ಜೀವವನ್ನಾದರೂ ಕೊಡುತ್ತೇವೆ ಆದರೆ ಭೂಮಿಯನ್ನ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ :ಹಸಿರು ಸೇನೆ
ವಿಜಯ ದರ್ಪಣ ನ್ಯೂಸ್…
ಜೀವವನ್ನಾದರೂ ಕೊಡುತ್ತೇವೆ ಆದರೆ ಭೂಮಿಯನ್ನ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ :ಹಸಿರು ಸೇನೆ
ಶಿಡ್ಲಘಟ್ಟ : ರೈತರ ಪರ ಎಂದು ಹೇಳಿಕೊಳ್ಳುವ ಸರ್ಕಾರ, ಜನಪ್ರತಿನಿಧಿಗಳು ಬಂಡವಾಳಶಾಯಿಗಳ ಮರ್ಜಿಗೆ ಬಿದ್ದು ಫಲವತ್ತಾದ ಕೃಷಿ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೆ ಬಲವಂತಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ರಕ್ತ ಕೊಡುತ್ತೇವೆ ಜೀವವನ್ನಾದರೂ ಕೊಡುತ್ತೇವೆ ಆದರೆ ಭೂಮಿಯನ್ನ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದು ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಕೆಐಎಡಿಬಿಯು ಫಲವತ್ತಾದ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆ ಕೈ ಬಿಡಲು,ಜಂಗಮಕೋಟೆ ಬಳಿ ಏಪ್ರಿಲ್ 25 ರಂದು ನಡೆಸಿದ ರೈತರಿಂದ ಅಭಿಪ್ರಾಯ ಸಂಗ್ರಹವು ಪಾರದರ್ಶಕವಾಗಿ ನಡೆದಿಲ್ಲ ಹಾಗೂ ರೈತರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಲಘುವಾದ ಹೇಳಿಕೆ ವಿರುದ್ದ ಹಸಿರು ಸೇನೆ ರೈತ ಸಂಘ, ಕೆಐಎಡಿಬಿ ಭೂ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಾವು ಕೈಗಾರಿಕೆಗಳ ವಿರೋಧಿಗಳಲ್ಲ ಆದರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳುವುದನ್ನು ಬಲವಾಗಿ ವಿರೋಧಿಸುತ್ತೇವೆ ರೈತರು ಭೂಮಿಯನ್ನು ನೀಡಲು ಒಪ್ಪಿದರೆ ಮಾತ್ರವೇ ರಾಜ್ಯ ಸರ್ಕಾರ, ಕೆಐಎಡಿಬಿಯು ಕೈಗಾರಿಕೆಗಳ ಸ್ಥಾಪನೆಗೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಿ
ರೈತರ ವಿರೋಧದ ನಡುವೆಯೂ ಹಠಕ್ಕೆ ಬಿದ್ದಂತೆ ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತವು ಫಲವತ್ತಾದ ಕೃಷಿ ಭೂಮಿಯನ್ನು ಏಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆಯೋ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಏಪ್ರಿಲ್-25 ರಂದು ಕೆಐಎಡಿಬಿಗೆ ಜಮೀನು ನೀಡುವ ಮತ್ತು ನೀಡದಿರುವ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ರೈತರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದು ಸರಿ ಜಮೀನು ನೀಡುವ ರೈತರು ಬಿಳಿ ಚೀಟಿಯಲ್ಲೂ, ನೀಡದಿರುವ ರೈತರು ಪಿಂಕ್ ಚೀಟಿಯಲ್ಲೂ ತಮ್ಮ ಅಭಿಪ್ರಾಯವನ್ನು ಬರೆದುಕೊಟ್ಟರು.
