ಕದನ ವಿರಾಮವೆಂಬ ಅರಿವಿಲ್ಲದ ನಾಟಕ…..

ವಿಜಯ ದರ್ಪಣ ನ್ಯೂಸ್ 

ಬೆಂಗಳೂರು

ಕದನ ವಿರಾಮವೆಂಬ ಅರಿವಿಲ್ಲದ ನಾಟಕ…..

ಸುಮಾರು ‌15000 ಜನ ಸತ್ತು, ನೂರಾರು ಮಕ್ಕಳು ಮಹಿಳೆಯರು ಗಾಯಗೊಂಡು, ಅನೇಕರು ಅನಾಥರಾದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಘೋಷಣೆಯಾಗಿದೆ. ನಾಲ್ಕು ದಿನದ ನಂತರ ಯುದ್ಧ ಮುಂದುವರಿಯುತ್ತದೆ ಅಥವಾ ಇನ್ನೊಂದಿಷ್ಟು ದಿನ ಕದನ ವಿರಾಮ ಜಾರಿಯಲ್ಲಿರಬಹುದು. ಹಮಾಸ್ ಕೆಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ಕೆಲವು ಬಂಧಿಗಳನ್ನು ಬಿಡುಗಡೆ ಮಾಡಿದೆ…..

ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಸಾವಿರಾರು ಜನರ ಜೀವ ಉಳಿಯುತ್ತಿತ್ತಲ್ಲವೇ. ಎರಡೂ ದೇಶಗಳು ಇದರಿಂದ ಮಾಡಿದ ಸಾಧನೆಯಾದರು ಏನು. ಯುದ್ಧದಿಂದ ಎರಡೂ ಕಡೆ ಸಾವು ನೋವುಗಳೇ ಎಂಬುದು ತಿಳಿದಿಲ್ಲವೇ. ಮತ್ತೆ ಯುದ್ಧ ಮಾಡಿ ಮುಂದೆ ಯಾವುದೋ ಒಂದು ದಿನ ಯಾವುದೋ ಹಂತದಲ್ಲಿ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲುವುದು ಖಚಿತ. ಆದರೆ ಅದು ಮಾಡಬಹುದಾದ ಘೋರ ದುರಂತವನ್ನು ಮರಳಿ ಸರಿಪಡಿಸುವುದು ಸಾಧ್ಯವೇ…..

ಇದೇ ಪ್ರಶ್ನೆ ರಷ್ಯಾ ಉಕ್ರೇನ್ ಯುದ್ಧದ ಬಗ್ಗೆಯೂ ಏಳುತ್ತದೆ. ನಾಶದ ನಂತರ ಶರಣಾಗುವುದಕ್ಕಿಂತ ಮೊದಲೇ ಇದನ್ನು ಗ್ರಹಿಸಿ ಸ್ವಲ್ಪ ಹೊಂದಾಣಿಕೆಯ ಒಪ್ಪಂದ ಮಾಡಿಕೊಳ್ಳಬಹುದಲ್ಲವೇ……

ನಮ್ಮ ಕರ್ನಾಟಕದ ಗ್ರೂಪ್ ಕ್ಯಾಪ್ಟನ್ ಪ್ರಾಂಜಲ್ ಮದುವೆಯಾಗಿ ಎರಡು ವರ್ಷಕ್ಕೇ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾಗಿರುವ ಈ ಸಂದರ್ಭದಲ್ಲಿ ಮನಸ್ಸು ಮತ್ತೆ ಮತ್ತೆ ಹುತಾತ್ಮ ಭಾವನೆಗಿಂತ ಜೀವ ಉಳಿಸದೆ ಕೆಲವು ರಾಜಕಾರಣಿಗಳು ಮತ್ತು ಧರ್ಮದವರ ತೆವಲಿಗೆ ಅಮಾಯಕ ಜನರನ್ನು ಬಲಿಕೊಡುತ್ತಿರುವ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಮೂಡುತ್ತದೆ…..

ಹಿಂಸೆಯ ಫಲಿತಾಂಶಗಳು ಮತ್ತೊಂದು ಹಿಂಸೆಗೆ ಬಿತ್ತುವ ಬೀಜ ಎಂದು ಖಚಿತವಾಗಿರುವಾಗಲೂ ಮತ್ತೆ ಮತ್ತೆ ಹಿಂಸೆಯಿಂದಲೇ ಪರಿಹಾರ ಹುಡುಕುವ ಹುಚ್ಚು ಮನಸ್ಸಿನ ಮನುಷ್ಯರ ಬಗ್ಗೆಯೇ ಕೋಪ ಬರುತ್ತದೆ. ಬದುಕಲು ಬಾರದ ಮನುಷ್ಯರು ಎಂದೇ ಕರೆಯಬೇಕಾಗುತ್ತದೆ. ರಾಜಕಾರಣಿಗಳೇನೋ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಾರೆ. ಅವರೇನು ಯುದ್ಧ ಭೂಮಿಯಲ್ಲಿ ಹೋರಾಡುವುದಿಲ್ಲ. ಇವರ ರಕ್ಷಣೆಗಾಗಿ ಸೈನಿಕರು ಮತ್ತು ಸಾಮಾನ್ಯ ಜನರು ಜೀವ ತ್ಯಾಗ ಮಾಡಬೇಕು. ಇದು ಯಾವ ನ್ಯಾಯ……….

