ಚಿಪ್ಪಿನೊಳಗಡೆ ಮುತ್ತು ಮಲಗಿದೆ
ವಿಜಯ ದರ್ಪಣ ನ್ಯೂಸ್….
ಚಿಪ್ಪಿನೊಳಗಡೆ ಮುತ್ತು ಮಲಗಿದೆ

ಈ ಹಿಂದೆ ಓಣಿಯಲ್ಲಿ ಜಾತ್ರೆಯಲ್ಲಿ ಸಂತೆಯಲ್ಲಿ ಎಷ್ಟೋ ಹುಡುಗಿಯರ ಕಂಡ ಕಣ್ಣು ಇಂಥ ನಯವಿರುವ ನಾಜೂಕಾಗಿರುವ ಹೆಣ್ಣನ್ನು ಕಂಡೇ ಇರಲಿಲ್ಲ. ಸುರಿವ ಸುಡುವ ಬಿಸಿಲಲ್ಲಿ ಉರಿ ಉರಿ ಎನ್ನುವ ಧಗೆಯಲ್ಲಿ ನಿನ್ನ ಗಲ್ಲ ಕಾಶ್ಮೀರಿ ಸೇಬಿನಂತೆ. ಅಬ್ಬಾ! ಯಾರೀ ಪರಮ ಸುಂದರಿ ಎಂದೆ ಮನದಲ್ಲಿ ಬೆವರು ಒರೆಸುತ. ಉಲ್ಬಣಿಸಿದ ಉರಿಬಿಸಿಲಲ್ಲೂ ಕಣ್ರೆಪ್ಪೆ ಮಿಟುಕಿಸದೇ ನೋಡಬೇಕೆನ್ನುವ ಅಪರೂಪದ ರೂಪ ನಿನ್ನದು. ಹಸಿರು ಜರಿಯಂಚಿನ ಲಂಗಧಾವಣಿ ಅದಕ್ಕೊಪ್ಪುವಂತೆ ಕೈಗಳಲ್ಲಿ ಘಲ್ ಘಲ್ ಎಂದು ಸದ್ದು ಮಾಡುವ ಹಸಿರು ಬಳೆ ಫಳ ಫಳ ಹೊಳೆಯುವ ಬೆಳ್ಳನೆಯ ಅಂದದ ದುಂಡಾದ ಮುಖ ಪುಟ್ಟ ಜೋಡಿ ಪ್ರಣತೆಯಂತಹ ತೇಜಯುಕ್ತ ಕಂಗಳು ಉದ್ದನೆಯ ನಾಗರ ಜಡೆಗೆ ಮಲ್ಲಿಗೆ ಮಾಲೆ. ಕೊರಳಗೊಪ್ಪುವ ನಾಜೂಕಾದ ಬಂಗಾರದ ಚೈನಿನ ಎಳೆ. ಸಾಮಾನ್ಯ ಗ್ರಾಮೀಣ ಹೆಣ್ಣುಮಗಳಿಗಿಂತ ಏನೋ ವಿಶೇಷವಾದ ಸೆಳೆತ ಇತ್ತು. ಮೊನಲಿಸಾನಂಥ ನಗುವಿನಿಂದ ಸೂಜಿಗಲ್ಲಿನಂತೆ ಹಳ್ಳಿ ಹೈಕಳೆನ್ನಲ್ಲ ಸೆಳೆದೆ. ನಗುವಿಗೆ ಕಿರೀಟವಿಟ್ಟಂತೆ ನಿನ್ನ ಸೌಮ್ಯ ಸ್ವಭಾವ ನಿನ್ನತ್ತ ಮತ್ತಷ್ಟು ಸೆಳೆಯಿತು. ಮೊದಲ ನೋಟದಲ್ಲೇ ನೀನೇ ನನ್ನ ಬಾಳಿನ ಅರಮನೆಯ ಯುವರಾಣಿ ಎಂದಿತು ಮನಸ್ಸು.

