ಹಿರಿಯ ಪತ್ರಕರ್ತ ಸಿ.ಆರ್.ಕೃಷ್ಣರಾವ್ (CRK) ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ

ವಿಜಯ ದರ್ಪಣ ನ್ಯೂಸ್

ಬೆಂಗಳೂರು: ಐದು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ, ಸಂಘಟಕರಾಗಿ ಸೇವೆ ಸಲ್ಲಿಸಿದ ಹಿರಿಯ ಚೇತನ ಸಿ ಆರ್.ಕೃಷ್ಣರಾವ್ (95) ಅವರು ಬೆಂಗಳೂರಿನಲ್ಲಿಂದು ನಿಧನರಾಗಿದ್ದಾರೆ.

ಸಿ ಆರ್ ಕೆ ಎಂದೇ ಖ್ಯಾತರಾಗಿದ್ದ ಅವರು ಪತ್ನಿ ಶಾರದ, ಇಬ್ಬರು ಮಕ್ಕಳು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಜನಶಕ್ತಿ ಪತ್ರಿಕೆಯಲ್ಲಿ ವೃತ್ತಿ ಜೀವನ ನಡೆಸಿದ ಅವರು, ವಿ.ಎನ್.ಸುಬ್ಬರಾವ್ ಅವರ ಜೊತೆಗೆ ಸೇರಿ ಸಿನಿಮಾಕ್ಕೆಂದೇ ಮೇನಕಾ ಪತ್ರಿಕೆಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ ಕೀರ್ತಿ ಅವರದು. ಹೊಸತು ಪತ್ರಿಕೆಯ ಅಂಕಣಕಾರರಾಗಿ, ನವಕರ್ನಾಟಕ ಪ್ರಕಾಶನ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಖಜಾಂಚಿ ಮತ್ತು ಕಾರ್ಯದರ್ಶಿಯಾಗಿ, ಕೆಯುಡಬ್ಲ್ಯೂಜೆ ರಜತ ಮಹೋತ್ಸವದ ಸಂಚಾಲಕರಾಗಿ ಸಲ್ಲಿಸಿದ ಅವರ ಸೇವೆ ಮರೆಯುವಂತಿಲ್ಲ.

ಕೆಯುಡಬ್ಲ್ಯೂಜೆಯಲ್ಲಿ ಕೇವಲ150 ಸದಸ್ಯರಿದ್ದ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಘಟನೆಯನ್ನು ಆ ಕಾಲಘಟ್ಟದಲ್ಲಿ ಬೆಳೆಸಿದ ಹಿರಿಮೆ ಅವರದು.

ಸಿ ಆರ್ ಕೆ ಅವರ ಸೇವೆ ಸ್ಮರಿಸಿ 75ನೇ ಅಮೃತ ಸ್ವಾತಂತ್ರ್ಯತ್ಸವದ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಅವರ ಮನೆಗೆ ತೆರಳಿ ಅತ್ಯಂತ ಅಭಿಮಾನದಿಂದ ಸನ್ಮಾನಿಸಿತ್ತು.

ಕೆಯುಡಬ್ಲ್ಯೂಜೆ ಸಂತಾಪ:

ಹಿರಿಯ ಚೇತನ ಸಿ.ಆರ್.ಕೃಷ್ಣರಾವ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಪತ್ರಕರ್ತರಾಗಿ ಮತ್ತು ಸಂಘಟಕರಾಗಿ ದುಡಿದ ಸಿ ಆರ್ ಕೆ ನಡೆದಾಡುವ ಮಾಹಿತಿ ಕೋಶ ಎಂದೇ ಗುರುತಿಸಿ ಕೊಂಡಿದ್ದರು. ಅವರ ನಿಧನದಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.