ವಿಜಯ ದರ್ಪಣ ನ್ಯೂಸ್….
ಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯವೆಂಬುದನ್ನು ತೋರಿಸಿಕೊಟ್ಟ ವ್ಯಕ್ತಿ ಶಾಂತವೇರಿ ಗೋಪಾಲಗೌಡರು : ಬಸವರಾಜು ಪಾದಯಾತ್ರಿ

ಬೆಂಗಳೂರು:ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದ, ಭೂಮಿಯ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮ ಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯವೆಂಬುದನ್ನು ತೋರಿಸಿಕೊಟ್ಟ ವ್ಯಕ್ತಿ ಶಾಂತವೇರಿ ಗೋಪಾಲಗೌಡರು ಕಾಲ್ನಡಿಗೆಯಲ್ಲಿ ಇಡೀ ಮಲೆನಾಡನ್ನು ಸುತ್ತಿ ಜನಜಾಗೃತಿಗೊಳಿಸಿ ಅವರ ಹಕ್ಕಿಗಾಗಿ ಹೋರಾಟ ಮಾಡಿದವರು.
ನನ್ನ ಜಾತಿ ನೋಡಿ ಮತ ಹಾಕುವೆಯಾದರೆ, ನಿನ್ನ ಮತವೇ ನನಗೆ ಬೇಡ” ಎಂದು ಮತದಾರನಿಗೆ ನೇರವಾಗಿ ಹೇಳಿದವರು “ಶಾಂತವೇರಿ ಗೋಪಾಲಗೌಡ”ರು.
ಗೋಪಾಲಗೌಡರಿಗೆ ಒಮ್ಮೆ ಮುಖ್ಯ ಮಂತ್ರಿಯಾಗುವಂತೆ ರಾಜ್ಯಪಾಲರಿಂದ ಆಹ್ವಾನ ಬರುತ್ತದೆ.ಇಂದಿರಾ ಕಾಂಗ್ರೆಸ್ ಮತ್ತು ನಿಜಲಿಂಗಪ್ಪ ಕಾಂಗ್ರೆಸ್ ಎಂಬ ಗೊಂದಲದಲ್ಲಿ ಸಿಕ್ಕ ಈ ಅವಕಾಶವನ್ನು ಇಂದಿನ ಕಾಲದ ಯಾವುದೇ ರಾಜಕಾರಣಿಯಾಗಿದ್ದರೂ ಅದನ್ನು ಶರವೇಗದಲ್ಲಿ ಸ್ವೀಕರಿಸಿ ಹರಿಬಿರಿಯಲ್ಲಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿ ಹುಟ್ಟಿದ್ದಕ್ಕೆ ಮುಖ್ಯ ಮಂತ್ರಿಯಾಗಿಯಾದರೂ ಸಾಯೋಣ ಎನ್ನುತ್ತಿದ್ದರು. ಆದರೆ ಗೌಡರಿಗೆ ಬಂದ ಆಹ್ವಾನವನ್ನು ತಿರಸ್ಕರಿಸಿದರು. ಮುಖ್ಯ ಮಂತ್ರಿಯಾಗುವಷ್ಟು ಜನಾದೇಶ ತನ್ನ ಪರವಾಗಿಲ್ಲದಿರುವುದರಿಂದ ಮುಖ್ಯ ಮಂತ್ರಿ ಹುದ್ದೆ ಒಪ್ಪಿಕೊಳ್ಳಲಾಗದೆಂದರು.
