ಅಕಾಲಿಕ ಮಳೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪಾರ ಬೆಳೆ ನಷ್ಟ.

ವಿಜಯ ದರ್ಪಣ ನ್ಯೂಸ್.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 23 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ 2023ರ ಮೇ 20 ರಿಂದ ಮೇ 23 ರವರೆಗೆ ಸುರಿದ ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಮುಂಗಾರು ಮಳೆ ಆರಂಭವಾಗುವ ಹಿನ್ನೆಲೆಯಲ್ಲಿ ಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್ ಲತಾ ಅವರು ಅಧಿಕಾರಿಗಳಿಗೆ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮುಂಗಾರು ಮಳೆ ಸನ್ನದ್ದತೆ ಕ್ರಮಗಳನ್ನು ಕೈಗೊಳ್ಳುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1.31 ಹೆಕ್ಟೇರ್ ಹಾಗೂ ಹೊಸಕೋಟೆ ತಾಲೂಕಿನಲ್ಲಿ 5.62 ಹೆಕ್ಟೇರ್ ಸೇರಿದಂತೆ ಒಟ್ಟು 6.93 ಹೆಕ್ಟೇರ್ ರಷ್ಟು ವಿರ್ಸೀರ್ಣದ ಕೃಷಿ ಬೆಳೆಯಾದ ಸ್ವೀಟ್ ಕಾರ್ನ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು. ತೋಟಗಾರಿಕೆ ಬೆಳೆಗಳಾದ ಮಾವು 11.70 ಹೆಕ್ಟೇರ್, ಟೊಮ್ಯಾಟೋ 2 ಹೆಕ್ಟೇರ್, ಸೇವಂತಿಗೆ 5 ಹೆಕ್ಟೇರ್, ಬದನೆಕಾಯಿ 1.2 ಹೆಕ್ಟೇರ್ , ಹೀರೆ ಗಿಡ 1.28 ಹೆಕ್ಟೇರ್, ಬೀನ್ಸ್ 1.00 ಹೆಕ್ಟೇರ್ ವಿರ್ಸೀರ್ಣದ ಬೆಳೆಯು ಹಾನಿಯಾಗಿದೆ. ಉಳಿದಂತೆ ಎಲೆಕೋಸು, ಹೂಕೋಸು, ಚೆಂಡು ಹೂಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಒಟ್ಟಾರೆ ಹೊಸಕೋಟೆ ತಾಲ್ಲೂಕಿನಲ್ಲಿ 17 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 6.10 ಹೆಕ್ಟೇರ್ ಒಟ್ಟು 23.10 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ತಿಳಿಸಿದರು.


ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಶೀಘ್ರವೇ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ದೊಡ್ಡಬಳ್ಳಾಪುರದಲ್ಲಿ ಒಂದು ಮನೆ ಸೇರಿದಂತೆ, ಶಾಲೆಯ ಮೇಲ್ಚಾವಣಿಗೆ ಅಲ್ಪ ಹಾನಿಯಾಗಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ಒಂದು ಮನೆಗೆ ಹೆಚ್ಚು ಪ್ರಮಾಣದ ಹಾನಿಯಾಗಿದೆ. ಉಳಿದಂತೆ ನೆಲಮಂಗಲ ಹಾಗೂ ದೇವನಹಳ್ಳಿಯಲ್ಲಿ ಯಾವುದೇ ರೀತಿಯ ಮನೆಗಳಿಗೆ, ಶಾಲೆಗಳಿಗೆ, ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿರುವುದಿಲ್ಲ ಎಂದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಮಾತನಾಡಿ ಹಾನಿಯಾದ ಮನೆ ಕಟ್ಟಡಗಳಿಗೆ ಶೀಘ್ರ ಪರಿಹಾರ ಹಾಗೂ ದುರಸ್ತಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹೆಚ್ಚು ಮಳೆ ಮತ್ತು ಗಾಳಿಯಿಂದ ನೆಲಮಂಗಲ ವ್ಯಾಪ್ತಿಯಲ್ಲಿ 41 ವಿದ್ಯುತ್ ಕಂಬಗಳು, 32 ಟ್ರಾನ್ಸಫಾರ್ಮರ್ಗಳು, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ 22 ವಿದ್ಯುತ್ ಕಂಬಗಳು, 26 ಟ್ರಾನ್ಸಫಾರ್ಮರ್ಗಳು, ಹೊಸಕೋಟೆ ವ್ಯಾಪ್ತಿಯಲ್ಲಿ 27 ವಿದ್ಯುತ್ ಕಂಬಗಳು, 03 ಟ್ರಾನ್ಸಫಾರ್ಮರ್ಗಳು ದೇವನಹಳ್ಳಿಯಲ್ಲಿ 25 ವಿದ್ಯುತ್ ಕಂಬಗಳು , 02 ಟ್ರಾನ್ಸಫಾರ್ಮರ್ಗಳು ಒಟ್ಟು 115 ವಿದ್ಯುತ್ ಕಂಬಗಳು ಹಾಗೂ 63 ಟ್ರಾನ್ಸಫಾರ್ಮರ್ಗಳಿಗೆ ಹಾನಿಯಾಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದಾಗ ನೆಲಕ್ಕೆ ಉರುಳಿರುವ ಕಂಬಗಳನ್ನು, ಟ್ರಾನ್ಸಫಾರ್ಮರ್ ಗಳನ್ನು ಬದಲಾಯಿಸಿ ವಿದ್ಯುತ್ ವ್ಯತ್ಯಯವಾಗದಂತೆ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

