ಇಂದಿರಾ ಕ್ಯಾಂಟೀನ್ ಬಡವರಿಗೆ, ಕಾರ್ಮಿಕರ ಹೊಟ್ಟೆ ತುಂಬಿಸಲು ಸಹಕಾರಿ: ಸಚಿವ ಕೆ.ಹೆಚ್. ಮುನಿಯಪ್ಪ

ವಿಜಯ ದರ್ಪಣ ನ್ಯೂಸ್….

ಇಂದಿರಾ ಕ್ಯಾಂಟೀನ್ ಬಡವರಿಗೆ, ಕಾರ್ಮಿಕರ ಹೊಟ್ಟೆ ತುಂಬಿಸಲು ಸಹಕಾರಿ: ಸಚಿವ ಕೆ.ಹೆಚ್. ಮುನಿಯಪ್ಪ

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಆಗಸ್ಟ್. 02 : ಬಡವರಿಗೆ, ಕೂಲಿ ಕಾರ್ಮಿಕರಿಗೆ, ಉದ್ಯೋಗಿಗಳಿಗೆ ಗುಣಮಟ್ಟದ ತಿಂಡಿ-ಊಟ ನೀಡುವ ಮಹತ್ತರ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಅನ್ನು ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದ್ದು, ನಿತ್ಯವೂ ನೂರಾರು ಜನರಿಗೆ ಇಂದಿರಾ ಕ್ಯಾಂಟೀನ್ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡುತ್ತಿವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಇಂದಿರಾ ಕ್ಯಾಟೀನ್ ಉದ್ಘಾಟನೆ, ಪುರಸಭೆ ನಗರೋತ್ಥಾನ ಹಂತ-4ರ ಕಾಮಗಾರಿ ಶಂಕುಸ್ಥಾಪನೆ, ಸಿಎಸ್ಆರ್ ಅನುದಾನದಡಿ ನಿರ್ಮಾಸಲಿರುವ ಶಾಲಾ ಕಟ್ಟಡ ಮತ್ತು ಐಒಸಿಎಲ್ ಕಂಪನಿ ವತಿಯಿಂದ ನಿರ್ಮಿಸಲಿರುವ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಹಾಗೂ ನಮ್ಮ ಕ್ಲಿನಿಕ್ ಉದ್ಘಾಟನೆ ಮತ್ತು ಸಿಎಸ್ಆರ್ ಅನುದಾನದಡಿ ನಿರ್ಮಿಸಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ 10 ಶಾಲಾ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳ ಜತೆಗೆ ಮತ್ತೆ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡುತ್ತಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಸಿಗಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ದೇವನಹಳ್ಳಿ ತಾಲ್ಲೂಕಿನ ಉಗನವಾಡಿ ಗ್ರಾಮದ ಸರ್ಕಾರಿ ಎಚ್.ಪಿ.ಎಸ್ ಶಾಲೆಯ 1 ಕೋಟಿ ರೂ. ವೆಚ್ಚದಲ್ಲಿ ಐಒಸಿಎಲ್ ಕಂಪನಿ ವತಿಯಿಂದ ನಿರ್ಮಿಸಲಿರುವ
ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ, ವಿಜಯಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಜತೆಗೆ ಎರಡು ನಮ್ಮ ಕ್ಲಿನಿಕ್ ಹಾಗೂ ಸಿಎಸ್ಆರ್ ಅನುದಾನದಡಿ ಎಂಬಸ್ಸಿ ಕಂಪನಿ ವತಿಯಿಂದ ಸರ್ಕಾರಿ ಶಾಲೆಯ 10 ಕೊಠಡಿ ನಿರ್ಮಾಣ ಉದ್ಘಾಟನೆ ಮತ್ತು ದಂಡಿಗಾನಹಳ್ಳಿಯಲ್ಲಿ ಸರ್ಕಾರಿ ಎಚ್.ಪಿ.ಎಸ್ ಶಾಲೆ ಕಟ್ಟಡವನ್ನು ಸಿಎಸ್ಆರ್ ಅನುದಾನದಡಿ ಪ್ರೆಸ್ಟೀಜ್ ಕಂಪನಿ ನಿರ್ಮಿಸಲಿರುವ ಕಾಮಗಾರಿ ಶಂಕುಸ್ಥಾಪನೆ ಮಾಡಲಾಗಿದೆ. ಇದರಿಂದಾಗಿ ಜನ-ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಮತ್ತು ಎಲ್ಲ ವರ್ಗದ ಮಕ್ಕಳಿಗೂ ಸುಸಜ್ಜಿತ ಕಲಿಕಾ ವಾತಾವರಣದೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದರು.

ನಗರೋತ್ಥಾನ ಹಂತ-4ರ ಅಡಿಯಲ್ಲಿ ಅಂದಾಜು 257 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ನಾನು ಬದ್ಧನಾಗಿರುವೆ ಎಂದು ಸಚಿವರು ಹೇಳಿದರು.

ಚಿಕ್ಕನಹಳ್ಳಿಯಿಂದ ವೆಂಕಟಾಪುರ ವರೆಗೂ ಚತುಷ್ಪಥ ರಸ್ತೆ 50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಆದಷ್ಟು ಬೇಗನೇ ಒಳಚರಂಡಿ ಹಾಗೂ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಎಸ್.ಟಿ.ಪಿ ಕಾಮಗಾರಿ ಕೈಗೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.

28 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ 28 ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಿಸಿದ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾವು ಎಲ್ಲ ವರ್ಗದ ನಿವೇಶನ ರಹಿತ ಬಡವರಿಗೆ ನಿವೇಶನ ಕಲ್ಪಿಸುವ ಜತೆಗೆ ಸೂರು ಕಟ್ಟಿಸಿಕೊಡುತ್ತಿದೆ. ತಾಲೂಕಿನಲ್ಲಿ ನಿವೇಶನ ರಹಿತ 2500 ಕುಟುಂಬಗಳಿಗೆ ಮೂರು ತಿಂಗಳಲ್ಲಿ ನಿವೇಶನ ವಿತರಿಸುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ಬಯಪ್ಪಾ ಅಧ್ಯಕ್ಷ ಶಾಂತಕುಮಾರ್, ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್, ಕನ್ನಮಂಗಲ ಗ್ರಾ.ಪಂ ಅಧ್ಯಕ್ಷೆ ಶಾಲಿನಿ ಬಿ.ಎಸ್, ಗೊಡ್ಲುಮುದ್ದೇನಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ರತ್ನಮ್ಮ ಮರಿತಮ್ಮಣ್ಣ, ಬಮುಲ್ ನಿರ್ದೇಶಕ ಎಸ್.ಪಿ ಮುನಿರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ.ಎನ್ ಅನುರಾಧ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎಸ್ ರಮೇಶ್, ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಇಒ ಶ್ರೀನಾಥಗೌಡ, ದೇವನಹಳ್ಳಿ ತಾಲ್ಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಹಾಗೂ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.