ವಿಜಯ ದರ್ಪಣ ನ್ಯೂಸ್….
ನಮ್ಮ ಸಂಸಾರ ಆನಂದ ಸಾಗರ ಪ್ರೀತಿಯೇ ನಮಗೆ ಆಧಾರ

ಮದುವೆಯ ಈ ಬಂಧ ಅನುರಾಗದ ಅನುಬಂಧ ಏಳೇಳು ಜನುಮದಲೂ ತೀರದ ಸಂಬಂಧ ಈ ಚಲನಚಿತ್ರ ಗೀತೆಯನ್ನು ಕೇಳಿದ ಯುವ ಹೃದಯಗಳೆಷ್ಟೋ ಭಾವಿ ಸಂಗಾತಿಯ ಬಗೆಗೆ ಮನದಲ್ಲಿ ಪ್ರೀತಿಯ ಭಾವ ತುಂಬಿಕೊಂಡು, ಹೃದಯದ ತುಡಿತ ಮಿಡಿತಗಳಿಗೆ ಸಮ್ಮಿಲನದ ಮಹೋತ್ಸವದ ಕುರಿತು ಕನಸಿನ ಲೋಕಕ್ಕೆ ಜಾರಿ, ಆನಂದ ಪರವಶತೆಯ ಆಗಸದಲ್ಲಿ ತೇಲಾಡುತ್ತಾರೆ. ನಮ್ಮ ಸಂಸಾರ ಆನಂದ ಸಾಗರ ಎನ್ನುವ ಗೀತೆಯನ್ನು ಗುನುಗುತ್ತ ಕಪ್ಪು ಬಿಳುಪಿನ ಕಣ್ಣುಗಳಲ್ಲಿ ಬಣ್ಣ ಬಣ್ಣದ ಕನಸುಗಳನ್ನು ತುಂಬಿಕೊಂಡು ತಮ್ಮದೇ ಲೋಕದಲ್ಲಿರುವ ಯೌವನ ಹೊತ್ತು ತಿರುಗುವ ಯುವಕ/ಯುವತಿಯರೆಲ್ಲ ಸಂಸಾರದ ಪಯಣಕ್ಕೆ ನೌಕೆಯಲ್ಲಿ ಕಾಲಿಡಲು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ ಅಂಥವರಿಗೆಲ್ಲ. ಸಂಸಾರವೆಂದರೆ ಕಣ್ಮನ ಸೆಳೆಯುವ ಸುಂದರ ದೃಶ್ಯ ಕಾವ್ಯ. ಭಾವಿ ಸಂಗಾತಿಯೊಂದಿಗೆ ಕಳೆದ ಪ್ರತಿ ಕ್ಷಣ ಪ್ರೀತಿ ಪ್ರೇಮ ತುಂಬಿದ ಪರಸ್ಪರ ಪ್ರಶಂಸನಾರ್ಹ ಪ್ರಸನ್ನತೆಯ ಸೌಂದರ್ಯೋಪಾಸನೆಯೇ ಸಂಸಾರವೆಂದು ತಿಳಿದು ವಸಂತ ಮಾಸಕಾಗಿ ಕಾಯುವ ಕೋಗಿಲೆಯಂತೆ ವಿವಾಹ ಬಂಧನದಲ್ಲಿ ತಮ್ಮನ್ನು ತಾವೇ ಬಂಧಿಸಿಕೊಳ್ಳಲು ಮುಂದಾಗುತ್ತಾರೆ.
ಪ್ರೀತಿಸಿ ಮದುವೆಯಾಗುವವರಂತೂ ಹೆತ್ತವರನ್ನು ಹೊತ್ತವರನ್ನು ಸುತ್ತು ಮುತ್ತಲಿನವರನ್ನು ಬಿಟ್ಟು ಇವರೆಲ್ಲರ ಹಂಗು ನಮಗೆ ಬೇಡವೆ ಬೇಡ ಎಂದು ನಿರ್ಧರಿಸಿ ಎದೆ ಹಾಲುಣಿಸಿದವಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ನಿಮ್ಮ ಯಾವ ಕಟ್ಟು ಪಾಡುಗಳೂ ನಮ್ಮನ್ನು ಕಟ್ಟಿ ಹಾಕಲಾರವು ಎಂದು ಕರುಳ ಕುಡಿಯ ಸಂಬಂಧವನ್ನು ಕಡೆಗಣಿಸಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿ ಕಾಡಿನಲ್ಲಿ ದಿಕ್ಕು ಕಾಣದವರಂತಾಗಿ ಸಂಸಾರದ ಸಮಸ್ಯೆಗಳ ಸುಳಿಗೆ ಸಿಕ್ಕು ವಿಲ ವಿಲನೆ ಒದ್ದಾಡುವಾಗ ಕಂಗಾಲಾಗಿ ಪರಿತಪಿಸುವಾಗ ಮತ್ತೆ ಅವರ ಸಂಕಷ್ಟಕ್ಕಾಗುವವರು ಹೆತ್ತವರೇ ಹೊರತು ಬೇರಾರೂ ಅಲ್ಲ.
ವಿವಾಹ ಬಂಧನದ ಮಧು ಮಾಸದಲ್ಲಿ ನವ ದಂಪತಿಗಳು ಒಬ್ಬರಿಗೊಬ್ಬರು ಒಂದೇ ಹೊದಿಕೆಯಲ್ಲಿ ಹೊಂದಿಕೆಯಾಗಿದ್ದವರು ಸಂಸಾರದಲ್ಲಿ ಮೆಲ್ಲನೆ ಬೀಸಿದ ತಂಗಾಳಿಯಲ್ಲಿ ಬೆಚ್ಚಗಿದ್ದು, ಭಯಂಕರ ಬಿರುಗಾಳಿ ಬೀಸಿದಾಗ ಹೊಂದಿಕೆಯ ಹೊದಿಕೆಯನ್ನು ಹೊಂದಾಣಿಕೆಯಲ್ಲಿ ಹೊದ್ದು ಸಂಸಾರ ನಡೆಸದೇ ಎದೆಗುಂದಿ ಸಮಸ್ಯೆಯ ಮುಳ್ಳನ್ನು ಇಬ್ಬರೂ ಕುಳಿತುಕೊಂಡು ಆಪ್ತವಾಗಿ ತೆಗೆಯುವ ಬದಲು ಹೊಂದಾಣಿಕೆಯಾಗದೇ ಸಂಸಾರದ ಮುಖ್ಯ ಪುಟ ಹರಿದ ಭಾಗದಲ್ಲಿ ಪ್ರೀತಿಯ ಅಂಟನ್ನು ನಂಟಿಗೆ ಬಳಸದೇ ಒಬ್ಬರಿಗೊಬ್ಬರು ವೈಮನಸ್ಸಿನಿಂದ ಬದ್ಧ ವೈರಿಗಳಂತೆ ಕತ್ತಿಗೆ ಕತ್ತರಿಯ ಪ್ರಯೋಗದ (ನಿನ್ನೊಂದಿಗೆ ನಾನಿರಲಾರೆ ನನ್ನೊಂದಿಗೆ ನೀನಿದ್ದರೆ ನಾ ಬಾಳಲಾರೆ) ಹಂತಕ್ಕೆ ತಲುಪಿ ನನ್ನನ್ನು ನನ್ನಷ್ಟಕ್ಕೆ ಇರಲು ಬಿಡು. ನನ್ನ ದುಶ್ಚಟಗಳಿಗೆ ಹೊಂದಿಕೊಂಡು ಇರಲು ಸಾಧ್ಯವಾದರೆ ಇರು ಇರದಿದ್ದರೆ ಮನೆ ಬಿಟ್ಟು ನಡೆ ಎನ್ನುವ ಪತಿದೇವನ ಮಾತು ಕೇಳಿದಾಗ ಹೆಂಡತಿಯಾದವಳಿಗೆ ಬರಸಿಡಿಲು ಬಡಿಯುತ್ತೆ. ಜನುಮ ಜನುಮದಲ್ಲೂ ಕಷ್ಟ ಸುಖದಲ್ಲೂ ಒಂದಾಗಿ ಬಾಳುವೆ ಎಂದು ಸಪ್ತ ಪದಿ ತುಳಿದದ್ದನ್ನು ಮರೆತು ಕಟ್ಟಿ ಕೊಂಡ ಹೆಂಡತಿಯ ಮೇಲೆ ಶೋ಼ಷಣೆ ನಡೆಸುತ್ತ ಹೆಂಡತಿಯನ್ನು ಒಂಟಿ ಜೀವವಾಗಿಸಿ ನಾಲ್ಕು ಗೋಡೆಗಳ ಮಧ್ಯೆ ಉಸಿರುಗಟ್ಟಿಸುವ ವಾತಾವರಣದಲ್ಲಿ ಉಸಿರಾಡುವ ಹಾಗೆ ಮಾಡಿ ಹಿಂಸಿಸಿದರೆ ಆ ಮುಗ್ಧ ಮಹಿಳೆಯ ಜೀವನ ಪ್ರತಿದಿನ ಗೋಳಾಗಿ ಬಿಡುತ್ತದೆ.
ಇಂಥ ಮುಗ್ಧ ಮಹಿಳೆಯರ ಪರವಾಗಿಯೇ ಅನೇಕ ಕಾನೂನು ಕಾಯ್ದೆಗಳಿದ್ದರೂ ಸಹ ಗಟ್ಟಿ ಮನಸ್ಸು ಮಾಡಿ ಮುನ್ನಗ್ಗುವುದಕ್ಕೆ ಧೈರ್ಯ ತೋರಲಾಗದೇ ಅಸಹಾಯಕತೆಯನ್ನು ತೋರಿ ಉಸಿರಾಡುವ ಜೀವಂತ ಶವವಾಗಿ ಬಾಳುವ ಹಾಗೆ ಹಿಂಸಿಸಿದರೂ ಆಕೆಯ ಪ್ರೀತಿ ಮಮತೆಯಲ್ಲಿ ಯಾವುದೇ ವ್ಯತ್ಯಾಸ ಮಾಡದೇ ವಿಶಾಲ ಹೃದಯೀ ಹೆಂಡತಿಯರ ಪ್ರೇಮಾನುರಾಗಕ್ಕೆ ಸಾಟಿಯುಂಟೆ? ಗಂಡನ ಪ್ರೀತಿಯಿಂದ ದೂರವಾದ ಹೆಣ್ಣಿಗೆ ಗಂಡ ಹತ್ತಿರವಿದ್ದರೂ ಅನುರಾಗದ ಅನುಬಂಧ ಅನ್ನೋದು ಕನಸಿನ ಮಾತೇ ಸರಿ. ನಮ್ಮ ಇತಿಹಾಸದಲ್ಲೆಲ್ಲೂ ಪತ್ನಿಗೆ ಹಿಂಸಿಸುವುದನ್ನು ಅಂಕೆಯಲ್ಲಿಡುವದನ್ನು ಒಪ್ಪಿ ಯಾವ ಧರ್ಮವೂ ಧಾರ್ಮಿಕ ಮುದ್ರೆ ಹಾಕಿಲ್ಲ. ಪರಸ್ಪರ ಗೌರವಾದರಗಳಿಂದ ಪತಿ ಮತ್ತು ಪತ್ನಿ ಇಬ್ಬರೂ ಒಬ್ಬರಿಗೊಬ್ಬರು ಬದ್ಧರಾಗಿ ನಡೆದುಕೊಳ್ಳಬೇಕು, ಅದಲ್ಲದೇ ಉತ್ತಮ ವಂಶ ಕುಡಿಗಳನ್ನು ಬೆಳೆಸಿ ಸಮಾಜದ ಶ್ರೇಯಸ್ಸಿಗೆ ನೀಡುವುದು ಆದ್ಯ ಕರ್ತವ್ಯವೆಂದು ಹೇಳಲಾಗಿದೆ.
ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಮಿಂಚಿ ತನ್ನ ಛಾಪನ್ನು ಮೂಡಿಸುತ್ತಿದ್ದರೂ ಹೆಂಡತಿ ಸ್ಥಾನದಲ್ಲಿನ ಹೆಣ್ಣನ್ನು ನೋಡುವ ದೃಷ್ಟಿ ಯಾಕೋ ವಕ್ರವಾಗಿದ್ದು ನಿಜಕ್ಕೂ ಖೇದಕರ. ವಿವಾಹವಾದ ಮೆಲೆ ಹೆಣ್ಣು ಮಾತ್ರ ಬದಲಾಗಿ ಮನೆ ಮಂದಿಗೆಲ್ಲ ಹೊಂದಿಕೊಳ್ಳಬೇಕು ಎನ್ನುವುದು ಯಾವ ನ್ಯಾಯ? ಮನೆಯ ಎಲ್ಲ ಆಗು ಹೋಗುಗಳಿಗೆ ಕೇವಲ ಹೆಂಡತಿಯನ್ನೇ ಹೊಣೆಯನ್ನಾಗಿಸುವುದು ಯಾವ ಹೊಣೆಯನ್ನೂ ಹೊರದೇ ಮಾಡಿದ ಕೆಲಸಗಳಲ್ಲಿ ಹುಳುಕು ಹುಡುಕಿ ಬೈಯ್ಯುವುದು ಸಮಂಜಸವಲ್ಲ. ಗಂಡನ ಬಗ್ಗೆ ಉಪೇಕ್ಷಿಸಿ ನಿರ್ಲಕ್ಷಿಸಿ ಅವಮಾನಗೊಳಿಸಿ ಮಾತನಾಡುವದೂ ಸರಿಯಲ್ಲ. ಇಲ್ಲಿ ಗಂಡ ಹೆಂಡತಿಯ ನಡುವೆ ಪ್ರೀತಿ ಹೆಸರಿಗೆ ಬಂಧನವಾಗಬಾರದು. ಅದು ಹಕ್ಕುಗಳನ್ನು ಕಿತ್ತುಕೊಳ್ಳುವ ಸಂತೋಷ ಸ್ವತಂತ್ರವನ್ನು ಹರಣ ಮಾಡುವ ಬಂಧನವಾಗಬಾರದು. ನಾ ಹೆಚ್ಚು ನೀ ಕೀಳು ಎನ್ನುವ ಭಾವವೂ ಇಲ್ಲಿ ಸಲ್ಲ. ಪತಿ ಪತ್ನಿ ಇಬ್ಬರೂ ಸಮಾನರೇ ಅದಕ್ಕೆಂದೇ ಗಂಡನನ್ನು ಅರ್ಧಾಂಗ ಹೆಂಡತಿಯನ್ನು ಅರ್ಧಾಂಗಿ ಎಂದು ಕರೆಯುವದು. ಇಬ್ಬರೂ ಪರಿಪೂರ್ಣರಲ್ಲ ಇಬ್ಬರೂ ಸಂಪೂರ್ಣರಲ್ಲ. ಎರಡು ಅರ್ಧಗಳು ಸೇರಿ ಒಂದು ಪೂರ್ಣವಾಗುತ್ತದೆ ಎಂದು ಹೇಳುವುದೇ ಇದರ ಔಚಿತ್ಯ. ಪತಿ ಪತ್ನಿ ಪರಸ್ಪರರ ಅಭಿಲಾಷೆ ಇಚ್ಛೆಗಳನ್ನು ಈಡೇರಿಸಲು ಪ್ರಯತ್ನಿಸಬೆಕು. ಸ್ನೇಹಪೂರ್ವಕವಾಗಿ ನಡೆದುಕೊಳ್ಳುವದನ್ನು ರೂಢಿಸಿಕೊಂಡು ಬಾಧ್ಯತೆಯನ್ನು ಮೆರೆಯಬೇಕು. ಪ್ರೀತಿ ಅಭಿಮಾನದ ಸವಿಜೇನಿನ ಹೊಳೆ ಹರಿಯುತ್ತಿದ್ದರೆ ಅಸಂತೃಪ್ತಿ ಅಸಮಾಧಾನದ ಹೊಗೆ ಆಡಲು ಸಾಧ್ಯವೇ ಇಲ್ಲ.
