ವಿಜಯ ದರ್ಪಣ ನ್ಯೂಸ್……
ಎಲ್-ನಿನೋ ಪರಿಣಾಮ: ತೋಟಗಾರಿಕಾ ಬೆಳೆಗಳ ರಕ್ಷಣೆಗೆ ಇರಲಿ ಆದ್ಯತೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜು.09:
ಎಲ್-ನಿನೋ ಸಾಮಾನ್ಯವಾಗಿ ದುರ್ಬಲ ನೈಋತ್ಯ ಮಾನ್ಸೂನ್ ಮಳೆ, ಹೆಚ್ಚಿನ ತಾಪಮಾನ ಮತ್ತು ಒಣ ಹವಾಮಾನದ ಅವಧಿಗಳ ಹೆಚ್ಚಳದೊಂದಿಗೆ ಸಂಬಂಧ ಹೊಂದಿದೆ. ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಒಳನಾಡು ಪ್ರದೇಶವು ಮಳೆ ಆಧಾರಿತ ತೋಟಗಾರಿಕಾ ಪ್ರದೇಶವಾಗಿರುವುದರಿಂದ ಎಲ್-ನಿನೋ ಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತದೆ. ಅನಿಯಮಿತ ಮಳೆಯ ಮಾದರಿ ಹಾಗೂ ಬೆಳೆ ಬೆಳವಣಿಗೆಯ ಅವಧಿಯಲ್ಲಿ ತೇವಾಂಶದ ಅಸಮರ್ಪಕ ಲಭ್ಯತೆಯು ಹೂ ಬಿಡುವಿಕೆ ಮತ್ತು ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಕೀಟ ಹಾಗೂ ರೋಗಗಳ ಉಲ್ಬಣದಿಂದ ಬೆಳೆಗಳ ಆರ್ಥಿಕ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ಪೂರ್ವ ಒಣವಲಯಕ್ಕೆ ಸೇರಿರುತ್ತದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಹಣ್ಣಿನ ಬೆಳೆಗಳಾದ ಮಾವು, ದ್ರಾಕ್ಷಿ, ಸೀಬೆ, ಬಾಳೆ ಮತ್ತು ದಾಳಿಂಬೆ ಹಾಗೂ ತರಕಾರಿ ಬೆಳೆಗಳಾದ ಟೊಮ್ಯಾಟೋ, ಬದನೆ, ಕಡ್ಡಿಬೀನ್ಸ್, ಎಲೆ ಮತ್ತು ಹೂಕೋಸು, ಕುಂಬಳ ಜಾತಿ ತರಕಾರಿಗಳು, ಅಲ್ಲದೇ ಹೂವಿನ ಬೆಳೆಗಳಾದ ಗುಲಾಬಿ, ಸೇವಂತಿಗೆ ಮತ್ತು ಸುಗಂಧರಾಜ, ತೋಟದ ಬೆಳೆಗಳಾದ ತೆಂಗು, ಅಡಿಕೆ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ.

ಎಲ್-ನಿನೋ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ಸಂರಕ್ಷಣೆ ವಿಧಾನಗಳು
* ಬಹುವಾರ್ಷಿಕ ಬೆಳೆಗಳಿಗೆ ತೇವಾಂಶ ಸಂರಕ್ಷಣೆಯ ಕ್ರಮಗಳಾಗಿ ಬುಡದ ಸುತ್ತ ಪಾತಿಯಲ್ಲಿ ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ತೆಂಗಿನ ಮಟ್ಟೆ, ತೆಂಗಿನ ನಾರು ಹಾಗೂ ಇತರೆ ಬೆಳೆ ತ್ಯಾಜ್ಯಗಳನ್ನು ಹೊದಿಕೆಯಾಗಿ ಹಾಸುವುದು. ನೀರಿನ ಉಳಿತಾಯ ಮತ್ತು ಸಮರ್ಪಕ ಬಳಕೆಗಾಗಿ ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಗೆ ಅನುಗುಣವಾಗಿ ನೀರು ನೀಡುವುದು.
* ಗಿಡಗಳ ಎಲೆಗಳ ಮೂಲಕ ಭಾಷಿಕರಣ ಕಡಿಮೆಗೊಳಿಸಲು ಎಲೆಗಳ ಮೇಲೆ (ಶೇ. 5) ರಷ್ಟು ಸಿಂಪಡಣೆ ಮಾಡುವುದು ಮತ್ತು ಸೂರ್ಯನ ಕಿರಣಗಳಿಂದ ಸಂರಕ್ಷಿಸಲು ಸುಣ್ಣದ ಧೂಳೀಕರಣ ಅಥವಾ ಸಿಂಪಡಣೆ ಮಾಡುವುದು.
