ವಿಜಯ ದರ್ಪಣ ನ್ಯೂಸ್
ಸಂಚಾರ ಸಮಸ್ಯೆಗೆ 500 ಕೋಟಿ ಮೀಸಲಿರಿಸಲು ಕಾಂಗ್ರೆಸ್ ನಿಯೋಗ ಮನವಿ

ಮೈಸೂರು ತಾಂಡವಪುರ ಜನವರಿ 24: ಗ್ರೇಟರ್ ಮೈಸೂರು ಬಳಿಕ ನಗರದ ಪ್ರದೇಶ ವಿಸ್ತೀರ್ಣ ಹೆಚ್ಚಲಿದ್ದು, ಇದಕ್ಕೆ ಅನುಗುಣವಾಗಿ ಬೇಕಾಗುವ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗೆ ಬೇಕಾದ ಸೌಲಭ್ಯಕ್ಕೆ ಕನಿಷ್ಠ 500 ಕೋಟಿಗೆ ಬಜೆಟ್ ನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ನಗರಪೊಲೀಸ್ ಆಯುಕ್ತರ ಮೂಲಕ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ನಿಯೋಗ ಮನವಿ ಸಲ್ಲಿಸಿತು.
ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಯೋಗ ತೆರಳಿ ಸಭೆ ನಡೆಸಿ ಆಯುಕ್ತ ಸೀಮಾ ಲಾಟ್ಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ನಗರವು ಅತಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಮೈಸೂರು ನಗರಪಾಲಿಕೆಯಾಗಿ ಘೋಷಣೆಯಾಗುತ್ತಿದ್ದು, ನಗರದ ಟ್ರಾಫಿಕ್ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹಣವನ್ನು ಪೊಲೀಸ್ ಇಲಾಖೆಗೆ ನೀಡಬೇಕಾಗಿ ಸರ್ಕಾರಕ್ಕೆ ಮನವಿ ಮಾಡಿದರು.
ಹಾಲಿ 86 ಚದರ ಕಿ.ಮೀ.ವ್ಯಾಪ್ತಿಯ ನಗರಪಾಲಿಕೆಯಲ್ಲಿ 16 ಪೊಲೀಸ್ ಠಾಣೆಗಳು ಕೆಲಸ ನಿರ್ವಹಿಸುತ್ತಿದ್ದು, ಈಗ ಬೃಹತ್ ಮೈಸೂರು ನಗರಪಾಲಿಕೆಯ ವ್ಯಾಪ್ತಿವು 341 ಚದರ ಕಿ.ಮೀ.ಇದೆ. ಇದಕ್ಕೆ ಅನುಗುಣವಾಗಿ ಕನಿಷ್ಠ ಮೊದಲನೆಯ ಹಂತದಲ್ಲಿ 6 ನೂತನ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಆಗ್ರಹಿಸಿದರು.
ನಗರವು ಪ್ರವಾಸಿ ತಾಣವಾಗಿರುವುದರಿಂದ ನಗರಕ್ಕೆ ಬಾಂಬ್ ಡಿಕೆಡಿಂಗ್ ಸ್ಕ್ವೆಡ್ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ಹಣ ಮೀಸಲಿಡಬೇಕು. ಮೈಸೂರಿನಲ್ಲಿರುವ ವಾಹನಗಳ ಸಂಖ್ಯೆ ಸುಮಾರು 8 ಲಕ್ಷ ಮತ್ತು ಮೈಸೂರಿಗೆ ನಿತ್ಯ ಬಂದು ಹೋಗುತ್ತಿರುವ ವಾಹನಗಳ ಸಂಖ್ಯೆ 1 ಲಕ್ಷಕ್ಕೂ ಮೀರಿದೆ. ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ರಿಂಗ್ ರಸ್ತೆಗಳ ಹೊರಗಡೆ ಕನಿಷ್ಠ 4 ಸೆಟಲೈಟ್ ಬಸ್ ಟರ್‌ಮಿನಲ್ಸ್‌ಗಳ ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.
ಹಾಲಿ ಖಾಸಗಿ ಬಸ್ ನಿಲ್ದಾಣವನ್ನು ತಿ.ನರಸೀಪುರ ರಸ್ತೆಗೆ ಹೋಗುವ ಕಡೆ ಸ್ಥಳಾಂತರಿಸಬೇಕು. 341 ಚದರ ಕಿ.ಮೀ.ವ್ಯಾಪ್ತಿಗೆ ಕನಿಷ್ಠ 4 ಡಿಸಿಪಿ ಹುದ್ದೆಗಳನ್ನು ಸೃಷ್ಟಿಸಿ 4 ದಿಕ್ಕುಗಳಲ್ಲಿ ನೇಮಿಸಬೇಕು. ಈಗಾಗಲೇ ಮೆಟ್ರೋಪೋಲ್ ವೃತ್ತದಿಂದ ಹಿನಕಲ್ ವೃತ್ತ ಮತ್ತು ಮೆಟ್ರೋಪೋಲ್ ವೃತ್ತದಿಂದ ಜೆಎಲ್‌ಬಿ ರಸ್ತೆಯ ಮೂಲಕ ಫ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಿಸಲು ತೆಗೆದುಕೊಂಡಿರುವ ತೀರ್ಮಾನ ಅತ್ಯುತ್ತಮವಾಗಿರುವುದರಿಂದ ಜರೂರಾಗಿ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋರಿದರು.
