ವಿಜೃಂಭಣೆಯಿಂದ ನಡೆದ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವ

ವಿಜಯ ದರ್ಪಣ ನ್ಯೂಸ್ 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣ  ಇಲ್ಲಿನ ಶಾಂತಿ ನಗರದಲ್ಲಿನ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಮತ್ತು ಹೂವಿನ ಆರತಿಗಳು ವಿಜೃಂಭಣೆಯಿಂದ ನಡೆದವು.

ದೇವಾಲಯವನ್ನು ವಿದ್ಯುತ್ ದೀಪಲಾಂಕಾರ ಹಾಗೂ ವಿಶೇಷ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು ಮುತ್ಯಾಲಮ್ಮ ದೇವಿ ಮೂಲ ದೇವರಿಗೆ ಮಾಡಲಾಗಿದ್ದ ವಿಶೇಷ ಪಂಜುರ್ಲಿ ಅಲಂಕಾರ ಎಲ್ಲರ ಆಕರ್ಷಣೆಯಾಗಿತ್ತು.

ಬೆಳಗ್ಗೆ 11 ಗಂಟೆಗೆ ದೇವಾಲಯದ ಬಳಿಯಿಂದ ಹೊರಟ ಮುತ್ಯಾಲಮ್ಮ ದೇವಿ ಹಾಗೂ ದೊಡ್ಡಮ್ಮ ದೇವಿಯ ರಥೋತ್ಸವದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ಮಂಗಳ ವಾದ್ಯಗಳೊಂದಿಗೆ ಭಾಗವಹಿಸಿದ್ದ ಪಟ್ಟದ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಗಾರುಡಿ ಬೊಂಬೆ ಮೊದಲಾದ ಜನಪದ ಕಲಾತಂಡಗಳು ಉತ್ಸವಕ್ಕೆ ಮೆರುಗು ನೀಡಿದವು.

ಸಂಜೆ ದೇವಾಲಯದ ಸುತ್ತಲಿನ ದರ್ಗಾ ಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ಶಾಂತಿನಗರ, ನಾಗಸಂದ್ರ, ಕೊಡುಗೆಹಳ್ಳಿ ಸೇರಿದಂತೆ ನಗರ ಹಾಗೂ ತಾಲೂಕಿನ ಗ್ರಾಮಸ್ಥರು ಅಡಿಕೆ ಹೊಂಬಾಳೆಯಿಂದ ಆರತಿಗಳನ್ನು ವಿವಿಧ ಮಾದರಿಯಲ್ಲಿ ಸಿಂಗರಿಸಿ ದೇವಿಗೆ ಬೆಳಗಿದರು.

ಮುತ್ಯಾಲಮ್ಮ ಸೇವಾ ದತ್ತಿ ಪದಾಧಿಕಾರಿಗಳು ಹಾಗೂ 7 ಗ್ರಾಮಗಳ ಮುಖಂಡರು ಜಾತ್ರಾ ಉತ್ಸವದ ಉಸ್ತುವಾರಿ ವಹಿಸಿ ಸಂಭ್ರಮದಿಂದ ಭಾಗವಹಿಸಿದರು.

ದೇವಾಲಯದ ಸಮೀಪದ ನವಗ್ರಹ ದೇವಾಲಯದಲ್ಲಿ ಹಾಗೂ ದೊಡ್ಡಮ್ಮ ದೇವಸ್ಥಾನ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು .