ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲಿರುವ ಡ್ರೈವರ್ ಲಾಜಿಸ್ಟಿಕ್ಸ್

ವಿಜಯ ದರ್ಪಣ ನ್ಯೂಸ್ ,ಬೆಂಗಳೂರು

ಡ್ರೈವರ್ ಲಾಜಿಸ್ಟಿಕ್ಸ್ ಕರ್ನಾಟಕದಲ್ಲಿ ರೂ. 525 ಕೋಟಿ ಹೂಡಿಕೆ ಮಾಡಲು ಕಾರ್ಯಾಚರಣೆ ಆರಂಭಿಸಿದೆ

· ಸರಕು ಸಾಗಣೆ ಮೂಲಸೌಕರ್ಯದಲ್ಲಿ ಕ್ರಾಂತಿ ಉಂಟುಮಾಡುವ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಪ್ರತಿಜ್ಞೆ
· ಥಾಯ್ಲೆಂಡ್ ಮೂಲಕ ಆಗ್ನೇಯ ಏಷ್ಯಾದಲ್ಲಿಯೂ ಕಾರ್ಯಾಚರಣೆ ಆರಂಭ

ಬೆಂಗಳೂರು, 04 ಡಿಸೆಂಬರ್ 2023: ಡ್ರೈವರ್ ಲಾಜಿಸ್ಟಿಕ್ಸ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸರಕು ಸಾಗಣೆ ಸೇವಾ ಸಂಸ್ಥೆ, ಕರ್ನಾಟಕದಲ್ಲಿ ತನ್ನ ಬಹುಗ್ರಾಹಕ ಉಗ್ರಾಣ ಮತ್ತು ಭಾಗಶಃ ಟ್ರಕ್ ಲೋಡ್ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಶ್ರೀ ಅಖಿಲ್ ಆಶಿಕ್, ಸಿಇಒ ಅವರು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಭಾರತವನ್ನು ದೇಶದ ಇತರ ಭಾಗಗಳೊಂದಿಗೆ ಬೆಸೆಯುವ ಉದ್ದೇಶದಿಂದ ಕರ್ನಾಟಕ ಹೆಬ್ಬಾಗಿಲಾಗಿ ಇರಿಸಿಕೊಳ್ಳುವ ಕಂಪನಿಯ ವ್ಯೂಹಾತ್ಮಕ ಕಾರ್ಯತಂತ್ರಗಳನ್ನು ಪ್ರಕಟಿಸಿದರು

ಮುಂದಿನ ವರ್ಷಗಳಲ್ಲಿ ತನ್ನ ಕರ್ನಾಟಕ ಕಾರ್ಯಾಚರಣೆಗಾಗಿ ಇನ್ನೂ 150 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಡ್ರೈವರ್ ಲಾಜಿಸ್ಟಿಕ್ಸ್, ಯುವ ಪದವೀಧರರ ನೇಮಕಕ್ಕೆ ಒತ್ತು ನೀಡಲಿದೆ. ಕಂಪನಿಯು ಕರ್ನಾಟಕದಾದ್ಯಂತ ತನ್ನ ಹೆಜ್ಜೆ ಗುರುತು ವಿಸ್ತರಿಸಲು ಸನ್ನದ್ಧವಾಗಿದ್ದು, ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಉಗ್ರಾಣ (ವೇರ್‍ಹೌಸಿಂಗ್), ಫುಲ್ ಟ್ರಕ್ ಲೋಡ್ (ಎಫ್‍ಟಿಎಲ್) ಮತ್ತು ಭಾಗಶಃ ಟ್ರಕ್ ಲೋಡ್ (ಪಿಟಿಎಲ್) ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸಲಿದೆ.

ಮುಂದಿನ ಐದು ವರ್ಷಗಳಲ್ಲಿ 525 ಕೋಟಿ ರೂ. ಹೂಡಿಕೆ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿರುವ ಡ್ರೈವರ್ ಲಾಜಿಸ್ಟಿಕ್ಸ್, ಸರಕು ಸಾಗಣೆ ವಲಯದಲ್ಲಿ ಕ್ರಾಂತಿ ಉಂಟುಮಾಡುವ ಹೆಬ್ಬಯಕೆ ಹೊಂದಿದೆ. ಈ ಹೂಡಿಕೆಯು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಸಾಗಣೆದಾರರು ಹಾಗೂ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಸ್ಥಳೀಯ ಉದ್ಯೋಗ ಮಾರುಕಟ್ಟೆಗೂ ಬಲ ನೀಡಲಿದೆ.