ಜಾತ್ರೆಯ ತೇರಿಗೆ ಒಗೆಯಬೇಕಾದ ಉತ್ತತ್ತಿ ನಿನ್ನ ಗುಂಗಲ್ಲಿ ಅದಾರಿಗೋ ತಗಲಿತೋ ಗೊತ್ತಿಲ್ಲ. ಆದರೆ ನೀ ಒಗೆದ ಉತ್ತತ್ತಿ ಮಾತ್ರ ಸೀದಾ ನನ್ನೆದೆಗೆ ತಗುಲಿತು. ಆ ಕ್ಷಣ ಮೈ ನವಿರೇಳುಸುವ ಕ್ಷಣ ಅದೆಂದೂ ಮರೆಯಲಾಗದ ಕ್ಷಣ. ಅದಾಗಲೇ ಜಾತ್ರೆಯ ಜನಸ್ತೋಮ ಕರಗಹತ್ತಿತ್ತು. ಇದೇ ಒಳ್ಳೆಯ ಸಮಯವೆಂದು ತಲೆಗೆ ಚಕ್ರ ಬಂದವನಂತೆ ಬಿದ್ದೆ. ಗೆಳತಿಯರು ನಿನ್ನಿಂದ ಇದೆಲ್ಲ ಆಯಿತೆಂದು ನಿನ್ನನ್ನು ಕಾಡ ಹತ್ತಿದರು. ನೀನು ನನ್ನ ಸನಿಹ ಬಂದು ಗಲ್ಲ ತಟ್ಟಿ ಎಬ್ಬಿಸಲೆತ್ನಿಸಿದೆ. ಎಚ್ಚರವಿದ್ದರೂ ಮೃದು ಕೈಗಳು ನನ್ನನ್ನು ಸವರಲೆಂದು ತುಸು ಹೊತ್ತು ನಾಟಕ ಮಾಡಿದೆ. ಪಿಳಿ ಪಿಳಿ ಕಣ್ಣು ಬಿಟ್ಟಾಗ ಸೌಂದರ್ಯ ರಾಶಿ ನನ್ನೆದುರಿಗೆ. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತ ಗಳಿಗೆ ಅದು. ‘ಈಗ ಹೇಗೆ ಫೀಲ್ ಆಗ್ತಿದೆ ಆರ್ ಯೂ ಓಕೆ? ಐ ಆ್ಯಮ್ ಸ್ಸಾರಿ ಎಂದೆ. ನನಗಾಗ ಆಕಾಶ ಮೂರೇ ಗೇಣು ಉಳಿದಿತ್ತು. ಏ ನೋ ಸ್ಸಾರಿ ರೀ ಎಂದು ಕಂಗ್ಲೀಷ್‌ನಲ್ಲಿ ನಿನ್ಹೆಸರ ಕೇಳಿ ನನ್ಹೆಸರ ಹೇಳಿದೆ. ಇದುವರೆಗೂ ಯಾರ ಹೃದಯಲ್ಲೂ ಬೇರು ಬಿಡದೆ ಅಲೆದುಕೊಂಡಿದ್ದವನು. ಅದೇ ಕ್ಷಣ ಹೃದಯವನ್ನು ನಿನ್ನ ಹೆಸರಿಗೆ ಬರೆದೆ.