* ಬರ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಎಲೆಗಳ ಮೇಲೆ (0.2%) ರಷ್ಟು ಪೊಟ್ಯಾಶಿಯಂ ಸಲ್ಪೇಟ್ ಸಿಂಪಡಿಸುವುದು.
* ಎಲೆಗಳ ಮೂಲಕ ಭಾಷಿಕರಣ ಕಡಿಮೆಗೊಳಿಸಲು ಶೇ. 30-40 ರಷ್ಟು ರೆಂಬೆಗಳನ್ನು ಸವರುವುದರಿಂದ ಎಲೆಗಳ ಭಾಷಿಕರಣದ ವಿಸ್ತೀರ್ಣ ಕಡಿಮೆಗೊಳಿಸಲಾಗುವುದು.
* ತರಕಾರಿ ಬೆಳೆಗಳನ್ನು ನಾಟಿ ಮಾಡುವಾಗ ಕಡ್ಡಾಯವಾಗಿ ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಳ್ಳುವುದರ ಜೊತೆಗೆ ಹೆಚ್ಚು ಸಾವಯವ ಅಂಶ ಭೂಮಿಗೆ ಸೇರಿಸುವುದರಿಂದ ತೇವಾಂಶದ ಸಂರಕ್ಷಣೆ ಮಾಡುವುದು.
* ತರಕಾರಿ ನಾಟಿ ಮಾಡುವ ಸಮಯದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಂಡು ಸಸಿಗಳ ಬುಡಗಳು ಪಾಲಿಥಿನ್ ಹೊದಿಕೆಗಳ ಸಂಪರ್ಕಕ್ಕೆ ಬಾರದಂತೆ ಮಾಡಲು ನಾಟಿ ಮಾಡುವ ರಂಧ್ರಗಳಲ್ಲಿ ಪೇಪರ್ ಕಪ್ಸ್ ಅಳವಡಿಸಿ ತರಕಾರಿ ಸಸಿಗಳನ್ನು ನಾಟಿ ಮಾಡುವುದು.
* ತರಕಾರಿ ಬೆಳೆಗಳನ್ನು ಬೆಳೆಯುವಾಗ ಕಡಿಮೆ ಖರ್ಚಿನಲ್ಲಿ ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ಕಟ್ಟುವುದರ ಮೂಲಕ ಬೆಳೆಗಳನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಬಹುದು.
* ತರಕಾರಿ ಬೆಳೆಗಳಲ್ಲಿ ಹೂ ಉದುರುವಿಕೆಯನ್ನು ಕಡಿಮೆಗೊಳಿಸಲು 40ppm NAA (Planofix) ಸಿಂಪಡಣೆ ಮಾಡುವುದು.
* ಬೆಳೆಗಳ ತಾಕುಗಳ ಸುತ್ತ ಬಿಸಿಗಾಳಿಯನ್ನು ನಿಯಂತ್ರಿಸಲು ಮೇವಿನ ಜೋಳವನ್ನು ಬೆಳೆಯುವುದು.
* ಹೊಸದಾಗಿ ನಾಟಿ ಮಾಡಿರುವ ಅಡಿಕೆ ಸಸಿಗಳ ಸಂರಕ್ಷಣೆಗೆ ನೈಋತ್ಯ ದಿಕ್ಕಿನ ಬಿಸಿಲಿನಿಂದ ಸಂರಕ್ಷಿಸಲು ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ‘ವಿ’ ಆಕಾರದಲ್ಲಿ ಕಟ್ಟುವುದು ಹಾಗೂ ಫಸಲು ನೀಡುವ ಅಡಿಕೆ ಮರದ ಬುಡಗಳಿಗೆ ಸುಣ್ಣದ ಲೇಪನ ಮಾಡುವುದು ಹಾಗೂ ನೈಋತ್ಯ ಭಾಗದಿಂದ ಬುಡಗಳಿಗೆ ಅಡಿಕೆ ಪಟ್ಟೆಗಳನ್ನು ಕಟ್ಟಿ ಸಂರಕ್ಷಿಸುವುದು.
* ಪಾಲಿ ಮನೆಗಳಲ್ಲಿ ತಾಪಮಾನ ಮತ್ತು ಬಿಸಿಲಿನಿಂದ ಸಂರಕ್ಷಿಸಲು ಶೇ.75 ರಷ್ಟು ನೆರಳು ಪರದೆಯನ್ನು ಅಳವಡಿಸಿಕೊಳ್ಳುವುದು ಮತ್ತು ಪಾಲಿಮನೆಯ ಮೇಲ್ಛಾವಣಿ ಮೇಲೆ ಗೋಣಿ ಚೀಲಗಳನ್ನು ಹೊದಿಸಿ ಆಗಿಂದಾಗ್ಗೆ ನೀರು ಸಿಂಪಡಣೆ ಮಾಡಿ ವಾತಾವರಣ ತಂಪಾಗಿರಿಸುವುದು.
