ಮದ್ಯದ ಬೆಲೆ ಏರಿಸಬೇಡಿ ಅಂದ್ರೂ ಏರಿಸಿದ್ದ ಸರ್ಕಾರ: ಸರ್ಕಾರಕ್ಕೆ ಮುಟ್ಟಿ ನೋಡ್ಕೊಳ್ಳೊ ಶಾಕ್ ನೀಡಿದ ಮದ್ಯಪ್ರಿಯರು !!!

ವಿಜಯ ದರ್ಪಣ ನ್ಯೂಸ್

ಬೆಂಗಳೂರು. ಆಗಸ್ಟ್ 21

ಇತ್ತೀಚೆಗೆ ಮದ್ಯದ ದರ ಭಾರೀ ಏರಿಕೆಯಾಗಿದ್ದು, ಮದ್ಯಪ್ರಿಯರಿಗೆ ಭಾರೀ ಆಘಾತವೇ ಉಂಟಾಗಿದೆ. ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಇದೀಗ ಜನರೇ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಹೌದು, ಮದ್ಯದ ಬೆಲೆ ಹೆಚ್ಚಳ ಹಿನ್ನೆಲೆ, ರಾಜ್ಯ ಸರಕಾರಕ್ಕೆ ಜನತೆ ಶಾಕ್‌ ನೀಡಿದೆ. ಮದ್ಯ ಮಾರಾಟದ ದರ ಏರಿಕೆ ಮಾಡಿದ ಬೆನ್ನಲ್ಲೇ ಮದ್ಯ ಖರೀದಿ ಪ್ರಮಾಣ ಭಾರಿ ಪ್ರಮಾಣದಲ್ಲಿ ತಗ್ಗಿದೆ.


ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ನಲ್ಲಿ ಮದ್ಯದ ಮೇಲಿನ ತೆರಿಗೆ ಹೆಚ್ಚಳವಾಗಲಿದೆ ಎನ್ನುವ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಿದ ಸುದ್ದಿ ಎಲ್ಲರಿಗೂ ತಿಳಿದೇ ಇದೆ. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಶೇ. 20 ರಷ್ಟು ದರ ಹೆಚ್ಚಳ ಮಾಡಲಾಗಿತ್ತು.

ಇದೀಗ ಮದ್ಯಪ್ರಿಯರು ರಾಜ್ಯ ಸರಕಾರಕ್ಕೆ ಶಾಕ್‌ ಕೊಟ್ಟಿದ್ದಾರೆ. ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣದಲ್ಲಿ ಭಾರಿ ಇಳಿಮುಖವಾಗಿದೆ. ಭಾರತೀಯ ಮದ್ಯ ಮಾರಾಟ (IML) ಪ್ರಮಾಣ ಶೇ.15 ರಷ್ಟು ಕುಸಿತವಾಗಿದೆ. ಒಟ್ಟಾರೆ ಕರ್ನಾಟಕ ಪಾನೀಯ ನಿಗಮಕ್ಕೆ ಲಿಕ್ಕರ್ ಗೆ ಸಲ್ಲಿಸುವ ಖರೀದಿ ಬೇಡಿಕೆಯೂ ಇಳಿಕೆಯಾಗಿದೆ.

ರಾಜ್ಯದಲ್ಲಿ ಮದ್ಯದ ದರ ಏರಿಕೆಯಾದ ಬೆನ್ನಲ್ಲಿಯೇ ದುಬಾರಿ ಬೆಲೆಯ ಬ್ರ್ಯಾಂಡ್‌ಗಳಿಂದ ಕಡಿಮೆ ಬೆಲೆಯ ಬ್ರ್ಯಾಂಡ್‌ ಸೇವನೆಗೆ ಜನರು ಮುಂದಾಗಿದ್ದಾರೆ. ಇದರಿಂದ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರ್ತಿತ್ತು. ಆದರೆ, ಈಗ ಈ ಆಗಸ್ಟ್ ನಲ್ಲಿ 20 ದಿನಗಳು ಕಳೆದರೂ ಕೇವಲ 962 ಕೋಟಿ ಮಾತ್ರ ಸಂಗ್ರಹವಾಗಿದೆ.

