ಶಿಬಿರದಿಂದ ಹಿಂದಿರುಗುವಾಗ ಶ್ರೀ ಕೃಷ್ಣ ದ್ರೌಪದಿಗೆ ಹೀಗೆ ಹೇಳಿದನು. ‘ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದಕ್ಕೆ ನಿನ್ನ ಪತಿಯಂದಿರಿಗೆ ಜೀವನದಾನ ಸಿಕ್ಕಿತು. ಇನ್ನು ನೀನು ದ್ರೋಣಾಚಾರ್ಯ ಧೃತರಾಷ್ಟ್ರ ಇತ್ಯಾದಿ ಹಿರಿಯರಿಗೆ ಪ್ರತಿದಿನ ನಮಸ್ಕಾರ ಮಾಡಿದ್ದಿದ್ದರೆ, ಮತ್ತು ದುರ್ಯೋಧನ ದುಷ್ಯಾಸನಾದಿಗಳ ಪತ್ನಿಯರು ಪಾಂಡವರಿಗೆ ನಮಸ್ಕಾರ ಮಾಡಿರುತ್ತಿದ್ದಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ.’
ಮೂಲತತ್ವ ಅರಿಯಬೇಕು
ಮಹಾಭಾರತದ ಈ ಪ್ರಸಂಗವು ನಮಗೆ ‘ಬೀಗದೆ ಬಾಗುವುದನ್ನು ಕಲಿತರೆ ಬಾಳು ಬಂಗಾರ.’ ಎಂಬ ಶ್ರೇಷ್ಠ ಸಂದೇಶವನ್ನು ನೀಡುತ್ತದೆ. ಇತಿಹಾಸದ ಪುಟಗಳು ಈ ವಿಷಯವನ್ನು ಸ್ಪಷ್ಟವಾಗಿ ಸಾರುತ್ತಿದ್ದರೂ ನಮ್ಮ ನಡವಳಿಕೆಯಲ್ಲಿ ಅಗಾಧ ಬದಲಾವಣೆಯೇನೂ ಕಂಡು ಬಂದಿಲ್ಲವೆಂಬುದು ಕಣ್ಣಿಗೆ ರಾಚುವಂತಿದೆ.
ಅಹಂಕಾರವೆಂಬುದು ಎಲ್ಲರನ್ನೂ ಕಾಡಿಸುವ ದುರ್ಗುಣ. ಇದರಷ್ಟು ಕೆಟ್ಟದ್ದು ಯಾವುದೂ ಇಲ್ಲ ಏಕೆಂದರೆ ಇದು ಎಂಥೆಂಥ ಸಾಮರ್ಥ್ಯವುಳ್ಳವರನ್ನೂ ಸರ್ವನಾಶ ಮಾಡುತ್ತದೆ. ಮಾನಸಿಕ ಸ್ವಾಸ್ತ್ಯ ವನ್ನು ಅಲ್ಲೋಲ ಕಲ್ಲೋಲವಾಗಿಸುತ್ತದೆ ಎಂಬುದು ಸರ್ವವಿಧಿತ. ಇದನ್ನು ಪಾಲಿಸದಿದ್ದರೆ ಈ ವಿಷಯ ಕೇವಲ ಮಾಹಿತಿಯಾಗಿ ಉಳಿಯುತ್ತದೆ ಹೊರತು ಆಚರಣೆಗೆ ಬರುವುದಿಲ್ಲ. ಈ ಸೂಕ್ಷ್ಮ ವನ್ನು ಅರಿಯದವರು ಅಹಂಕಾರದ ಕೂಪದಲ್ಲಿ ಬಿದ್ದು ನರಳಾಡುವರು.ಅಹಂಕಾರದ ಪಾಶದಲ್ಲಿ ಸಿಲುಕಿಕೊಂಡರೆ ಚಿಂತನೆಗಳಲ್ಲಿ ಪ್ರಬುದ್ಧತೆಯನ್ನು ತರಲು ಬಿಡದು. ದೇವರು ನೀಡಿದ ಕೊಡುಗೆಯಾದ ಈ ಜೀವನವನ್ನು ಹಾಲು ನೀಡುವ ಗೋಮಾತೆಯಂತೆ ದಾಹ ತೀರಿಸುವ ಗಂಗೆಯಂತೆ ಪರೋಪಕಾರಕ್ಕೆ ಬಳಸಿದರೆ ಬದುಕು ಸಾರ್ಥಕ. ಬದುಕಿನ ಮೂಲ ತತ್ವವೇ ಬಾಗುವಿಕೆ.ಹೊರತು ಬೀಗುವಿಕೆ ಅಲ್ಲ. ಮೂಲತತ್ವವನ್ನು ಆಳವಾಗಿ ಗ್ರಹಿಸಿದರೆ ಮನಸ್ಸನ್ನು ಹಗುರವಾಗಿಸುವುದು ಮತ್ತು ಶುದ್ಧಗೊಳಿಸುವುದು.
ಹಣೆ ಮಣಿಯಲೇಬೇಕು
ಬಾಗುವಿಕೆಯು ನಡೆದೇ ಸಾಗಬೇಕಾದ ದಾರಿಯಾದ ಬಾಳಿಗೆ ಬೆಳಕು ಚೆಲ್ಲುತ್ತದೆ. ಕಲ್ಲು ಮೂರ್ತಿಯಾಗಬೇಕೆಂದರೆ ಸುತ್ತಿಗೆಯಿಂದ ಪೆಟ್ಟು ತಿನ್ನಲೇಬೇಕು. ನೋವು ಕೊಟ್ಟ ಸುತ್ತಿಗೆ ಹಾಗೆಯೇ ಉಳಿಯುತ್ತದೆ. ಆದರೆ ನೋವು ತಿಂದ ಕಲ್ಲು ಪೂಜಿಸಿಕೊಳ್ಳುತ್ತದೆ. ಅಂತೆಯೇ ನಾವು ಕಷ್ಟಗಳಿಗೆ ಹೆದರಿ ಹಿಂಜರಿದರೆ ಬದುಕು ಬಿರುಗಾಳಿಗೆ ಸಿಕ್ಕ ಗಾಳಿಪಟದಂತೆ ಆಗುತ್ತದೆ. ಕಷ್ಟಗಳು ಶಾಶ್ವತವಲ್ಲ. ಅವು ಕೆಲ ಸಮಯವದವರೆಗೆ ಮಾತ್ರ ಇರುತ್ತವೆ ಎಂದು ತಿಳಿದರೆ ಸಾಕು. ಬದುಕು ಸಂತಸದ ಬುಗ್ಗೆ ಆಗುತ್ತದೆ. ಬದುಕಿನ ನೋವಿನ ಅನುಭವಗಳ ಸಾರ ಹೀರುತ್ತ ಬಲಿಯಬೇಕು. ಹಾಗಾದಾಗ ಮಾತ್ರ ಬಿಗಿತಪ್ಪದ ಹೆಣಿಗೆ ಜೀವನದ ಹಂದರಕ್ಕೆ ಹಬ್ಬುತ್ತದೆ. ಇತ್ತೀಚೆಗೆ ಗುರು ಹಿರಿಯರಿಗೆ ಗೌರವ ಕೊಡುವ ಭಾವ ಕಡಿಮೆಯಾಗುತ್ತಿದೆ ಎಂಬ ಆರೋಪದ ಮಾತು ಎಲ್ಲೆಲ್ಲೂ ಕೇಳಿ ಬರುತ್ತಿದೆ. ಎಡವಿದಾಗಲೆಲ್ಲ ಕೈ ಹಿಡಿದು ಎತ್ತುವ ಗುರು ಹಿರಿಯರಿಗೆ ಹಣೆ ಮಣೆಯಲೇಬೇಕು. ಅವರ ಮಾರ್ಗದರ್ಶನ ಜಾರು ದಾರಿಯಲ್ಲಿ ಜಾರದಂತೆ ಕಾಪಾಡುತ್ತದೆ. ಬೀಗುವಿಕೆ ಜೀವನದ ಸೌಂದರ್ಯವನ್ನು ಕಾಣದಂತೆ ಮರೆಮಾಚುತ್ತದೆ. ಗೆಲುವೆಂಬ ಸುಂದರ ತಿರುವಿನಲ್ಲಿ ಮನೆ ಮಾಡುವುದನ್ನು ತಪ್ಪಿಸುತ್ತದೆ. ಎಲ್ಲ ಸಮಯದಲ್ಲೂ ನಮ್ಮನ್ನು ನಾವು ಖುಷಿಯಾಗಿಟ್ಟುಕೊಳ್ಳಲು ಬಾಗುವಿಕೆ ತುಂಬಾ ಸಹಕಾರಿ.
ಇಲ್ಲಿ ಒಂದು ಮಾತು ಸ್ಪಷ್ಟಪಡಿಸಲೇಬೇಕು ಜೀವನದ ದೊಡ್ಡ ಖುಷಿಯೆಂದರೆ ನಾವು ಖುಷಿಯಾಗಿರುವುದಲ್ಲ. ನಮ್ಮಿಂದ ಬೇರೆಯವರು ಖುಷಿಯಾಗಿರುವುದು. ಮತ್ತೊಬ್ಬರನ್ನು ಸಂತೋಷವಾಗಿರುವ ಪ್ರಯತ್ನದಲ್ಲಿ ಸಂತೋಷವು ಒಂದು ಉಪ ಉತ್ಪನ್ನ.
