ವಿಜಯ ದರ್ಪಣ ನ್ಯೂಸ್….
ದ್ರಾಕ್ಷಿಗೆ ಬಂಪರ್ ಬೆಲೆ: ಬೆಳೆಗಾರರ ಮೊಗದಲ್ಲಿ ಅರಳಿದ ಸಂತಸ

ವಿಜಯಪುರ: ಈಗ ಮಾರುಕಟ್ಟೆಯಲ್ಲಿ ದ್ರಾಕ್ಷಿ ಹಣ್ಣಿಗೆ ಉತ್ತಮ ಬೆಲೆ ಬಂದಿದೆ. ಬೆಲೆ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರಿಗೆ ಈ ಬಾರಿ ದ್ರಾಕ್ಷಿ ಬೆಳೆ ಕೈ ಹಿಡಿದಿದ್ದು, ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ದೇವನಹಳ್ಳಿ ತಾಲ್ಲೂಕಿನಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ನಾನಾ ತಳಿಯ ಸುಮಾರು 1,200 ಹೆಕ್ಟೇರ್ ಪ್ರದೇಶ ದ್ರಾಕ್ಷಿ ಹೊಂದಿದೆ. ಅದರಲ್ಲೂ ವಿಜಯಪುರ ಹೋಬಳಿಯಲ್ಲಿ ಸುಮಾರು 700 ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ.
ಪ್ರಮುಖವಾಗಿ ಕಪ್ಪು ದ್ರಾಕ್ಷಿ (ಬೆಂಗಳೂರು ಬ್ಲೂ), ಶರತ್ ಹೆಚ್ಚಾಗಿ ಬೆಳೆಯಲಾಗುತ್ತಿದೆ. ದಿಲ್ ಕುಷ್, ಆರ್ ಕೆ ಗೋಲ್ಡ್, ಸೊನಾಕಾ, ರೆಡ್ ಬ್ಲೂ ಹೀಗೆ ನಾನಾ ತಳಿಯ ದ್ರಾಕ್ಷಿಯನ್ನು ಹಲವೆಡೆ ಬೆಳೆಯಲಾಗುತ್ತಿದೆ. ಈ ಬಾರಿ ಇಳುವರಿ ಚೆನ್ನಾಗಿ ಬಂದಿರುವುದರಿಂದ ಎಕರೆಗೆ 10 ರಿಂದ 12 ಟನ್ ವರೆಗೂ ದ್ರಾಕ್ಷಿ ಫಸಲು ಬಂದಿದೆ ರೈತರ ತೋಟದ ಬಳಿಯೇ ವ್ಯಾಪಾರಿಗಳು ಬಂದು ಖರೀದಿಸುತ್ತಿದ್ದಾರೆ.
ವಾರದ ಹಿಂದೆ 1 ಕೆ.ಜಿಗೆ 20 ರಿಂದ 25 ರೂ. ಇದ್ದ ಕಪ್ಪು ದ್ರಾಕ್ಷಿ ಈಗ 40 ರೂ. ದಾಟಿದೆ. ಶರತ್ 80 ರಿಂದ 90 ರೂ, ರೆಡ್ ಗ್ಲೋಬ್ 120-130 ರೂ, ದಿಲ್‍ಖುಷ್ 40-50 ರೂ.ವರೆಗೂ ಮಾರಾಟ ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ ಉತ್ತಮ ಬೆಲೆ ಸಿಗುತ್ತಿದೆ.
ನೆರೆ ರಾಜ್ಯಗಳಿಂದ ಬೇಡಿಕೆ: ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳ ವರೆಗೂ ದ್ರಾಕ್ಷಿ ಕೊಯ್ಲು ನಡೆಯುತ್ತದೆ. ಈ ಬಾರಿ ಮಹಾರಾಷ್ಟ್ರದಲ್ಲಿ ದ್ರಾಕ್ಷಿ ಇಳುವರಿ ಕುಸಿತದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ಇಲ್ಲಿನ ದ್ರಾಕ್ಷಿಗೆ ಬೇಡಿಕೆ ಬಂದಿದೆ. ಹೀಗಾಗಿ ಈ ಬಾರಿ ದ್ರಾಕ್ಷಿ ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.
ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದ ಬಹುತೇಕ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ನಾವು ಸುಮಾರು 30 ರಿಂದ 40 ವರ್ಷದಿಂದ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಲಾಭ ನಷ್ಟ ಎರಡನ್ನು ನೋಡಿದ್ದೇವೆ. ಇದೀಗ ದ್ರಾಕ್ಷಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರಿಗೆ ಒಳ್ಳೆಯ ಆದಾಯ ತಂದಿದೆ ಎಂದು ದ್ರಾಕ್ಷಿ ಬೆಳೆಗಾರ ಹಾರೋಹಳ್ಳಿ ರಘು ತಿಳಿಸಿದರು.
ದಾಳಿಂಬೆಯತ್ತ ಮೊರೆ: ಹಿಂದಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ದ್ರಾಕ್ಷಿಗೆ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಹೀಗಾಗಿ ಸಾಕಷ್ಟು ರೈತರು ದ್ರಾಕ್ಷಿಯನ್ನು ತೆಗೆದು ಈಚೆಗೆ ಈ ಭಾಗದಲ್ಲಿ ಜನಪ್ರಿಯವಾಗುತ್ತಿರುವ ದಾಳಿಂಬೆ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ.
ಆಲಿಕಲ್ಲು ಮಳೆಯ ಆತಂಕದ ಚಿಂತೆ:
ವಿಜಯಪುರ ಹೋಬಳಿಯ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಹಾರೋಹಳ್ಳಿ ಹಾಗೂ ಸುತ್ತಮುತ್ತ ರೈತರ ದ್ರಾಕ್ಷಿ ತೋಟಗಳತ್ತ ಕಣ್ಣಾಯಿಸಿ ನೋಡಿದರೆ ಗೊಂಚಲು ಗೊಂಚಲು ಕಟ್ಟಿರುವ ದ್ರಾಕ್ಷಿ ಗೊನೆಗಳು ಕಣ್ಣಿಗೆ ರಾಚುತ್ತವೆ.
ದ್ರಾಕ್ಷಿ ಬೆಳೆಗಾರರಿಗೆ ಈಗ ಆಲಿಕಲ್ಲು, ಬಿರುಗಾಳಿ ಅಕಾಲಿಕ ಮಳೆಯದ್ದೆ ಆತಂಕವಾಗಿದೆ. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು ಇಂತಹ ಸಂದರ್ಭದಲ್ಲಿ ಅಕಾಲಿಕ ಮಳೆ, ಬಿರುಗಾಳಿ ಆಲಿಕಲ್ಲು ಮಳೆ ಬಿದ್ದರೆ ದ್ರಾಕ್ಷಿಗೆ ಹೆಚ್ಚು ಪೆಟ್ಟು ಬೀಳಲಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಹಾರೋಹಳ್ಳಿ ರಘು ತಿಳಿಸಿದರು.