ಸಹಕಾರವೆನ್ನುವುದು ಅಸಾಧ್ಯವಾದುದನ್ನೂ ಸಾಧಿಸಬಲ್ಲದು. ಹೀಗಾಗಿ ಸಂಗಾತಿಗಳಲ್ಲಿ ನಾವು ಎನ್ನುವ ಭಾವ ಅತೀ ಮುಖ್ಯ. ಸಮಾನತೆಯೆನ್ನುವುದು ಇಬ್ಬರ ಮನಸ್ಸಿನಲ್ಲಿ ಸ್ಥಾಪನೆ ಆಗಬೇಕು. ದಬ್ಬಾಳಕೆಯಿಂದ ಶೋಷಣೆಯಿಂದ ಅಶ್ರದ್ಧೆಯಿಂದ ಬಲವಂತದಿಂದ ಸಂಬಂಧ ಮತ್ತಷ್ಟು ಹದಗೆಡುವುದೇ ಹೊರತು ಅರಳುವುದಿಲ್ಲ. ಸಹನೆಯಿಂದ ಇಬ್ಬರೂ ಒಬ್ಬರನ್ನೊಬ್ಬರು ಅರಿತು ವರ್ತಿಸಿದರೆ ನೈಜ ಪ್ರೇಮಾಂಕುರವಾಗುತ್ತದೆ. ದಂಪತಿಗಳಿಬ್ಬರೂ ಅತ್ಯಾನಂದ ಅಪ್ಯಾಯತೆಯಿಂದ ಸರಸ ಸಲ್ಲಾಪ ಶೃಂಗಾರದಲ್ಲಿ ತೇಲುತ್ತ ಸಂಸಾರವನ್ನು ಸಸಾರಗೊಳಿಸಬಹುದು. ಸಂಸಾರದ ನೌಕೆ ಕಷ್ಟದ ಸುಳಿವಿನಲ್ಲಿ ಸಿಲುಕಿಕೊಂಡಾಗಲೂ ಮುಳುಗದೇ ಪ್ರೀತಿಯೆಂಬ ಹುಟ್ಟನ್ನು ಬಳಸಿದರೆ ಕಣ್ಣೀರು ದುಃಖ ಏಕಾಂಗಿತನ ದೂರವಾಗಿಸಬಹುದು.ಅಂತೆಯೇ ವೈವಾಹಿಕ ಜೀವನದ ಪಯಣ ಸುರಕ್ಷಿತವಾಗುತ್ತದೆ. ಅಲ್ಲದೇ ನಮ್ಮ ಸಂಸಾರ ಆನಂದ ಸಾಗರ ಪ್ರೀತಿಯೆಂಬ ದೈವವೇ ನಮಗಾಧಾರ ಎಂಬ ಗೀತೆ ನಿಜ ಜೀವನದಲ್ಲೂ ನಿಜವಾಗುತ್ತದೆ.
ಜಯಶ್ರಿ. ಜೆ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨










