ವಿಜಯ ದರ್ಪಣ ನ್ಯೂಸ್…
ಮಾರಿಕೊಂಡವರು….
ನಾವು – ನೀವು – ಅವರು….
ಸತ್ಯ ಹೇಳಬೇಕಾ,
ಸುಳ್ಳು ಹೇಳಬೇಕಾ ಎಂಬ ಕನವರಿಕೆಯ ಸುತ್ತ…….
ತೆಲುಗಿನ ಕೆ ವಿಶ್ವನಾಥ್ ಎಂಬ ಖ್ಯಾತ ನಿರ್ದೇಶಕರು ನಿರ್ದೇಶಸಿದ ಸ್ವಾತಿಮುತ್ಯಂ ಎಂಬ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಆ ಚಿತ್ರದ ನಾಯಕನಟ ಸ್ವಲ್ಪ ಪೆದ್ದು, ಮುಗ್ಧ. ಆತನನ್ನು ಒಂದು ಮಗುವಿನ ವಿಧವೆ ತಾಯಿ ನೋಡಿಕೊಳ್ಳುತ್ತಿರುತ್ತಾರೆ. ಆಕೆಗೆ ಒಂದು ಪುಟ್ಟ ಗಂಡು ಮಗು ಇರುತ್ತದೆ. ಆಕೆಯೇ ಆ ಚಿತ್ರದ ನಾಯಕ ನಟಿ ಸಹ……
ಒಂದು ದೃಶ್ಯದಲ್ಲಿ ಪೆದ್ದು ನಾಯಕ ಮಗುವಿನ ತುಂಟಾಟದ ವಿಷಯದಲ್ಲಿ ತಾಯಿ ಮಗುವಿಗೆ ಹೊಡೆಯಬಹುದೆಂದು ಮಗುವಿನ ತಪ್ಪನ್ನು ಮರೆಮಾಚಿ ಸುಳ್ಳು ಹೇಳುತ್ತಾನೆ. ಆಗ ನಾಯಕನಟಿ ಹಾಗೆ ಸುಳ್ಳು ಹೇಳಬಾರದು, ಅದು ತಪ್ಪು, ದೇವರು ಮೆಚ್ಚುವುದಿಲ್ಲ ಎಂದು ಆತನಿಗೆ ಬುದ್ಧಿ ಹೇಳುತ್ತಾಳೆ. ಆತ ಅದನ್ನು ಒಪ್ಪಿಕೊಳ್ಳುತ್ತಾನೆ. ಇನ್ನು ಮುಂದೆ ಸುಳ್ಳು ಹೇಳುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ……
ಹಾಗೆಯೇ ಮುಂದುವರಿದ ಸಿನಿಮಾದಲ್ಲಿ ಈತ ಆ ಊರಿನ ಒಬ್ಬ ಪ್ರಮುಖ ವ್ಯಕ್ತಿ ಒಂದು ಹೆಣ್ಣಿನ ಜೊತೆ ಅನೈತಿಕ ಸಂಬಂಧದಲ್ಲಿ ಇರುವುದನ್ನು ನೋಡುತ್ತಾನೆ. ಅದನ್ನು ಆತ ಮತ್ತೊಂದು ದೃಶ್ಯದ ಸಾರ್ವಜನಿಕ ವೇದಿಕೆಯಲ್ಲಿ ಆ ಅನೈತಿಕ ಸಂಬಂಧವನ್ನು ತಾನು ನೋಡಿದ ರೀತಿಯಲ್ಲಿಯೇ ಇದ್ದಂತೆ ಸತ್ಯ ಹೇಳುತ್ತಾನೆ. ಆ ವ್ಯಕ್ತಿಗೆ ಅವಮಾನವಾಗುತ್ತದೆ. ಆಗ ಊರಿನ ಪ್ರಮುಖ ವ್ಯಕ್ತಿ ಈತನನ್ನು ಸಿಕ್ಕಾಪಟ್ಟೆ ಹೊಡೆಯುತ್ತಾನೆ…..