ಆದರೆ ಬಿಳಿ ಚೀಟಿ ಹಾಗೂ ಪಿಂಕ್ ಚೀಟಿ ಎಣಿಕೆ ವೇಳೆ ಯಾವೊಬ್ಬ ರೈತರನ್ನು ಬಿಟ್ಟುಕೊಳ್ಳದೆ ಸಚಿವರು, ಅಧಿಕಾರಿಗಳು ಕೊಠಡಿಯಲ್ಲಿ ಕುಳಿತು ಮತ ಎಣಿಕೆ ಮಾಡಿ ಪ್ರಕಟಿಸಿದ ಅಂಕಿ ಅಂಶಗಳ ಬಗ್ಗೆ ನಮಗೆ ಅನುಮಾನ ಇದೆ, ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಪಾರದರ್ಶಕವಾಗಿ ಎಣಿಕೆ ಕಾರ್ಯ ಆಗಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಎಣಿಕೆ ಕಾರ್ಯ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹಸಿರು ಶಾಲು ಹಾಕಿಕೊಂಡ ಎಲ್ಲರೂ ರೈತರಲ್ಲ ಎಂದೆಲ್ಲಾ ಮಾತನಾಡಿದ್ದೀರಿ, ಕೆಐಎಡಿಬಿಗೆ ಏಕೆ ವಿರೋಧಿಸುತ್ತೀರಿ, ಡ್ರೀಮ್ಡ್ ಫಾರೆಸ್ಟ್ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ್ದೀರಿ. ನಾವು ಡೀಮ್ಡ್ ಫಾರೆಸ್ಟ್ ಬಗ್ಗೆ ಧ್ವನಿ ಎತ್ತಿದ್ದೇವೆ, ಹೋರಾಟವನ್ನೂ ಮಾಡಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ರೈತರನ್ನು ಗುಳೆ ಎಬ್ಬಿಸದಂತೆ ತಡೆದಿದ್ದೇವೆ ಎಂದರು.
ಹಸಿರು ಶಾಲು ಹಾಕಿರುವುದು ರೈತ ಕಷ್ಟಗಳಿಗೆ ಸ್ಪಂಧಿಸಲು, ಹಾಗಾಗಿಯೆ ಕೆಐಎಡಿಬಿಗೆ ಜಮೀನನ್ನು ನೀಡುವುದನ್ನು ವಿರೋಧಿಸುತ್ತಿದ್ದೇವೆ ಹಸಿರು ಶಾಲು ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಸಚಿವರಿಗೆ ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ
ಜಂಗಮಕೋಟೆ ಬಾಗದಲ್ಲಿ ಶೇ. 70 ರಿಂದ 90 ಭಾಗದಷ್ಟು ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಾರೆ ಆ ಹಿಪ್ಪುನೇರಳೆ ಬೆಳೆಯು ಸ್ಥಳವನ್ನು ಕೆಐಡಿಬಿ ಗೆ ಕೊಟ್ಟಲ್ಲಿ ರೇಷ್ಮೆ ಬೆಳೆಯುವ ರೈತರು ಏನಾಗಬೇಕು ,ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನಗರ ಸಮೀಪ ಹನುಮಂತಪರ ಬಳಿ 200 ಕೋಟಿ ಖರ್ಚು ಮಾಡಿ ಐಟೆಕ್ ರೇಷ್ಮೆಗೂಡು ಮಾರ್ಕೆಟ್ ನಿರ್ಮಾಣಕ್ಕೆ ಅಣಿಯಾಗುತ್ತಿದೆ ಹಿಪ್ಪುನೇರಳೆ ಸೊಪ್ಪು ಬೆಳೆ ಇಲ್ಲದ ಮೇಲೆ ಗೂಡು ಮಾರ್ಕೆಟ್ ಏತಕ್ಕೆ.? ಪೂರ್ವ ನಿಯೋಜಿತವಾಗಿ ಯೋಜನೆಗಳನ್ನು ರೂಪಿಸದೇ ಜನ ಸಾಮಾನ್ಯರ ತರಿಗೆ ಹಣವನ್ನು ಸರ್ಕಾರ ಪೋಲು ಮಾಡುವುದು ಎಷ್ಟು ಸರಿ ದಯಮಾಡಿ ರೈತರನ್ನು ಒಕ್ಕಲೆಬ್ಬಿಸದೇ ಈ ಬಾಗದಲ್ಲಿ ಕೆಐಡಿಬಿ ಯೋಜನೆಯನ್ನು ಕೈಬಿಟ್ಟು ನಗರಕ್ಕೆ ಉತ್ತರ ಭಾಗದಲ್ಲಿ ನಗರದ ಸಮೀಪ ಸ್ಥಳ ಪರಿಶೀಲನೆ ಮಾಡಿ ರೈತರ ಬದುಕನ್ನು ಹಸನಾಗಿಸಿ ಎಂದರು.
ಸುಮಾರು 10-15 ಸಾವಿರ ಎಕರೆಯಷ್ಟು ಭೂಮಿಯನ್ನು ಈಗಾಗಲೇ ದೇವನಹಳ್ಳಿ, ವಿಜಯಪುರ ಹಾಗು ದೊಡ್ಡಬಳ್ಳಾಪುರ ಭಾಗದಲ್ಲಿ ಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಈ ಪ್ರದೇಶಗಳಲ್ಲಿ ಇನ್ನೂ ಕೈಗಾರಿಕೆಗಳೇ ಬಂದಿಲ್ಲ ಜಂಗಮಕೋಟೆ ಭಾಗದಲ್ಲಿ ಈಗಾಗಲೆ ಭೂಮಿಯನ್ನು ಮಾರಾಟ ಮಾಡುವವರು ಮಾರಾಟ ಮಾಡಿದ್ದಾರೆ ಫಲವತ್ತಾದ ಭೂಮಿಯನ್ನು ಉಳಿಸಿಕೊಂಡಿದ್ದಾರೆ,ಆ ಭೂಮಿಯಲ್ಲಿ ರೇಷ್ಮೆ, ತರಕಾರಿ ಬೆಳೆಯುತ್ತಿದ್ದಾರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿಲ್ಲ ತಾಲ್ಲೂಕಿನಲ್ಲಿ ಸಾಕಷ್ಟು ಬರಡು ಭೂಮಿಯಿದೆ ಆ ಭೂಮಿಯಲ್ಲಿ ಕೈಗಾರಿಕೆಗಳು ಮಾಡಿದರೆ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಶಾಸಕರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ರೈತರಿಗೆ ನ್ಯಾಯ ಒದಗಿಸಲಿ ಎಂದರು.
ಈ ವೇಳೆ ಮಾಜಿ ಶಾಸಕ ಎಂ.ರಾಜಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎನ್.ವೆಂಕಟೇಶ್ ಮತ್ತೀತರ ಮುಖಂಡರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ನಗರದ ಕೆ.ಎಸ್.ಆರ್.ಸಿ.ಬಸ್ ನಿಲ್ದಾಣದಿಂದ ತಾಲ್ಲೂಕು ಕಛೇರಿವರೆಗೆ ರೈತರು ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಸಾಗಿದರು. ರೈತರು ಕಾನೂನು ಪ್ರಕ್ರಿಯೆಗೆ ಹೋದರೆ ಅಧಿಕಾರಿಗಳು ಅಪರಾಧಿಕಾರಿಗಳಾಗುತ್ತೀರಿ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು. ಕೂಡಲೇ ರೈತರು ಭೂಮಿ ಕೊಡುವುದಿಲ್ಲವೆಂಬ ವರದಿಯನ್ನು ಸರ್ಕಾರಕ್ಕೆ ಕಳುಹಿಸುವ ಕೊಡುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ರೈತಸಂಘದ ಭೈರೇಗೌಡ ಒತ್ತಾಯಿಸಿದರು.
ಇದೇ ವೇಳೆ ಸರ್ಕಾರಕ್ಕೆ ಉಪ ವಿಭಾಗಾಧಿಕಾರಿ ಅಶ್ವಿನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು, ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಿ ಅಂತಿಮವಾಗಿ ತಿಳಿಸಲಾಗುವುದು ತಕ್ಷಣವೇ ಏನೂ ಹೇಳಲಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಕೆಐಎಡಿಬಿ ಭೂ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್,ಚಿಂತಾಮಣಿ ಬಿಜೆಪಿ ಮುಖಂಡ ವೇಣುಗೋಪಾಲ್, ಸೀಕಲ್ ಆನಂದಗೌಡ, ರೈತ ಸಂಘದ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ,ಅಜಿತ್ ಕುಮಾರ್ , ಹಾಗು ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.