ವಿಜಯ ದರ್ಪಣ ನ್ಯೂಸ್….
ಬಹುಮುಖ ಪ್ರತಿಭೆ ಎಂ.ಇ . ಮಹಮ್ಮದ್

ಕೆಲವು ವ್ಯಕ್ತಿಗಳು ಕಾಲದೊಂದಿಗೆ ಸಾಗುತ್ತಾರೆ
ಕೆಲವರು ಪತ್ರಿಕೆಗಳಲ್ಲಿ ಬರೆಯುತ್ತಾರೆ
ಮತ್ತೆ ಕೆಲವರು ಪತ್ರಿಕೋದ್ಯಮದ ಇತಿಹಾಸದಲ್ಲಿ ಸ್ಥಾನ ಹಿಡಿಯುತ್ತಾರೆ
ಅಂತಹ ಅಪರೂಪದ ಅಕ್ಷರ ಸಾಧಕರಲ್ಲಿ ನಾವು ಹೆಮ್ಮೆ ಯಿಂದಉಲ್ಲೇಖಿಸಬಹುದಾದ ಹೆಸರು ಮಡಿಕೇರಿಯ ಹಿರಿಯ ಪತ್ರಕರ್ತ ಸಾಹಿತಿ ಕವಿ ಲೇಖಕ ಹಾಗೂ ಬಹುಭಾಷಾ ಪ್ರತಿಭೆಯ ಎಂ.ಇ ಮಹಮ್ಮದ್ (ಯಮ್ಮಿ )
ಆಪ್ತರ ಪಾಲಿಗೆ ಇವರು ಯಮ್ಮಿ ಎಂದೇ ಚಿರಪರಿಚಿತ
ಕೊಡಗಿನ ಸಾಂಸ್ಕೃತಿಕ ಶ್ರೀಮಂತಿಕೆ ಭಾಷಾ ವೈವಿಧ್ಯತೆ ಮತ್ತು ಸಾಹಿತ್ಯ ಪರಂಪರೆಯ ನಡುವೆ ಬೆಳೆದು ಬಂದ ಮಹಮ್ಮದ್ಅವರು ನಾಲ್ಕು ದಶಕಗಳಿಂದ ಅಕ್ಷರವನ್ನು ತಮ್ಮಉಸಿರಾಗಿಸಿಕೊಂಡು ಬಂದವರು
ಪತ್ರಿಕೋದ್ಯಮ ಅವರಿಗೆ ಕೇವಲ ಉದ್ಯೋಗವಾಗಿರಲಿಲ್ಲ
ಅದು ಅವರ ಬದುಕಿನ ಒಂದು ಧ್ಯೇಯವಾಗಿತ್ತು
ಕೊಡಗಿನ ಪತ್ರಿಕಾ ಲೋಕದಲ್ಲಿ ಶಕ್ತಿಯುತವಾಗಿ ಬೆಳೆದು ನಿಂತಿರುವ ಶಕ್ತಿಪತ್ರಿಕೆಯ ಉಪಸಂಪಾದಕರಾಗಿ ಫಿರ್ದೌಸ್ ಎಂಬ ಇಸ್ಲಾಂ ಧಾರ್ಮಿಕ ವಾರ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು ಪತ್ರಿಕೋದ್ಯಮದ ಒಳನೋಟ ಭಾಷೆಯ ಸೂಕ್ಷ್ಮತೆ ಮತ್ತು ಸುದ್ದಿಯ ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ
ಆದರೆ ಯಮ್ಮಿ ಅವರನ್ನು ಕೇವಲ ಪತ್ರಕರ್ತ ಎಂಬ ಒಂದು ಪದದಲ್ಲಿ ಬಂಧಿಸುವ ಬದಲು ಅವರ ಬಹುಮುಖ ಪ್ರತಿಭೆಯ ಬಗ್ಗೆ ಗುರುತಿಸುವಂತಹ ಕಾರ್ಯ ಸಮರ್ಪಕ ರೀತಿಯಲ್ಲಿ ನಡೆದಿಲ್ಲ ಎನ್ನಬಹುದು
ಅವರು ಲೇಖಕರು
ಕವಿಗಳು
ಅವರು ಸಾಹಿತ್ಯಾಸಕ್ತರು ಉತ್ತಮ ಅನುವಾದಕರು
ಅವರ ಭಾಷಾ ಪ್ರತಿಭೆ
ಅವರಲ್ಲಿರುವ ಸಾಹಿತ್ಯ ಅಭಿರುಚಿ ಕಲೆ ತಿಳಿದವರಿಗೆ ಮಾತ್ರ ಗೊತ್ತು
ಭಾಷೆ ಎಂದರೆ ಕೇವಲ ಸಂವಹನದ ಸಾಧನವಲ್ಲ ಅದು ಸಂಸ್ಕೃತಿ ಬದುಕು ಮತ್ತು ಆತ್ಮದ ಪ್ರತಿಬಿಂಬ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿರುವವರು ಯಮ್ಮಿ
ಕನ್ನಡದೊಂದಿಗೆ ಕೊಡವ ಭಾಷೆ ಹಾಗೂ ಕೊಡಗಿನ ಅರೆ ಭಾಷೆಗಳನ್ನೂ ಕರಗತ ಮಾಡಿಕೊಂಡವರು ಕೊಡವ ಭಾಷೆಯಲ್ಲಿ ಮಡಿಕೇರಿ* *ಆಕಾಶವಾಣಿಯಲ್ಲಿ ನಿತ್ಯ ಬಿತ್ತರ ಗೊಳ್ಳುತ್ತಿರುವ ಸುದ್ದಿ ಸಮಾಚಾರವನ್ನು ಹದಿನೈದು ವರ್ಷಗಳ ದೀರ್ಘಕಾಲ ವಾಚಿಸುವ ಮೂಲಕ ಕೊಡವ ಜನಾಂಗಬಾಂಧವರ ಮೆಚ್ಚುಗೆಯನ್ನು ಪಡೆದ ಇವರು ಆಕಾಶವಾಣಿ ಯಲ್ಲಿ ಪ್ರಸಾರಗೊಳ್ಳುತ್ತಿರುವ ಸುದ್ದಿ ಜೊಂಪೆಯನ್ನು ಕೂಡ 10 ವರ್ಷಗಳ ಕಾಲ ವಾಚಿಸುವ ಮೂಲಕ ಗೌಡ ಜನಾಂಗ ಬಾಂಧವರ ಮೆಚ್ಚುಗೆಯನ್ನೂ ಪಡೆದುಕೊಂಡವರು
ಇಷ್ಟೇ ಅಲ್ಲದೆ ಮಲಯಾಳವನ್ನೂ ಕಲಿತುಕೊಂಡ ಇವರು ಮಲಯಾಳಂ ಭಾಷೆಯ ಪ್ರಸಿದ್ಧ ಕಾದಂಬರಿ ಕಾರರ ಸುಮಾರು 20ರಷ್ಟು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಶಕ್ತಿಯಲ್ಲಿ ಪ್ರತಿವಾರ ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ ಅವರು ಅನುವಾದಿಸಿರುವ ನಾಲ್ಕು ಮಲಯಾಳಂ ಕಾದಂಬರಿಗಳು ಕೊಡವ ವಾರಪತ್ರಿಕೆಗಳಾದ ಬ್ರಹ್ಮಗಿರಿ ತೂಕ್ ಬೊಳಕ್ ಹಾಗೂ ಪೂಮಾಲೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ವಿವಿಧ ಭಾಷೆಗಳಲ್ಲಿ ಅವರು ಕವನಗಳನ್ನು ರಚಿಸಿದ್ದಾರೆ
ಬ್ಯಾರಿ ಮಾತೃಭಾಷೆಯ ಮಹಮ್ಮದ್ ಅವರು ಈ ಹಿಂದೆ ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಬ್ಯಾರಿ ವಾರ್ತೆ “ಸುದ್ದಿ ಸಾರ “ದ ಸ್ಕ್ರಿಪ್ಟ್ ತಯಾರಕರೂ ಆಗಿದ್ದರು.