ಬೇಸಿಗೆ ಸೂಟಿಗೆಂದು ಅಜ್ಜಿ ಊರಿಗೆ ಬಂದವಳೆಂದು ಗೆಳೆಯರಿಂದ ಆಮೇಲೆ ತಿಳಿಯಿತು ನನ್ನೂರಿನ ಉಡಾಳ ಹುಡುಗರ ಪಟ್ಟಿಯಲ್ಲಿ ಮುನ್ನೆಲೆಯಲ್ಲಿತ್ತು ನನ್ನ ಹೆಸರು. ಹೀಗಾಗಿಯೇ ಹುಡುಗಿಯರೆಲ್ಲ ನನ್ನ ಕಂಡರೆ ಮೂರು ಮೊಳ ದೂರ ಜಿಗಿಯುತ್ತಿದ್ದರು.ಸರ್ಕಸ್ ಮಾಡಿ ನಿನ್ನಜ್ಜಿ ಮನೆಯ ಪಕ್ಕದ ಹುಡುಗಿಯರ ಗೆಳೆತನ ಮಾಡಿ ನಿನ್ನನ್ನು ಊರ ಹೊರಗಿನ ಹನುಮಂತನ ಗುಡಿಗೆ ಬರುವಂತೆ ಮಾಡಿದೆ. ಮೊದಲ ಭೇಟಿಯಲ್ಲಿ ಹೆದರಿದ್ದ ನನಗೆ ಬೆವರು ಕಿತ್ತು ಕಿತ್ತು ಬಂತು. ಚಾಣಾಕ್ಷೆ ನೀನು ಫೀಲ್ ಫ್ರೀ ಎಂದೆ. ಮೊದಲೇ ನನ್ನದು ಇಂಗ್ಲೀಷ್ ತುಟ್ಟಿ. ಹೇಗೋ ಮ್ಯಾನೇಜ್ ಮಾಡಿದೆ. ಓದುವ ಹವ್ಯಾಸ ನಿನ್ನದು ಹೋದಲೆಲ್ಲ ಪುಸ್ತಕ ಹೊತ್ತೆ ನಡೆಯುತ್ತಿದ್ದೆ. ಓದಲೆಂದು ತಂದಿದ್ದ ಪುಸ್ತಕವನ್ನು ಕೈಗಿತ್ತು ಓದಿ ಆಮೇಲೆ ಅಭಿಪ್ರಾಯ ತಿಳಿಸಿ ಎಂದೆ. ಬೀಸುವ ಗಾಳಿಗೆ ನಿನ್ನ ನವಿರಾದ ಗಲ್ಲವನ್ನು ಚುಂಬಿಸುತ್ತಿದ್ದ ಮುಂಗುರಳನ್ನು ಹಿಂದೆ ನೂಕುತ್ತ ನಡೆದೆ. ನಿನ್ನ ಬೆನ್ನನ್ನು ಅಲಂಕರಿಸಿದ್ದ ಕಪ್ಪನೆಯ ಕೇಶ ರಾಶಿ, ಕಾಲ್ಗೆಜ್ಜೆ ಸದ್ದು ಸಮ್ಮೋಹನಗೊಳಿಸಿದ್ದಕ್ಕೆ ನಿನ್ನ ಹೆಜ್ಜೆಗಳನ್ನು ನನ್ನ ಹೆಜ್ಜೆಗಳು ಊರಿನ ಅಗಸಿ ಬಾಗಿಲದವರೆಗೆ ಹಿಂಬಾಲಿಸಿದವು.
ಸಾಹಿತ್ಯದ ಗಂಧ ಗಾಳಿ ಗೊತ್ತಿರದ ಹೈದ ನಾನು. ನನಗೆ ಓದಿನ ರುಚಿ ತೋರಿಸಿದೆ. ಮನಕೆಲ್ಲ ಹಿತ ಚೆಲ್ಲುವ ಸಾಹಿತ್ಯ ಓದಿ ಓದಿ ನಿನ್ನ ಮೇಲೆಯೇ ಪ್ರೇಮ ಕವಿತೆ ಗೀಚುವ ಹುಚ್ಚು ಹತ್ತಿತು. ಗೆಳೆಯರೆಲ್ಲ ಪ್ರೇಮ ಕವಿ ಎಂದು ಕಾಲೆಳೆದು