ವಿಜಯ ದರ್ಪಣ ನ್ಯೂಸ್……
80ನೇ ಸ್ವಾತಂತ್ರ್ಯೋತ್ಸವ: ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ : ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ, ಆ.15: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಆದರ್ಶಗಳನ್ನು ಸ್ಮರಿಸಿಕೊಂಡು ಸೌಹಾರ್ದತೆ, ಸಹೋದರತ್ವ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳೊಂದಿಗೆ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕರೆ ನೀಡಿದರು.
ಮಂಡ್ಯದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 1947ರ ಆಗಸ್ಟ್ 15ರಂದು ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡಿತು. ಈ ಸ್ವಾತಂತ್ರ್ಯವು ಸುಲಭವಾಗಿ ದೊರೆತದ್ದಲ್ಲ. ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಸಾವಿರಾರು ದೇಶಪ್ರೇಮಿಗಳ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ. ಅಂತಹ ಮಹನೀಯರನ್ನು ಸದಾ ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಕೊಡುಗೆ
ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಗಂಗಾಧರ ರಾವ್ ದೇಶಪಾಂಡೆ, ಆರ್.ಆರ್. ದಿವಾಕರ್, ಎನ್.ಎಸ್. ಹರ್ಡೀಕರ್, ಆಲೂರು ವೆಂಕಟರಾಯರು, ಸದಾಶಿವರಾಯರು, ನಿಜಲಿಂಗಪ್ಪ ಸೇರಿದಂತೆ ಸಾವಿರಾರು ಕನ್ನಡಿಗರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಅವರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದು ಹೇಳಿದರು.
ಮಂಡ್ಯ ಜಿಲ್ಲೆಯೂ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಸಾಹುಕಾರ್ ಚನ್ನಯ್ಯ, ಟಿ. ಮರಿಯಪ್ಪ, ಮಳವಳ್ಳಿ ವೀರಪ್ಪ, ಕಾಂಗ್ರೆಸ್ ಸುಬ್ಬಯ್ಯ, ಎ.ಸಿ. ಭೈರಪ್ಪ, ಎ.ಜಿ. ಬಂದೀಗೌಡ, ಹೆಚ್.ಕೆ. ವೀರಣ್ಣಗೌಡ, ಇಂಡುವಾಳು ಹೊನ್ನಯ್ಯ ಸೇರಿದಂತೆ ಅನೇಕರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ತ್ಯಾಗವನ್ನು ಜಿಲ್ಲೆಯ ಜನತೆ ಸದಾ ಸ್ಮರಿಸಬೇಕು ಎಂದರು.
ಶಿವಪುರ ಧ್ವಜ ಸತ್ಯಾಗ್ರಹ ಮಂಡ್ಯದ ಹೆಮ್ಮೆ
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಶಿವಪುರದ ಧ್ವಜ ಸತ್ಯಾಗ್ರಹ ಅವಿಸ್ಮರಣೀಯ ಘಟನೆಯಾಗಿದೆ. ಇದರ ಸ್ಮರಣಾರ್ಥ ಶಿವಪುರದಲ್ಲಿ ನಿರ್ಮಿಸಿರುವ ಸತ್ಯಾಗ್ರಹ ಸೌಧ ಮಂಡ್ಯ ಜಿಲ್ಲೆಯ ಹೆಮ್ಮೆಯ ಸ್ಮಾರಕವಾಗಿದೆ. ಸೌಧದ ಸಮರ್ಪಕ ನಿರ್ವಹಣೆಗಾಗಿ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಸರ್ಕಾರದಿಂದ ಈಗಾಗಲೇ ₹2 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ
ರಾಜ್ಯದ ಜನರ ಬೆಂಬಲದೊಂದಿಗೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಜನಸಾಮಾನ್ಯರು, ಹಿಂದುಳಿದ ವರ್ಗಗಳು, ರೈತರು, ಮಹಿಳೆಯರು ಹಾಗೂ ಯುವಕರ ಆಶಯಗಳನ್ನು ಈಡೇರಿಸುವ ಉದ್ದೇಶದಿಂದ ಆರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಶಕ್ತಿ ಯೋಜನೆ: ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಶಕ್ತಿ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಮಹಿಳೆಯರಿಗೆ 22.93 ಕೋಟಿ ಉಚಿತ ಟಿಕೆಟ್‌ಗಳನ್ನು ನೀಡಲಾಗಿದ್ದು, ₹642 ಕೋಟಿ ವೆಚ್ಚ ಭರಿಸಲಾಗಿದೆ.
