ವಿಜಯ ದರ್ಪಣ ನ್ಯೂಸ್…..
ಮಕ್ಕಳಿಗೆ ರಾಷ್ಟ್ರೀಯತೆ ಮತ್ತು ವೈಜ್ಞಾನಿಕ ಮನೋಭಾವಗಳನ್ನು ಬೆಳೆಸಲು ಶಿಬಿರ ಆಯೋಜನೆ: ಎಲ್.ಕಾಳಪ್ಪ

ಶಿಡ್ಲಘಟ್ಟ : ಕಿರಿಯ ವಯಸ್ಸಿನಲ್ಲಿ ಪ್ರೌಢಶಾಲಾ ಮಕ್ಕಳಿಗೆ ಸಮಾಜವಾದದ ಮೂಲ ಪರಿಕಲ್ಪನೆಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರಭಾವಗಳ ಜೊತೆಗೆ ರಾಷ್ಟ್ರೀಯತೆ ಮತ್ತು ವೈಜ್ಞಾನಿಕ ಮನೋಭಾವಗಳನ್ನು
ಬೆಳೆಸಲು ಶಿಬಿರ ನಡೆಸುತ್ತಿದ್ದೇವೆ ಎಂದು ಭಕ್ತರಹಳ್ಳಿ ಬಿಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ,ತಾಲ್ಲೂಕಿನ ಭಕ್ತರಹಳ್ಳಿಯ ಬಿಎಂವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಭಕ್ತರಹಳ್ಳಿಯ ಬಿಎಂವಿ ಶೈಕ್ಷಣಿಕ ಟ್ರಸ್ಟ್ ಮತ್ತು ಸಮಾಜವಾದಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ರಾಷ್ಟ್ರಸೇವಾ ದಳದ 8 ದಿನಗಳ ವಸತಿ ಶಿಬಿರವು ಏ.3ರಿಂದ 10ರವರೆಗೆ ನಡೆಯಲಿದೆ ಎಂದು ಹೇಳಿದರು.
ರಾಷ್ಟ್ರ ಸೇವಾ ದಳವು ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾಜವಾದ, ಸಮಾನತೆ, ಜಾತ್ಯಾತೀತ ಹಾಗೂ ಸಹೋದರಭಾವ ತತ್ವ ಹೊಂದಿದೆ ಎಂದರು.
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಶಿಬಿರ
ಉದ್ಘಾಟಿಸಲಿದ್ದಾರೆ.
8 ದಿನಗಳ ಶಿಬಿರದಲ್ಲಿ ನಾಡಿನ ಅತ್ಯುತ್ತಮ ಭಾಷಣಕಾರರು ಪಾಲ್ಗೊಂಡು, ವಿಜ್ಞಾನ, ತಂತ್ರಜ್ಞಾನ, ಕೃಷಿ, ಸಮಾನತೆ, ಭಾರತದ ಜನತಂತ್ರ ವ್ಯವಸ್ಥೆ ಮತ್ತು ಸಂವಿಧಾನ ಮುಂತಾದ ವಿಚಾರಗಳ ಬಗ್ಗೆ ಮಕ್ಕಳಿಗೆ ವಿವರಿಸಲಿದ್ದಾರೆ ,ಪಠ್ಯದಲ್ಲಿಲ್ಲದ ಅನೇಕ ವಿಚಾರಗಳನ್ನು ಮಕ್ಕಳು ಕಲಿಯಲಿದ್ದಾರೆ ಎಂದು ನುಡಿದರು.
ಬಿ.ಎಂ.ವಿ. ವಿದ್ಯಾಸಂಸ್ಥೆ ಟ್ರಸ್ಟಿ ಸಂತೆ ನಾರಾಯಣಸ್ವಾಮಿ
ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಹಾಗು ಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ನೀಡುವುದರೊಂದಿಗೆ, ವರ್ಷಕ್ಕೊಮ್ಮೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ, ಜೀವನಾವಶ್ಯಕ ಮಾರ್ಗದರ್ಶಿ ಶಿಬಿರವನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.