ನಗುವಂತಾಯಿತು. ‘ಮೊಗ್ಗು ಹಿಗ್ಗಿ ಹಿಗ್ಗಿ ಹೂವಾಗುವ ನಯ, ಮಗುವಿನಂಥ ಮುಗ್ಧ ಮನ, ನಿರ್ಮಲ ಭಾವ, ಫಳ ಫಳ ಹೊಳೆಯುವ ಚರ್ಮ, ಸ್ಚರ್ಶಿಸಿದರೆ ಅದೆಲ್ಲಿ ಹಾಳಾಗಿಬಿಡುವುದೋ ಎನ್ನುವ ಭಯ ನನ್ನಲ್ಲಿ ಎಲ್ಲರನ್ನೂ ಗೌರವಿಸುವ ಸಮಾನವಾಗಿ ಕಾಣುವ ದೊಡ್ಡ ಹೃದಯವಂತಿಕೆ ಪದಗಳಲ್ಲೂ ಮೌನ ತುಂಬುವ ಬುದ್ಧಿವಂತಿಕೆ ಎದೆಯಿಂದ ಹೊಮ್ಮುವ ಭಾವಗಳ ಕವನವಾಗಿಸುವ ಕಾತುರತೆ ಇಲ್ಲ ಆತುರತೆ ಏನಿಲ್ಲ. ಆಡುವ ಮಾತುಗಳೇ ಸುಂದರ ಕವಿತೆ ನೀ ಗೀಚಿದಂತೆ.’ ಹೀಗೇ ತೋಚಿದಂತೆ ಗೀಚಿದ ಪದಗಳನು ನೀನೇ ಎಂದು ಭಾವಿಸಿ ಮೃದುವಾಗಿ ಸವರುತ್ತಿದ್ದೆ ರೋಮಾಂಚಿತನಾಗಿ ಚುಂಬಿಸುತ್ತಿದ್ದೆ.
ಇದೆಲ್ಲ ಹರೆಯದ ಪ್ರಾಯದಲಿ ಇದೆಲ್ಲ ಮಾಮೂಲೆಂದರು ಗೆಳೆಯರು. ಅದೇ ಸಂಜೆ ನಿನ್ನನ್ನು ಹುಡುಕಿ ಊರ ಹೊರಗಿನ ಮಾಮೂಲಿ ಜಾಗಕ್ಕೆ ಬಂದೆ ನನಗೆಂದೇ ಕಾದು ಕುಳಿತವಳಂತೆ ಬಂಡೆ ಕಲ್ಲಿನ ಮೇಲೆ ಪುಸ್ತಕದಲ್ಲಿ ಮಗ್ನಳಾಗಿದ್ದೆ. ಓದಿದ ಪುಸ್ತಕ ಮರಳಿಸಲೆಂದು ಮುಂದೆ ಹಿಡಿದೆ. ಕೋಮಲ ಬೆರಳುಗಳು ನನ್ನ ಕೈಗೆ ತಾಗಿದವು. ವಿದ್ಯುತ್ ತಗುಲಿದಂತಾಯಿತು. ಬಂಡೆಯ ಪಕ್ಕಕ್ಕೆ ಕೂತೆ. ನನ್ನತ್ತ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಮನದಲ್ಲಿ ಏನೋ ಭಯ ಆವರಿಸಿತು. ಆದರೂ ಧೈರ್ಯವನ್ನೆಲ್ಲ ಒಗ್ಗೂಡಿಸಿ ಸಾವಕಾಶವಾಗಿ ಕೆನ್ನೆ ಸವರಿದೆ. ನಾಚಿಕೆಗೆ ಕೆನ್ನೆ ಕೆಂಪೇರಿತು. ಬೆರಳುಗಳು ಒಂದಕ್ಕೊಂದು ಹೆಣೆದುಕೊಂಡವು. ತೋಳುಗಳು ಬಂಧಿಯಾದವು. ಇನ್ನೇನು ಅಧರಗಳು ಬಾಯ್ದೆರೆದು ಒಂದಾಗುವ ಸನ್ನಾಹದಲ್ಲಿದ್ದವು.