ಅನ್ನಭಾಗ್ಯ: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಹಾಗೂ ಇತರ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 4,33,572 ಫಲಾನುಭವಿಗಳಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ.
ಗೃಹಜ್ಯೋತಿ: ಜಿಲ್ಲೆಯಲ್ಲಿ 5,02,889 ಗ್ರಾಹಕರು ನೋಂದಾಯಿಸಿಕೊಂಡಿದ್ದು, ಡಿಸೆಂಬರ್ ಅಂತ್ಯದವರೆಗೆ ಉಚಿತ ವಿದ್ಯುತ್ ಒದಗಿಸಲು ₹636 ಕೋಟಿ ಪಾವತಿಸಲಾಗಿದೆ.
ಗೃಹಲಕ್ಷ್ಮಿ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಯೋಜನೆಯಡಿ ಜಿಲ್ಲೆಯಲ್ಲಿ 4,36,258 ಮಹಿಳೆಯರಿಗೆ ತಲಾ ₹2,000ರಂತೆ ಒಟ್ಟು ₹2,761 ಕೋಟಿ ಪಾವತಿಸಲಾಗಿದೆ.
ಯುವನಿಧಿ: ಜಿಲ್ಲೆಯಲ್ಲಿ 10,562 ಅಭ್ಯರ್ಥಿಗಳಿಗೆ ₹28.23 ಕೋಟಿ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಮಳೆ ಕೊರತೆ: ಪರ್ಯಾಯ ಬೆಳೆಗಳತ್ತ ರೈತರು ಗಮನಹರಿಸಿ
ಪ್ರಸಕ್ತ ಮುಂಗಾರು ನಿರೀಕ್ಷೆಯಂತೆ ಆಶಾದಾಯಕವಾಗಿಲ್ಲ. ವಾಡಿಕೆಯ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಬರ ಪರಿಸ್ಥಿತಿಯನ್ನು ಅವಲೋಕಿಸಲು ಸರ್ಕಾರ ತಂಡ ರಚಿಸಿದ್ದು, ಮಾರ್ಗಸೂಚಿಯಂತೆ ಬರ ಘೋಷಣೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೆ.ಆರ್.ಎಸ್. ಅಣೆಕಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಕಳೆದ 20 ದಿನಗಳಿಂದ ಒಳಹರಿವು ಸ್ವಲ್ಪ ಹೆಚ್ಚಾಗಿದ್ದರೂ, ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತು ಮಳೆಯ ಪ್ರಮಾಣವನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂಗಾರಿನ ಅಂತ್ಯದವರೆಗೆ ನಿರೀಕ್ಷಿತ ಮಳೆಯಾಗದೆ ಕೆ.ಆರ್.ಎಸ್. ನೀರಿನ ಮಟ್ಟ ಹೆಚ್ಚಳವಾಗದಿದ್ದರೆ, ಕಡಿಮೆ ನೀರು ಬಳಸಿ ಬೆಳೆಯಬಹುದಾದ ಪರ್ಯಾಯ ಬೆಳೆಗಳತ್ತ ರೈತರು ಗಮನಹರಿಸಬೇಕು ಎಂದು ಮನವಿ ಮಾಡಿದರು.
ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಸಮನ್ವಯದಲ್ಲಿ ಪರ್ಯಾಯ ಬೆಳೆಗಳ ಕುರಿತು ಕ್ರಿಯಾಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳನ್ನು ಆಧುನೀಕರಿಸುವ ಉದ್ದೇಶದಿಂದ ಪ್ರತಿ ಕೇಂದ್ರಕ್ಕೆ ₹2 ಕೋಟಿಯಂತೆ ಒಟ್ಟು 13 ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ₹26 ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ 63,877 ರೈತರು ನೋಂದಾಯಿಸಿಕೊಂಡಿದ್ದು, ಬೆಳೆ ಪರಿಸ್ಥಿತಿ ಉತ್ತಮವಾಗಿಲ್ಲದ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಪಾಂಡವಪುರ ಸಂಪೂರ್ಣ ಸಾವಯವ ತಾಲ್ಲೂಕು
2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
₹325 ಕೋಟಿ ಮೂಲಸೌಕರ್ಯ ಅಭಿವೃದ್ಧಿಗೆ
ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಡ್ಯ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ತಲಾ ₹50 ಕೋಟಿಯಂತೆ ಒಟ್ಟು ₹325 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ಜನರಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯಗಳು ಲಭ್ಯವಾಗಲಿವೆ ಎಂದರು.
