ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ ವಿಫಲ
ವಿಜಯ ದರ್ಪಣ ನ್ಯೂಸ್…..
ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ ವಿಫಲ
ಶಿಡ್ಲಘಟ್ಟ : ಪ್ರತಿ ವಾರ್ಡ್‌ನಲ್ಲೂ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ ರೇಷ್ಮೆನೂಲು ಬಿಚ್ಚಾಣಿಕೆ ಮಾಡುವ ಸಣ್ಣ ಪುಟ್ಟ ರೀಲರುಗಳು, ಕೂಲಿ ಕಾರ್ಮಿಕರು ಟ್ಯಾಂಕರ್‌ನಲ್ಲಿ ಕುಡಿಯುವ ಮತ್ತು ಇತರೆ ಬಳಕೆ ನೀರು ಹಾಕಿಸಿಕೊಳ್ಳುವಂತಾಗಿದ್ದು ಸಮಸ್ಯೆಗಳನ್ನು ನಿಭಾಯಿಸಲು ನಗರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಸಂಯೋಜಕ ಬಿ.ವಿ. ರಾಜೀವ್‌ಗೌಡ ಆರೋಪ ಮಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಒಂದು ಟ್ಯಾಂಕರ್ ನೀರಿಗೆ 600-700 ರೂ.ಗಳು ಕೊಡುವಷ್ಟು ಮಟ್ಟಿಗೆ ಕೂಲಿ ಕಾರ್ಮಿಕರ, ಜನಸಾಮಾನ್ಯರ ಆರ್ಥಿಕ ಸ್ಥಿತಿಯಿಲ್ಲ, ಜತೆಗೆ ಚರಂಡಿ, ರಸ್ತೆ ಸ್ವಚ್ಛತೆ, ನೈರ್ಮಲ್ಯ, ಬೀದಿ ದೀಪಗಳ ನಿರ್ವಹಣೆ ಯಲ್ಲೂ ನಗರಸಭೆ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಸೌಕರ್ಯ ಕೊರತೆ ಕಾಡುತ್ತಿದ್ದು ನಗರಸಭೆ ಅಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ,ಅವರದ್ದೇ ಪಕ್ಷದ ಸದಸ್ಯರು ಸಹ ಅಭಿವೃದ್ಧಿ ವಿಚಾರದಲ್ಲಿ ಬೇಸರದ ಮಾತುಗಳನ್ನು ನನ್ನಲ್ಲಿ ತಿಳಿಸಿದ್ದು, ಇದೀಗ 7 ಸದಸ್ಯರು ಅನರ್ಹಗೊಂಡಿದ್ದು ಅಧ್ಯಕ್ಷರಿಗೆ ಬಹುಮತ ಇಲ್ಲವಾಗಿದೆ ಶೀಘ್ರದಲ್ಲೆ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರ, ಮುಖಂಡರ ಸಭೆ ಕರೆದು ಚರ್ಚಿಸಿ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡುವುದಾಗಿ ತಿಳಿಸಿದರು.
ನಮ್ಮ ಜತೆಯಲ್ಲೆ ಇದ್ದು ನಮ್ಮ ಪಕ್ಷದಿಂದಲೇ ಗೆದ್ದು ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಲೆಬೇಕೆಂದು ನಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ. ಎಂ.ಸಿ. ಸುಧಾಕರ್ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಅವರು ಸತತ ಪ್ರಯತ್ನ ಮಾಡಿ 7 ಸದಸ್ಯರನ್ನು ಅನರ್ಹಗೊಳಿಸುವಂತೆ ಮಾಡಿ ಬುದ್ದಿ ಕಲಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲೂ ಅಷ್ಟೆ, ಪಕ್ಷದಲ್ಲಿ ಇದ್ದುಕೊಂಡು ಅಥವಾ ಇನ್ನಾವುದೇ ರೀತಿಯಲ್ಲಿ ಪಕ್ಷ ದ್ರೋಹ ಮಾಡಿದವರಿಗೆ ಇದೇ ರೀತಿಯ ಶಿಕ್ಷೆ ಆಗಲಿದೆ ಭವಿಷ್ಯದಲ್ಲಿ ಅವರಿಗೆ ಅವರ ವಾರ್ಡ್‌ನ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು.
ನಗರಸಭೆಯ ಅವಧಿ ಇನ್ನು 7-8 ತಿಂಗಳು ಇದೆಯಾದರೂ, ಇರುವ ಸೀಮಿತ ಅವಧಿಯಲ್ಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಹುದು, ಮೂಲಸೌಕರ್ಯ
ಕಲ್ಪಿಸಬಹುದು ,ಹಾಗಾಗಿ ಜೆಡಿಎಸ್‌ನ ಕೆಲ ಸದಸ್ಯರೇ ನನ್ನನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವ ಕಾರಣ ನಗರಸಭೆಯಲ್ಲೂ ಕಾಂಗ್ರೆಸ್‌ನವರೇ ಅಧ್ಯಕ್ಷರಾದರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬ ಕಾರಣಕ್ಕೆ ಜೆಡಿಎಸ್‌ನ ಕೆಲವು ಸದಸ್ಯರು ನಮಗೆ ಬೆಂಬಲ ನೀಡಲಿದ್ದು, ಶೀಘ್ರದಲ್ಲೇ ಅವಿಶ್ವಾಸ ನಿರ್ಣಯ ಮಂಡಿಸಲಿದ್ದೇವೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಹಾಕಿ ಪಕ್ಷಕ್ಕೆ ದ್ರೋಹ ಬಗೆದ 7 ಸದಸ್ಯರು ಅನರ್ಹಗೊಂಡಿದ್ದು, ಪಕ್ಷಕ್ಕೆ ದ್ರೋಹ ಬಗೆದ ಯಾರಿಗೇ ಆಗಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಕಡೆಯ ದಿನದವರೆಗೂ ನಮ್ಮೊಂದಿಗೆ ಇದ್ದು ಏಕಾಏಕಿ ಪಕ್ಷ ಬದಲಿಸಿ ಅಡ್ಡ ಮತದಾನ ಹಾಕುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಅದಕ್ಕೂ ಮಿಗಿಲಾಗಿ ಅವರಿಗೆ ಮತ ಹಾಕಿದ ವಾರ್ಡ್ ಮತದಾರರಿಗೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿ ವಾರ್ಡ್ ಗಳ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಪ್ಸರ್ ಪಾಷ,
ತನ್ನು,ಷಮೀವುಲ್ಲಾ, ಎಂ. ಶ್ರೀನಿವಾಸ್, ಮುಖಂಡರಾದ ಪಂಪ್ ನಾಗರಾಜ್,ಎನ್.ವೆಂಕಟೇಶ್,ನಾಗನರಸಿಂಹ, ದೊಡ್ಡತೇಕಹಳ್ಳಿ ಗೋಪಾಲರೆಡ್ಡಿ, ಗಾಯತ್ರಮ್ಮ ಮುಂತಾದವರು ಉಪಸ್ಥಿತರಿದ್ದರು.