ವಿಜಯ ದರ್ಪಣ ನ್ಯೂಸ್…..
ಲಕ್ಷ್ಮಣತೀರ್ಥ ನದಿ: ಕೊಳಚೆ ನೀರು ಸೇರ್ಪಡೆ ತಡೆಗೆ 71 ಕೋಟಿ ಅನುದಾನ ಶಾಸಕ ಜಿ.ಡಿ. ಹರೀಶ್ಗೌಡ ಅವರ ಮನವಿಗೆ ಸಚಿವ ಡಾ ಎಸ್. ಯತೀಂದ್ರ ಸಿದ್ದರಾಮಯ್ಯ ಸ್ಪಂದನೆ

ತಾಂಡವಪುರ ಆಗಸ್ಟ್.13,
ಮೈಸೂರು ಜಿಲ್ಲೆ, ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಗರಸಭಾ ವ್ಯಾಪ್ತಿಯಲ್ಲಿನ ಹದಗೆಟ್ಟ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಲು 71 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಬೇಕೆಂದು ನಗರಾಭಿವೃದ್ಧಿ ಸಚಿವ ಡಾ ಎಸ್. ಯತೀಂದ್ರ ಸಿದ್ದರಾಮಯ್ಯ ಅವರ ಮೂಲಕ ಸರ್ಕಾರಕ್ಕೆ ಶಾಸಕ ಜಿ.ಡಿ. ಹರೀಶ್ ಗೌಡ ಅವರು ಮನವಿ ಮಾಡಿದರು.
ಈ ಸಂಬಂಧ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದ ಶಾಸಕ ಜಿ.ಡಿ. ಹರೀಶ್ ಗೌಡ ಅವರು, ಹುಣಸೂರು ನಗರವು ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದು, ಮೈಸೂರು ನಗರಕ್ಕೆ ಸಮೀಪದಲ್ಲಿರುವುದರಿಂದ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಪಟ್ಟಣದಲ್ಲಿ ಬಹುಮಹಡಿ ಕಟ್ಟಡಗಳು, ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಜನಸಾಂದ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಒಳಚರಂಡಿ ಕೊಳವೆ ಮಾರ್ಗಗಳ ಸಾಮರ್ಥ್ಯ ಸಾಲುತ್ತಿಲ್ಲ. ಹಲವು ಕಡೆಗಳಲ್ಲಿ ಕೊಳವೆ ಮಾರ್ಗಗಳು ಶಿಥಿಲಗೊಂಡಿದ್ದು, ಬಳಸಿದ ನೀರು ಸರಾಗವಾಗಿ ಹರಿಯದೆ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಕಲುಷಿತ ನೀರು ಹುಣಸೂರಿನ ಹೃದಯ ಭಾಗದಲ್ಲಿರುವ ಲಕ್ಷ್ಮಣ ತೀರ್ಥ ನದಿಗೆ ಸೇರುತ್ತಿದ್ದು, ನದಿ ಕಲುಷಿತವಾಗುತ್ತಿದೆ ಎಂದು ಸಮಸ್ಯೆಯನ್ನು ಮನವಿ ಪತ್ರದಲ್ಲಿ ವಿವರವಾಗಿ ತಿಳಿಸಿದರು
ನಗರದ ವಿವಿಧ ಪ್ರದೇಶಗಳ ಜನರು ಒಳಚರಂಡಿ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಹೊಸದಾಗಿ ಅಭಿವೃದ್ಧಿಯಾಗಿರುವ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕುರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆದಿದ್ದು, ವಿಸ್ತೃತ ಅಂದಾಜು ಪಟ್ಟಿ ಸಿದ್ಧಪಡಿಸಲು ಮಂಡಳಿಯ 307ನೇ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ಕಲುಷಿತ ನೀರು ಸುತ್ತಮುತ್ತಲಿನ ಕೆರೆಗಳು ಹಾಗೂ ರೈತರ ಕೃಷಿ ಜಮೀನುಗಳಿಗೆ ಹರಿಯುತ್ತಿರುವುದರಿಂದ ಜಲಚರಗಳು, ಜನರು ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು, ಪರಿಸರ ಮಾಲಿನ್ಯ ಕೂಡ ಹೆಚ್ಚುತ್ತಿದೆ ಎಂದು ತಿಳಿಸಿದ್ದರು.
ಈ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮೈಸೂರಿನ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಲಕ್ಷ್ಮಣತೀರ್ಥ ನದಿಗೆ ಸೇರ್ಪಡೆಯಾಗುವ ಕೊಳಚೆ ನೀರನ್ನು ತಡೆಗಟ್ಟುವ ಸಂಬಂಧ ಶಾಸಕರು ಚರ್ಚಿಸಿ, ಒಳಚರಂಡಿ ಅಭಿವೃದ್ಧಿಗಾಗಿ 71 ಕೋಟಿ ರೂ.ಗಳ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಹುಣಸೂರು ನಗರ ಸಭೆಯಲ್ಲೂ ಕೂಡ ಲಕ್ಷ್ಮಣತೀರ್ಥ ನದಿಗೆ ಸೇರ್ಪಡೆಯಾಗುವ ಕೊಳಚೆ ನೀರನ್ನು ತಡೆಗಟ್ಟುವ ಸಲುವಾಗಿ ಅನುದಾನ ಪಡೆಯುವ ಸಂಬಂಧ ಸರ್ಕಾರದ ಗಮನ ಸೆಳೆದು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು.
ಆದ್ದರಿಂದ ಹುಣಸೂರು ನಗರದ ಒಳಚರಂಡಿ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ₹71 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದ ಶಾಸಕ ಜಿ.ಡಿ. ಹರೀಶ್ಗೌಡ, ಈ ಸಂಬಂಧ ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಚರ್ಚಿಸಿ ಒಳಚರಂಡಿ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸಮಸ್ಯೆಯ ಗಂಭೀರತೆ ಅರಿತು ಸಕಾರಾತ್ಮಕವಾಗಿ ಸ್ಪಂದಿಸಿದ ನಗರ ಅಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ, ರವರು ಲಕ್ಷ್ಮಣತೀರ್ಥ ನದಿಗೆ ಸೇರ್ಪಡೆಯಾಗುವ ಕೊಳಚೆ ನೀರನ್ನು ತಡೆಗಟ್ಟುವ ಹಾಗೂ ಒಳಚರಂಡಿ ಅಭಿವೃದ್ಧಿಪಡಿಸುವ ಸಲುವಾಗಿ ಹುಣಸೂರು ನಗರಕ್ಕೆ 2ನೇ ಹಂತದ ಒಳಚರಂಡಿ ಯೋಜನೆಯ ಅಂದಾಜು ಪಟ್ಟಿಗೆ 71 ಕೋಟಿ ರೂ.ಗಳ ಅನುದಾವನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕವಾಗಿ ಅನುಮೋದನೆ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ ಶಾಸಕರು ಈ ಯೋಜನೆಗೆ ಅನುದಾನ ನೀಡಲು ಹೆಚ್ಚು ಒತ್ತು ನೀಡಿದ ಸಚಿವ ಡಾ ಯತೀಂದ್ರ ಸಿದ್ರಾಮಯ್ಯನವರನ್ನು ಅಭಿನಂದಿಸಿದರು











