ಗಣರಾಜ್ಯೋತ್ಸವ 77…….
ವಿಜಯ ದರ್ಪಣ ನ್ಯೂಸ್….
ಗಣರಾಜ್ಯೋತ್ಸವ 77…….

ಸಂವಿಧಾನ ಜಾರಿಯಾಗಿ ಸುಮಾರು 76 ವರ್ಷಗಳ ನಂತರ ವಿಶ್ವ ಭೂಪಟದಲ್ಲಿ ಭಾರತವೆಂಬ ದೇಶದ ಒಟ್ಟು ಸಾಧನೆ, ವೈಫಲ್ಯ ಮತ್ತು ಭವಿಷ್ಯವನ್ನು ಸಾಮಾನ್ಯ ವ್ಯಕ್ತಿಯಾಗಿ, ಸರಳವಾಗಿ ಅವಲೋಕಿಸಿದಾಗ ಕಂಡುಬಂದ ಕೆಲವು ಅನುಭವಗಳು ನಿಮ್ಮ ಮುಂದೆ…..
ಕೆಲವು ಪ್ರಮುಖ ಸಾಧನೆಗಳು…….
ಭಾರತವೆಂಬ ಭೂಪ್ರದೇಶದಲ್ಲಿ ಸುಮಾರು 3000 ಕ್ಕಿಂತ ಹೆಚ್ಚು ವರ್ಷಗಳ ನಾಗರಿಕ ಸಮಾಜದ ಇತಿಹಾಸದಲ್ಲಿ 1950 ಜನವರಿ 26ರ ನಂತರವಷ್ಟೇ ಭಾರತದ ಜನರಿಗೆ ಸಂಪೂರ್ಣ ಸ್ವಾತಂತ್ರ್ಯ, ಸಮಾನತೆ ವ್ಯಕ್ತಿಯ ಘನತೆ, ಬದುಕುವ ಹಕ್ಕು ಮುಂತಾದವುಗಳು ಎಲ್ಲಾ ಪ್ರಜೆಗಳಿಗೂ ಏಕ ಪ್ರಕಾರವಾಗಿ ಲಭಿಸಿತು. ಅದಕ್ಕೆ ಮೊದಲು ನಾವೆಲ್ಲರೂ ಗುಲಾಮರು, ಜೀತದಾಳುಗಳು, ಅಧಿಕಾರಸ್ಥರ ಅಜ್ಞಾನುವರ್ತಿಗಳು, ಮೂಕ ಪ್ರೇಕ್ಷಕರಾಗಿಯೇ ಇದ್ದಂತಹವರು. ಇದೇ ಮೊದಲ ಬಹುದೊಡ್ಡ ಸಾಧನೆ……..
ಅನಕ್ಷರಸ್ಥರು, ಅಜ್ಞಾನಿಗಳು, ಮೌಢ್ಯಗಳಿಗೆ ದಾಸರಾಗಿದ್ದವರು, ಸಂಪರ್ಕ ಸಾಧನೆಗಳೇ ಇಲ್ಲದಿದ್ದ, ಇನ್ನೂ ನಾಗರೀಕ ಪ್ರಪಂಚಕ್ಕೆ ತೆರೆದುಕೊಳ್ಳದೆ ಇದ್ದ ವ್ಯವಸ್ಥೆಯಿಂದ ಎಷ್ಟೇ ಕಷ್ಟವಾದರೂ, ಎಷ್ಟೇ ಸಮಸ್ಯೆಗಳಿದ್ದರೂ ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯನ್ನು, ಪ್ರಜೆಗಳ ಮತಗಳ ಬಹುಮತದ ಆಧಾರದ ಮೇಲೆ, ಸಣ್ಣ ಗ್ರಾಮ ಪಂಚಾಯಿತಿಯಿಂದ ಪ್ರಧಾನ ಮಂತ್ರಿಯವರೆಗೆ ಆ ವ್ಯವಸ್ಥೆಯನ್ನು ದಿಟ್ಟವಾಗಿ, ಸ್ಪಷ್ಟವಾಗಿ, ಉಳಿಸಿಕೊಂಡು ಬರಲಾಗಿದೆ. ಯಾರು ಎಷ್ಟೇ ದೊಡ್ಡವರಾದರೂ ಬಹುಮತದ ಆಧಾರದ ಮೇಲೆ ಆತ ಏರಬೇಕು ಅಥವಾ ಕೆಳಕ್ಕಿಳಿಯಲೇಬೇಕು. ಅದನ್ನು ಇಲ್ಲಿಯವರೆಗೂ ಅನುಸರಿಸಿಕೊಂಡು ಬರಲಾಗುತ್ತಿದೆ. ಇದು ಎರಡನೆಯ ಅತಿ ದೊಡ್ಡ ಸಾಧನೆ….
ಹಸಿವಿನಿಂದ ಅನೇಕರು ದಿನನಿತ್ಯ ಸಾಯುತ್ತಿದ್ದ, ಅಪೌಷ್ಟಿಕತೆಯಿಂದ ಕೋಟ್ಯಾಂತರ ಜನ ನರಳುತ್ತಿದ್ದ ಪರಿಸ್ಥಿತಿಯಿಂದ ಈ 76 ವರ್ಷಗಳಲ್ಲಿ ಬಹುತೇಕ ಜನ ಹೆಚ್ಚು ಆಹಾರ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುವ, ಬಹಳಷ್ಟು ಜನ ಊಟದಲ್ಲಿ ಡಯಟ್ ಅನುಸರಿಸಿಸುವ ಹಂತಕ್ಕೆ ತಲುಪಿರುವುದು ಮೂರನೇ ಬಹುದೊಡ್ಡ ಸಾಧನೆ. ಊಟ, ಬಟ್ಟೆ, ವಸತಿಯ ವಿಷಯದಲ್ಲಿ ಹೆಚ್ಚು ಕಡಿಮೆ ಸಾಧನೆಯ ಹಾದಿಯಲ್ಲಿದ್ದೇವೆ. ಆಹಾರದ ಸ್ವಾವಲಂಬನೆ ಸಾಧ್ಯವಾಗಿದೆ….
ಶತಶತಮಾನಗಳಿಂದ ಬಾಯಿಗೆ ಬೀಗ ಹಾಕಿಕೊಂಡಂತೆ ಮೂಕಾರಾಗಿಯೇ ಇದ್ದ, ಒಂದು ವರ್ಗದಿಂದ ನಿರಂತರವಾಗಿ ಶೋಷಣೆಗೊಳಗಾಗಿ ಮೌನರೋಧನೆ ಮಾಡುತ್ತಿದ್ದ ಸಾಮಾನ್ಯ ಜನ, ಈ 76 ವರ್ಷಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮನದುಂಬಿ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಅದು ಸ್ವೇಚ್ಛಾ ಪ್ರವೃತ್ತಿ ಆಗಿದೆಯೇನೋ ಎನ್ನುವಷ್ಟರ ಮಟ್ಟಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ತನ್ನ ಅಭಿಪ್ರಾಯ ಧೈರ್ಯವಾಗಿ ಪ್ರಕಟಿಸುತ್ತಿದ್ದಾನೆ. ಇದು ಸಂವಿಧಾನಿಕ ಭಾರತದ ಅತ್ಯಮೋಘ ಸಾಧನೆಗಳಲ್ಲಿ ಬಹು ಮುಖ್ಯವಾದದ್ದು.
ಭಾರತದಲ್ಲಿ ಮಹಿಳೆಯರು ಎಷ್ಟೇ ಪೂಜನೀಯ ಭಾವನೆ ಹೊಂದಿದ್ದರೂ ಸಾಮಾನ್ಯವಾಗಿ ಎರಡನೆಯ ದರ್ಜೆಯ ಪ್ರಜೆಗಳಾಗಿಯೇ ತಮ್ಮ ಇಡೀ ಜೀವನವನ್ನು ತನ್ನ ಕುಟುಂಬಕ್ಕಾಗಿಯೇ ತ್ಯಾಗ ಮಾಡುತ್ತಿದ್ದರು. ಜೊತೆಗೆ ಪುರುಷ ದೌರ್ಜನ್ಯದಲ್ಲಿ ನರಕ ಯಾತನೆ ಅನುಭವಿಸುತ್ತಿದ್ದರು. ಆದರೆ ಈ 76 ವರ್ಷಗಳಲ್ಲಿ ಬಹುತೇಕ ಪುರುಷ ಪ್ರಧಾನ ಕುಟುಂಬಗಳು ತನಗರಿವಿಲ್ಲದೆ ಅಸ್ತಿತ್ವ ಕಳೆದುಕೊಂಡು ಮಹಿಳಾ ಪ್ರಧಾನ ಕುಟುಂಬಗಳೇ ಹೆಚ್ಚು ಹೆಚ್ಚು ಯಶಸ್ವಿಯಾಗುತ್ತಿವೆ. ಮಹಿಳೆಯರು ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆಯಿಂದ ಬದುಕುತ್ತಿದ್ದಾರೆ. ಕೆಲವು ವಿಷಯಗಳಲ್ಲಿ ಪುರುಷರ ಭದ್ರಕೋಟೆಯನ್ನು ಕೆಡವಿ ಮಹಿಳೆಯರೇ ಹೆಚ್ಚಾಗಿ ಮುನ್ನುಗ್ಗುತ್ತಿದ್ದಾರೆ. ಇದು ಅತ್ಯದ್ಭುತ ಸಾಧನೆ.
ಆರ್ಥಿಕವಾಗಿ ಅತ್ಯಂತ ಕಡು ಬಡವ ದೇಶವಾಗಿದ್ದ ಭಾರತ 76 ವರ್ಷಗಳ ನಂತರ ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದು ಬಹು ಮುಖ್ಯ ಸಾಧನೆ. ಇಷ್ಟು ದೊಡ್ಡ ಆರ್ಥಿಕತೆ ಬೆಳೆಯಲು ಭಾರತದ ಸಂವಿಧಾನಾತ್ಮಕ ಶಕ್ತಿಯೇ ಕಾರಣ.
ಇಂದು ಯಾವುದೇ ಕ್ಷೇತ್ರದಲ್ಲಿ ಯಾವುದೇ ರೀತಿಯ ದೊಡ್ಡ ಸಾಧನೆಗಳನ್ನು, ಶಕ್ತಿಯನ್ನು ಗಮನಿಸಿದಾಗ ಜಗತ್ತಿನ ಬಲಿಷ್ಠ 10 ರಾಷ್ಟ್ರಗಳಲ್ಲಿ ಭಾರತವು ಒಂದು ಸ್ಥಾನ ಪಡೆಯುತ್ತದೆ. ಅಷ್ಟರಮಟ್ಟಿಗೆ ಈ 76 ವರ್ಷಗಳಲ್ಲಿ ಭಾರತ ಅತ್ಯದ್ಭುತ ಸಾಧನೆ ಮಾಡಿದೆ.