* ಪಾಲಿಮನೆಯ ಮೇಲೆ ಬಿದ್ದ ನೀರನ್ನು ಕೃಷಿಹೊಂಡಗಳಲ್ಲಿ ಸಂಗ್ರಹಿಸುವುದು ಮತ್ತು ಅವಶ್ಯಕತೆಗನುಸಾರವಾಗಿ ಇತರೆ ಗಿಡಗಳಿಗೆ ನೀರು ಹಾಯಿಸುವುದು.
* ಪಾಲಿ ಹೌಸ್ನಲ್ಲಿ ಉಷ್ಣತೆಯನ್ನು ಕಡಿಮೆ ಮಾಡಲು ಎಕ್ಸಾಸ್ಟ್ ಫ್ಯಾನ್ಗಳನ್ನು ಅಳವಡಿಸಿಕೊಂಡು ಬಿಸಿಗಾಳಿಯನ್ನು ಹೊರಹಾಕುವುದು.
* ತರಕಾರಿ ಮತ್ತು ಹೂವುಗಳನ್ನು ಕಡ್ಡಾಯವಾಗಿ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಕಟಾವು ಮಾಡಿ ನೀರು ಸಿಂಪಡಿಸಿ, ತಂಪಾದ ಜಾಗದಲ್ಲಿ ಶೇಖರಣೆ ಮಾಡುವುದು.
* ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾವಿನ ತಾಕಿನಲ್ಲಿ ಮಳೆ ನೀರನ್ನು ಸಂಗ್ರಹಿಸಲು ಕಟ್ಟೆ ನಿರ್ಮಾಣ ಮಾಡುವುದು.
* ಕೃಷಿ ಹೊಂಡಗಳ ಮೂಲಕ ಮಳೆ ನೀರನ್ನು ಸಂಗ್ರಹಣೆ ಮಾಡಿಟ್ಟುಕೊಂಡು, ಅವಶ್ಯಕತೆಗನುಸಾರವಾಗಿ ನೀರುಣಿಸುವುದು.
* ತೋಟಗಳಲ್ಲಿ ಹವಾಮಾನ ಪರಿಸ್ಥಿತಿ ಹಾಗೂ ಮಣ್ಣಿನ ತೇವಾಂಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ನೀರಾವರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಮತ್ತು ಮಣ್ಣಿನ ತೇವಾಂಶ ಸಂವೇದಕಗಳನ್ನು ಅಳವಡಿಸಿಕೊಳ್ಳುವುದು.
* ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು, ಕಳೆ ನಿಯಂತ್ರಿಸಲು ಹಾಗೂ ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಸಾವಯವ ಮಲ್ಚಿಂಗ್ ಅಳವಡಿಸಿಕೊಳ್ಳಬೇಕು.
* ಬಹುವಾರ್ಷಿಕ ಬೆಳೆಗಳಲ್ಲಿ ಹೊಸ ಪ್ರದೇಶ ವಿಸ್ತರಿಸುವ ಸಮಯದಲ್ಲಿ ಬರ ಸಹಿಷ್ಣು ಬೇರುಕಾಂಡಗಳನ್ನು ಬಳಸುವುದು.
* ಕೊಳವೆಬಾವಿಗಳನ್ನು ಮರುಪೂರಣ ಮಾಡುವುದರಿಂದ ಅಂತರ್ಜಲ ನಿರ್ವಹಣೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬಹುದು.
* ದೀರ್ಘಾವಧಿಯ ಬೆಳೆಗಳನ್ನು ಬೆಳೆಯದೇ, ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು.
* ತೋಟದ ಮಧ್ಯಭಾಗದಲ್ಲಿ ವರ್ಷಕ್ಕೆ ಎರಡು ಬಾರಿ ಹಸಿರೆಲೆ ಗೊಬ್ಬರದ ಬೆಳೆಗಳು ಅಥವಾ ಹೊದಿಕೆ ಬೆಳೆಗಳನ್ನು ಬೆಳೆಯುವುದು ಉತ್ತಮ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. (ಉದಾ: ಹುರುಳಿ, ಸೆಣಬು, ಡಯಾಂಚಾ, ಅಲಸಂದೆ ಮತ್ತು ಅವರೆ) ಬೆಳಗಳಲ್ಲಿ ಹೆಚ್ಚಿನ ಫಲವತ್ತತೆಯನ್ನು ಕಾಣಬಹುದು.
ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ, ದೊಡ್ಡಬಳ್ಳಾಪುರ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