ತಮ್ಮ ಹರತಾಳ ಹೋರಾಟದ ಫಲವಾಗಿ ಏಳುವರೆ ಲಕ್ಷ ಕುಟುಂಬಗಳು ಗೇಣಿ ಹಕ್ಕು ಪಡೆದುಕೊಂಡರೂ ಗೋಪಾಲಗೌಡರಿಗೆ ತಮ್ಮ ಊರಿನಲ್ಲಿ ಒಂದು ಹುಲ್ಲಿನ ಮನೆ ಬಿಟ್ಟರೆ ಬೇರೇನೂ ಇರಲಿಲ್ಲ.ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ಹುಲ್ಲಿನ ಮನೆಯೇ ಇವರ ಆಸ್ತಿ .ಮೂರು ಬಾರಿ ಶಾಸಕರಾಗಿದ್ದ ಗೌಡರು ಪ್ರಭಾವಿ ವಿರೋಧ ಪಕ್ಷದ ನಾಯಕರು.ಬೆಂಗಳೂರಿನ ವಿಕ್ಟೋರಿಯಾ ಸರಕಾರಿ ಆಸ್ಪತ್ರೆಯಲ್ಲಿ ಇವರು ನಿಧನರಾಗುವಾಗ ಬೆಂಗಳೂರಿನಲ್ಲಿವರಿಗೆ ಸ್ವಂತ ಮನೆ ಇರಲಿ,ತನ್ನ ಹೆಂಡತಿ ಮಕ್ಕಳಿಗಾಗಿ ಒಂದು ನಿವೇಶನವೂ ಇರಲಿಲ್ಲ. ವೀರೇಂದ್ರ ಪಾಟೀಲ್ ರವರ ಸರ್ಕಾರ ಬೆಂಗಳೂರಿನಲ್ಲಿ ಉಚಿತವಾಗಿ ಇವರಿಗೆ ನಿವೇಶನ ನೀಡಿದಾಗ,‘ರಾಜ್ಯದ ಎಲ್ಲ ನಿವೇಶನ ರಹಿತರಿಗೆ ನಿವೇಶನ ನೀಡಿದ ನಂತರ ನನಗೆ ನೀಡಿ’ ಎಂದು ತಿರಸ್ಕರಿಸಿ ಒಬ್ಬ ರಾಜಕಾರಣಿಯಾಗಿ ರಾಜಕಾರಣದಲ್ಲಿ ಇತರರಿಗೆ ಮಾದರಿಯಾಗಿ ಬಾಳಿದವರು ಗೌಡರು.

ಒಮ್ಮೆ ಗೌಡರನ್ನು ಕಾಣಲು ಬಂದ ಸ್ನೇಹಿತರು ಅವರ ಮನೆಯಲ್ಲಿ ಮಕ್ಕಳು ಇರುವುದನ್ನ ಮನಗಂಡು ಬಿಸ್ಕತ್ ತಂದಿರುತ್ತಾರೆ ಇದನ್ನು ಗಮನಿಸಿದ ಗೋಪಾಲಗೌಡರು ನೀವೇನೋ ನಮ್ಮ ಮಕ್ಕಳಿಗೆ ಪ್ರೀತಿಯಿಂದ ಬಿಸ್ಕತ್ ತಂದುಕೊಡ್ತಿರ ಅವರು ತಿಂದು ಅದರ ರುಚಿ ಹೊತ್ತಿಸಿಕೊಂಡರೆ ನಾವು ಬಿಸ್ಕತ್ ತಂದು ಕೊಡಲು ಕಾಸು ಇರಬೇಕಲ್ಲ ಹಾಗಾಗಿ ನೀವು ತಂದ ಬಿಸ್ಕತ್ ವಾಪಸ್ ಕೊಂಡೊಯ್ಯಿರಿ ಎಂದು ಹೇಳಿದವರು.
ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಅದು ಅವರ ಆದರ್ಶ ಸಮಾಜವಾದಿ ಗುಣ ರಾಜಕೀಯವೆಂದರೆ ಉದ್ಯಮವೆಂದು ಭಾವಿಸಿರುವ ಈ ಕಾಲಘಟ್ಟದಲ್ಲಿ ಕಾಲಿ ಕೈಯಲ್ಲಿ ಬಂದು ಹೋರಾಟ ಮಾಡಿ ಜನರಿಂದ ಬಂದ ಅಧಿಕಾರವನ್ನು ಜನರಿಗಾಗೀಯೆ ನಿರ್ವಹಣೆ ಮಾಡಿ ಖಾಲಿ ಕೈಯಲ್ಲೆ ನಮ್ಮನ್ನಗಲಿದ ಆದರ್ಶ ಪುರುಷ ಗೋಪಾಲಗೌಡರ ತತ್ವ ಸಿದ್ದಾಂತಗಳು ಚಿರಾಯು. ಇಂದು ಅವರ 103 ನೇ ಜನ್ಮ ದಿನದ ಈ ಸಂಧರ್ಭದಲ್ಲಿ ಅವರ ಆದರ್ಶಗಳು ಅಮರವಾಗಿ ನಮ್ಮೊಡನೆ ಇವೆ ಮುಂದೆಯೂ ಇರುತ್ತವೆ…
ಬಸವರಾಜು ಪಾದಯಾತ್ರಿ
ರಾಜ್ಯಾಧ್ಯಕ್ಷರು
ಜೆಡಿಎಸ್ ಸೇವಾದಳ
ಹಾಗೂ
ಸಂಸ್ಥಾಪಕ ಅಧ್ಯಕ್ಷರು
ಸರ್ವೋದಯ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ )





