ವಿಜಯ ದರ್ಪಣ ನ್ಯೂಸ್..
ರಸ್ತೆ ವಿಸ್ತರಣೆಗೆ ನೂರಾರು ಮರಗಳ ಹನನ

ವಿಜಯಪುರ : ಪಟ್ಟಣದ ಪ್ರಮುಖ ರಸ್ತೆ ಬದಿಗಳಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಮರಗಳು ರಸ್ತೆ ವಿಸ್ತರಣೆಗೆ ಜೀವತೆತ್ತಿವೆ. ದಾರಿ ಹೋಕರಿಗೆ, ಜೀವಸಂಕುಲಕ್ಕೆ ಆಸರೆಯಾಗಿದ್ದ ನೂರಾರು ವರ್ಷದ ಹಳೆಯ ಮರಗಳು ನೆಲಕ್ಕುರುಳಿದ ಪರಿಣಾಮ ರಸ್ತೆಯೆಲ್ಲಾ ಬರಿದಾಗಿ ಕಾಣುತ್ತಿದೆ.
ಈಗಾಗಲೇ ರಸ್ತೆ ವಿಸ್ತರಣೆ ಹೊಂದಿರುವ ಪಟ್ಟಣದ ಟೌನ್ಹಾಲ್ ವೃತ್ತದಿಂದ ಹಾರ್ಡಿಪುರದವರೆಗೂ 50ಕ್ಕೂ ಹೆಚ್ಚು ಬೃಹತ್ ಮರಗಳನ್ನು ಕಡಿಯಲಾಗಿದೆ. ಈಗ ಟೌನ್ಹಾಲ್ ವೃತ್ತದಿಂದ ಶಿಡ್ಲಘಟ್ಟ ಕ್ರಾಸ್ ವರೆಗೂ 43 ಮರಗಳು ಕಡಿಯಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ಕ್ರಾಸ್ ನಿಂದ ಹಿಡಿದು ವಿಜಯಪುರ ಅಮಾನಿಕೆರೆವರೆಗೂ ರಸ್ತೆ ವಿಸ್ತರಣೆಗೊಂಡರೆ 30ಕ್ಕೂ ಹೆಚ್ಚು ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಈ ಬಿರುಬೇಸಿಗೆಯಲ್ಲಿ ದಾರಿ ಹೋಕರಿಗೆ, ಜೀವಸಂಕುಲಕ್ಕೆ ಆಸರೆಯಾಗಿದ್ದ ವಿವಿಧ ಹಣ್ಣಿನ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಮಾತನ್ನು ನಾವು ಬರಿ ಬಾಯಿ ಮಾತಿಗೆ ಹಾಡದೆ ವೃಕ್ಷಗಳ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ನಾವೆಲ್ಲರೂ ಕಟ್ಟಿಬದ್ಧರಾಗಬೇಕು. ಮರ ಕಡಿದ ನಂತರ ಅದರ ಹತ್ತರಷ್ಟು ಹೆಚ್ಚು ಸಸಿಗಳನ್ನು ಸಾರ್ವಜನಿಕರಿಗೆ ಗೊತ್ತಾಗುವ ರೀತಿಯಲ್ಲಿ ನೆಡಬೇಕು. ಜೊತೆಗೆ ಅದು ಬೆಳೆದು ನಿಲ್ಲುವವರೆಗೂ ಪೋಷಿಸಬೇಕು ಎಂದು ಪರಿಸರ ಪ್ರೇಮಿ ಮ.ಸುರೇಶ್ ಬಾಬು ತಿಳಿಸಿದರು.
ಪಟ್ಟಣ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ, ಇದಕ್ಕೆ ಸರಿಯಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ವಾಹನ ದಟ್ಟಣೆ ಸಮಸ್ಯೆ ಉಂಟಾಗುತ್ತದೆ. ವಾಹನ ದಟ್ಟಣೆ ಸಮಸ್ಯೆ ಪರಿಹರಿಸಲು ರಸ್ತೆ ವಿಸ್ತರಣೆ ಅಗತ್ಯ. ಆದರೆ, ಮರ ಕಡಿಯುವ ಮುನ್ನ ಅಕ್ಕ ಪಕ್ಕ ಗಿಡ ನೆಟ್ಟು ಪೋಷಿಸಬೇಕು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.








