ವಿಜಯ ದರ್ಪಣ ನ್ಯೂಸ್….
ಅನಧಿಕೃತ ಕಸ ಸುರಿಯುವ ಬ್ಲಾಕ್ ಸ್ಪಾಟ್ ತೆರವು : ಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯಾಚರಣೆ

ತಾವರೆಕೆರೆ : ಹೊಸಕೋಟೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಪ್ರದೇಶಗಳಲ್ಲಿ ಸಾರ್ವಜನಿಕರು ಅನಧಿಕೃತವಾಗಿ ತ್ಯಾಜ್ಯ ಸುರಿದು ‘ಬ್ಲಾಕ್ ಸ್ಪಾಟ್’ಗಳಾಗಿ ಬದಲಾಗಿದ್ದ ಜಾಗಗಳನ್ನು ತಾಲ್ಲೂಕು ಪಂಚಾಯಿತಿ ಆಡಳಿತವು ಗಂಭೀರವಾಗಿ ಪರಿಗಣಿಸಿದ್ದು, ಸಮರೋಪಾದಾದಿಯಲ್ಲಿ ತೆರವು ಕಾರ್ಯಾಚರಣೆ ನಡೆಸಿದೆ.
ಬ್ಲಾಕ್ ಸ್ಪಾಟ್ ಹಾಗೂ ತ್ಯಾಜ್ಯ ಸಮಸ್ಯೆಯ ಕುರಿತು ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಸುದ್ಧಿ ಪ್ರಕಟವಾಗಿತ್ತು. ಈ ವರದಿಗಳಿಗೆ ತಕ್ಷಣ ಸ್ಪಂದಿಸಿದ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ.ಪಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು.
ಇ.ಒ ಅವರ ಸೂಚನೆಯಂತೆ ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಗುರುತಿಸಿ, ಪಂಚಾಯಿತಿ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ಹಾಗೂ ಸ್ಥಳೀಯರ ಸಹಯೋಗದೊಂದಿಗೆ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ತೆರವುಗೊಳಿಸಿದ ಜಾಗಗಳಲ್ಲಿ ಮತ್ತೆ ಕಸ ಸುರಿಯದಂತೆ ತಡೆಯಲು ಜಾಗೃತಿ ಫಲಕಗಳನ್ನು ಅಳವಡಿಸಲಾಗಿದ್ದು, ಕೆಲವೆಡೆ ಗಿಡಗಳನ್ನು ನೆಟ್ಟು ಸುಂದರೀಕರಣಗೊಳಿಸಲು ಕ್ರಮ ವಹಿಸಲಾಗಿದೆ.ಇನ್ಮುಂದೆ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಯುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಪಂಚಾಯತ್ ರಾಜ್ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಹಾಗೂ ದಂಡ ವಿಧಿಸಲಾಗುವುದು.
ಮನೆ-ಮನೆ ಕಸ ಸಂಗ್ರಹಣೆ: ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುವ ‘ಸ್ವಚ್ಛ ವಾಹನ’ಗಳಿಗೆ ಮಾತ್ರ ಕಸವನ್ನು ವಿಂಗಡಿಸಿ ನೀಡಬೇಕು.ಸಾರ್ವಜನಿಕರ ಸಹಕಾರ: ಗ್ರಾಮಗಳ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಸಾರ್ವಜನಿಕರು ತಾಲ್ಲೂಕು ಪಂಚಾಯಿತಿಯ ಸ್ವಚ್ಛತಾ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಾರ್ಯ ನಿರ್ವಾಹಕ ಅಧಿಕಾರಿಗಳ ಅಭಿಪ್ರಾಯ,ಗ್ರಾಮೀಣ ಪ್ರದೇಶಗಳ ನೈರ್ಮಲ್ಯ ಕಾಪಾಡಲು ತಾಲ್ಲೂಕು ಪಂಚಾಯಿತಿ ಬದ್ಧವಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವ ಇಂತಹ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ.