ಮೈಶುಗರ್‌ಗೆ ₹60 ಕೋಟಿ: ಐತಿಹಾಸಿಕ ಕಾರ್ಖಾನೆಗೆ ಮರುಜೀವ
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಏಷ್ಯಾದ ಅತ್ಯಂತ ಹಳೆಯ ಸರ್ಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದ್ದು, ಹಲವು ದಶಕಗಳಿಂದ ಸಕ್ಕರೆ ನಗರಿ ಮಂಡ್ಯ ಹಾಗೂ ಸುತ್ತಮುತ್ತಲಿನ ಲಕ್ಷಾಂತರ ರೈತರ ಬದುಕಿಗೆ ಆಧಾರವಾಗಿದೆ.
ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಲು ಮತ್ತು ಅದರ ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ಹಳೆಯ ಬಾಯ್ಲಿಂಗ್ ಹೌಸ್ ಉನ್ನತೀಕರಣಕ್ಕೆ ₹60 ಕೋಟಿ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಐತಿಹಾಸಿಕ ಮೈಶುಗರ್ ಕಾರ್ಖಾನೆಗೆ ಮರುಜೀವ ದೊರೆಯಲಿದೆ ಎಂದು ಹೇಳಿದರು.
ಕಾವೇರಿ ನೀರಾವರಿ ನಿಗಮದ ವತಿಯಿಂದ ವಿವಿಧ ತಾಲ್ಲೂಕುಗಳಲ್ಲಿ ವಿತರಣಾ ನಾಲೆ, ಪಿಕಪ್ ನಾಲೆ, ತೂಬಿನ ನಾಲೆ, ರಸ್ತೆ ಅಭಿವೃದ್ಧಿ ಹಾಗೂ ರಕ್ಷಣಾತ್ಮಕ ಗೋಡೆಗಳ ನಿರ್ಮಾಣಕ್ಕೆ ₹760 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಹೇಮಾವತಿ ನಾಲಾ ವೃತ್ತ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಏತ ನೀರಾವರಿ ಮತ್ತು ನಾಲಾ ಆಧುನೀಕರಣ ಕಾಮಗಾರಿಗಳಿಗೆ ₹608 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.
ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಸ್ಪಂದನೆ
ಆಡಳಿತದಲ್ಲಿ ದಕ್ಷತೆ ಹೆಚ್ಚಿಸಿ ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ‘ಪ್ರಜಾಸೇವಾ ಇಲಾಖೆ’ ಸ್ಥಾಪಿಸಲಾಗಿದೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅಹವಾಲು ಆಲಿಸುವ ದೃಷ್ಟಿಯಿಂದ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರತಿ ಶನಿವಾರ ‘ಪ್ರಜಾಸೇವಾ ಆಂದೋಲನ ಸಭೆ’ಗಳನ್ನು ಆಯೋಜಿಸಲಾಗುವುದು ಎಂದರು.
ಕಂದಾಯ ಇಲಾಖೆಯ ದರಖಾಸ್ತು ಪೋಡಿ, ಭೂ ಸುರಕ್ಷಾ ಯೋಜನೆ, ಪೌತಿ ಖಾತೆ, ಲ್ಯಾಂಡ್ ಬೀಟ್ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ. ಕಳೆದ ಮೂರುವರೆ ವರ್ಷಗಳಲ್ಲಿ 26 ಸಾವಿರ ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 18 ಲಕ್ಷ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಕಂದಾಯ ಗ್ರಾಮಗಳಾಗಿ ಅಸ್ತಿತ್ವದಲ್ಲಿರದ 161 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ದರಖಾಸ್ತು ಪೋಡಿ ಆಂದೋಲನದಡಿ 1,500 ರೈತರ ಜಮೀನುಗಳ ಪೋಡಿ ಮಾಡಲಾಗಿದೆ. ಭೂ ಸುರಕ್ಷಾ ಯೋಜನೆಯಡಿ 3.50 ಕೋಟಿ ಪುಟಗಳ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಪೌತಿ ಖಾತೆ ಆಂದೋಲನದಡಿ 1.65 ಲಕ್ಷ ಪೌತಿ ಖಾತೆಗಳನ್ನು ಮಾಡಲಾಗಿದ್ದು, ಈ ಸಾಧನೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದರು.