2019ರಲ್ಲಿ ಸ್ಥಾಪನೆಯಾಗಿರುವ ಡ್ರೈವರ್ ಲಾಜಿಸ್ಟಿಕ್ಸ್, ಪ್ರತಿವರ್ಷ 30%ನ ಅತ್ಯುತ್ತಮ ಬೆಳವಣಿಗೆ ದರವನ್ನು ದಾಖಲಿಸಿದೆ. ದೇಶದ ಏಳು ರಾಜ್ಯಗಳಲ್ಲಿ ಕಂಪನಿಯು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ತನ್ನ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ, ಕಂಪನಿಯು ಮುಂದಿನ 18 ತಿಂಗಳಲ್ಲಿ ತನ್ನ ಉಗ್ರಾಣಗಳ ಸಂಖ್ಯೆಯನ್ನು 53 ರಿಂದ 100ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ಕಾರ್ಯಾಚರಣೆಗಳ ಏಕೀಕರಣಕ್ಕೆ ಅನುಕೂಲವಾಗಿರುವುದರಿಂದ ಡ್ರೈವರ್ ಲಾಜಿಸ್ಟಿಕ್ಸ್‍ಗೆ ಕರ್ನಾಟಕ ಅತ್ಯಂತ ಪ್ರಮುಖ ಕೇಂದ್ರವಾಗಿದೆ. ಸಿಇಒ ಶ್ರೀ ಅಖಿಲ್ ಆಶಿಕ್ ಅವರು ಕಂಪನಿಯು ಬೆಳವಣಿಗೆ ಮತ್ತು ದಕ್ಷ ಬ್ಯುಸಿನೆಸ್ ಮಾದರಿಗಳ ಕುರಿತು ವಿವರಿಸಿದರಲ್ಲದೆ, ಬಾಹ್ಯ ಹಣಕಾಸಿನ ನೆರವು ಪಡೆಯದೇ ಸುಸ್ಥಿರ ಬೆಳವಣಿಗೆ ಸಾಧಿಸಿರುವುದನ್ನು ಬಲವಾಗಿ ಪ್ರತಿಪಾದಿಸಿದರು.

ಶ್ರೀ ಅಖಿಲ್ ಆಶಿಕ್ ಅವರು ಕೇಂದ್ರ ಸರಕಾರದ ಗತಿಶಕ್ತಿಯಂತಹ ಪ್ರೋತ್ಸಾಹಕ ಉಪಕ್ರಮಗಳು ಮತ್ತ್ತು 3ಪಿಎಲ್ ವಲಯದ ಕಂಪನಿಗಳಿಗೆ ಸಿಗುತ್ತಿರುವ ಉತ್ತೇಜನದಿಂದಾಗಿ ಸರಕು ಸಾಗಣೆ ವಲಯ ಅತ್ಯುತ್ತಮ ಬೆಳವಣಿಗೆ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರಮಟ್ಟದ ವಿಸ್ತರಣೆಯ ಆಚೆಗೆ ಡ್ರೈವರ್ ಲಾಜಿಸ್ಟಿಕ್ಸ್, ಭಾರತ ಮತ್ತು ಆಗ್ನೇಯ ಏಷ್ಯಾ ದೇಶಗಳ ನಡುವೆ ವ್ಯಾಪಾರ ವಹಿವಾಟು ಹೆಚ್ಚುತ್ತಿರುವುದರಿಂದ ಸರಕು ಸಾಗಣೆ ವಲಯದಲ್ಲಿ ವೃತ್ತಿಪರ ಸರಕು ಸಾಗಣೆ ಸೇವಾದಾರರಿಗೆ ಹೆಚ್ಚುತ್ತಿರುವ ಬೇಡಿಕೆಯ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿಯೂ ಆಲೋಚನೆ ನಡೆಸುತ್ತಿದೆ. ಈ ದೃಷ್ಟಿಕೋನಕ್ಕೆ ಪೂರಕವಾಗಿ ಕಂಪನಿಯು ಥಾಯ್ಲೆಂಡ್‍ನಲ್ಲಿ ಕಾರ್ಯಾಚರಣೆ ಆರಂಭಿಸುವ ಮೂಲಕ ಆಗ್ನೇಯ ಏಷ್ಯಾಕ್ಕೂ ವಿಸ್ತರಿಸಿದೆ.