ಭಾರತದ ಈ 76 ವರ್ಷಗಳ ವೈಫಲ್ಯಗಳು
ಮೌಲ್ಯಾಧಾರಿತ ಭಾರತ, ಅಧ್ಯಾತ್ಮದ ತವರು ಭಾರತ, ಸಾಂಸ್ಕೃತಿಕ ಶ್ರೀಮಂತಿಕೆಯ ಭಾರತದಲ್ಲಿ ಭ್ರಷ್ಟಾಚಾರವೆಂಬುದು ಅತ್ಯಂತ ಸಹಜವಾಗಿ ಪ್ರತಿ ವ್ಯಕ್ತಿಯ ರಕ್ತ ಉಸಿರಿನಲ್ಲಿ ಸೇರಿಕೊಂಡು ಪೆಡಂಭೂತವಾಗಿ ಬೆಳೆದು, ನಮ್ಮೆಲ್ಲರನ್ನೂ, ನಮ್ಮೆಲ್ಲಾ ಸಾಧನೆಯನ್ನು ನುಂಗಿ ಹಾಕುತ್ತಿದೆ. ಈ ಭ್ರಷ್ಟ ವ್ಯವಸ್ಥೆಯ ಮುಂದೆ ನಿಜವಾದ ಸಾಧನೆಗೆ ಅರ್ಥವೇ ಇಲ್ಲವಾಗಿದೆ. ಇದು ಬಹುದೊಡ್ಡ ವೈಫಲ್ಯವಾಗಿದೆ……
ಎರಡನೇ ಬಹುದೊಡ್ಡ ವೈಶಾಲ್ಯವಾಗಿ ಕಾಣುವುದು ಭಾರತದ ಜಾತಿ ವ್ಯವಸ್ಥೆ. ಈ 76 ವರ್ಷಗಳ ನಂತರ ಅದು ಇನ್ನಷ್ಟು ಆಳವಾಗಿ ಬೇರೂರಿರುವುದು ಮತ್ತು ಪ್ರಜಾಪ್ರಭುತ್ವದ ಬೇರುಗಳು ಜಾತಿ ಆಧಾರದ ಮೇಲೆಯೇ ನಿಂತಿರುವುದು. ಪ್ರತಿ ಚಟುವಟಿಕೆಗಳು ವೈಯಕ್ತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಜಾತಿ ಆಧಾರದ ಮೇಲೆಯೇ ನಿರ್ಧರಿಸಲ್ಪಡುತ್ತದೆ. ಅದು ಎರಡನೆಯ ಬಹುದೊಡ್ಡ ವೈಫಲ್ಯ….
ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಿರಂತರವಾಗಿ, ಪ್ರತಿ ಕ್ಷಣವೂ, ಪ್ರತಿಯೊಬ್ಬರಿಂದಲೂ ದೌರ್ಜನ್ಯ ನಡೆಯುತ್ತಲೇ ಇದೆ. ಅದು ತನ್ನ ಮಿತಿಯನ್ನು ಮೀರಿ ವ್ಯಕ್ತಿ, ಕುಟುಂಬ ಮತ್ತು ಸಮಾಜ ಸಂಪೂರ್ಣವಾಗಿ ದಾರಿ ತಪ್ಪಿ ಬದುಕಿನ ಗುಣಮಟ್ಟವೇ ಕುಸಿಯುವಂತಾಗಿದೆ. ಇದು ಬಹುತೇಕ ಜನರ ಅರಿವಿಗೆ ಬರುತ್ತಿಲ್ಲ. ಇದು ಪರೋಕ್ಷವಾಗಿ ನಮ್ಮನ್ನೆಲ್ಲಾ ಆಪೋಷಣೆ ತೆಗೆದುಕೊಳ್ಳುತ್ತಿದೆ. ಈ 76 ವರ್ಷಗಳಲ್ಲಿ ಬಹುದೊಡ್ಡ ವೈಫಲ್ಯವಾಗಿ ಕಾಣುವುದರಲ್ಲಿ ಇದೂ ಸಹ ಒಂದು…..
ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಖಾಸಗೀಕರಣಕ್ಕೆ ಅವಕಾಶ ನೀಡಿ ಅತ್ಯುತ್ತಮ ಸೇವೆ ಒದಗಿಸುತ್ತೇವೆ ಎಂಬ ನೆಪವೊಡ್ಡಿ ಸರ್ಕಾರಗಳು ಪಲಾಯನ ಗೈದ ಕಾರಣದಿಂದ ಈ 76 ವರ್ಷದಲ್ಲಿ ಇಡೀ ಭಾರತ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಅತ್ಯಂತ ಆತಂಕ ಮತ್ತು ಆಘಾತಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತಮ್ಮೆಲ್ಲಾ ಆದಾಯದ ಬಹುಭಾಗವನ್ನು ಇದಕ್ಕಾಗಿಯೇ ಖರ್ಚು ಮಾಡುತ್ತಾ ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಕುಟುಂಬದ ಮಾನಸಿಕ ಮತ್ತು ಆರ್ಥಿಕ ಸ್ಥಿತಿಯನ್ನೇ ಇದು ಅಲುಗಾಡಿಸುತ್ತಿದೆ. ಇದು ವೈಫಲ್ಯಗಳ ದೊಡ್ಡಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ…..
ವೈಫಲ್ಯಗಳ ಪಟ್ಟಿಯಲ್ಲಿ ಮತ್ತೊಂದು ದೊಡ್ಡ ಅಂಶ ಕಾನೂನುಗಳ ದುರುಪಯೋಗ. ಕಾನೂನುಗಳು ಎಷ್ಟೇ ಸ್ಪಷ್ಟವಾಗಿ, ಖಚಿತವಾಗಿದ್ದರೂ ಅದನ್ನು ಅರ್ಥೈಸುವಾಗ, ಅದನ್ನು ಅನುಷ್ಠಾನಗೊಳಿಸುವಾಗ ವ್ಯಕ್ತಿಗಳು ತಮ್ಮ ಸ್ವಾರ್ಥ, ಕುತಂತ್ರ, ಪ್ರಭಾವ, ಹಣ, ಅಧಿಕಾರ ಬಳಸಿ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬಹಳಷ್ಟು ಅಪರಾಧಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದೆ ಬಿಡುಗಡೆಯಾಗುತ್ತಿದ್ದಾರೆ. ಇದು ತೀರಾ ತೀರ ದೊಡ್ಡ ವೈಫಲ್ಯ ಮತ್ತು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಈ 70 ವರ್ಷಗಳ ವೈಫಲ್ಯದಲ್ಲಿ ಅತ್ಯಂತ ನೋವಿನ ಸಂಗತಿ ಎಂದರೆ, ಅನ್ನದಾತರೆಂದೇ ಗೌರವಿಸಲ್ಪಡುವ ಈ ದೇಶದ ಮೂಲ ಸಂಸ್ಕೃತಿಯ ಜೀವ ದ್ರವ್ಯವಾದ ರೈತರ ಆತ್ಮಹತ್ಯೆ ತಡೆಯಲು ಸಾಧ್ಯವಾಗದೆ, ಸ್ವಾತಂತ್ರ್ಯ ನಂತರ ಕೊಟ್ಯಂತರ ಜನ ರೈತರು ಕಾರಣವಲ್ಲದ ಕಾರಣಕ್ಕಾಗಿ ಅನಾವಶ್ಯಕವಾಗಿ ಸ್ವತಃ ತಮ್ಮ ಜೀವನವನ್ನು ಕೊಂದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಯಾವ ಮಹಾಯುದ್ಧದಲ್ಲೂ ಇಷ್ಟೊಂದು ಸಾವುಗಳಾಗಿಲ್ಲ. ಆ ವಿಷಯದಲ್ಲಿ ಭಾರತ ತಲೆತಗ್ಗಿಸಬೇಕಾಗಿದೆ ಮತ್ತು ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯ.