ಕಿಂಚಿತ್ತಾದರೂ ನೀಡಬೇಕು
ಆಧುನಿಕ ವೈಜ್ಞಾನಿಕ ಎಂದು ಕರೆದುಕೊಳ್ಳುವ ಈ ಕಾಲದ ಜೀವನದಲ್ಲಿ ಒಣ ಜಂಭವೆಂಬುದು ಪರ್ವತ ಸದೃಶವಾಗಿದೆ. ಅಹಂನಲ್ಲಿ ಬಿದ್ದವರಿಗೆ ಹಿರಿಯರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ನಾನೇ ಮಾಡಿದ್ದು ಎಂದು ಕೊಚ್ಚಿಕೊಳ್ಳುತ್ತೇವೆ. ಫಲ ನೀಡುವ ತರು ಎಂದೂ ಬೀಗುವುದಿಲ್ಲ. ನೆರಳು ಹಸಿರು ಉಸಿರು ನೀಡುವ ಹೆಮ್ಮರ ನನ್ನಿಂದಲೇ ಜಗಜೀವನ ಎಂದು ಜಂಭ ಕೊಚ್ಚಿಕೊಳ್ಳುವುದಿಲ್ಲ.ಇವೆಲ್ಲ ನಿಜಕ್ಕೂ ಅಚ್ಚರಿಯನ್ನು ತರುವುದಿಲ್ಲವೇ? ಬೆರಗಿಗೆ ಕಾರಣವಾಗುವುದಿಲ್ಲವೇ? ಒಂದೇ ಏಟಿಗೆ ಎಲ್ಲವನ್ನೂ ನುಂಗಿಬಿಡುವ ಅಜ್ಞಾನವೆಂಬ ಅಹಂಕಾರದಲ್ಲಿ ಮುಳುಗಿದರೆ ಜೀವನವೇ ಮುಳುಗಿಹೋಗುತ್ತದೆ. ಬೀಗುವುದರಲ್ಲಿ ಸಾರ್ಥಕತೆಯಿಲ್ಲ. ಗಳಿಸಿದ ಸಂಪತ್ತನ್ನೆಲ್ಲ ವೈಯಕ್ತಿಕವಾಗಿ ತನ್ನ ಕುಟುಂಬಕ್ಕಾಗಿ ಖರ್ಚು ಮಾಡಿ ಮೆರೆದು ಮರೆಯಾಗುವುದರಲ್ಲಿ ಹುರುಳಿಲ್ಲ. ದುಡಿದ ಮಾತ್ರಕ್ಕೆ ಗಳಿಸಿದ್ದನ್ನೆಲ್ಲ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ತರವಲ್ಲ. ಸಮಾಜದಲ್ಲಿ ಎಲ್ಲ ವರ್ಗದವರೂ ಬಾಳಿ ಬದುಕಬೇಕು ಅದಕ್ಕಾಗಿ ಗಳಿಕೆಯಲ್ಲಿ ಕಿಂಚಿತ್ತಾದರೂ ನೀಡಬೇಕು. ಭೂಮಿಯ ಮೇಲೆ ಜೀವಿಸುವ ಎಲ್ಲ ಜೀವಿಗಳಲ್ಲಿ ಮಾನವ ಜೀವನ ಶ್ರೇಷ್ಠ ಏಕೆಂದರೆ ಮನುಷ್ಯನಿಗೆ ಮಾತ್ರ ಆಲೋಚಿಸುವ ಶಕ್ತಿಯಿದೆ ಸೇವೆಯ ಗುಣವಿದೆ. ಅಗತ್ಯಕ್ಕಿಂತ ಹೆಚ್ಚಾದುದನ್ನು ಇತರರಿಗೆ ನೀಡುವ ಉದಾತ್ತ ಗುಣ ಬೆಳೆಸಿಕೊಳ್ಳುವುದು ಸರಿಯಾದ ಮಾರ್ಗ.