ಇದುವರೆಗೆ ಆರು ಮಲಯಾಳಂ ಕಾದಂಬರಿಗಳನ್ನು ಕೊಡವ ಭಾಷೆಗೆ ಅನುವಾದಿಸಿ ತಮ್ಮದೇ ಧ್ವನಿ ಸುರುಳಿಯಲ್ಲಿ ಪ್ರತಿವಾರ ವಾಟ್ಸಪ್ ಮೂಲಕ ಬಿತ್ತರಿಸುತ್ತಾ ಬಂದಿದ್ದಾರೆ ಅವರು ಅನುವಾದ ಮಾಡಿರುವ ಆರನೇ ಕಾದಂಬರಿ “ಡ್ರೈವರ್ ಮುತ್ತಣ್ಣ”ಎಂಬ ಕೊಡವ ಧಾರಾವಾಹಿಯನ್ನು ಸುಮಾರು 150ಕ್ಕೂ ಅಧಿಕ ಮಂದಿ ಇಂದು ವಾಟ್ಸಾಪ್ ಗ್ರೂಪ್ ನಲ್ಲಿ ಪ್ರತಿ ವಾರ ಆಲಿಸುತ್ತಿದ್ದಾರೆ.
ಒಬ್ಬ ವ್ಯಕ್ತಿಗೆ ಬರವಣಿಗೆಯ ಪ್ರತಿಭೆ ಇರಬಹುದು.
ಇನ್ನೊಬ್ಬರಿಗೆ ಭಾಷಣದ ಶಕ್ತಿ ಇರಬಹುದು.
ಮತ್ತೊಬ್ಬರಿಗೆ ಧ್ವನಿ ಮಾಧ್ಯಮದ ಸಾಮರ್ಥ್ಯವಿರಬಹುದು.
ಆದರೆ ಬರವಣಿಗೆ ಸಾಹಿತ್ಯ ಭಾಷೆ ಪತ್ರಿಕೋದ್ಯಮ ಮತ್ತು ಧ್ವನಿ ಇವೆಲ್ಲವನ್ನೂ ಒಬ್ಬರೇ ವ್ಯಕ್ತಿಯಲ್ಲಿ ಕಾಣುವುದು ಅಪರೂಪ. ಆ ಅಪರೂಪದ ಸಂಗಮವೇ ಎಂ.ಇ .ಮಹಮ್ಮದ್ ಎಂಬ ಯಮ್ಮಿ
ಸಾಹಿತ್ಯ ಲೋಕದಲ್ಲಿ ಯಮ್ಮಿ ಎಂಬ ಕಾವ್ಯನಾಮದ ಮೂಲಕ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿರುವ ಮಹಮ್ಮದ್ ಅವರ ಕವನಗಳು ಮತ್ತು ಲೇಖನಗಳು ಅವರೊಳಗಿನ ಸೂಕ್ಷ್ಮ ಮನಸ್ಸಿನ ಪ್ರತಿಬಿಂಬ
ಅವರ ಬರವಣಿಗೆಯಲ್ಲಿ ಕೇವಲ ಪದಗಳು ಮಾತ್ರವಲ್ಲ
ಅನುಭವಕೂಡ ಇದೆ
ಅವರ ಸಾಲುಗಳಲ್ಲಿ ಕೇವಲ ಅಲಂಕಾರ ಮಾತ್ರವಲ್ಲ
ಜೀವನವಿದೆ
ಅವರ ಲೇಖನಗಳಲ್ಲಿ ಕೇವಲ ವಿಚಾರವಲ್ಲ
ಸಮಾಜದ ಬಗ್ಗೆಗಿನ ಕಾಳಜಿಯಿದೆ
ಅವರ ಅಕ್ಷರಗಳನ್ನು ಓದಿದಾಗ ಪತ್ರಕರ್ತನ ಕಣ್ಣು ಎದ್ದುಕಾಣುತ್ತದೆ ಕನ್ನಡ ಮಾತನಾಡಿದರೆ ಅಚ್ಚ ಕನ್ನಡ ಕೊಡವಭಾಷೆ ಮಾತನಾಡುವಾಗ ಥೇಟ್ ಕೊಡವ ಅರೆಭಾಷೆ ನುಡಿದರೆ ನಮ್ಮೂರ ಗೌಡ ಎಂದು ಜನರು ಭಾವಿಸುವಷ್ಟರ ಮಟ್ಟಿಗೆ ಇವರು ವಿವಿಧ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದಾರೆ
ಕಾಲ ಬದಲಾಯಿತು
ತಂತ್ರಜ್ಞಾನ ಬದಲಾಯಿತು
ಪತ್ರಿಕೋದ್ಯಮದ ಸ್ವರೂಪ ಬದಲಾಯಿತು
ಓದುಗರ ಅಭಿರುಚಿಗಳು ಬದಲಾದವು
ಆದರೆ ಯಮ್ಮಿ ಅವರ ಅಕ್ಷರದ ಮೇಲಿನ ಪ್ರೀತಿ ಬದಲಾಗಲಿಲ್ಲ. ಯಾವುದೇ ಹಮ್ಮು ಬಿಮ್ಮು ಇಲ್ಲದ ಯಮ್ಮಿ ಅವರು ಬಹುಜನ ಸುಖಾಯ ಬಹುಜನ ಹಿತಾಯ ಎಂಬಂತೆ ಎಲ್ಲ ವರ್ಗದ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಇಂದಿಗೂ ಒಡನಾಡುತ್ತಿದ್ದಾರೆ.
ಇಷ್ಟಾದರೂ ಇವರಿಗೆ
ಜಿಲ್ಲೆಯ ಕೆಲವು ಸಂಘ ಸಂಸ್ಥೆಗಳ ಸನ್ಮಾನ ಸಂಧಿದೆ ಹೊರತು ಸರ್ಕಾರದಿಂದಾಗಲಿ ಅಕಾಡೆಮಿಗಳಿಂದಾಗಲಿ ಯಾವುದೇ ಪ್ರಶಸ್ತಿ ಇವರನ್ನು ಅರಸಿಕೊಂಡು ಬಾರದೆ ಇರುವುದು ಬೇಸರದ ವಿಚಾರ
ಆದರೆ ಒಬ್ಬ ಸಾಹಿತಿಯ ನಿಜವಾದ ಪ್ರಶಸ್ತಿ ಕೇವಲ ವೇದಿಕೆಯ ಮೇಲೆ ದೊರೆಯುವ ಸನ್ಮಾನವಲ್ಲ
ಕೊಡಗು ತನ್ನ ಪ್ರಕೃತಿ ಸೌಂದರ್ಯಕ್ಕೆ ಮಾತ್ರ ಪ್ರಸಿದ್ಧವಾದ ನಾಡಲ್ಲ.
ಇದು ಸಾಹಿತ್ಯ ಕಲೆ ಸಂಸ್ಕೃತಿ ಭಾಷೆ ಮತ್ತು ಮಾನವೀಯ ಸಂಬಂಧಗಳ ಶ್ರೀಮಂತ ನೆಲ
ಈ ನೆಲದ ಅಕ್ಷರ ಪರಂಪರೆಯಲ್ಲಿ ಹಲವು ಪ್ರತಿಭೆಗಳು ತಮ್ಮದೇ ಆದ ಛಾಪು ಮೂಡಿಸಿದ್ದಾರೆ
ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಹಿರಿಯ ಅಕ್ಷರ ಸಾಧಕರ ಸಾಲಿನಲ್ಲಿ ಎಂ.ಇ . ಮಹಮ್ಮದ್ ಅವರದು ಹೆಮ್ಮೆಯಿಂದ ಮತ್ತು ಪ್ರೀತಿಯಿಂದ ನೆನಪಿಸಿಕೊಳ್ಳಬೇಕಾದ ಹೆಸರು ಅವರ ಬದುಕು ನಮಗೆ ಒಂದು ಸಂದೇಶ ನೀಡುತ್ತದೆ.