ಆಗ ನೀನು ತಟ್ಟನೇ ಪುಟ್ಟ ನಗೆ ಬೀರಿ ನಾನೂ ನಿನ್ನಂತೆಯೇ ಪ್ರೇಮ ರೋಗಿ. ಇದು ಚೂರು ಚೂರೇ ಔಷಧಿ ಸೇವಿಸಿದರೆ ಮತ್ತಷ್ಟು ಉಲ್ಭಣಿಸುವ ಕಾಯಿಲೆ. ಪ್ರೀತಿಯ ಕಳ್ಳಾಟ ಇಬ್ಬರ ಮನೆಯಲ್ಲಿ ಗೊತ್ತಾಗಿದೆ. ನನ್ನಜ್ಜಿ ಅಪ್ಪ ಅವ್ವನ ಒಪ್ಪಿಗೆ ಸಿಕ್ಕಿದೆ. ಬಿಸಿ ಅಪ್ಪುಗೆಗೆ, ಅಧರಕೆ ಸಿಹಿ ಮುದ್ರೆ ಒತ್ತುವ ಒಪ್ಪಿಗೆಗೆ ನಾನು ಸಹಿ ಹಾಕಿಯಾಗಿದೆ ಎಂದೆ. ಅಲೆದಾಡುತ್ತಿದ್ದ ಅಧರಗಳು ಚಂಗನೆ ನಿಂತಿತು. ಬೆರಗಾಗಿ ಕೇಳಿದೆ ಹಾಗಾದರೆ ಈ ಪರಮ ಸುಂದರಿಗೆ ನಾನೇ ಅರಸ ಇನ್ನು. ಪಟ್ಟದರಸಿಯಿಂದ ಪ್ರತಿ ದಿನ ಮಧುರ ಜೇನಿನ ಸವಿಯೂಟ. ಚೆಂದದ ಮೈ ಮಾಟಕೆ ಪ್ರತಿರಾತ್ರಿಯೂ ಪ್ರಥಮ ರಾತ್ರಿಯ ಭಾಗ್ಯ. ಸಾಗಲಿ ಪ್ರೇಮ ಪಯಣ ಒಲಮೆ ಚಿಲುಮೆಯಲಿ ಒಲವ ತೊರೆಯಲಿ ಅನುದಿನ ಎಂಬುದೇ ನನ್ನಾಸೆ ಎಂದೆ. ಅನಿರೀಕ್ಷಿತವಾಗಿ ಟ್ರಿಮ್ ಮಾಡಿದ ಗಡ್ಡದ ಗಲ್ಲಕೆ ಕೆಂದುಟಿಯ ಮುದ್ರೆಯನ್ನೊತ್ತಿದೆ ಮತ್ತೇರಿಸಿದೆ. ‘ಚಿಪ್ಪಿನೊಳಗಡೆ ಮುತ್ತು ಮಲಗಿದೆ ಮುತ್ತಿನೊಳಗಡೆ ಮತ್ತು ಮಲಗಿದೆ ಮತ್ತು ಈಗ ನೆತ್ತಿಗೇರಿದೆ.’ ಎನ್ನುವ ಹಾಡನ್ನು ಕೋಗಿಲೆ ಕಂಠದಿ ಹಾಡುತ್ತ ಇನ್ನೂ ಮುಳುಗದ ಸೂರ್ಯನತ್ತ ಮುಖ ಮಾಡಿ ಭುಜಕ್ಕೆ ಭುಜ ತಾಗಿಸಿ ನಡೆದೆ. ನನ್ನತ್ತ ನೋಡುತ್ತ ಹುಸಿ ನಕ್ಕೆ. ಇದೆಲ್ಲ ನಡೆದು ಆರು ತಿಂಗಳಾಯಿತು.
ಇದೀಗ ಹಸೆಮಣೆ ಏರಿಯಾಗಿದೆ. ಮೊದಲಿರಳಿನ ಸಿದ್ಧತೆ ಜೋರಾಗಿದೆ. ಸತಾಯಿಸಿದೆ ಬೇಗ ಬಂದು ಬಿಡು ನಿನ್ನ ರಾಜನ ತೋಳಿನ ಅರಮನೆಗೆ ಹೂವಿನ ಮಂಚದ ರಸದೂಟದ ಯಾತ್ರೆಗೆ..
ನಿನ್ನ ಬರುವಿಗಾಗಿ ಕಾಯುತ್ತಿರುವ
ನಿನ್ನ ಪ್ರೇಮ
