ವಿದ್ಯುತ್ ಚಾಲಿತ ಯಮಾಹಾ ಇಸಿ-06 ಬೈಕ್ ಹಸ್ತಾಂತರ ಸ್ಥಳೀಯ ಉತ್ಪಾದನೆಗೆ ಸರಕಾರದ ಒತ್ತು: ಎಂ ಬಿ ಪಾಟೀಲ
ವಿಜಯ ದರ್ಪಣ ನ್ಯೂಸ್….
ರಿವರ್ ಮೊಬಿಲಿಟಿ ತಯಾರಿಕೆಯ ವಿದ್ಯುತ್ ಚಾಲಿತ ಯಮಾಹಾ ಇಸಿ-06 ಬೈಕ್ ಹಸ್ತಾಂತರ ಸ್ಥಳೀಯ ಉತ್ಪಾದನೆಗೆ ಸರಕಾರದ ಒತ್ತು: ಎಂ ಬಿ ಪಾಟೀಲ

ಹೊಸಕೋಟೆ: ಸ್ಥಳೀಯವಾಗಿ ಉತ್ಪಾದನೆಯನ್ನು ಸಾಧ್ಯವಾಗಿಸುವ ಕೈಗಾರಿಕಾ ಸಹಭಾಗಿತ್ವದ ಅಡಿ ಕರ್ನಾಟಕ ಮೂಲದ ರಿವರ್ ಮೊಬಿಲಿಟಿ ಕಂಪನಿ ತಯಾರಿಸಿರುವ ಯಮಾಹಾ ಇಸಿ-06 ವಿದ್ಯುತ್ ಚಾಲಿತ ಬೈಕ್ ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಯಮಾಹಾ ಕಂಪನಿಗೆ ಇಲ್ಲಿನ ತಯಾರಿಕಾ ಘಟಕದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಗರ ಸಂಚಾರವನ್ನು ಪರಿಸರಸ್ನೇಹಿ, ಸುಗಮ ಮತ್ತು ಸುಸ್ಥಿರಗೊಳಿಸುವಂತಹ ಇಂತಹ ದ್ವಿಚಕ್ರ ವಾಹನ ತಯಾರಿಕೆ ಸ್ಥಳೀಯವಾಗಿಯೇ ಆಗತೊಡಗಿರುವುದು ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಒಂದು ಉಜ್ಜ್ವಲ ಅಧ್ಯಾಯವಾಗಿದೆ. ಇದು ರಾಜ್ಯವು ಭವಿಷ್ಯದ ಸಂಚಾರ ವ್ಯವಸ್ಥೆಯ ನಿರ್ಮಾಣದ ಸರಿಯಾದ ಪಥದಲ್ಲಿ ಸಾಗುತ್ತಿರುವುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ’ ಎಂದು ಬಣ್ಣಿಸಿದ್ದಾರೆ. ಇದೇ ವೇಳೆಯಲ್ಲಿ ಅವರು ಕಂಪನಿಯ ತಯಾರಿಕಾ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ವೀಕ್ಷಿಸಿದರು.
ಈ ಘಟಕದಲ್ಲಿ ವರ್ಷಕ್ಕೆ ಇಂತಹ ಉತ್ಕೃಷ್ಟ ಗುಣಮಟ್ಟದ 2 ಸಾವಿರ ಇ.ವಿ. ಬೈಕ್ ತಯಾರಿಸಲಾಗುವುದು. ಇವಕ್ಕೆ ಇಲ್ಲೇ ತಯಾರಿಸುವ ಬ್ಯಾಟರಿ ಅಳವಡಿಸಲಾಗುವುದು. ಇದು 1 ಲಕ್ಷ ಕಿ.ಮೀ. ವರೆಗೂ ವಾಹನ ಓಡಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ 10 ವರ್ಷಗಳ ವಾರಂಟಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಉತ್ಪಾದನೆಯಿಂದ ವ್ಯಾಪಕ ಆರ್ಥಿಕ ಮೌಲ್ಯವೂ ಸೃಷ್ಟಿಯಾಗಲಿದೆ. ಇದು ಕೌಶಲ್ಯಪೂರ್ಣ ಉದ್ಯೋಗಗಳ ಸೃಷ್ಟಿ, ಸ್ಥಳೀಯ ಪೂರೈಕೆ ಸರಪಳಿ ಬಲವರ್ಧನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾಲಿಗೆ ಸದವಕಾಶ ಇವೆಲ್ಲವನ್ನೂ ಸಾಧ್ಯವಾಗಿಸಲಿದೆ ಎಂದು ಅವರು ವಿವರಿಸಿದ್ದಾರೆ.
