ವಿಜಯ ದರ್ಪಣ ನ್ಯೂಸ್……
ಶೃಂಗೇರಿಯಲ್ಲಿ ಆರೂಢಭಾರತೀ ಶ್ರೀಗಳಿಗೆ ತಡೆ

ಶೃಂಗೇರಿಯ ಶ್ರೀಗಳ ಭೇಟಿಗೆ ಆಗಮಿಸಿದ ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿಯವರ ಪ್ರವೇಶ ತಡೆದ ಪ್ರಸಂಗ ನಡೆದಿದೆ.
ನಿನ್ನೆ ಶುಕ್ರವಾರ ಸಂಜೆ ಈ ಘಟನೆ ಜರುಗಿದೆ. ಮಠದ ಸಂಪ್ರದಾಯದಂತೆ ಅಂಗಿಯನ್ನು ಕಳಚುವಂತೆ ಕಾವಲುಗಾರ ಸ್ವಾಮೀಜಿಯವರಿಗೆ ಒರಟಾಗಿ ಹೇಳಿದ್ದಾನೆ. ಸ್ವಾಮೀಜಿ ಒಪ್ಪದಿದ್ದಾಗ ಪ್ರವೇಶ ತಡೆದಿದ್ದಾನೆ. ಆಗ ಒಳಗಡೆ ಕೆಲಸಗಾರ ಅಂಗಿಯನ್ನು ಧರಿಸಿಯೇ ಕೆಲಸ ಮಾಡುತ್ತಿರುವುದು ಸ್ವಾಮೀಜಿಯ ಕಣ್ಣಿಗೆ ಬಿದ್ದಿದೆ.
ಅದನ್ನು ಕಾವಲುಗಾರನಿಗೆ ತೋರಿಸಿ ಆತನ ಅಂಗಿ ಬಿಚ್ಚಿಸು ಎಂದಿದ್ದಾರೆ. ಆದರೆ ಕಾವಲುಗಾರ ಆತ ಕೆಲಸಗಾರ ಎಂದಿದ್ದಾನೆ. ಅಷ್ಟರಲ್ಲಿ ಇಬ್ಬರು ಸಫಾರಿ ವೇಶದಲ್ಲಿ ಒಳಹೋದುದನ್ನು ಸ್ವಾಮೀಜಿ ಪ್ರಶ್ನಿಸಿದ್ದಾರೆ. ಅವರು ಶ್ರೀಗಳ ಅಂಗರಕ್ಷಕರು ಎಂದು ಕಾವಲುಗಾರ ವಾದಿಸಿದ್ದಾನೆ. ಕಾವಲುಗಾರನೂ ಖಾಕಿ ಅಂಗಿ – ಪ್ಯಾಂಟ್ ನಲ್ಲಿದ್ದ. ಮಠದ ಕೆಲಸಗಾರನಿಗೆ ಅಂಗರಕ್ಷಕರಿಗೆ ಕಾವಲುಗಾರನಿಗೆ ಇಲ್ಲದ ಸಾಂಪ್ರದಾಯಿಕ ವಸ್ತ್ರಸಂಹಿತೆ ಸಾಂಪ್ರದಾಯಿಕ ಖಾವೀಧಾರಿ ಸಂನ್ಯಾಸಿಗೇಕೆ ಎಂದು ಸ್ವಾಮೀಜಿ ಆಕ್ಷೇಪಿಸಿದ್ದಾರೆ.
ಇಷ್ಟೆಲ್ಲ ನಡೆಯುತ್ತಿದ್ದರೂ ಅಲ್ಲಿದ್ದ ನೂರಾರು ಜನ ಮೂಕಪ್ರೇಕ್ಷಕರಾಗಿದ್ದರು. ವಾದ ತೀವ್ರಗೊಳ್ಳುವುದನ್ನು ಗಮನಿಸಿದ ಅಂಗರಕ್ಷಕರು ಧಾವಿಸಿ ಸ್ವಾಮೀಜಿಯವರಲ್ಲಿ ಕ್ಷಮೆ ಕೋರಿ ಪ್ರವೇಶ ನೀಡಲು ಮುಂದಾದರು. ಆದರೆ ಲಿಂಗಾಯತನಾಗಿ ಹುಟ್ಟಿದ, ಸಂಸ್ಕೃತ ಪ್ರಾಧ್ಯಾಪಕನಾಗಿರುವ ಒಬ್ಬ ಸನ್ಯಾಸಿಗೇ ಎಲ್ಲಾ ಸಮಾನವೆಂಬ ಅದ್ವೈತದ ಕ್ಷೇತ್ರದಲ್ಲಿಯೇ ಹೀಗಾದರೆ ಅನ್ಯರ ಪಾಡೇನು ಎಂದು ಬೇಸರ ವ್ಯಕ್ತಪಡಿಸಿ ಗುರುಗಳ ಭೇಟಿ ಮಾಡದೇ ಸ್ವಾಮೀಜಿ ಹೊರನಡೆದರು.