ಮುಂದಿನ ದೃಶ್ಯದಲ್ಲಿ ಏಟು ತಿಂದ ಪೆದ್ದು ನಾಯಕನಟನ ಗಾಯಗಳಿಗೆ ಮುಲಾಂ ಹಚ್ಚುತ್ತಾ ನಾಯಕ ನಟಿ ಹಾಗೆಲ್ಲ ನೋಡಿದ ದೃಶ್ಯಗಳನ್ನು ನೇರವಾಗಿ ಸತ್ಯ ಹೇಳಬಾರದು, ಅದು ಅಪಾಯಕಾರಿ, ಬೇರೆಯವರ, ದೊಡ್ಡವರ ಸುದ್ದಿ ನಮಗೆ ಬೇಡ ಎಂದು ಬುದ್ದಿ ಹೇಳುತ್ತಾಳೆ. ನಾಯಕ ನಟ ಗೊಂದಲಕ್ಕೆ ಒಳಗಾಗುತ್ತಾನೆ…..
ರಾತ್ರಿಯ ನಿದ್ದೆಯ ಕನಸಿನಲ್ಲಿ ಹೀಗೆ ತೊದಲುತ್ತಾ ಕನವರಿಸುತ್ತಾನೆ. ” ನಾನು ನಿಜ ಹೇಳಬೇಕೋ, ಸುಳ್ಳು ಹೇಳಬೇಕೋ ” ಇದನ್ನು ಗಮನಿಸಿದ ನಾಯಕಿ ತೀವ್ರ ದುಃಖಿತಳಾಗುತ್ತಾಳೆ….
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ, ಸದ್ಯದ ಜನರ ಮನಸ್ಥಿತಿಯಲ್ಲಿ ಕೆಲವು ಬರಹಗಾರರು, ಕೆಲವು ವಿಷಯಗಳಲ್ಲಿ ನಿಜ ಹೇಳಬೇಕೋ, ಸುಳ್ಳು ಹೇಳಬೇಕೋ ಅರ್ಥವಾಗುತ್ತಿಲ್ಲ. ಸತ್ಯ ಬೆತ್ತಲೆಯಾದಾಗ ಅದನ್ನು ಸ್ವೀಕರಿಸುವ ಮನಸ್ಸುಗಳು ಅಸಹ್ಯಪಟ್ಟುಕೊಳ್ಳುತ್ತವೆ ಅಥವಾ ಆಕ್ರೋಶಗೊಂಡು ಆನಾಗರಿಕವಾಗಿ ವರ್ತಿಸಬಹುದು….
ಕರ್ನಾಟಕದಲ್ಲಿ ಅನೇಕ ಜನ ಈಗಲೂ ಭೂ ರಹಿತರಾಗಿ, ವಸತಿ ರಹಿತರಾಗಿ, ತಾವು ಇಷ್ಟಪಟ್ಟ ಊಟ, ಬಟ್ಟೆ, ಶಿಕ್ಷಣ, ಆರೋಗ್ಯ, ಉದ್ಯೋಗ ರಹಿತರಾಗಿ ಜೀವನ ಮಾಡುತ್ತಿರುವಾಗ ಸರ್ಕಾರವೊಂದು ಕೆಲವೇ ಶ್ರೀಮಂತರಿಗಾಗಿ ಟೌನ್ಶಿಪ್ ನಿರ್ಮಾಣ ಮಾಡುವ ಯೋಜನೆ ರೂಪಿಸುತ್ತಿರುವಾಗ, ಸುಮಾರು 10000 ಎಕರೆಯ ಕೃಷಿ ಭೂಮಿ, 20,000 ಕೋಟಿಯ ಬೃಹತ್ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಲು ಹವಣಿಸುತ್ತಿರುವಾಗ ಅದನ್ನು ಇಡೀ ರಾಜ್ಯದ ಜನ ಒಕ್ಕೊರಳಿನಿಂದ ಖಂಡಿಸಬೇಕಾಗಿತ್ತಲ್ಲವೇ……