ಬೃಹತ್ ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 6 ಕಡೆ ಮಲ್ಟಿ ಲೆವಲ್ ಪಾರ್ಕಿಂಗ್, ನಗರದ ಹೊರಗಡೆ ಎಕ್ಸಿಬಿಷನ್ ಗ್ರೌಂಡ್, ಮೈಸೂರು ಪೊಲೀಸರಿಗೆ ಸುಸಜ್ಜಿತವಾದ ದ್ವಿ ಚಕ್ರ ಮತ್ತು ನಾಲ್ಕು ಚಕ್ರದ ವಾಹನ ವಿತರಣೆ, ಬಹುತೇಕ ವೃತ್ತಗಳಿಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಹಣ ಬಿಡುಗಡೆ ಒತ್ತಾಯಿಸಿದರು.
ಮೈಸೂರು ರಿಂಗ್ ರಸ್ತೆಯಲ್ಲಿ ಪಾದಚಾರಿಗಳು ರಸ್ತೆಯನ್ನು ದಾಟಲು ಅಂಡರ್ ಪಾಸ್ ಮತ್ತು ಸೈ ವಾಕ್, ಪೆರಿಪೆರಿಂಗ್ ರಿಂಗ್ ರಸ್ತೆ, ರಾಡಿಯಲ್ ರಸ್ತೆ ಮತ್ತು ಔಟರ್ ರಿಂಗ್ ರಸ್ತೆಗಳನ್ನು ನಿರ್ಮಿಸಿ ಹಾಲಿ ಇರುವ ರಿಂಗ್ ರಸ್ತೆಯನ್ನು ೬+೬ ಪಥದ ರಸ್ತೆಯಾಗಿ ವಿಸ್ತರಿಸಬೇಕು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ನಿಟ್ಟಿನಲ್ಲಿ ಮೊದಲನೆಯ ಹಂತದಲ್ಲಿ 500 ಕೋಟಿ ಹಣವನ್ನು ಈ ಬಾರಿ ಬಜೆಟ್‌ನಲ್ಲಿ ನೀಡಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಜಿ ಮಹಾಪೌರ ಬಿ.ಎಲ್.ಭೈರಪ್ಪ, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಪ್ರದೀಪ್ ಕುಮಾರ್, ಮಾಧ್ಯಮ ವಕ್ತಾರ ಮಹೇಶ್, ಕೆ.ಆರ್.ಕ್ಷೇತ್ರದ ಆಶ್ರಯ ಸಮಿತಿ ಸದಸ್ಯ ಫಾರೂಕ್, ರಾಹುಲ್, ಮನೋಜ್ ಇನ್ನಿತರರು ಹಾಜರಿದ್ದರು.
***********************************
ಕನಕಗಿರಿ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮತ್ತು ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಕಾನೂನು ಬಾಹಿರವಾದ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ವಿದ್ಯಾರಣ್ಯಪುರಂ ಮತ್ತು ಕೆ.ಆರ್.ಪೊಲೀಸ್ ಠಾಣೆಯ ಗಮನಕ್ಕೆ ತಂದರು ಕ್ರಮ ಜರುಗಿಸಿಲ್ಲ. ಕೂಡಲೇ ಕ್ರಮ ಜರುಗಿಸಬೇಕು.
– ಎಂ.ಕೆ.ಸೋಮಶೇಖರ್, ಮಾಜಿ ಶಾಸಕ.
*********************************
ಮೈಸೂರು ನಗರ ವ್ಯಾಪ್ತಿಯಲ್ಲಿ ಹಳೆಯ ರೌಡಿಗಳ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಜೊತೆಗೆ ಹೊಸ ಹೊಸ ರೌಡಿಗಳು ಹುಟ್ಟಿಕೊಳ್ಳದಾಗೇ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ನಗರದಲ್ಲಿ ನಡೆಯುತ್ತಿರುವ ಇತ್ತೀಚಿನ ಅಪರಾಧ ಪ್ರಕರಣಗಳಿಂದ ಪೊಲೀಸರ ಮೇಲೆ ಜನರಲ್ಲಿ ನಂಬಿಕೆ ಹೋಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಣ್ಣ ವಿಚಾರಗಳಿಗೂ ಕೊಲೆ ಮಾಡುವವರ ಮನ ಪರಿವರ್ತನೆ ಮಾಡುವ ಕೆಲಸ ಮಾಡಬೇಕಿದೆ.
– ಡಾ.ಬಿ.ಜೆ.ವಿಜಯಕುಮಾರ್, ಜಿಲ್ಲಾಧ್ಯಕ್ಷ.
***********************************
ಅಪ್ರಾಪ್ತ ಬಾಲಕರು ಮಾದಕ ವ್ಯಸನಿಗಳಾಗುತ್ತಿದ್ದು, ಅಪರಾಧ ಚಟುವಟಿಕೆಗಳಲ್ಲಿಯೂ ಅವರೆ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಎನ್.ಆರ್.ಕ್ಷೇತ್ರದವರೇ ಹೆಚ್ಚಾಗಿದ್ದಾರೆ. ಉದ್ಯಾನವನಗಳಲ್ಲಿ ಎಲ್ಲೆಂದರಲ್ಲಿ ಅನೈತಿಕ ಚಟುವಟಿಕೆ ಹೆಚ್ಚಾಗಿದ್ದು, ಪ್ರಶ್ನಿಸಿದವರ ಮೇಲೂ ಹಲ್ಲೆ ಮಾಡುವ ಕೆಲಸ ನಡೆಯುತ್ತಿದೆ. ಹೀಗಾಗಿ ಅಂತಹವರನ್ನು ಗುರುತಿಸಿ ಅವರಿಗೆ ಕಾನೂನು ಅರಿವು ಮೂಡಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
-ಅಯೂಬ್ ಖಾನ್, ಅಧ್ಯಕ್ಷ ವಸ್ತುಪ್ರದರ್ಶನ ಪ್ರಾಧಿಕಾರ
******************/*********************