ಮುಂಗಾರಿನಲ್ಲಿ ವಿಪತ್ತುಗಳಿಗೆ (ಪ್ರವಾಹ/ಭೂಕುಸಿತ) ತುತ್ತಾಗುವಂತಹ ತಾಲ್ಲೂಕು ಕೇಂದ್ರಗಳಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯುವುದು. ಅವಶ್ಯವೆನಿಸಿದಲ್ಲಿ 24/7 ಸಕ್ರಿಯಗೊಳಿಸಿ ವಿವಿಧ ಹಂತಗಳಲ್ಲಿ ವಿಪತ್ತು ನಿರ್ವಹಣೆಯಲ್ಲಿ ತೊಡಗಬೇಕು ಎಂದರು.
IMD, CWC, INCOIS,NDEM & KSNDMC ಮುಂತಾದ ನೋಡಲ್ ಏಜೆನ್ಸಿಗಳು ಹವಾಮಾನ, ನೀರಿನ ಹರಿವು ಸಮುದ್ರದ ಸಿಸಿ ಕುರಿತು ನೀಡುವ ಮುನ್ಸೂಚನೆ ಮತ್ತು ಮುನ್ನಚ್ಚರಿಕೆ ಹಾಗೂ ಸಲಹೆ ಸೂಚನೆಗಳನ್ನು ತುರ್ತು ಸಂದರ್ಭಗಳಲ್ಲಿ ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ತಲುಪುವಂತೆ ಕ್ರಮ ವಹಿಸಬೇಕು. ಹವಾಮಾನ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆಗಳನ್ನು NDMA ಅಭಿವೃದ್ಧಿ ಪಡಿಸಿರುವ Common Alert Protocol ಮುಖಾಂತರ ಸಾರ್ವಜನಿಕರ ಮೊಬೈಲ್‌ಗಳಿಗೆ ರವಾನಿಸಲಾಗುತ್ತಿದೆ.
ಅವಶ್ಯವಿದ್ದಲ್ಲಿ ಜನಸಾಮಾನ್ಯರು KSNDMC
ಯಲ್ಲಿ ಚಾಲ್ತಿಯಿರುವ “ವರುಣ ಮಿತ್ರ” ಸಹಾಯ ವಾಣಿ 9243345433 ಗೆ ಕರೆಮಾಡಿ.


ಮಾಡಿ ಹವಾಮಾನ ಮಾಹಿತಿ ಪಡೆಯುವುದು ಹಾಗೂ ಅಭಿವೃದ್ಧಿಪಡಿಸಿರುವ Damini App ಇದರಲ್ಲಿ ಸಿಡಿಲು ಯಾವ ಪ್ರದೇಶದಲ್ಲಿ ಬರುವ ಸಾಧ್ಯತೆ ಮಾಹಿತಿ ಮತ್ತು alerts ಪಡೆಯಲು NDMA ಅಭಿವೃದ್ಧಿ ಪಡಿಸಿರುವ Sachet App ನಲ್ಲಿ ಸಹ ಪಡೆಯಬಹುದು ಅಥವಾ ಗುಡುಗು ಸಿಡಿಲಿನ ಮುನ್ನೆಚ್ಚರಿಕೆಗಳನ್ನು KSNDMC
ಅಭಿವೃದ್ಧಿಪಡಿಸಿರುವ Play Storeನಲ್ಲಿ ಲಭ್ಯವಿರುವ “Sidilu App” ನಲ್ಲಿ
ಪಡೆಯಬಹುದು ಎಂದು ಮಾಹಿತಿ ನೀಡಿದರು.

