ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ಭಾರತದ ರಾಜಧಾನಿ ದೆಹಲಿ………..

ವಿಜಯ ದರ್ಪಣ ನ್ಯೂಸ್

ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ಭಾರತದ ರಾಜಧಾನಿ ದೆಹಲಿ………..

ಇತಿಹಾಸದಲ್ಲಿ ಅನೇಕ ಏಳು ಬೀಳುಗಳಿಗೆ ಸಾಕ್ಷಿಯಾಗಿರುವ ದೆಹಲಿ ಕೆಲವೇ ತಿಂಗಳುಗಳ ಹಿಂದೆ ಒಂದು ವರ್ಷದ ನಿರಂತರ ಯಶಸ್ವಿ ರೈತ ಹೋರಾಟವನ್ನು ಕಂಡಿದೆ. ಜಾಗತೀಕರಣದ ನಂತರ ಅತಿ ಹೆಚ್ಚು ನಷ್ಟಕ್ಕೆ, ತೊಂದರೆಗೆ ಒಳಗಾಗಿದ್ದು ಭಾರತದ ರೈತ ಸಮೂಹ. ಮುಕ್ತ ಮಾರುಕಟ್ಟೆಗೆ ಬೇಕಾದ ಮಾನಸಿಕ ಸ್ಥಿತಿ ಭಾರತದ ರೈತರಲ್ಲಿ ಇರಲಿಲ್ಲ ಅಥವಾ ಆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲಿನ ರೈತರಿಗೆ, ಈ ನೆಲಕ್ಕೆ ಹೊಂದಾಣಿಕೆ ಆಗಲಿಲ್ಲ. ಅದರ ಪರಿಣಾಮ ಲಕ್ಷ ಲಕ್ಷ ಜನ ಆತ್ಮಹತ್ಯೆಯ ಹಾದಿ ಹಿಡಿದರು ಅದು ಇನ್ನೂ ನಿಂತಿಲ್ಲ……

ರೈತ ಕೃಷಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಿರಂತರವಾಗಿ ಈ ವ್ಯವಸ್ಥೆಯಿಂದ ಶಾಶ್ವತ ದೂರ ಸರಿಯುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಈ ದೇಶದ ಒಂದು ದುರಂತ ವ್ಯವಸ್ಥೆಗೆ ಉದಾಹರಣೆಯಾಗಿದೆ. ಈ ನಡುವೆ ಮುಖ್ಯವಾಗಿ ಕರ್ನಾಟಕ ಮಹಾರಾಷ್ಟ್ರ ಉತ್ತರ ಪ್ರದೇಶ ಹರಿಯಾಣ ಮಧ್ಯಪ್ರದೇಶ ಪಂಜಾಬ್ ಈ ಭಾಗಗಳಲ್ಲಿ ರೈತ ಹೋರಾಟಗಳು ತುಂಬಾ ಪರಿಣಾಮಕಾರಿಯಾಗಿ ಮತ್ತು ಪ್ರಭಾವಶಾಲಿಯಾಗಿ ಸರ್ಕಾರಗಳ ವಿರುದ್ಧ ಸೆಣಸಾಡುತ್ತಾಬಂದಿದೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗೊಮ್ಮೆ ಈಗೊಮ್ಮೆ ಬೃಹತ್ ಚಳವಳಿಗಳನ್ನ ನಡೆಸುತ್ತಿದೆ.

ಇಡೀ ವಿಶ್ವದಲ್ಲಿ ಅತಿ ಹೆಚ್ಚು ರೈತ ಸಮುದಾಯವನ್ನು, ಕೃಷಿ ಭೂಮಿಯನ್ನ ಹೊಂದಿರುವ ದೇಶ ಭಾರತ. ಅದೇ ರೀತಿ ಸಮಸ್ಯೆಗಳು ಕೂಡ ಅಷ್ಟೇ ಸಂಕೀರ್ಣವಾಗಿದೆ, ಪರಿಹಾರವೂ ಸುಲಭವಲ್ಲ. ಈ ಸಮಸ್ಯೆ ಬಗೆಹರಿಸಲು ದೇಶದ ವಿದ್ಯಾವಂತ ವರ್ಗ, ಶ್ರೀಮಂತ ವರ್ಗ, ರಾಜಕಾರಣಿಗಳು , ಅಧಿಕಾರಿಗಳು ಸಾಕಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ ಆಡಳಿತ ನಡೆಸುವ ಸರ್ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಕ್ಷೇತ್ರ ಹೊರತುಪಡಿಸಿ ಬೇರೆ ರೀತಿಯ ಅಂದರೆ ಉದಾಹರಣೆಗೆ ಸಾಫ್ಟ್ವೇರ್ ಅಥವಾ ವಾಹನ ಅಥವಾ ಟೂರಿಸಂ ಅಥವಾ ಬ್ಯಾಂಕಿಂಗ್ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಚ್ಚು ಆರ್ಥಿಕ ಲಾಭಗಳಿರುವುದರಿಂದ, ಹಾಗೆಯೇ ಮತ್ತೊಂದು ಉದಾಹರಣೆ ಹೇಳಬೇಕೆಂದರೆ ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚು ಹಣದ ಹರಿವು ಇರುವುದರಿಂದ ಅದರ ಬಗ್ಗೆಯೇ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತದೆ . ಇದರ ಪರಿಣಾಮ ಕೃಷಿ ನಿರ್ಲಕ್ಷಿಸಲ್ಪಟ್ಟಿದೆ………..

ಆಹಾರ ಒಂದು ಅನಿವಾರ್ಯ ಮೂಲಭೂತ ಅವಶ್ಯಕತೆ ಎಂಬುದೇನೋ ನಿಜ. ಆಹಾರದಿಂದ ಮನುಷ್ಯನ ಆರೋಗ್ಯ, ಜೀವನ ಆಸೆ ಆಕಾಂಕ್ಷೆಗಳು ಎಲ್ಲವೂ ಅದರ ಆಧಾರದ ಮೇಲೆಯೇ ನಿಂತಿದೆ. ಆದರೆ ಅದರ ಉತ್ಪಾದನೆ, ಬೆಳವಣಿಗೆ ಹಂಚಿಕೆ ವಿಷಯದಲ್ಲಿ ಕ್ರಮಬದ್ಧತೆಯನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಬಹಳಷ್ಟು ಶೋಷಣೆಗೆ ಅವಕಾಶಗಳಿರುವುದರಿಂದ ಅದರ ಎಲ್ಲಾ ಪರಿಣಾಮಗಳು ರೈತರ ಮೇಲೆ ಬೀಳುತ್ತಿದೆ. ಸರ್ಕಾರಗಳು ರೈತರಿಗೆ ತೊಂದರೆ ಕೊಡಬೇಕು ಎಂಬ ಮನೋಭಾವಗಳೇನು ಇಲ್ಲ. ಆದರೆ ರೈತರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು, ಯಾವ ರೀತಿ ಸಮಸ್ಯೆಗಳನ್ನ ಬಗೆಹರಿಸಬೇಕು ಎಂಬ ಕಳಕಳಿಯ ಕಾಳಜಿ ಇಲ್ಲ. ಏಕೆಂದರೆ ನಿರಂತರವಾಗಿ ಕೃಷಿ ಕ್ಷೇತ್ರ ಎಲ್ಲ ಸಂದರ್ಭಗಳಲ್ಲೂ ಸಮಸ್ಯೆಗಳನ್ನು ಸೃಷ್ಟಿಯಾಗುತ್ತಲೇ ಇರುತ್ತದೆ………..

ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಇವು ಆಡಳಿತಾತ್ಮಕ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ. ಮನರಂಜನೆ, ಉದ್ಯಮ, ವ್ಯಾಪಾರ ವಹಿವಾಟುಗಳು ಆರ್ಥಿಕ ಕೇಂದ್ರೀಕೃತವಾಗಿರುತ್ತವೆ. ಆದರೆ ಕೃಷಿ ಈ ಕ್ರಮಬದ್ಧತೆಯನ್ನು ಹೊಂದಿರುವುದಿಲ್ಲ. ಇಲ್ಲಿ ಪ್ರಕೃತಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ಭೂಮಿ ಅಥವಾ ಮಣ್ಣಿನ ಫಲವತ್ತತೆ ಇರಬಹುದು, ಮಳೆ ಗಾಳಿ ಬೆಳಕು ಇರಬಹುದು, ಅತಿವೃಷ್ಟಿ – ಅನಾವೃಷ್ಟಿ ಇರಬಹುದು, ಬೆಳೆ ಬೆಲೆ ಇರಬಹುದು, ಹಂಚಿಕೆ ಇರಬಹುದು, ಗುಣಮಟ್ಟ ಇರಬಹುದು ಹೀಗೆ ಅನೇಕ ಸಮಸ್ಯೆಗಳು ವಿವಿಧ ಪ್ರದೇಶಗಳಿಗೆ ವಿವಿಧ ರಾಜ್ಯಗಳಿಗೆ ಬೇರೆಬೇರೆ ರೀತಿ ಇರುತ್ತದೆ. ಇದನ್ನ ನಿರ್ವಹಿಸಲು ರೈತರ ಬಗ್ಗೆ ಅತ್ಯಂತ ಕಾಳಜಿ ಇರುವ ಅಧಿಕಾರಿಗಳು ರಾಜಕಾರಣಿಗಳು ಬೇಕಾಗುತ್ತದೆ………

ರೈತರನ್ನು ಅನ್ನದಾತರು ಈ ದೇಶದ ಬೆನ್ನೆಲುಬು ಎಂದು ಭಾವಿಸಿ ಬೇರೆ ಕ್ಷೇತ್ರಗಳಿಗಿಂತ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಆರ್ಥಿಕ ಲಾಭಗಳು ಬೇರೆ ಉದ್ಯಮಗಳಷ್ಟು ಬೇಗ ಮತ್ತು ಖಚಿತವಾಗಿ ಕೃಷಿಯಲ್ಲಿ ಇಲ್ಲದಿದ್ದರೂ ಸಹ ಆ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು. ಆದರೆ ವಾಸ್ತವದಲ್ಲಿ ಹಾಗೆ ಆಗುತ್ತಿಲ್ಲ ಇದಕ್ಕೆ ಕೇವಲ ಆರ್ಥಿಕ ಕಾರಣ ಒಂದೇ ಅಲ್ಲ ರೈತರು ಹೆಚ್ಚು ಸಂಘಟಿತರಾಗಿಲ್ಲ, ಚಳುವಳಿಗಳ ಸಂದರ್ಭದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾಕಷ್ಟು ಸಂಖ್ಯೆಯ ರೈತರು ಒಗ್ಗಟ್ಟಾಗುವುದು ನಿಜ ಆದರೆ ಚುನಾವಣಾ ಸಮಯದಲ್ಲಿ ಆ ಒಗ್ಗಟ್ಟು ಕಾಣುವುದಿಲ್ಲ ಮತ್ತು ಬೇರೆ ಬೇರೆ ಪಕ್ಷಗಳು ಅವರನ್ನು ರಾಜಕೀಯವಾಗಿ ವಿಭಜಿಸುತ್ತವೆ ಹಾಗೆಯೇ ರೈತರಲ್ಲದ ಜನ ಉದಾಹರಣೆಗೆ ಮಾಧ್ಯಮಗಳು ಬೇರೆ ಬೇರೆ ಕಾರಣಗಳಿಂದ ರೈತರನ್ನು ದಿಕ್ಕು ತಪ್ಪಿಸುತ್ತಿರುತ್ತದೆ. ಈ ಕಾರಣದಿಂದ ರಾಜಕೀಯ ಪಕ್ಷಗಳು ರೈತರನ್ನು ನಿರ್ಲಕ್ಷ ಮಾಡುತ್ತದೆ………

ರೈತರು ಚುನಾವಣಾ ರಾಜಕೀಯದಲ್ಲಿ ಒಗ್ಗಟ್ಟು ಮತ್ತು ಐಕ್ಯತೆಯನ್ನ ಪ್ರದರ್ಶಿಸಿದರೆ ಆಗ ಖಂಡಿತವಾಗಿಯೂ ಸರ್ಕಾರಗಳು ಅವರ ಬೇಡಿಕೆಗಳನ್ನು ಈಡೇರಿಸುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ತಾನೆ ಅಯೋಧ್ಯೆಯ ಬಾಲರಾಮನ ಪ್ರತಿಷ್ಠಾಪನೆಯ ಗುಂಗಿನಲ್ಲಿ ಇದ್ದ ಭಾರತದ ರಾಜಕೀಯ ವ್ಯವಸ್ಥೆ ಈ ರೈತ ಚಳುವಳಿಯಿಂದ ಸ್ವಲ್ಪ ವಿಚಲಿತವಾಗಿದೆ.
ಈ ಸಮಸ್ಯೆಗೆ ಯಾರೋ ರಾಜಕಾರಣಿಗಳು, ಪತ್ರಕರ್ತರು, ನ್ಯಾಯಾಲಯ, ಅಧಿಕಾರಿಗಳು, ಧಾರ್ಮಿಕ ಮುಖಂಡರು, ಸಾಮಾನ್ಯ ಜನರು ಸಹ ಅಷ್ಟು ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಕೃಷಿ ಕ್ಷೇತ್ರದ ಅತ್ಯಂತ ಪ್ರಾಮಾಣಿಕ ವಿಜ್ಞಾನಿಗಳು, ಕೃಷಿ ತಜ್ಞರು ಸಮಸ್ಯೆ, ಪರಿಹಾರ ಮತ್ತು ಅದರ ಅನುಷ್ಠಾನ ಈ ಮೂರು ವಿಷಯಗಳಲ್ಲಿ ಗಂಭೀರವಾಗಿ ಯೋಚಿಸಿ ಇಡೀ ರಾಷ್ಟ್ರಾದ್ಯಂತ ಒಂದು ಜಾಲವನ್ನ ಸೃಷ್ಟಿ ಮಾಡಿ ಆ ಮುಖಾಂತರ ಯಾವ ಬೆಳೆ ಬೆಳೆಯಬೇಕು, ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು, ಅದರ ಹಂಚಿಕೆ ಹೇಗೆ ಇರಬೇಕು, ಯಾವ ಭಾಗದಲ್ಲಿ ಯಾವ ಆಹಾರ ಪದಾರ್ಥಗಳನ್ನ ಹೆಚ್ಚು ಬಳಸುತ್ತಾರೆ, ಅಲ್ಲಿಗೆ ಹೇಗೆ ಸಾಗಾಟ ಮಾಡಬೇಕು, ಅತಿವೃಷ್ಟಿ ಸಮಯದಲ್ಲಿ ಹೇಗೆ ವರ್ತಿಸಬೇಕು, ಅನಾವೃಷ್ಟಿ ಸಮಯದಲ್ಲಿ ಹೇಗಿರಬೇಕು, ಸಂಗ್ರಹ ಹೇಗೆ ಮಾಡಬೇಕು, ರೈತರಿಗೆ ಆರ್ಥಿಕ ನೆರವು ಹೇಗೆ ಒದಗಿಸಬೇಕು, ರೈತರ ಮಾನಸಿಕ ಗುಣಮಟ್ಟವನ್ನ ಆರ್ಥಿಕ – ಸ್ವಾವಲಂಬನೆಯನ್ನು ಹೇಗೆ ಹೆಚ್ಚಿಸಬೇಕು, ಈ ನಡುವೆ ರೈತರ ರಾಜಕೀಯ ನಿಲುವುಗಳು ಯಾವ ರೀತಿ ಇರಬೇಕು ಹೀಗೆ ಎಲ್ಲಾವೂ ಸಹ ಬಹಳ ಮುಖ್ಯವಾಗುತ್ತದೆ. ಈ ಎಲ್ಲವನ್ನು ತುಂಬಾ ಏಕಾಗ್ರತೆಯಿಂದ ನಿರ್ವಹಿಸಲು ಸಾಧ್ಯವಾದರೆ ಖಂಡಿತವಾಗಿಯೂ ಭಾರತದ ಕೃಷಿ ಮತ್ತು ಕೃಷಿ ಅವಲಂಬಿತ ಕುಟುಂಬಗಳು ನೆಮ್ಮದಿಯ ಜೀವನ ಮಟ್ಟ ಕಾಣಲು ಸಾಧ್ಯ ಇಲ್ಲದಿದ್ದರೆ ಆತ್ಮಹತ್ಯೆಗಳ ಸಂಖ್ಯೆ ಇನ್ನೂ ಮುಂದುವರಿಯುತ್ತಲೇ ಇರುತ್ತದೆ………

ಆದರೆ ವಾಸ್ತವದಲ್ಲಿ ರೈತ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿ ಅದು ನಿರಂತರವಾಗಿ ದುರುಪಯೋಗವಾಗುತ್ತಿರುತ್ತದೆ. ಬೇರೆ ಹೋರಾಟಗಳಿಗಿಂತ ರೈತ ಹೋರಾಟಗಳು ಬೃಹತ್ ಪ್ರಮಾಣದಲ್ಲಿ ಇರುತ್ತದೆ. ಜನರು ಕೂಡ ಮಾನಸಿಕವಾಗಿ ರೈತರ ಬಗ್ಗೆ ಸಾಕಷ್ಟು ಗೌರವ ಅಭಿಮಾನವನ್ನು ಹೊಂದಿ ಅವರಿಗೆ ಬೆಂಬಲ ಸೂಚಿಸುತ್ತಾರೆ. ಅಷ್ಟು ಸುಲಭವಾಗಿ ರೈತ ಚಳುವಳಿಗಳನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಆದರೆ ಉದ್ಯಮಿಗಳ ಹಿಡಿತದಲ್ಲಿ ಇಡೀ ವ್ಯವಸ್ಥೆ ಸಿಲುಕಿರುವಾಗ ಒಂದು ರೀತಿ ಅಸಹಾಯಕತೆ ಎಲ್ಲರಲ್ಲೂ ಮನೆ ಮಾಡಿದೆ. ಏನಾದರೂ ಆಗಲಿ ರೈತರು ನ್ಯಾಯಯುತ ಬೇಡಿಕೆಗಳು ಆದಷ್ಟು ಬೇಗ ಈಡೇರಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್. ಕೆ.
9844013068……….