ವಾಹನ ಮಾರುಕಟ್ಟೆ ಈಗ ವಿದ್ಯುತ್ ಚಾಲಿತ ವಾಹನಗಳತ್ತ ಹೋಗುತ್ತಿದೆ. ರಾಜ್ಯದಲ್ಲಿ ಕೂಡ ಇದನ್ನು ಗಮನಿಸಿ, ಈಗಾಗಲೇ ಸಾವಿರಾರು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವುಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲಾಗುವುದು. ಇದು ಇ.ವಿ. ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರವು ಹೊಂದಿರುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ಪಾಟೀಲ ಹೇಳಿದ್ದಾರೆ.
ಸಚಿವರು ಇಡೀ ಕಾರ್ಖಾನೆಯಲ್ಲಿ ಓಡಾಡಿ, ಬೈಕ್ ತಯಾರಿಕೆಯನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಯಮಾಹಾ ಇಂಡಿಯಾ ಅಧ್ಯಕ್ಷ ಜಿಮ್ ಅಯೋಟಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ರಿವರ್ ಸಿಇಒ ಅರವಿಂದ ಮಣಿ, ಸಹ ಸಂಸ್ಥಾಪಕ ವಿಪಿನ್ ಜಾರ್ಜ್ ಮುಂತಾದವರು ಉಪಸ್ಥಿತರಿದ್ದರು.
ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಜ. 09:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವನಾಯಕನಹಳ್ಳಿ, ದೇವನಹಳ್ಳಿ ತಾಲ್ಲೂಕು, (ರಾಜ್ಯ ಪಠ್ಯಕ್ರಮ) ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಸಿ) ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು ಇಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್ ಲೈನ್ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು https://sevasindhuservices.karnataka.gov.in ಲಿಂಕ್ ಮೂಲಕ 10-02-2026 ರೊಳಗಾಗಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಈ ಶಾಲೆಗಳಲ್ಲಿ ಶೇ.75ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧಿಕ, ಸಿಖ್, ಪಾರ್ಸಿ) ಹಾಗೂ ಶೇ. 25ರಷ್ಟು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಅನುಗುಣವಾಗಿ ಹಾಗೂ ರೋಸ್ಟರ್ ನಿಯಮದಂತೆ ಪ್ರವೇಶ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ
ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ), ದೇವನಾಯಕನಹಳ್ಳಿ, ದೇವನಹಳ್ಳಿ ತಾಲ್ಲೂಕು, ಮೊಬೈಲ್ ಸಂಖ್ಯೆ- 9632249214/ 9538384846, ಪ್ರಾಂಶುಪಾಲರು, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಸಿ) ಗಿಡ್ಡಪ್ಪನಹಳ್ಳಿ ಹೊಸಕೋಟೆ ತಾಲ್ಲೂಕು, ದೂರವಾಣಿ ಸಂಖ್ಯೆ- 8660971267/ 8317403213,
ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ, ಹೊಸಕೋಟೆ ಮತ್ತು ತಾಲ್ಲೂಕು ಮಾಹಿತಿ ಕೇಂದ್ರ, ವಿಜಯಪುರ ದೇವನಹಳ್ಳಿ ತಾ. ದೂರವಾಣಿ ಸಂಖ್ಯೆ-8861926851, 7676905779, 8310103980, 9845622337, 9986874875, 8904491033, ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಛೇರಿ ನಂ. 216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ-562110. ದೂರವಾಣಿ ಸಂಖ್ಯೆ- 080-29787455 ಸಂಪರ್ಕಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾಮುವಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿ ಪ್ರಾರಂಭ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಜ. 12:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ರ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಸ್ನಾತಕ ಕೋರ್ಸುಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಎಸ್ಸಿ, ಬಿ.ಲಿಬ್.ಐ.ಎಸ್ಪಿ ಮತ್ತು ಸ್ನಾತಕೋತ್ತರ ಕೋರ್ಸುಗಳಾದ ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ, ಎಂ.ಎಸ್ಸಿ, ಎಂ.ಲಿಬ್.ಐ.ಎಸ್ಸಿ ಹಾಗೂ ಯುಜಿ/ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗಾಗಿ ಜ. 09 ರಿಂದ ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಬಾಪೂಜಿನಗರ ಇಲ್ಲಿ ಆನ್ ಲೈನ್ ಮೂಲಕ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದ್ದು, ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ www.ksoumysuru.ac.in ದಲ್ಲಿ ಪ್ರವೇಶಾತಿಗೆ ಲಾಗಿನ್ ಮಾಡಬಹುದು.
ಅಸಕ್ತ ಅರ್ಹ ವಿದ್ಯಾರ್ಥಿಗಳು online ನಲ್ಲಿ ಅರ್ಜಿ ಸಲ್ಲಿಸಿ ನಂತರ ಅಗತ್ಯ ದಾಖಲಾತಿಗಳೊಂದಿಗೆ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ, ಪ್ರವೇಶಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಚೇರಿ ದೂ. 080-26603664 ಅಥವಾ 9880526439/ 9019526439 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
