ಕೃಷಿಕರು ಪ್ರಧಾನ ಕೃಷಿಯೊಂದಿಗೆ ಕೋಳಿ ಸಾಕಣೆಯನ್ನು ಉಪಕಸುಬಾಗಿ ಕೈಗೊಳ್ಳಬೇಕು
ವಿಜಯ ದರ್ಪಣ ನ್ಯೂಸ್…
ಕೃಷಿಕರು ಪ್ರಧಾನ ಕೃಷಿಯೊಂದಿಗೆ ಕೋಳಿ ಸಾಕಣೆಯನ್ನು ಉಪಕಸುಬಾಗಿ ಕೈಗೊಳ್ಳಬೇಕು

ಶಿಡ್ಲಘಟ್ಟ : ಕೃಷಿಕರು ತಾವು ಕೈಗೊಂಡ ಪ್ರಧಾನ ಕೃಷಿಯೊಂದಿಗೆ ಕೋಳಿ ಸಾಕಣೆಯನ್ನು ಉಪಕಸುಬಾಗಿ ಕೈಗೊಳ್ಳುವುದರಿಂದ ಆರ್ಥಿಕವಾಗಿ ಬಹಳ ಅನುಕೂಲವಾಗಲಿದ್ದು ಮಾರುಕಟ್ಟೆಯಲ್ಲಿ ಕೋಳಿಗಳಿಗೆ ವರ್ಷದ ಎಲ್ಲಾ ದಿನಗಳಲ್ಲೂ ಬೇಡಿಕೆ ಇರಲಿದೆ ಎಂದು ಪಶುಪಾಲನಾ ಮತ್ತು ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶ್ರೀನಾಥರೆಡ್ಡಿ ತಿಳಿಸಿದರು.
ನಗರದ ವಾರದ ಸಂತೆ ಮೈದಾನ ಬಳಿಯಿರುವ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಸೇವಾ ಇಲಾಖೆಯು ರೈತ ಮಹಿಳೆಯರಿಗೆ ಉಚಿತವಾಗಿ ಮೈಸೂರು ತಳಿಯ ನಾಟಿ ಕೋಳಿ ಮರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಮತ್ತು ಆರ್ಥಿಕವಾಗಿ ಹಿಂದುಳಿದ ರೈತರ ಆದಾಯ ಹೆಚ್ಚಿಸುವ ಸಲುವಾಗಿ ನಾಟಿ ಕೋಳಿ ಪಾಲನೆ ಮಾಡುವಂತೆ ಪ್ರೋತ್ಸಾಹಿಸಲು ಸರಕಾರವು ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾನ್ಯ ವರ್ಗದವರಿಗೆ ಉಚಿತವಾಗಿ ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ನಾಟಿ ಕೋಳಿ ಮತ್ತು ಅದರ ಮೊಟ್ಟೆಯ ಸೇವನೆ ನಮ್ಮ ಆರೋಗ್ಯ ದೃಷ್ಟಿಯಿಂದ ಉತ್ತಮ ಹಾಗಾಗಿ ಈ ಯೋಜನೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ರೈತರು ಹೈನುಗಾರಿಕೆ, ರೇಷ್ಮೆ ಕೃಷಿ, ತೋಟಗಾರಿಕೆ ಕೃಷಿಯ ಜತೆ ಜತೆಗೆ ಕುರಿ, ಕೋಳಿ, ಮೇಕೆ ಸಾಕಣೆಯಂತಹ ಉಪ ಕಸುಬು ಮಾಡಿದರಷ್ಟೇ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಸಾಧ್ಯ ಎಂದು ನುಡಿದರು. ಈ ವೇಳೆ 70 ರೈತ ಮಹಿಳೆಯರಿಗೆ ತಲಾ 20 ನಾಟಿ ಕೋಳಿ ಮರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಕುಮಾರ್, ಪಶು ಇಲಾಖೆಯ ಡಾ.ಪ್ರಶಾಂತ್,ಡಾ.ನಿತಿನ್ ಕುಮಾರ್,
ಡಾ.ಸೌಮ್ಯ, ಜಾನುವಾರು ಅಧಿಕಾರಿ ವೀರೇಶ್, ಸಿಬ್ಬಂದಿ ಅನೀಲ್,ಪುಷ್ಪ ,ಮೂರ್ತಿ, ಮಂಜು, ಅಬ್ಲೂಡು ಮಂಜು,ಅಶೋಕ್, ಬಸವರಾಜ್ ಮತ್ತೀತರರಿದ್ದರು.
&&&&&&&&&&&&&&&&&&&&&&&&&&
ಉದ್ಯಮಶೀಲ ತರಬೇತಿಗೆ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಅಕ್ಟೋಬರ್ :
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ ವತಿಯಿಂದ ಸ್ವಂತ ಉದ್ಯಮವನ್ನು ಸ್ಥಾಪಿಸಲು ಇಚ್ಚಿಸುವವರಿಗಾಗಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಜಂಟಿ ನಿರ್ದೇಶಕರ ಕಚೇರಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕಟ್ಟಡ ಸಂಖ್ಯೆ : #132, 1 ನೇ ಮಹಡಿ ಜಿಲ್ಲಾಡಳಿತ ಭವನ ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ 18 ವರ್ಷ ದಿಂದ 45 ವರ್ಷ ವಯಸ್ಸಿನವರಾಗಿರಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 18 ಕೊನೆಯ ದಿನವಾಗಿರುತ್ತದೆ.
ಜಿಲ್ಲೆಯ ಬಾವಿ ಉದ್ಯಮಶೀಲರಿಗೆ ಅಕ್ಟೋಬರ್ 29 ರಿಂದ ನವೆಂಬರ್ 11 ವರೆಗು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.ಯುವನಿಧಿ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು, ತರಬೇತಿಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಹಾಗೂ ಉದ್ಯಮ ನಿರ್ವಹಣೆ, ಇತ್ಯಾದಿ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ಮೊಬೈಲ್ ಸಂಖ್ಯೆ :9731762200 Email: cedokbngrural1@gmail.com ಸಂಪರ್ಕಿಸಬಹುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
