ವಿಜಯ ದರ್ಪಣ ನ್ಯೂಸ್…..
ಶಾಸಕ ಜಿ ಟಿ ದೇವೇಗೌಡರು ಎತ್ತಿನಗಾಡಿಯ ಮೂಲಕ ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಸ್ವಾಗತ ಕೋರಿದರು

ತಾಂಡವಪುರ ಜೂನ್ 1: ಶಾಲೆಯ ಮೊದಲ ದಿನದ ಪ್ರಾರಂಭೋತ್ಸವಕ್ಕೆ ಸ್ವತಃ ಎತ್ತಿನಗಾಡಿಯಲ್ಲಿ ಆಗಮಿಸುವ ಮೂಲಕ ಚಿಣ್ಣರ ಗಮನ ಸೆಳೆಯುವ ಮೂಲಕ ವಿಭಿನ್ನವಾಗಿ ಮಕ್ಕಳನ್ನು ಶಾಸಕ ಜಿ.ಟಿ.ದೇವೇಗೌಡ ಸ್ವಾಗತಿಸಿದರು.
ಮೈಸೂರ್ ತಾಲೂಕು ರಟ್ನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ, ಶಾಲಾ ದಾಖಲಾತಿ ಆಂದೋಲನ, ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಇಂದು ದೊಡ್ಡ ಮಟ್ಟದ ನಾಯಕರಾಗಿ, ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿ ಹೊರ ಹೊಮ್ಮಿದ್ದಾರೆ. ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸುವ ಬದಲಿಗೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಈಗ ಸರ್ಕಾರದಿಂದ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿಗೆ ಆದ್ಯತೆ ನೀಡಿರುವುದರಿಂದ ಹೆಚ್ಚಿನ ಮಕ್ಕಳನ್ನು ಸೇರಿಸಲಾಗುತ್ತಿದೆ ಎಂದರು.
ಸಾಯಿ ಗಾರ್ಮೆಂಟ್ಸ್‌ನ ದೇವರಾಜ ಅರಸ್ ರಟ್ನಗಳ್ಳಿ ಗ್ರಾಮಕ್ಕೆ ೫೦ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವುದನ್ನು ಸರ್ಕಾರ ನಿಲ್ಲಿಸಿಬಿಟ್ಟಿದೆ. ಹಾಗಾಗಿ ಖಾಸಗಿ ಸಂಸ್ಥೆಗಳ ನೆರವಿನಿಂದ ಶಾಲೆಗಳಿಗೆ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡಲಾಗುತ್ತಿದೆ ಎಂದರು.
ಸಾಯಿ ಗಾರ್ಮೆಂಟ್ಸ್‌ನ ದೇವರಾಜ ಅರಸ್, ಕವಿತಾ, ಡಿಡಿಪಿಐ ಉದಯ್ ಕುಮಾರ್, ಗುಂಗ್ರಾಲ್ ಛತ್ರ ಗ್ರಾಪಂ ಆಡಳಿತಾಧಿಕಾರಿ ಚಿಕ್ಕಣ್ಣ, ಬಿಇಒ ಪ್ರಕಾಶ್,ಪಿಡಿಒ ಶಿವಣ್ಣ, ಮುಖಂಡರಾದ ಯದುವರ,ಅರುಣ್‌ಕುಮಾರ್ ಗ್ರಾಪಂ ಮಾಜಿ ಸದಸ್ಯರಾದ ರೇವಣ್ಣ, ಮಾದೇವಿ, ರೂಪಾ, ಮಂಜು, ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಾಲೇಗೌಡ, ಉಪಾಧ್ಯಕ್ಷ ಎಸ್.ರಘು, ತಾಲೂಕು ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ಶಿವಪ್ಪ, ಮುರಳಿಧರ್, ರಘು ಮತ್ತಿತರರು ಹಾಜರಿದ್ದರು.
ಗ್ರಾಮದ ಮುಖ್ಯರಸ್ತೆಯಿಂದ ಅಲಂಕೃತ ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲಾಯಿತು. ಪೋಷಕರು ಪೂರ್ಣಕುಂಭ ಕಳಸ ಹೊತ್ತು ಸಾಗಿದರೆ, ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಮೆರವಣಿಗೆ ಮೂಲಕ ಕರೆತಂದಾಗ ಶಾಲಾ ಶಿಕ್ಷಕರು ಸ್ವಾಗತಿಸಿ ಬರಮಾಡಿಕೊಂಡರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಸೂರು ತಾಲ್ಲೂಕು ಮೊದಲ ಸ್ಥಾನ ಪಡೆದಿದೆ. ದುಡಿಯುವ ಕೈಗಳಿಗೆ ಉದ್ಯೋಗ ದೊರೆಯಬೇಕು. ಮಕ್ಕಳಿಗೆ ಬರೀ ಶಿಕ್ಷಣ ಕೊಡಿಸುವುದು ಮುಖ್ಯವಲ್ಲ. ಭವಿಷ್ಯದ ನಾಯಕರಾಗುವ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಬೇಕು. ಮಕ್ಕಳು ಮನೆಯಲ್ಲೇ ಪೋಷಕರು,ಶಾಲೆಯಲ್ಲಿ ಗುರುಗಳಿಗೆ ಗೌರವ ಕೊಡುವಂರೆ ನೀತಿ ಕಲಿಸಬೇಕು.
-ಜಿ.ಟಿ.ದೇವೇಗೌಡ