ಮತ್ತೊಂದು ದೊಡ್ಡ ವೈಫಲ್ಯವೆಂದರೆ ವಿಶ್ವದಲ್ಲೇ ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ಭಾರತದಲ್ಲಿ ಕಾರ್ಪೊರೇಟ್ ಸಂಸ್ಕೃತಿ ಅತಿಯಾಗಿ ಉಲ್ಬಣಗೊಂಡು ಇಡೀ ಯುವ ಸಮುದಾಯವನ್ನು ಸೀಡ್ಲೆಸ್ ಜನಾಂಗವಾಗಿ ಪರಿವರ್ತಿಸಿ, ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಎಲ್ಲಾ ಕಡೆ ಶ್ರಮ ಸಂಸ್ಕೃತಿಗೆ ಬದಲಾಗಿ ಗ್ರಾಹಕ ಸಂಸ್ಕೃತಿಯನ್ನು ಸೃಷ್ಟಿಸಲಾಗಿದೆ. ಅದರ ಪರಿಣಾಮ ಯುವಕರು ಸುಲಭವಾಗಿ ಹಣ ಗಳಿಸುವ, ಸ್ವಂತಿಕೆ ಮತ್ತು ಕ್ರಿಯಾತ್ಮಕತೆ ಇಲ್ಲದ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ. ಈ ಕ್ಷಣಕ್ಕೆ ಇದು ಉದ್ಯೋಗ ಸೃಷ್ಟಿಯಂತೆ ಕಂಡರೂ ಭವಿಷ್ಯದಲ್ಲಿ ಇದೇ ಅವರ ಪಾಲಿಗೆ ಮುಳ್ಳುವಾಗುವ ಎಲ್ಲ ಸಾಧ್ಯತೆಯೂ ಇದೆ. ಕಾರ್ಪೊರೇಟ್ ಸಂಸ್ಕೃತಿಯನ್ನು ನಿಯಂತ್ರಿಸದೆ ಹೋದಲ್ಲಿ ನಮ್ಮ ಯುವಕರು ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ.
ಭವಿಷ್ಯದ ಆಶಯಗಳು
ಇಂದಿನ ಜಾಗತಿಕ ಪರಿಸ್ಥಿತಿಯನ್ನು ನೋಡಿದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಒಂದಷ್ಟು ಉತ್ತಮ ಸ್ಥಿತಿಯಲ್ಲಿದೆ ಎಂಬುದೇನು ನಿಜ. ಆದರೆ ಅದು ಮೇಲ್ನೋಟಕ್ಕಷ್ಟೇ ಸೀಮಿತವಾಗದೆ ಆಂತರಿಕವಾಗಿಯೂ ಬಲಿಷ್ಠವಾಗಬೇಕಿದೆ. ಅದರ ಯಶಸ್ಸು ಅಡಗಿರುವುದೇ ಈ ಕೆಳಗಿನ ಕೆಲವು ಅಂಶಗಳ ಆಧಾರದ ಮೇಲೆ
ಬಹುತ್ವ ಭಾರತ ಬಲಿಷ್ಠ ಭಾರತ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಥ ಮಾಡಿಕೊಂಡು ಎರಡೂ ಒಬ್ಬರನ್ನೊಬ್ಬರು ಗೌರವಿಸುತ್ತಾ, ಸಮನ್ವಯ ಸಾಧಿಸಿ, ಪಕ್ಷ ರಾಜಕೀಯವನ್ನು ಮೀರಿ ಒಮ್ಮೆ ಚುನಾವಣೆ ಗೆದ್ದ ಮೇಲೆ ತಮ್ಮ ಅವಧಿ ಮುಗಿಯುವವರೆಗೂ ಹೊಂದಾಣಿಕೆಯಿಂದ ಅಧಿಕಾರ ನಡೆಸಿದರೆ ಮಾತ್ರ ಈ ದೇಶದ ಭವಿಷ್ಯ ಉಜ್ವಲವಾಗಿರುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಥವಾ ಪ್ರಾದೇಶಿಕ ಪಕ್ಷಗಳು ಪರಸ್ಪರ ಸಂಘರ್ಷಕ್ಕೆ ಇಳಿದರೆ ನಿಧಾನವಾಗಿ ಕೇವಲ ಆರ್ಥಿಕ ಪರಿಸ್ಥಿತಿ ಮಾತ್ರವಲ್ಲ ರಾಜಕೀಯ ಪರಿಸ್ಥಿತಿಯೂ ಅಧೋಗತಿಗಿಳಿದು, ಅಭಿವೃದ್ಧಿಯ ವೇಗ ಕುಂಠಿತವಾಗಿ, ದೇಶದ ಒಟ್ಟು ಹಿತಾಸಕ್ತಿಗೆ ಧಕ್ಕೆಯಾಗುತ್ತದೆ…..
ಹಣ ಕೇಂದ್ರಿತ ಸಮಾಜವನ್ನು ನಿರ್ಮಿಸಿ, ಭ್ರಷ್ಟಾಚಾರಕ್ಕೆ ಸುಲಭ ಮಾರ್ಗಗಳನ್ನು ಸೃಷ್ಟಿಸಿ, ಮನರಂಜನಾ ಉದ್ಯಮದ ದಂಧೆ, ಶಿಕ್ಷಣ ಆರೋಗ್ಯದ ಸಂಸ್ಥೆಗಳ ದಂಧೆ, ಸಾಲ ಒದಗಿಸುವ ಹಣಕಾಸು ಸಂಸ್ಥೆಗಳ ದಂದೆ ಮುಂತಾದ ಅನಪೇಕ್ಷಿತ, ಅನೈತಿಕ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸದೆ, ಅದನ್ನು ಪ್ರೋತ್ಸಾಹಿಸಿದರೆ ಭಾರತದ ಒಟ್ಟು ಮೌಲ್ಯಗಳೇ ನಾಶವಾಗುತ್ತದೆ. ಯಾವುದೇ ಆರ್ಥಿಕ ಅಭಿವೃದ್ಧಿ, ಉದ್ಯಮ ವ್ಯವಹಾರಗಳು ಮೌಲ್ಯಯುತವಾಗಿ, ಲಾಭ ಚಿಂತಕವಾಗಿ ಇರಬೇಕೆ ಹೊರತು ದ್ರೋಹ ಚಿಂತನೆ, ವಂಚನೆ ರೀತಿಯಲ್ಲಿ ಇರಬಾರದು. ಎಲ್ಲ ಯಶಸ್ಸುಗಳು ಶ್ರಮಕ್ಕೆ ತಕ್ಕ ಹಾಗೆಯೇ ಸಿಗಬೇಕೇ ಹೊರತು ಅಡ್ಡ ದಾರಿಯಲ್ಲಿ ಸಿಗಬಾರದು….
ಅಭಿವೃದ್ಧಿಯ ಹೆಸರಿನಲ್ಲಿ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ನಾಶ ಮಾಡಬಾರದು. ಎಷ್ಟು ಬೇಕೋ ಅಷ್ಟು ಹಿತವಾಗಿ, ಮಿತವಾಗಿ ಬಳಸಬೇಕು. ಇಲ್ಲದಿದ್ದರೆ ಈ ನೈಸರ್ಗಿಕ ಸಂಪನ್ಮೂಲಗಳು ಒಮ್ಮೆ ನಾಶವಾದರೆ ಮತ್ತೆ ಸೃಷ್ಟಿಸುವುದು ಅಸಾಧ್ಯ.
ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂರಕ್ಷಿಸಬೇಕು. ಇಲ್ಲಿನ ಸಾಂಸ್ಕೃತಿಕ ಮೌಲ್ಯಗಳನ್ನು, ಸರ್ವಧರ್ಮ ಸಮನ್ವಯವನ್ನು ಉಳಿಸಿಕೊಳ್ಳಬೇಕು. ಧಾರ್ಮಿಕ ಸೌಹಾರ್ದತೆ ಕಾಪಾಡಬೇಕು. ಇಲ್ಲದಿದ್ದರೆ ದೇಶ ತೀರಾ ಕೆಟ್ಟ ಪರಿಸ್ಥಿತಿಗೆ ಒಳಗಾಗಬಹುದು.
ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……
