ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ತಾಲ್ಲೂಕು ಅಧ್ಯಕ್ಷ ಗುರುಸ್ವಾಮಿ

ತಾಂಡವಪುರ ಜೂನ್ 19 ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರಿಗೆ ಅನುಕೂಲವಾಗಲೆಂದು ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡಿದ್ದು, ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಆದ್ದರಿಂದ ಫಲಾನುಭವಿಗಳು ಆತಂಕಕ್ಕೆ ಒಳಗಾಗಬಾರದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಬಿ.ಗುರುಸ್ವಾಮಿ ತಿಳಿಸಿದರು.
ಮೈಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆಯ ಹಣವು ಮೃತಪಟ್ಟವರ ಖಾತೆಗೆ ಸಂದಾಯವಾಗುತ್ತಿದ್ದರೆ, ಅಂತಹ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅದೇ ಕುಟುಂಬದ ಅರ್ಹ ಯಜಮಾನಿಯನ್ನು ನೋಂದಣಿ ಮಾಡಿಸಬೇಕು. ಅಲ್ಲದೆ, ತಾಂತ್ರಿಕ ಸಮಸ್ಯೆಯಿಂದ ಹೆಸರು ಕೈಬಿಟ್ಟದ್ದಲ್ಲಿ ಅವರನ್ನು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಯೂ ಸೇರಿ ಇಲಾಖೆಗಳು ಒಟ್ಟಾಗಿ ಪರಿಶೀಲನೆ ಮಾಡಬೇಕು. ನಗರ ಪ್ರದೇಶದಲ್ಲಿ 2825, ಗ್ರಾಮಾಂತರದಲ್ಲಿ 1527 ಸೇರಿದಂತೆ ಒಟ್ಟು 4352 ಮರಣ ಹೊಂದಿದ್ದಾರೆ. ಅದರಲ್ಲಿ ಇಲ್ಲಿಯವರೆಗೆ 1756 ಫಲಾನುಭವಿಗಳನ್ನು ಅದೇ ಮನೆಯಲ್ಲಿ ಗುರುತಿಸಿ ನೋಂದಣಿ ಮಾಡಿಸಿ ಅವರ ಖಾತೆಗೆ ಹಣ ಜಮೆಯಾಗುತ್ತಿದೆ ಎಂದು ಮಾಹಿತಿ ಇದೆ. ಈ ಪ್ರಗತಿಯ ವೇಗ ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಮಾತನಾಡಿ, ಗ್ಯಾರಂಟಿ ಯೋಜನೆಯನ್ನು ನಮ್ಮ ತಾಲ್ಲೂಕಿನಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಬೇಕು. ಮೃತಪಟ್ಟ ಗೃಹಲಕ್ಷ್ಮೀ ಫಲಾನುಭವಿಗಳನ್ನು ಪರಿಶೀಲನೆ ನಡೆಸಬೇಕು. ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸುವ ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿ ಮುತವರ್ಜಿಯಿಂದ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯ ಬಿ.ರವಿ, ರಾಣಿ, ಎಂ.ಸೋಮಣ್ಣ, ಕರೀಗೌಡ, ಮಹದೇವು, ಶಂಕರ್, ತಾ.ಪಂ.ಯೋಜನಾಧಿಕಾರಿ ಸುರೇಶ್, ವಿಷಯ ನಿರ್ವಾಹಕ ಬಿ.ಆರ್.ಸೋಮಶೇಖರ್ ಸೇರಿ ಇತರರು ಹಾಜರಿದ್ದರು.