ಹಾಗೆಯೇ ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಸಂಘಟನೆ ಎಂದು ಹೇಳಿಕೊಳ್ಳುವ, 10 ಕೋಟಿ ಹೆಚ್ಚು ಸ್ವಯಂಸೇವಕರನ್ನು ಹೊಂದಿರುವುದಾಗಿ ಘೋಷಿಸಿಕೊಳ್ಳುವ ಅನೇಕ ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿರುವ, ನೂರು ವರ್ಷಗಳಷ್ಟು ಇತಿಹಾಸವಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾನೂನಿನ ಅಡಿಯಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕಾದ ಕರ್ತವ್ಯ ಮತ್ತು ಅನಿವಾರ್ಯತೆ ಹಾಗೂ ಸಂವಿಧಾನಾತ್ಮಕ ಬದ್ಧತೆ ತೋರಿಸಬೇಕಲ್ಲವೇ. ಯಾವುದೋ ನೆಪ ಹೇಳಿ ನುಣಿಚಿಕೊಳ್ಳಲು ಪ್ರಯತ್ನಿಸುವುದು ಸೇವೆಯ, ಭಕ್ತಿಯ ನೆಪದಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ತಪ್ಪಾಗುವುದಿಲ್ಲವೇ……
ಇಂದು ನಡೆಯುತ್ತಿರುವ ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಮತ್ತು ರಾಜ್ಯಸಭೆಗೆ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಮತ ಹಾಕುವವರು ಕರ್ನಾಟಕದ 224 ಎಂಎಲ್ಎಗಳೆಂಬ ಜನಪ್ರತಿನಿಧಿಗಳು. ದುರಂತವೆಂದರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತ ಪಡೆದು ಆಯ್ಕೆಯಾಗುವ ಈ ಸದಸ್ಯರುಗಳೇ ಮತ ಹಾಕಲು ಗೊಂದಲವಾಗಿ, ಎಲ್ಲಿ ಮತ ಅಮಾನ್ಯವಾಗುತ್ತದೋ ಎಂದು ಕೃತಕ ಅಥವಾ ಡುಮ್ಮಿ ಮತಪತ್ರ ಸಿದ್ಧಪಡಿಸಿಕೊಂಡು ತರಬೇತಿ ಪಡೆಯುವ ಹಂತದಲ್ಲಿದ್ದಾರೆಂದರೆ ಅವರ ಬುದ್ಧಿಶಕ್ತಿ, ಏಕಾಗ್ರತೆ, ಮಾನಸಿಕ ದೃಢತೆಯ ಬಗ್ಗೆ ಜನಸಾಮಾನ್ಯರಲ್ಲಿ ಒಂದಷ್ಟು ಅನುಮಾನ ಮೂಡುವುದಿಲ್ಲವೇ. ಜೊತೆಗೆ ಅವರೆಲ್ಲರೂ ರೆಸಾರ್ಟ್ ಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆಂದರೆ ಅವರ ಸ್ವಯಂ ನಿಯಂತ್ರಣದ ಬಗ್ಗೆ ಅನುಮಾನವೂ ಮೂಡುತ್ತದೆ ಅಲ್ಲವೇ, ಅವರು ನಮ್ಮನ್ನು ಆಡಳಿತ ಮಾಡಲು ಯೋಗ್ಯರೆ ಎಂಬ ಅನುಮಾನ ಮಾಡುವುದಿಲ್ಲವೇ….