ಸಂಧಾನ ಸೂತ್ರಗಳು ಯಾವಾಗಲೂ ಇದ್ದೇ ಇರುತ್ತದೆ. ‌ಆದರೆ ಅದನ್ನು ಗ್ರಹಿಸುವ ಮತ್ತು ಅನುಷ್ಠಾನ ಗೊಳಿಸುವ ವಿಶಾಲ ಮನೋಭಾವ ಮತ್ತು ಒಳ್ಳೆಯತನ ಮಾತ್ರ ಕಾಣೆಯಾಗಿದೆ. ಅದರ ಪರಿಣಾಮವೇ ಬಹುತೇಕ ಈ ಜಗತ್ತಿನಲ್ಲಿ ಶಾಂತಿಗಿಂತ ಹಿಂಸೆಯ ಪ್ರಮಾಣ ಜಾಸ್ತಿಯಾಗಿದೆ……

ಹೊಡೆತ ಬೀಳುವವರೆಗೆ ತಾನು ಸೂಪರ್ ಮ್ಯಾನ್ ಎಂಬಂತೆ ವರ್ತಿಸುವ ಮನುಷ್ಯರು ಮತ್ತು ಅವರ ನಿಯಂತ್ರಣದ ದೇಶಗಳು ಒಮ್ಮೆ ಬಲವಾದ ಹೊಡೆತ ಬಿದ್ದರೆ ನರಳುತ್ತಾ ಶರಣಾಗುತ್ತಾರೆ. ಅದೂ ಸಹ ತಾತ್ಕಾಲಿಕ. ಒಳಗೊಳಗೆ ದ್ವೇಷ ಅಸೂಯೆ ಹೊಗೆಯಾಡುತ್ತಲೇ ಇರುತ್ತದೆ. ಮತ್ತೆ ಕೆಲವು ಸಮಯದ ನಂತರ ಹಿಂಸೆಗೆ ಇಳಿಯುತ್ತಾರೆ. ಇಡೀ ಮಾನವ ಇತಿಹಾಸ ಇಂತಹ ಮನಸ್ಥಿತಿಯಿಂದಲೇ ತುಂಬಿದೆ…..

ಶಾಂತಿ ಎಂಬುದು ವಿನಾಶದ ಸಿದ್ದತೆ ಎಂಬಂತಾಗಿದೆ. ಬದುಕು ಎಂಬುದು ಸಾವಿಗೆ ಸಿದ್ದತೆ ಎಂಬಂತೆ. ಒಟ್ಟಿನಲ್ಲಿ ಇದೇ ವಿಶ್ವದ ಸ್ವಾಭಾವಿಕ ಗುಣವಾಗಿರಬಹುದು. ಅದನ್ನು ಅನುಭವಿಸುತ್ತಲೇ ಬದುಕುವುದು ಅನಿವಾರ್ಯವೇ ಅಥವಾ ಅಹಿಂಸೆಯ ಪರ್ಯಾಯ ಮಾರ್ಗಗಳ ಹುಡುಕಾಟ ಸಾಧ್ಯವೇ…..

ಕ್ಯಾಪ್ಟನ್ ಪ್ರಾಂಜಲ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮತ್ತು ದಿನ ನಿತ್ಯ ಈ ರೀತಿ ತಮ್ಮ ದೇಶಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿರುವ ಅನೇಕ ಯುವಕರ ಜೀವಗಳನ್ನು ಉಳಿಸಲು ಸಾಧ್ಯವಾಗದ ಈ ಜಗತ್ತಿನ ಎಲ್ಲಾ ದೇವರು, ಧರ್ಮಗಳು, ಸರ್ಕಾರಗಳಿಗೆ ದಯವಿಟ್ಟು ಮನುಷ್ಯ ಜೀವಿಗಳ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಾಪಾಡಿ, ಮನುಷ್ಯ ಪ್ರಾಣಿಯ ಘನತೆಯನ್ನು ರಕ್ಷಿಸಿ, ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಾ……
************************
ಮೊನ್ನೆ ದಿನಾಂಕ 24/11/2023 ಶುಕ್ರವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಬಳಿ ಇರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿನ ವಿಧ್ಯಾರ್ಥಿಗಳು ಮತ್ತು ನೌಕರರಿಗೆ ಸಂವಿಧಾನ ಮಹತ್ವದ ಬಗ್ಗೆ ಉಪನ್ಯಾಸ ನೀಡಲಾಯಿತು. ಕೇಂದ್ರದ ನಿರ್ದೇಶಕರಾದ ಶ್ರೀಯುತ ಪ್ರೊಫೆಸರ್ ರಾಮಚಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು…

ಹಾಗೆಯೇ ನಿನ್ನೆ 25/11/2023 ಶನಿವಾರ ಆತ್ಮೀಯ ಗೆಳೆಯರೊಂದಿಗೆ ಕೋಲಾರದ ಪ್ರಖ್ಯಾತ ಅಂತರಗಂಗೆ ಬೆಟ್ಟದ ಚಾರಣವನ್ನು ಮಾಡಿದೆವು. ಕಲ್ಲಿನ ಗುಹೆಯೊಳಗಿನ ಪ್ರಯಾಣ ತುಂಬಾ ರೋಮಾಂಚಕಾರಿಯಾಗಿತ್ತು….
*************************
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್ ಕೆ,
9844013068………