ಅಕ್ಷರವನ್ನು ಪ್ರೀತಿಸಿದರೆ ಅದು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.
ಭಾಷೆಯನ್ನು ಗೌರವಿಸಿದರೆ ಅದು ನಿಮ್ಮನ್ನು ತಲೆಮಾರುಗಳವರೆಗೆ ಕರೆದೊಯ್ಯುತ್ತದೆ.
ಸಾಹಿತ್ಯವನ್ನು ಬದುಕಾಗಿಸಿಕೊಂಡರೆ ಕಾಲವೂ ನಿಮ್ಮ ಹೆಸರನ್ನು ಅಳಿಸಲಾರದು.
ಅವರು ಕೇವಲ ಕವಿಯಲ್ಲ
ಭಾವನೆಗಳಿಗೆ ಭಾಷೆ ನೀಡಿದ ಸೂಕ್ಷ್ಮ ಮನಸ್ಸಿನ ಸಾಹಿತಿ*
ಒಂದು ಗೌರವದ ಮಾತು
ಮಡಿಕೇರಿಯ ಅಕ್ಷರ ಲೋಕದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬೆಳಗಿದ ಈ ಅಕ್ಷರದ ದೀಪ ಇನ್ನೂ ಅನೇಕ ತಲೆಮಾರುಗಳಿಗೆ ಬೆಳಕು ನೀಡುವಂತಾಗಲಿ
ಅವರ ಲೇಖನಿ ಇನ್ನಷ್ಟು ಶಕ್ತಿಯಾಗಲಿ.
ಅವರ ಸಾಹಿತ್ಯ ಇನ್ನಷ್ಟು ಹೃದಯಗಳನ್ನು ತಲುಪಲಿ.
ಅವರ ಅನುಭವ ಮುಂದಿನ ಪೀಳಿಗೆಗೆ. ಮಾರ್ಗದರ್ಶನವಾಗಲಿ.
ಅವರ ಬಹುಭಾಷಾ ಪ್ರತಿಭೆ ಇನ್ನಷ್ಟು ವಿಸ್ತಾರಗೊಳ್ಳಲಿ
ಆ ಮಾಸದ ಅಕ್ಷರಗಳಲ್ಲಿ ಒಂದು ಗೌರವ ಪೂರ್ಣವಾದ ಹೆಸರು
ಎಂ.ಇ . ಮಹಮ್ಮದ್ ಅವರ ಈ ಇಳಿವಯಸಿನಲ್ಲಾದರೂ ನಮ್ಮ ಸರ್ಕಾರ ಮತ್ತು ಅಕಾಡೆಮಿಗಳು ಇವರ ಬಹು ಭಾಷಾ ಸಾಹಿತ್ಯದ ಸಾಧನೆಯನ್ನು ಗುರುತಿಸಿ ಒಂದು ಪ್ರಶಸ್ತಿ ಕೊಡುವಂತಾದರೆ ಅವರ ಸಾಹಿತ್ಯ ಲೋಕದ ಸಾಧನೆಗೆ ಗೌರವಸಂದಂತಾಗಬಹುದು
✍️ ಎಂಎಂ ದಾವೂದ್
ಸಂಸ್ಥಾಪಕರು ಕೊಡಗು ಜನ ಅಭಿವೃದ್ಧಿ ಸಮಿತಿ
9945375180