ಕೇಂದ್ರದ ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಅಮಿತ್ ಶಾ ಅವರ ಜೋಡಿ ವಿವಿಧ ರಾಜ್ಯಗಳ ಪ್ರಮುಖ ವಿರೋಧ ಪಕ್ಷಗಳನ್ನೇ ಟೀಕೆ ಮಾಡುತ್ತಾ, ಚುನಾವಣೆ ಗೆದ್ದು ಅದೇ ಪಕ್ಷಗಳನ್ನು ವಿಭಜಿಸಿ, ತಾವೇ ಟೀಕೆ ಮಾಡುತ್ತಿದ್ದ ಗುಂಪುಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಪ್ರಜಾಪ್ರಭುತ್ವವನ್ನು ಅಣಕ ಮಾಡುತ್ತಾ ಇಡೀ ವ್ಯವಸ್ಥೆಯನ್ನು ಹಾಳು ಮಾಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲು ಸಾರ್ವಜನಿಕರು ಪ್ರತಿಭಟಿಸದೆ ಇನ್ನೂ ಅವರನ್ನೇ ಬೆಂಬಲಿಸುತ್ತಿರುವ ದುರಂತ ಪರಿಸ್ಥಿತಿಯಲ್ಲಿ ನಾವು ಇದ್ದೇವೆ ಎಂಬ ಅರಿವೇ ನಮಗಿಲ್ಲವಾಯಿತಲ್ಲವೇ….
ಬಹುತೇಕ ಮಾಧ್ಯಮ ಸಂಸ್ಥೆಗಳು, ಒಂದಷ್ಟು ಪತ್ರಕರ್ತರು, ಧಾರ್ಮಿಕ ಸಂಸ್ಥೆಗಳು, ಸಾಹಿತ್ಯ ಬರಹಗಾರರು, ಕೆಲವಷ್ಟು ಹೋರಾಟಗಾರರು, ಸಮಾಜ ಸೇವಕರು, ಅಷ್ಟೇ ಏಕೆ ಸಾಕಷ್ಟು ಮತದಾರರು ಸಹ ತಮ್ಮನ್ನು ವಿವಿಧ ರೀತಿಯ ಆಸೆ, ಅಮಿಷ, ಹಣ, ಸೈದ್ಧಾಂತಿಕ ಮಲಿನತೆ, ಕೆಲವು ವಸ್ತುಗಳಿಗೆ ಮಾರಿಕೊಂಡವರೇ ಆಗಿದ್ದಾರೆ ಅಲ್ಲವೇ, ಆ ಸತ್ಯವನ್ನು ಹೇಳಬೇಕೆ ಬೇಡವೇ……..
ನಿನ್ನೆ ಚರ್ಚೆಗೆ ಬಂದ ಕೆಲವು ಸುದ್ದಿಗಳ ಸುತ್ತ, ಸತ್ಯ ಹೇಳಬೇಕೋ ಸುಳ್ಳು ಹೇಳಬೇಕೋ ಎಂಬ ಮನಸ್ಥಿತಿಯಲ್ಲಿಯೇ ಒಂದಷ್ಟು ವಿಶ್ಲೇಷಣೆಗಳು……
ಹೀಗೆ ಇನ್ನೂ ಅನೇಕ ವಿಷಯಗಳಲ್ಲಿ ನಾವು ಸತ್ಯ ಹೇಳಬೇಕೋ, ಸುಳ್ಳು ಹೇಳಬೇಕೋ ಎಂಬುದೇ ಅರ್ಥವಾಗದ ಸ್ಥಿತಿಗೆ ಬಂದು ತಲುಪಿರುವುದು ಈ ವ್ಯವಸ್ಥೆಯ ದುರಂತ. ಜನರಿಗೆ ಸಮಗ್ರ ಚಿಂತನೆ ಇರಲಿ ಕನಿಷ್ಠ ಒಳ್ಳೆಯ ಸಾಮಾನ್ಯ ಜ್ಞಾನವು ಇಲ್ಲದಂತಾಗಿರುವುದು ನಿಜಕ್ಕೂ ಆಘಾತಕಾರಿ ಮತ್ತು ಶೋಚನೀಯ ಅಲ್ಲವೇ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….