ಬದುಕನ್ನು ಸಾಕಷ್ಟು ಎತ್ತರದಲ್ಲಿ ಕಟ್ಟಿಕೊಂಡವರು ತಳವೂರಿ ನಿಂತಿದ್ದು ನೆಲದ ಮೇಲೆ. ದೊಡ್ಡವರ ಜಾಡು ಹಿಡಿದು ಹೊರಟರೆ ಅವರು ಬೀಗಿದ್ದ ಪ್ರಸಂಗಗಳೇ ಸಿಗುವುದಿಲ್ಲ. ಬದಲಾಗಿ ಬಾಗಿದ ಸನ್ನಿವೇಶಗಳು ಯಥೇಚ್ಛವಾಗಿ ಸಿಗುವವು. ದೊಡ್ಡವರೊಂದಿಗೆ ಗುರುತಿಸಿಕೊಳ್ಳಲು ಉತ್ಸುಕರಾಗಿರಬಾರದು. ನಾವೇ ದೊಡ್ಡವರಾಗಿ ಬೆಳೆಯಲು ಉತ್ಸುಕರಾಗಿರಬೇಕು. ವಾಸ್ತವವೆಂದರೆ ನಾವು ಕಡಿಮೆ ಅವಧಿಯಲ್ಲಿ ದೊಡ್ಡವರಾಗಿ ಎಲ್ಲರ ಕಣ್ಣು ಕುಕ್ಕುವಂತೆ ಹುಬ್ಬು ಏರುವಂತೆ ಬೆಳೆಯಬೇಕೆಂದು ಬಯಸುವ ಹುಚ್ಚು ಹೆಚ್ಚುತ್ತಿರುವುದು.
ಒಲವು ಬಲವಾಗಬೇಕು
ಬದುಕಿನ ರಹಸ್ಯ ಕಂಡವರಾರು? ಅದು ತೋರುವ ಮಾಯಾವಿತನಕ್ಕೆ ಮರುಳಾಗದವರಾರು? ಅದರ ಆಕರ್ಷಣೆಗೆ ಮನಸೋತವರೇ ಎಲ್ಲರೂ. ಹುಟ್ಟಿದವರೆಲ್ಲರೂ ಚಿರಂಜೀವಿಯಾಗಿರಬೇಕೆಂದು ಬಯಸುವರು. ಅದು ಒಡ್ಡುವ ಸವಾಲುಗಳು ಸಂಕಷ್ಟಗಳು ಬವಣೆಗಳು ಬೆಟ್ಟದಷ್ಟಿದ್ದರೂ ದಾಖಲೆ ಬರೆದವರು ಸಾಕಷ್ಟು ಜನರು. ಜೀವನ ನಿಗೂಢಲೋಕದಂತಿದೆ. ಮಾಯಾಗೃಹಗಳು, ಅರಮನೆಗಳು,ಗುಡಿಸಲುಗಳು, ನೈಜಕಥೆಗಳು ಕುತೂಹಲಕಾರಿಯಾಗಿ ಹೆಣೆದುಕೊಂಡಂತೆ ಕಾಣುತ್ತದೆ. ಎಲ್ಲವೂ ಇದ್ದು ಬೀಗುವಿಕೆಯ ಪರಿಣಾಮವಾಗಿ ನೆಮ್ಮದಿಗಾಗಿ ಪರದಾಟ. ಏನೂ ಇಲ್ಲದಿದ್ದರೂ ಬೆಳದಿಂಗಳಿನಂಥ ನಗೆ ಚೆಲ್ಲುವ ಬಗೆ. ತದ್ವಿರುದ್ಧ ಸನ್ನಿವೇಶಗಳ ಸಂದರ್ಭದಲ್ಲೂ ಅಸಾಧ್ಯತೆಯೊಂದಿಗಿನ ಸಾಧ್ಯತೆಯ ವಿಸ್ಮಯಲೋಕದ ಅನಾವರಣ. ನಿಜಕ್ಕೂ ಅಚ್ಚರಿಮೂಡಿಸುವುದು. ನಮ್ಮೆಲ್ಲರ ಕಣ್ಣು ಕಿವಿ ಮಾಡುವ ಕಾರ್ಯ ಒಂದೇ ಆದರೂ ಅವು ಗ್ರಹಿಸುವ ವಿಚಾರ ಭಿನ್ನ ವಿಭಿನ್ನ. ನಮ್ಮವರ ಮೇಲಿನ ಒಲವು ನಮ್ಮನ್ನು ಬಲಹೀನಗೊಳಿಸದೆ ಬಲಗೊಳಿಸಬೇಕು. ಒಳ್ಳೆಯ ಕಾಳುಗಳು ಒಳ್ಳೆಯ ಬೆಳೆ ಕೊಡುತ್ತವೆ. ಬಾಗುವಿಕೆಯು ಕ್ಲಿಷ್ಟವಾದ ಬದುಕನ್ನು ಸರಳಗೊಳಿಸುತ್ತದೆ. ಹಾಗಾದರೆ ತಡವೇಕೆ ಬಾಗುವಿಕೆಯತ್ತ ಅಡಿ ಇಡೋಣ. ಸುಂದರ ಜೀವನಕ್ಕೆ ಮುನ್ನುಡಿ ಬರೆಯೋಣ.

ಜಯಶ್ರೀ.ಜೆ.ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨












