--Ads--

ಚುನಾವಣೆ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ..

On: February 21, 2024 2:28 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್

ಲೋಕಸಭಾ ಚುನಾವಣೆಗೆ ಒಟ್ಟಾಗಿ ಕೆಲಸಮಾಡೊಣ..

ಚುನಾವಣೆ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ..

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 21(ಕರ್ನಾಟಕ ವಾರ್ತೆ): ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ದೈನಂದಿನ ಕಚೇರಿ ಕಾರ್ಯಗಳ ಜೊತೆಗೆ ಚುನಾವಣಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ, ಚುನಾವಣೆ ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ .ಎನ್ ಶಿವಶಂಕರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಲೋಕಸಭಾ ಚುನಾವಣೆಯು ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಬಹುದು. ಆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಪೂರ್ವ ಸಿದ್ಧತೆಗಳನ್ನು ಇಂದಿನಿಂದಲೆ ಮಾಡಿಕೊಳ್ಳಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ಪೂರ್ವ ತಯಾರಿ ಕಾರ್ಯಗಳನ್ನು ಚಾಚುತಪ್ಪದೆ ಜಿಲ್ಲೆಯಲ್ಲಿ ಪ್ರಾರಂಭ ಮಾಡಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳ ನಿಯೋಜನೆ, ಎಲ್ಲಾ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಭದ್ರತೆ, ಪೊಲೀಸ್ ಬಂದೋಬಸ್ತ್, ಚೆಕ್ ಪೋಸ್ಟ್ ನಿರ್ಮಾಣ, ಚುನಾವಣಾ ಲಿಪಿಕ ಪರಿಕರಗಳು ಹಾಗೂ ಇತರ ವಸ್ತುಗಳ ಖರೀದಿ, ಸಾರಿಗೆ ವ್ಯವಸ್ಥೆ, 24*7 ಕಂಟ್ರೋಲ್ ರೂಂ ತೆರೆಯಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರಿಗೆ ಒಂದು ಸುತ್ತಿನ ತರಬೇತಿ ಸೇರಿದಂತೆ ಇನ್ನಿತರ ಸಕಲ ತಯಾರಿಗಳನ್ನು ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಚುನಾವಣಾ ಕರ್ತವ್ಯಕ್ಕಾಗಿ 21 ವಿಷಯಗಳಿಗೆ 21 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯೋಗದ ಪ್ರಸ್ತುತದ ನಿರ್ದೇಶನಗಳನ್ವಯ ಕರಾರುವಕ್ಕಾಗಿ ಕಾರ್ಯನಿರ್ವಹಿಸಬೇಕು. ಮಾದರಿ ನೀತಿ ಸಂಹಿತೆಯ ಅಧಿಸೂಚನೆ ಪ್ರಕಟದ ದಿನಾಂಕದಿಂದ ಚುನಾವಣೆ ಫಲಿತಾಂಶದ ನಂತರವೂ ಜಾರಿಯಲ್ಲಿರುತ್ತದೆ.

ಈ ಸಮಯದಲ್ಲಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಅವಶ್ಯಕತೆ ಇರುವ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಬೇಕು. ಅನುಮತಿ ಇಲ್ಲದೆ ಯಾವುದೇ ರೀತಿಯ ಸಾರ್ವಜನಿಕ ಸಭೆ, ಸಮಾರಂಭಗಳು ಏರ್ಪಡದಂತೆ ನೋಡಿಕೊಳ್ಳಬೇಕು. ಅನಿವಾರ್ಯತೆ ಎಂಬ ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿರಬೇಕು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಪ್ರಕಟಿಸಲು ಸರಕಾರಿ ಮತ್ತು ಅನುದಾನಿತ ಕಟ್ಟಡಗಳನ್ನು ಬಳಸಿಕೊಳ್ಳದಂತೆ ನಿಗಾವಹಿಸಬೇಕು. ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಸರ್ಕಾದ ಅಧೀನದಲ್ಲಿರುವ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಪ್ರಚಾರ ಫಲಕಗಳಲ್ಲಿನ ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸಬೇಕು.

ಚುನಾವಣಾ ಸಭೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಕ್ಷಮದ ಅಧಿಕಾರಿಗಳ ಅನುಮತಿಯನ್ನು ಪಡೆಯಬೇಕು. ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಪ್ರಚಾರ ಕೈಗೊಳ್ಳಬೇಕು. ಚುನಾವಣೆ ಕರ್ತವ್ಯಗಳನ್ನು ಚಾಚು ತಪ್ಪದೆ ಪಾಲಿಸಿ, ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಅಪರ ಪೋಲಿಸ್ ವರಿಷ್ಠಾಧಿಕಾರಿ ಪುರುಷೋತ್ತಮ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now