ವಿಜಯ ದರ್ಪಣ ನ್ಯೂಸ್……….
ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸೇವೆಗೆ ಸಂದ ಮನ್ನಣೆ; ಗ್ರಾಮೀಣ
ಪ್ರತಿಭೆ ಡಾ.ಸಿಸಿರಾ ಅವರಿಗೆ ಕನ್ನಡ ಕಣ್ಮಣಿ ರಾಜ್ಯಮಟ್ಟದ ಪ್ರಶಸ್ತಿಯ ಗೌರವ

ಬೆಂಗಳೂರು : ಗ್ರಾಮೀಣ ಬದುಕಿನ ಸೊಗಡು, ಕನ್ನಡ ಭಾಷೆಯ ಶ್ರೀಮಂತಿಕೆ ಹಾಗೂ ನಾಡಿನ ಸಂಸ್ಕೃತಿಯನ್ನು ತಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯ ಮೂಲಕ ಪಸರಿಸುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಿದ್ದನಹಳ್ಳಿಯ ಸಾಹಿತಿ, ಕನ್ನಡ ಸಾಂಸ್ಕೃತಿಕ, ಸಾಹಿತ್ಯಿಕ ಪರಿಚಾರಕ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಡಾ. ಎಸ್. ರಾಮಲಿಂಗೇಶ್ವರ (ಡಾ.ಸಿಸಿರಾ) ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿದೆ.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಅವರಿಗೆ ಪ್ರತಿಷ್ಠಿತ ‘ಕನ್ನಡ ಕಣ್ಮಣಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಮಾಜಿ ಉಪಮುಖ್ಯಮಂತ್ರಿ ಮಲ್ಲೇಶ್ವರಂ ವಿಧಾನಸಭಾ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಕರ್ನಾಟಕ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಚಿ.ನಾ. ರಾಮು ಅವರು ಪ್ರಶಸ್ತಿ ಪ್ರದಾನ ಮಾಡಿ ಡಾ. ಎಸ್.ರಾಮಲಿಂಗೇಶ್ವರ ಅವರ ಕನ್ನಡಪರ ಸೇವೆಯನ್ನು ಶ್ಲಾಘಿಸಿದರು.
ಗ್ರಾಮೀಣ ಪರಿಸರದಲ್ಲಿ ಬೆಳೆದು, ಅಲ್ಲಿನ ಜನಜೀವನ, ಆಚಾರ-ವಿಚಾರ, ಸಂಸ್ಕೃತಿ ಹಾಗೂ ಮಣ್ಣಿನ ಸೊಗಡನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಪಡಿಸುತ್ತಿರುವ ಡಾ. ರಾಮಲಿಂಗೇಶ್ವರ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಉಪನ್ಯಾಸಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ವಿಶೇಷವಾಗಿ ಗ್ರಾಮೀಣ ಸೊಗಡಿನ ಸಾಹಿತ್ಯದ ಮೂಲಕ ಕನ್ನಡದ ನೆಲಮೂಲದ ಬದುಕು, ಜನರ ಭಾವನೆಗಳು ಹಾಗೂ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ಅವರ ಕಾರ್ಯಕ್ಕೆ ಈ ಪ್ರಶಸ್ತಿ ಮತ್ತಷ್ಟು ಮೆರುಗು ತಂದಿದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಗೌರವಗಳು ಮಹತ್ವದ್ದಾಗಿದ್ದು, ಸಿದ್ದನಹಳ್ಳಿಯ ಸಾಹಿತ್ಯ ಪ್ರತಿಭೆಗೆ ದೊರೆತಿರುವ ಈ ಮನ್ನಣೆ ಚನ್ನಪಟ್ಟಣ ತಾಲೂಕಿಗೂ ಹೆಮ್ಮೆಯ ಸಂಗತಿಯಾಗಿದೆ.
ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ಚಿತ್ರ ನಿರ್ಮಾಪಕ ಉಮೇಶ್ ಬಣಕಾರ್, ಹೋರಾಟಗಾರರಾದ ಬಸವರಾಜ ಪಡುಕೋಟೆ, ಪ್ರಶಾಂತ್, ಚಿತ್ರನಟರಾದ ಗಣೇಶ್ ಕೇಸರಕರ್ ಹಾಗೂ ಅದ್ಭತ್, ಸಂಘಟನೆಯ ನಗರಾಧ್ಯಕ್ಷ ಕನ್ನಡ ಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ತಾಲೂಕು, ಜಿಲ್ಲೆಯಲ್ಲಿ ಸಂತಸ: ಚನ್ನಪಟ್ಟಣದ ಗ್ರಾಮೀಣ ನೆಲದಿಂದ ಹೊರಹೊಮ್ಮಿ ಕನ್ನಡದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿರುವ ಡಾ. ಎಸ್.ರಾಮಲಿಂಗೇಶ್ವರ ಅವರಿಗೆ ದೊರೆತಿರುವ ಈ ಗೌರವ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಚನ್ನಪಟ್ಟಣ ತಾಲೂಕು , ಬೆಂಗಳೂರು ದಕ್ಷಿಣ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಜನರಲ್ಲಿ ಸಂತಸ ಮೂಡಿಸಿದೆ.











