ವಿಜಯ ದರ್ಪಣ ನ್ಯೂಸ್…….
ಈಶ ಔಟ್ರೀಚ್ನ ‘ಹಸಿರು ಶಾಲೆ’ ಅಭಿಯಾನದ ವತಿಯಿಂದ ಜಿ.ಹೆಚ್.ಪಿ.ಎಸ್. ನಾಯನಹಳ್ಳಿಯಲ್ಲಿ ಹಸಿರು ಕ್ರಾಂತಿ

ಜುಲೈ 25, 2026: ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಯನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಶ ಔಟ್ರೀಚ್ನ ‘ಹಸಿರು ಶಾಲೆ’ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲೆಯ ಆವರಣದಲ್ಲಿ 40 ಸಸಿಗಳನ್ನು ನೆಡಲಾಗಿದ್ದು, ಹಸಿರು ಭವಿಷ್ಯದತ್ತ ಹೆಜ್ಜೆ ಇಡಲು ವಿದ್ಯಾರ್ಥಿಗಳು, ಶಿಕ್ಷಕರು, ಕಾಲೇಜು ಯುವಕರು ಮತ್ತು ಸುತ್ತಮುತ್ತಲಿನ ಜನರು ಕೈಜೋಡಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ 80 ಮಕ್ಕಳು, 20 ಅಂಗನವಾಡಿ ಮಕ್ಕಳು ಹಾಗೂ ಆರು ಜನ ಶಿಕ್ಷಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಇದರೊಂದಿಗೆ ಶೇಷಾದ್ರಿಪುರಂ ಕಾಲೇಜಿನ ವಾಣಿಜ್ಯ ವಿಭಾಗದ ಸುಮಾರು 50 ವಿದ್ಯಾರ್ಥಿಗಳೂ ಭಾಗವಹಿಸಿ, ಹಸಿರು ಪರಿಸರ ನಿರ್ಮಾಣದಲ್ಲಿ ಯುವಜನರ ಪಾತ್ರ ಮತ್ತು ಜನರ ಸಹಭಾಗಿತ್ವದ ಮಹತ್ವವನ್ನು ಎತ್ತಿಹಿಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಕೆ.ವಿ.ರವರು ವಕೀಲರ ಬಳಗ ಹಾಗೂ ಸಾಮಾಜಿಕ ಮಾಧ್ಯಮದವರೊಂದಿಗೆ ಉಪಸ್ಥಿತರಿದ್ದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಭಿಲಾಷ್ ಕೆ.ವಿ. ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ನ್ಯಾಯಾಧೀಶರಾದ ಮಾನ್ಯ ನ್ಯಾಯಮೂರ್ತಿ ಸಂಜೀವ್ ಕುಮಾರ್ ಹಂಚಟೆ ಅವರೊಂದಿಗಿನ ಭೇಟಿಯೇ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 5 ಲಕ್ಷ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಕಲ್ಪನೆಗೆ ಪ್ರೇರಣೆಯಾಯಿತು ಎಂದು ಹಂಚಿಕೊಂಡರು.
ಈ ಭಾಗದ ಹಸಿರು ಹೊದಿಕೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಪರಿಸರದ ಭವಿಷ್ಯವನ್ನು ರಕ್ಷಿಸಲು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಅವರು ಪ್ರೋತ್ಸಾಹಿಸಿದರು.
ಇದೇ ವೇಳೆ ಈಶ ಔಟ್ರೀಚ್ ಚಿಕ್ಕಬಳ್ಳಾಪುರದ ಸಂಯೋಜಕರಾದ ಸ್ವಾಮಿ ಲವನರವರಿಂದ ಅರ್ಥಪೂರ್ಣ ಪರಿಸರ ಜಾಗೃತಿ ಗೋಷ್ಠಿ ನಡೆಯಿತು. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡ ಸಂವಾದಾತ್ಮಕ ಆಟದ ಮೂಲಕ ಕಾರ್ಯಕ್ರಮ ಆರಂಭಿಸಿದ ಅವರು, ಮಳೆ ತರಿಸಲು, ಮಣ್ಣಿನಲ್ಲಿ ತೇವಾಂಶ ಉಳಿಸಿಕೊಳ್ಳಲು ಹಾಗೂ ಮಣ್ಣಿನ ಜೀವಂತಿಕೆಯನ್ನು ಕಾಪಾಡಿಕೊಳ್ಳುವ ಸೂಕ್ಷ್ಮಜೀವಿಗಳನ್ನು ರಕ್ಷಿಸಲು ಮರಗಳ ಪಾತ್ರ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.
“ನೀವು ಬೆಳೆದು ದೊಡ್ಡವರಾದ ಮೇಲೆ ಎಂದಾದರೂ ಈ ಶಾಲೆಗೆ ಬಂದಾಗ, ಇಂದು ನೀವು ನೀರೆರೆದು ಬೆಳೆಸಿ ಪೋಷಿಸಿದ ಗಿಡಗಳು ದೊಡ್ಡ ಮರಗಳಾಗಿ ಬೆಳೆದು ನಿಂತಿರುವುದನ್ನು ನೋಡಿ ಅನುಭವಿಸುವ ಆನಂದ ಮತ್ತು ಹೆಮ್ಮೆಯನ್ನು ಕಲ್ಪಿಸಿಕೊಳ್ಳಬೇಕು,” ಎಂದು ಹೇಳುವ ಮೂಲಕ ಮಕ್ಕಳಲ್ಲಿ ಉತ್ಸಾಹ ತುಂಬಿದರು.
ಶಾಲೆಯ ಪರವಾಗಿ ಮಾತನಾಡಿದ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಅವರು, ಪ್ರತಿಯೊಬ್ಬ ಮಗುವೂ ಕನಿಷ್ಠ ಒಂದು ಸಸಿಯನ್ನು ತಮ್ಮ ಸ್ವಂತ ಮಗುವಿನಂತೆ ಪೋಷಿಸಬೇಕು ಎಂದು ಮನವಿ ಮಾಡಿದರು.
ನೆಡಲಾದ ಪ್ರತಿಯೊಂದು ಸಸಿಯೂ ಬೆಳೆಯುವಂತೆ ನೋಡಿಕೊಳ್ಳಲು ಶಾಲಾ ಆಡಳಿತ ಮಂಡಳಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.

‘ಹಸಿರು ಶಾಲೆ’ ಎಂಬುದು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮತ್ತು ಕಾಳಜಿಯನ್ನು ಮೂಡಿಸಲು ಈಶ ಔಟ್ರೀಚ್ ಹಮ್ಮಿಕೊಂಡಿರುವ ಒಂದು ಉಪಕ್ರಮ. ಈ ಯೋಜನೆಯು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 1,800 ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳನ್ನು ತಲುಪಿ, 35,000 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದೆ.
ಈ ಮೂಲಕ ಶಿಕ್ಷಣ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಕ್ರಿಯ ಸಹಭಾಗಿತ್ವದಲ್ಲಿ ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಶ್ರಮಿಸಲಾಗುತ್ತಿದೆ.
ಈಶ ಔಟ್ರೀಚ್ ಎಂಬುದು ಈಶ ಸಂಸ್ಥೆಯ ಸಾಮಾಜಿಕ ಮತ್ತು ಗ್ರಾಮೀಣಾಭಿವೃದ್ಧಿ ಅಂಗವಾಗಿದ್ದು, ಶಿಕ್ಷಣ, ಪರಿಸರ, ಆರೋಗ್ಯ, ಕ್ರೀಡೆ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳ ಮೂಲಕ ಗ್ರಾಮೀಣ ಜನರ ಆರೋಗ್ಯ, ಕ್ಷೇಮ ಮತ್ತು ಜೀವನೋಪಾಯವನ್ನು ಉತ್ತಮಪಡಿಸಲು ಶ್ರಮಿಸುತ್ತಿದೆ.










