ಬಿಜೆಪಿ ಬಹಿರಂಗ ಚರ್ಚೆಗೆ ಬರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್….

ಬಿಜೆಪಿಯವರದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ

ಬಿಜೆಪಿ ಬಹಿರಂಗ ಚರ್ಚೆಗೆ ಬರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ಜುಲೈ 20: ಸರ್ಕಾರದ ಸಾಧನೆಯ ಬಗ್ಗೆ ಸುಳ್ಳು ಹೇಳುವ ಬಿಜೆಪಿಯವರು ಎಂದಿಗೂ ಬಹಿರಂಗ ಚರ್ಚೆಗೆ ಬರುವುದಿಲ್ಲ. ಆದರೆ ನಾವು ಚರ್ಚೆಗೆ ಸದಾ ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ
ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಭ್ರಮೆ
ನಿನ್ನೆ ನಡೆದ ಮೈಸೂರಿನ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಡಿಸಿಎಂ ಗೆ ಅವಮಾನ ಮಾಡಿದೆ ಎಂದು ಬಿಜೆಪಿಯವರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಕಾರ್ಯಕ್ರಮದಲ್ಲಿ ಇರುವವರಿಗೆ ಸ್ವಾಗತ ಮಾಡುವುದು ಪರಿಪಾಠ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಕಾರ್ಯಕ್ರಮದಲ್ಲಿ ಆ ವೇಳೆಯಲ್ಲಿ ಇರದಿದ್ದ ಕಾರಣ, ಅವರ ಹೆಸರನ್ನು ತೆಗೆದುಕೊಳ್ಳಲಿಲ್ಲವಾದ್ದರಿಂದ, ಇದರಲ್ಲಿ ಅವಮಾನ ಮಾಡುವ ಪ್ರಶ್ನೆಯಿಲ್ಲ. ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ನನ್ನ ಹಾಗೂ ಡಿಸಿಎಂ ನಡುವೆ ಒಡಕುಂಟು ಮಾಡುವ ಉದ್ದೇಶದಿಂದ ಬಿಜೆಪಿಯವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಇದರಿಂದ ರಾಜಕೀಯ ಲಾಭವಾಗಬಹುದೆಂಬ ಭ್ರಮೆ ಬಿಜೆಪಿಯವರಿಗಿದ್ದು, ಇದು ಸದಾ ಭ್ರಮೆಯಾಗಿಯೇ ಇರಲಿದೆ ಎಂದರು.

ಡಿಜಿಟಲ್ ಪೇಮಂಟ್-ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ
ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ನಿಂದ ತೆರಿಗೆ ನೋಟೀಸ್ ನೀಡುತ್ತಿದೆ ಎಂಬ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜಿಎಸ್ ಟಿ ಎಂಬುದನ್ನು ಕೇಂದ್ರ ಸರ್ಕಾರ ಮಾಡಿದ್ದು, ಜಿಎಸ್ ಟಿ ಕೌನ್ಸಿಲ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಇದಕ್ಕೆ ರಾಜ್ಯಸರ್ಕಾರಗಳು ಜವಾಬ್ದಾರಿಯಿಲ್ಲ. ಆದಾಗ್ಯೂ ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಜೆಪಿ ಅನುಕರಿಸುತ್ತಿದೆ

ನಿನ್ನೆ ನಡೆದ ಸಾಧನಾ ಸಮಾವೇಶ ಬಿಜೆಪಿಯವರಿಗೆ ಉತ್ತರ ನೀಡಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರಕ್ಕೆ ಎರಡು ವರ್ಷತುಂಬಿದ ಸಂದರ್ಭದಲ್ಲಿ ವಿಜಯನಗರದಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 2 ಲಕ್ಷ ಜನ ಭಾಗವಹಿಸಿದ್ದರು. ಇದು ಸರ್ಕಾರಕ್ಕೆ ಜನರ ಬೆಂಬಲವನ್ನು ಸೂಚಿಸುತ್ತದೆ. ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಅನುಕರಿಸುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಚ್ ಸಿ ಮಹದೇವಪ್ಪ ಶಾಸಕ ಅನಿಲ್ ಚಿಕ್ಕಮಾದು ಡಿ ರವಿಶಂಕರ್ ದರ್ಶನ್ ಧ್ರುವನಾರಾಯಣ್ ಡಾ. ಡಿ ತಿಮ್ಮಯ್ಯ ಸೇರಿದಂತೆ ಶಾಸಕರು  ಮುಖಂಡರು ಅಧಿಕಾರಿಗಳು ಹಾಜರಿದ್ದರು.