ಮಳೆಗಾಲಕ್ಕೆ ಮುಂಚಿತವಾಗಿ ಮಳೆ ನೀರು ಸರಾಗವಾಗಿ ಹರಿಯಲು ರಾಜ ಕಾಲುವೆ / ಚರಂಡಿ / ಸೇತುವೆ / ಕಲ್ಬರ್ಟ್ ಗಳಲ್ಲಿರುವ ಹೂಳು ತೆಗೆದು ಸ್ವಚ್ಛಗೊಳಿಸಿರಬೇಕು.
ನದಿ / ನೀರಾವರಿ ಕೆರೆಗಳು / ಕಾಲುವೆಗಳ, ದಡಗಳ ಹತ್ತಿರವಿರುವ ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸುವುದು. ಚರಂಡಿಗಳ ಮೇಲೆ ಹೊದಿಸಿರುವ ಕಲ್ಲು ಕಾಂಕ್ರೀಟ್ ಅಂತರವಿಲ್ಲದೇ ಸಮರ್ಪಕವಾಗಿ ಮುಚ್ಚಲು ಕ್ರಮ ವಹಿಸಿಪ್ರವಾಹಕ್ಕೆ ತುತ್ತಾಗುವಂತಹ ಯಾವುದೇ ಪ್ರದೇಶಗಳಲ್ಲಿ ಮಳೆಗಾಲಕ್ಕೆ ಮುಂಚಿತವಾಗಿಯೇ ಪ್ರವಾಹ ಉಪಶಮನ ಕ್ರಮಗಳನ್ನು ಕೈಗೊಳ್ಳಬೇಕು. ನಗರ / ಗ್ರಾಮಗಳಲ್ಲಿ ಪ್ರವಾಹದಿಂದ ತಗ್ಗು ಪ್ರದೇಶಗಳಲ್ಲಿ, ನಿಂತ ನೀರನ್ನು ಹೊರಹಾಕಲು ಪಂಪ್‌ಸೆಟ್‌ಗಳನ್ನು ಸಜ್ಜುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು


ಜಿಲ್ಲೆಯಲ್ಲಿ ರೈತ ಸೇವಾಕೇಂದ್ರ (RSK) ವಾರು ವಿವಿಧ ಬಿತ್ತನೆ ಬೀಜ, ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳ ನಿಗಧಿತ ಗುರಿ, ದಾಸ್ತಾನುಗಳ(Rakes) ಲಭ್ಯತೆ ಮತ್ತು ಕೊರತೆ ಕುರಿತು ಮಾಹಿತಿ ಪಡೆದುಕೊಂಡು ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಲು ಕೊರತೆ ಬಾರದಂತೆ ಹೆಚ್ಚುವರಿಯಾಗಿ ಸಂಗ್ರಹಿಸಿಡಿ. ಹನಿ ನೀರಾವರಿ, ಪಾಲಿಥೀನ್ ಶೀಟ್ ಬದಲೀಕರಣ (Replacement), ತರಕಾರಿ ಬೆಳೆಗಳಿಗೆ ಬಿತ್ತನೆ ಬೀಜ ಕಿಟ್ ವಿತರಣೆ, ಪ್ಯಾಕ್ ಹೌಸ್‌ ನಿರ್ಮಾಣಕ್ಕೆ ಸೂಕ್ತ ಕ್ರಮ ವಹಿಸಿ. ತಾಲ್ಲೂಕು ಮತ್ತು ಹೋಬಳಿವಾರು ಜಾನುವಾರುಗಳಿಗೆ ಮೇವು ಸಂಗ್ರಹಿಸಿ. ಮೀನುಗಾರಿಕೆಗೆ ಲಭ್ಯವಿರುವ ವಿವಿಧ ತಳಿಯ ಮೀನು ಮರಿಗಳು ಮತ್ತು ಮೀನು ಸಾಕಾಣಿಕೆ ಹೆಚ್ಚಿನ ಪ್ರೊತ್ಸಾಹ ನೀಡಬೇಕು ಎಂದು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಮರ ಬೆಳೆಸಲು ಸಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ರಸ್ತೆಗಳ ಪಕ್ಕದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಜಲಾನಯನ ಇಲಾಖೆಯ ವತಿಯಿಂದ ಮಣ್ಣಿನಲ್ಲಿ ಮಳೆನೀರು ಸಂಗ್ರಹಣೆ, ಮತ್ತು ಹಿಂಗುವ ಕ್ರಮ ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ (ವಾರ್ಡ್ ವಾರು) ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ
ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳಲಿದ್ದು, ರೋಗಗಳು ಹರಡದಂತೆ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಸೂಚಿಸಿದರು.
ಒಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ 2023ರ ಮುಂಗಾರು ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡು, ಮುಂಗಾರು ಮಳೆ ಹಾಗೂ ಚಂಡಮಾರುತಗಳ ಪರಿಣಾಮಗಳನ್ನು ತಗ್ಗಿಸುವ ಮೂಲಕ ವಿಪತ್ತು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಕಿವಿಮಾತು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಕೃಷಿ ಜಂಟಿ ನಿರ್ದೇಶಕಿ ಲಲಿತ ರೆಡ್ಡಿ,ಉಪ ನಿರ್ದೇಶಕಿ ವಿನುತ, ತೋಟಗಾರಿಕೆ ಉಪ ನಿರ್ದೇಶಕ ಗುಣವಂತ, ಜಿಲ್ಲಾ ನಗರಾಭಿವೃಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ನಾಲ್ಕು ತಾಲೂಕುಗಳ ತಹಶಿಲ್ದಾರ್‌ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ-ನಗರಸಭೆಯ ಮುಖ್ಯಾಧಿಕಾರಿಗಳು-ಪೌರಾಯುಕ್ತರು ಉಪಸ್ಥಿತರಿದ್ದರು.◊