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
ಬಡವರು ಹಾಗೂ ಗ್ರಾಮೀಣ ಜನರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಪರೀಕ್ಷೆ ಒದಗಿಸಲು ಮಿಮ್ಸ್‌ನಲ್ಲಿರುವ ಪ್ರಯೋಗಾಲಯಗಳನ್ನು ಉನ್ನತೀಕರಿಸಿ ಐಪಿಎಚ್‌ಎಲ್ ಲ್ಯಾಬ್‌ಗಳಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ₹95.50 ಲಕ್ಷ ವೆಚ್ಚ ಮಾಡಲಾಗುತ್ತಿದೆ.
ತೀವ್ರ ಆರೋಗ್ಯ ಬಿಕ್ಕಟ್ಟಿನಲ್ಲಿರುವ ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ಮಿಮ್ಸ್‌ನಲ್ಲಿ ₹16.63 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಲೋಕೋಪಯೋಗಿ ಕಾಮಗಾರಿಗಳಿಗೆ ₹887 ಕೋಟಿ
ಲೋಕೋಪಯೋಗಿ ಇಲಾಖೆಯಿಂದ ಈ ವರ್ಷ ₹887 ಕೋಟಿ ವೆಚ್ಚದಲ್ಲಿ 28 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಪಾಂಡವಪುರ–ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹709 ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಸೇವೆಯಲ್ಲಿದ್ದಾಗಲೇ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರ ಕುಟುಂಬದ 10 ಅವಲಂಬಿತರಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದರು.
ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಒತ್ತು
ಕೆ.ಆರ್.ಪೇಟೆ, ಪಾಂಡವಪುರ ಮತ್ತು ಮಳವಳ್ಳಿ ತಾಲ್ಲೂಕುಗಳಲ್ಲಿ ₹258.37 ಲಕ್ಷ ವೆಚ್ಚದಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗಿದೆ. ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳಲ್ಲಿ ₹64 ಲಕ್ಷ ವೆಚ್ಚದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಉತ್ತೇಜನ
ಜಿಲ್ಲೆಯಲ್ಲಿ 13,242 ಸ್ವಸಹಾಯ ಸಂಘಗಳಲ್ಲಿ 1,41,602 ಮಹಿಳಾ ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಕಳೆದ ಸಾಲಿನಲ್ಲಿ 509 ಸ್ವಸಹಾಯ ಗುಂಪುಗಳಿಗೆ ₹7.64 ಕೋಟಿ ಸಮುದಾಯ ಬಂಡವಾಳ ನಿಧಿ ಒದಗಿಸಿ ಜೀವನೋಪಾಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗಿದೆ.
ಮಹಿಳೆಯರೇ ನಿರ್ವಹಿಸುವ ‘ಅಕ್ಕ ಕೆಫೆ’ ಯೋಜನೆಗೆ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಉಳಿದ ತಾಲ್ಲೂಕುಗಳಲ್ಲಿಯೂ ಅಕ್ಕ ಕೆಫೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 2,733 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದು, 1,220 ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕುಡಿಯುವ ನೀರಿಗೆ ಆದ್ಯತೆ
ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಶುದ್ಧ ಹಾಗೂ ಸುರಕ್ಷಿತ ನೀರು ಒದಗಿಸಲು ₹1,545.38 ಕೋಟಿ ಅಂದಾಜಿಸಲಾಗಿದೆ. ಕಾವೇರಿ ನದಿಯಿಂದ ಗ್ರಾಮಗಳಿಗೆ ನೀರು ಪೂರೈಸಲು ಆರು ಬೃಹತ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ₹1,628.19 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು
ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ಹಾಗೂ ಸಹಜ ಹೆರಿಗೆಗಳನ್ನು ಉತ್ತೇಜಿಸಲು ಮಿಮ್ಸ್ ಆವರಣದಲ್ಲಿ ₹49.68 ಲಕ್ಷ ವೆಚ್ಚದಲ್ಲಿ ‘ಶಿಶು ಸಂಜೀವಿನಿ’ ಕೇಂದ್ರ ಹಾಗೂ ಎಂಎಲ್‌ಸಿಯು ಘಟಕಗಳನ್ನು ನಿರ್ಮಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗಿದೆ.
ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಜಿಲ್ಲೆಯ 483 ಕೇಂದ್ರಗಳಲ್ಲಿ ಏಪ್ರಿಲ್‌ನಲ್ಲಿ ನಾಲ್ಕು ವಾರಗಳ ‘ಅಕ್ಕರೆಯ ಅಂಗಳ’ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದಾಖಲೆಗಳ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಸುಲಭವಾಗಿ ಲಭ್ಯವಾಗುವಂತೆ ವಿನೂತನ ಅಭಿಲೇಖಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ಮದ್ದೂರು ತಾಲ್ಲೂಕಿನ ಭಾರತೀನಗರ ಗ್ರಾಮ ಪಂಚಾಯಿತಿ ವಿಭಾಗ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರದಲ್ಲಿ ಮೈಸೂರು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮಹಿಳೆಯರಲ್ಲಿ ಋತುಸ್ರಾವದ ಸ್ವಚ್ಛತೆ ಹಾಗೂ ಮುಟ್ಟಿನ ಕಪ್ ಬಳಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮುಟ್ಟಿನ ಕಪ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ವಿದ್ಯುತ್ ಪ್ರಸರಣ ವ್ಯವಸ್ಥೆ ಬಲಪಡಿಸಲು ಕ್ರಮ
ಮಂಡ್ಯ ತಾಲ್ಲೂಕಿನ ಹಂಪಾಪುರದಲ್ಲಿ 400 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಮಳವಳ್ಳಿ ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ 400 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ 71 ಎಕರೆ ಜಾಗ ಗುರುತಿಸಲಾಗಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲೆ
ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಾಗಮಂಗಲ, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೇಲುಕೋಟೆ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರಮಿಕ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಜಾಗ ಗುರುತಿಸಲಾಗಿದ್ದು, ₹33 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಿಎಸ್‌ಆರ್ ಅನುದಾನದಡಿ ಕೆಪಿಎಸ್ ಮಾದರಿ ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮಂಡ್ಯ ಜಿಲ್ಲೆಗೆ 9 ವಸತಿ ಶಾಲೆಗಳು ಹಾಗೂ 11 ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಯೇ ಸರ್ಕಾರದ ಯಶಸ್ಸಿನ ಕೈಗನ್ನಡಿ
ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಪರಿಶ್ರಮದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಹಾಗೂ ಪಿಯುಸಿಯಲ್ಲಿ 12ನೇ ಸ್ಥಾನ ಗಳಿಸಿದ್ದು, ಮುಂದಿನ ವರ್ಷ ಇನ್ನಷ್ಟು ಉತ್ತಮ ಸಾಧನೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇ ಸರ್ಕಾರದ ಯಶಸ್ಸಿನ ಕೈಗನ್ನಡಿಯಾಗಿವೆ. ಕಣ್ಣಿಗೆ ಕಾಣುವ ಅಭಿವೃದ್ಧಿಯೇ ಸರ್ಕಾರಕ್ಕೆ ಶ್ರೀರಕ್ಷೆ. “ಅಭಿವೃದ್ಧಿಯೇ ನಮ್ಮ ಮಾತಾಗಬೇಕು” ಎಂಬ ಆಶಯದೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಯುವಶಕ್ತಿಯಿಂದ ವಿಕಸಿತ ಭಾರತದ ನಿರ್ಮಾಣ
ಕಳೆದ ಎಂಟು ದಶಕಗಳಲ್ಲಿ ಭಾರತ ವಿಜ್ಞಾನ, ತಂತ್ರಜ್ಞಾನ, ಕೃಷಿ, ಶಿಕ್ಷಣ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸುವತ್ತ ದೇಶ ವೇಗವಾಗಿ ಸಾಗುತ್ತಿದೆ. ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು, ಯುವಕರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.
ಪ್ರಕೃತಿ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ, ಹಸಿರು ಪರಿಸರ ನಿರ್ಮಾಣ, ಸಾಮಾಜಿಕ ಸಾಮರಸ್ಯ, ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ದೇಶದ ಪ್ರಗತಿಗಾಗಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು. ಸರ್ವರ ಒಳಿತಿಗಾಗಿ ಸರ್ಕಾರ ಬದ್ಧವಾಗಿದ್ದು, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಧನಲಕ್ಷ್ಮಿ ಚಲುವರಾಸ್ವಾಮಿ, ಶಾಸಕರಾದ ರವಿಕುಮಾರ್ ಗಣಿಗ,ದಿನೇಶ್ ಗೂಳಿಗೌಡ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ ಕುಮಾರ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಆರ್. ನಂದಿನಿ,ಪೋಲೀಸ್ ವರಿಷ್ಠಾಧಿಕಾರಿ ಶೋಭರಾಣಿ,ಅಪಾರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ,ಮೂಡಾ ಅಧ್ಯಕ್ಷ ಬಿ ಪಿ ಪ್ರಕಾಶ್,ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು







