ವಿಜಯ ದರ್ಪಣ ನ್ಯೂಸ್….
ಕೃಷಿ ಹೊಂಡಗಳಿಗೆ ತಂತಿ ಬೇಲಿ ಕಡ್ಡಾಯ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜೂ.01:
ಕೃಷಿ ಹೊಂಡಗಳಲ್ಲಿ ಆಕಸ್ಮಿಕ ಸಾವುಗಳನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾಗಿ ಕೃಷಿ ಹೊಂಡಗಳಿಗೆ ತಂತಿ ಬೇಲಿ ಅಳವಡಿಸಿ ಜೊತೆಗೆ ಸೂಚನಾ ಫಲಕ ಪ್ರದರ್ಶಿಸಿ ಎಂದು ಜಿಲ್ಲೆಯ ರೈತರಿಗೆ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ಬಿ.ಜಿ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ಬಹುತೇಕ ಪ್ರದೇಶಗಳು ಮಳೆಯಾಶ್ರಿತವಾಗಿದ್ದು, ಮಳೆ ಕೊರತೆಯ ಸಂದರ್ಭಗಳಲ್ಲಿ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರು ಬೆಳೆಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ರೈತರಿಗೆ ಉತ್ತಮ ಬೆಳೆ ಉತ್ಪಾದನೆಗೆ ನೆರವಾಗುವ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ, ಕ್ಷೇತ್ರ ಬದು, ಪಾಲಿಥೀನ್ ಹೊದಿಕೆ, ತಂತಿ ಬೇಲಿ, ಪಂಪ್ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ.
ಕೃಷಿ ಭಾಗ್ಯ ಯೋಜನೆಯಡಿ ರೈತರು ಸ್ವತಃ ಕೃಷಿ ಹೊಂಡ ಮತ್ತು ಕ್ಷೇತ್ರ ಬದು ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಿಸುವ ಕುರಿತು ದೃಢೀಕರಣ ಪತ್ರವನ್ನು ನೀಡಿದ ಮೇಲೆ, ಒಟ್ಟು ಸಹಾಯಧನದ ಶೇ. 75 ರಷ್ಟು ಮೊತ್ತವನ್ನು ಮೊದಲ ಕಂತಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ತಂತಿ ಬೇಲಿ ಅಳವಡಿಸಿದ ನಂತರ ಸಾಮಾನ್ಯ ವರ್ಗದ ರೈತರಿಗೆ ತಂತಿ ಬೇಲಿ ವೆಚ್ಚದ ಶೇಕಡ 40ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರಿಗೆ ಶೇಕಡ 50ರಷ್ಟು ಸಹಾಯಧನ ವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಸೂಚನಾ ಫಲಕ ಅಳವಡಿಸಲು 2000/- ಸಹಾಯಧನ ನೀಡಲಾಗುತ್ತದೆ. ಇದರೊಂದಿಗೆ ಪ್ಯಾಕೇಜ್‍ನ ಎಲ್ಲಾ ಘಟಕಗಳನ್ನು ಅಳವಡಿಸಿಕೊಂಡ ನಂತರ ಉಳಿದಿರುವ ಶೇಕಡ 25ರಷ್ಟು ಸಹಾಯಧನ ಕೂಡ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಕೃಷಿ ಇಲಾಖೆಗೆ ಭೇಟಿ ನೀಡಿ ರೈತರು ಲಭ್ಯವಿರುವ ಸಹಾಯಧನದ ಸದುಪಯೋಗ ಪಡೆದು ಸುರಕ್ಷಿತ ಕೃಷಿಗೆ ಕೈಜೋಡಿಸಿ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜೂ.01:
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26 ನೇ ಸಾಲಿನಲ್ಲಿ ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು www.twd.karnataka.gov.in ವೆಬ್ಸೈಟ್ ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಅರ್ಜಿಗಳನ್ನು ಕಡ್ಡಾಯವಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು. ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕೊಠಡಿ ಸಂಖ್ಯೆ: 205, 2ನೇ ಮಹಡಿ, ಜಿಲ್ಲಾಡಳಿತ ಭವನ. ಬೀರಸಂದ್ರ ಗ್ರಾಮ. ದೇವನಹಳ್ಳಿ ತಾಲ್ಲೂಕು ಈ ಕಛೇರಿಗೆ ದೃಡೀಕೃತ ದಾಖಲಾತಿಗಳನ್ನು ಸಲ್ಲಿಬೇಕು.
ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 080-29787448 ಅನ್ನು ಸಂಪರ್ಕಿಸಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











