ವಿಜಯ ದರ್ಪಣ ನ್ಯೂಸ್….
ಜೆಎಸ್ ಎಸ್ ಕಾಲೇಜಿನಲ್ಲಿ 508 ಮಂದಿಗೆ ಪದವಿ ಪ್ರಧಾನ

ತಾಂಡವಪುರ ಮೇ 23: ಜೆಎಸ್‌ಎಸ್ ಮಹಿಳಾ ಕಾಲೇಜಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಸೇರಿಸಿ ಒಟ್ಟು 508 ಮಂದಿಗೆ ಪದವಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ವಿವಿಧ ವಿಭಾಗಗಳ 21 ವಿದ್ಯಾರ್ಥಿನಿಯರಿಗೆ ಪದಕ ಹಾಗೂ ಬಹುಮಾನವನ್ನು ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ನೀಡಲಾಯಿತು.
ಮೈಸೂರಿನ ಸರಸ್ವತಿಪುರಂನಲ್ಲಿ ಇರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ 18ನೇ ಪದವೀಧರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪದಕ ಹಾಗೂ ಬಹುಮಾನವನ್ನು ವಿತರಣೆ ಮಾಡಿದ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ್ ಸಿ.ಹೊಸೂರ್ ಮಾತನಾಡಿ, ಮಹಿಳೆಯರ ಸಬಲೀಕರಣವೂ ಶಿಕ್ಷಣದಿಂದ ಮಾತ್ರ ಸಾಧ್ಯ. ಕೆಲ ಹಿಂದಿನ ದಶಕಗಳಿಗೆ ಹೋಲಿಕೆ ಮಾಡಿದರೇ ಪ್ರಸ್ತುತ ದಿನದಲ್ಲಿ ಮಹಿಳೆಯರ ಪ್ರಾತಿನಿಧ್ಯ ಎಲ್ಲ ಕ್ಷೇತ್ರದಲ್ಲೂ ಇದೆ. ಪುರಷರಿಗಷ್ಟೇ ಮೀಸಲು ಎನ್ನುವಂತಹ ಹುದ್ದೆಗಳು, ಕ್ಷೇತ್ರಗಳಲ್ಲಿಗೂ ಮಹಿಳೆಯರೂ ಕಾಲಿಟ್ಟು ಯಶಸ್ಸು ಕೂಡ ಕಂಡಿದ್ದಾರೆ. ಆದರೆ ಈ ಪ್ರಮಾಣವೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇಲ್ಲ. ಇದಕ್ಕೆ ಹಲವಾರು ಕಾರಣಗಳೂ ಇವೆ. ಬಡತನ, ಅವಕಾಶ ಸಿಗದಿರುವುದು ಮುಂತಾದ ವಿಷಯಗಳು ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಮಹಿಳೆಯರು ಉನ್ನತ ಮಟ್ಟದಲ್ಲಿ ಮುಂದೆ ಬರಲು ಶಿಕ್ಷಣವೇ ಪ್ರಬಲ ಅಸ್ತ್ರ. ಶಿಕ್ಷಣವನ್ನು ಪಡೆದುಕೊಂಡರೇ ಯಾವುದನ್ನಾದರೂ ಸಾಧನೆ ಮಾಡಬಹುದು ಎಂದು ಹುರುಪು ತುಂಬಿದರು.
ಪದವಿಯನ್ನು, ಸ್ನಾತಕೋತ್ತರ ಪದವಿಯನ್ನು ಗಳಿಸಿದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಉನ್ನತ ಮಟ್ಟದ ಹುದ್ದೆಗೋ, ಬೇರೆ ಇನ್ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸುಗಳಿಸಿ, ಒಂದು ಹಂತವನ್ನು ತಲುಪಿದಾಗ ಸಮಾಜವನ್ನು ಮರೆಯಬಾರದು. ಪ್ರತಿಭಾವಂತರಾಗಿದ್ದರೂ ಹಲವು ಕಾರಣಗಳಿಂದ ಅವಕಾಶ ಸಿಗದೇ ವಂಚಿತರಾಗಿರುವವರಿಗೆ ಸಹಾಯವನ್ನು ಮಾಡಬೇಕು. ಅವರಿಗೆ ಇಂತಹ ದಾರಿ ಇದೆ ಎನ್ನುವುದನ್ನು ತೋರಿಸಕೊಡಬೇಕು. ದೀನರನ್ನು ಮೇಲೆತ್ತಬೇಕು. ಆಗ ಮಾತ್ರ ನೀವು ಕಲಿತ ವಿದ್ಯೆಗೂ ಸಾರ್ಥಕತೆ ಸಿಗುತ್ತದೆ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಪ್ರತಿಜ್ಞಾ ವಿಧಿ ಬೋಧಿಸಿದರು. ನಿಖಿತ ಭಟ್ ಮತ್ತು ವೃಂದದವರು ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ.ರೇಚಣ್ಣ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್.ಕುಮಾರ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಜೆ.ಪುಷ್ಪಲತಾ ನಿರೂಪಿಸಿದರು.










