ಐ.ಡಿ ಸಂಖ್ಯೆಗಳು ಪ್ರದರ್ಶನಗೊಳ್ಳುತ್ತಿಲ್ಲ. ಮೂರ್ನಾಲ್ಕು ಆಪ್ ಗಳನ್ನು ಬಳಸುವಾಗ ಸಮಸ್ಯೆಗಳು ಎದುರಾಗುತ್ತಿದ್ದು, ಸೂಕ್ತ ಮಾರ್ಗದರ್ಶನ ನೀಡುವ ಸಹಾಯವಾಣಿಯನ್ನು ತಾಲ್ಲೂಕು ಕೇಂದ್ರದಲ್ಲಿ ಪ್ರಾರಂಭಿಸಿ ಎಂದು ಹೇಳಿದರು.
ಮುಸ್ಲಿಂ ಪ್ರದೇಶದಲ್ಲಿ ಗಣತಿ ಕಾರ್ಯ ಮಾಡಲು ಕಷ್ಟ,ಅಲ್ಲಿ ಸ್ಥಳಾವಕಾಶದ ಕೊರತೆ ಇದೆ, ಜೊತೆಗೆ ಶಿಕ್ಷಕರಿಗೆ ಶೌಚಾಲಯಕ್ಕೆ ಹೋಗಲು ಅವಕಾಶಗಳಿಲ್ಲ, ಅವರಿಗೆ ಕನ್ನಡ ಬರೋದಿಲ್ಲ, ನಮಗೆ ಹಿಂದಿ ,ಉರ್ದು ಬರೋದಿಲ್ಲ ಭಾಷಾಜ್ಞಾನದ ಸಮಸ್ಯೆ ಎದುರಾಗಿದೆ ಎಂದು ಸಮಸ್ಯೆಗಳನ್ನು ಅವರು ಸಂಕ್ಷಿಪ್ತವಾಗಿ ವಿವರಿಸಿದರು.
20 ರಿಂದ 30 ಕಿ.ಮೀ ದೂರದ, ಭಾಷೆ ಗೊತ್ತಿರದ ಪ್ರದೇಶಗಳಲ್ಲಿ ನಿಯೋಜಿಸಿರುವ ಶಿಕ್ಷಕರಿಗೆ ಗಣತಿ ಕಾರ್ಯ ಕಷ್ಟಸಾಧ್ಯವಾಗಿದೆ ಆದ ಕಾರಣ ಶಿಕ್ಷಕರನ್ನು ಅವರು ಕಾರ್ಯನಿರ್ವಹಿಸುವ ಶಾಲಾ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿ,ಹೆಚ್ಚುವರಿ ಶಿಕ್ಷಕರಿದ್ದಲ್ಲಿ ಅಕ್ಕಪಕ್ಕದ ಗ್ರಾಮದಲ್ಲಿ ನಿಯೋಜಿಸುವುದು ಎಂದರು.
ಗಣತಿದಾರರಿಗೆ ನಿಯೋಜಿಸಲ್ಪಟ್ಟ ಪ್ರದೇಶದ ಯು.ಎಚ್.ಐ.ಡಿ. ಸಂಖ್ಯೆಗಳನ್ನೊಳಗೊಂಡ ಮನೆಪಟ್ಟಿಯನ್ನು ಒದಗಿಸಬೇಕು ಸಮೀಕ್ಷಾ ಕಾರ್ಯ ಈಗಾಗಲೇ ವಿಳಂಬವಾಗಿರುವುದರಿಂದ ಸಮೀಕ್ಷಾ ದಿನಂಕವನ್ನು ವಿಸ್ತರಿಸಿ ಶಿಕ್ಷಕರಿಗೆ ಗೌರವಧನ ಹಾಗೂ ಭತ್ಯೆಗಳಿಗೆ ಸಂಬಂಧಿಸಿದಂತೆ ಗಳಿಕೆ ರಜೆ ಮಂಜೂರು ಮಾಡಬೇಕೆಂಬ ಮನವಿಯನ್ನು ಸಲ್ಲಿಸಿದರು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಏನಾದರೂ ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಸಹ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಎಲ್ಲಾ ಗಣತಿದಾರರು ಕರ್ತವ್ಯಕ್ಕೆ ಹಾಜರಾಗಬೇಕು ಯಾರಾದರೂ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಮುಸ್ಲಿಮರಿಗೂ ಕನ್ನಡ ಬರುತ್ತದೆ ಕೆಲವರಿಗೆ ಬರದಿರಬಹುದು. ಅದು ಸಮಸ್ಯೆ ಆಗೋದಿಲ್ಲ, ತಾವು ಗಣತಿ ಕಾರ್ಯ ಮಾಡಲು ಹೋಗಿ ಎಂದು ಆದೇಶಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸುಂದರಾಚಾರಿ, ಮಂಜುನಾಥ್,ಸೀನಪ್ಪ, ಸುದರ್ಶನ್, ಅರುಣಾ,ಕೆ.ಎನ್.ಸುಬ್ಬಾರೆಡ್ಡಿ,ಎಂ.ಕೆಂಪೇಗೌಡ,
ನರಸಿಂಹರೆಡ್ಡಿ, ಮಂಜುನಾಥ, ಗಜೇಂದ್ರ, ನರಸಿಂಹರಾಜು ಮುಂತಾದವರು ಪಾಲ್ಗೊಂಡಿದ್ದರು.