2023ರ ಆರ್ಥಿಕ ವರ್ಷದಲ್ಲಿ ತಿಂಗಳವಾರು ಮದ್ಯ ಮಾರಾಟದಿಂದ ಬಂದ ಆದಾಯ ವಿವರ:

• ಏಪ್ರಿಲ್-2,308 ಕೋಟಿ ರೂ.
• ಮೇ-2,607 ಕೋಟಿ ರೂ.
• ಜೂನ್ -3,549 ಕೋಟಿ ರೂ.
• ಜುಲೈ-2,980 ಕೋಟಿ ರೂ.
• ಆ.18ರವರೆಗೆ 962 ಕೋಟಿ ರೂ.

ವರ್ಷವಾರು ಮದ್ಯ ಮಾರಾಟದ ವಿವರ:

ಕಳೆದ ವರ್ಷ 2022 ಆಗಸ್ಟ್ ವೇಳೆಗೆ 25.50 ಲಕ್ಷ ಬಾಕ್ಸ್ ಸ್ವದೇಶಿ ಬ್ರ್ಯಾಂಡ್ ಮಾರಾಟವಾಗಿದೆ. ಹಾಗೂ ಬಿಯರ್-10.34 ಲಕ್ಷ ಬಾಕ್ಸ್ ಮಾರಾಟವಾಗಿದೆ. ಈ ವರ್ಷ 2023 ಆಗಸ್ಟ್ 19ರವರೆಗೆ 21.87 ಲಕ್ಷ ಬಾಕ್ಸ್ ದೇಶಿ ಬ್ರ್ಯಾಂಡ್, ಬಿಯರ್-12.52 ಲಕ್ಷಬಾಕ್ಸ್ ಮಾರಾಟವಾಗಿದೆ.

ಈ ಹಿಂದೆ ಮದ್ಯಪ್ರಿಯರಿಂದ ಕರಾವಳಿಯಲ್ಲೊಂದು ಹೋರಾಟ ನಡೆದಿದೆ. ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದಿದ್ದಾರೆ. ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ‌ನೀಡುವಂತೆ ಒತ್ತಾಯಿಸಿದ್ದಾರೆ.

ಅಲ್ಲದೆ ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ನೀಡುವುದು ಮದ್ಯಪ್ರಿಯರ ಸುಂಕದಿಂದ. ಇದರಿಂದಾಗಿ ಉಚಿತ ಯೋಜನೆ ಜಾರಿಗೆ ಅನುಕೂಲವಾಗಿದೆ. ಇಷ್ಟೆಲ್ಲಾ ಸರಕಾರಕ್ಕೆ ಲಾಭವಾಗಿರುವ ಮಧ್ಯಪ್ರಿಯರಿಗೆ ಸರಕಾರ ಬಜೆಟ್ ನಲ್ಲಿ ಬೆಲೆ ಏರಿಕೆ ಮಾಡಿ ಅನ್ಯಾಯ ಮಾಡಿದೆ. ಒಂದೇ ಉಚಿತ ನೀಡಿ, ಇಲ್ಲವೇ ಮದ್ಯ ಬಂದ್ ಮಾಡಿ ಎಂದು ಮದ್ಯಪ್ರಿಯರು ಸರಕಾರವನ್ನು ‌ಒತ್ತಾಯಿಸಿದರು. ಇದೀಗ ಮದ್ಯಪ್ರಿಯರು ಸರ್ಕಾರಕ್ಕೇ ಶಾಕ್ ನೀಡಿದ್ದು, ಮದ್ಯ ಖರೀದಿ ಭಾರೀ ಕುಸಿತ ಕಂಡಿದೆ.