ನಗರೋತ್ಥಾನ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ: ಸಚಿವ ರಹೀಂ ಖಾನ್
ವಿಜಯ ದರ್ಪಣ ನ್ಯೂಸ್….
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಬರದಂತೆ ಮುಂಜಾಗ್ರತೆ ವಹಿಸಿ
ನಗರೋತ್ಥಾನ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ: ಸಚಿವ ರಹೀಂ ಖಾನ್

ಬಿಜಿಎಸ್ ನಗರ ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಫೆ. 13:
‘ಸರ್ಕಾರದಿಂದ ಬಿಡುಗಡೆಯಾದ ಅನುದಾನ ಆಯಾ ಆರ್ಥಿಕ ವರ್ಷದಲ್ಲೇ ಬಳಕೆ ಮಾಡಬೇಕು ಅಮೃತ್ ನಗರೋತ್ಥಾನ- 04 ರಡಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪೌರಾಡಳಿತ ಹಾಗೂ ಹಜ್ ಇಲಾಖೆ ಸಚಿವರಾದ ರಹೀಂ ಖಾನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರೋತ್ಥಾನ-04 ಮೂರು ವರ್ಷದ ಯೋಜನೆ, ಕೈಗೆತ್ತಿಕೊಂಡಿರುವ ಕಾಮಗಾರಿಗಳು ಇನ್ನು ಬಾಕಿ ಇರುವುದರಿಂದ ಯೋಜನೆಯನ್ನು 4 ವರ್ಷಗಳಿಗೆ ವಿಸ್ತರಣೆ ಮಾಡಲಾಗಿದೆ. ರಾಜ್ಯಾದ್ಯಂತ ನಗರೋತ್ಥಾನ-4 ರಲ್ಲಿ 600 ಕಾಮಗಾರಿಗಳು ಬಾಕಿ ಉಳಿದಿದೆ. ನಗರೋತ್ಥಾನ-05 ಕ್ಕೆ 5000 ಕೋಟಿ ನೀಡಲು ಆರ್ಥಿಕ ಇಲಾಖೆಗೆ ವರದಿ ನೀಡಲಾಗಿದೆ. ಮೊದಲು ನಗರೋತ್ಥಾನ-4 ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು ಎಂದರು.
ಮುಂಬರುವ ಬೇಸಿಗೆ ಸಮಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸಮಸ್ಯೆ ಉಂಟಾಗುವ ಪ್ರದೇಶದಲ್ಲಿ ಮೊದಲೇ ಅಗತ್ಯ ತಯಾರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಬಾಕಿ ಇರುವ ತೆರಿಗೆಯನ್ನು ಶೀಘ್ರ ವಸೂಲಾತಿ ಮಾಡಿ*
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ತೆರಿಗೆ, ಅಂಗಡಿ ಮಳಿಗೆಗಳ ಬಾಡಿಗೆ ತೆರಿಗೆ, ಉದ್ದಿಮೆ ಪರವಾನಗಿ ತೆರಿಗೆ ವಸೂಲಾತಿಯಲ್ಲಿ ಶೇಕಡ 100% ರಷ್ಟು ಪ್ರಗತಿ ಸಾಧಿಸಿ, ಜೊತೆಗೆ 10 ವರ್ಷಗಳಿಂದ ಒಂದೇ ರೀತಿಯ ತೆರಿಗೆ ಕಟ್ಟುತ್ತಿರುವ ತೆರಿಗೆದಾರರ ಮನೆಗಳಿಗೆ ಭೇಟಿ ನೀಡಿ, ಅಲ್ಲಿ ಎಷ್ಟು ಮಹಡಿ ಮನೆಗಳಿವೆ, ಒಂದೇ ಮನೆಗೆ ಬಾಡಿಗೆ ಕಟ್ಟುತ್ತಿದ್ದಾರೆ, ಎಷ್ಟು ಮನೆಗಳಿಗೆ ಬಾಡಿಗೆ ಕಟ್ಟುತ್ತಿದ್ದಾರೆ ಎನ್ನುವುದನ್ನು ಪರಿಶೀಲನೆ ಮಾಡಿ ಎಂದರು.
ಇ-ಖಾತೆ ಮಾಡಲು ವಿಶೇಷ ಶಿಬಿರ ಆಯೋಜಿಸಿ
ಅನಧಿಕೃತ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಪ್ರತ್ಯೇಕ ವಹಿ (ಬಿ-ರಿಜಿಸ್ಟರ್) ಯಲ್ಲಿ ದಾಖಲಿಸಲು ಅವಕಾಶ ಕಲ್ಪಿಸಿದ್ದು, ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ఆస్తి ತೆರಿಗೆ ಸಂಗ್ರಹಣೆ ಮಾಡಲು ಅನುಕೂಲವಾಗುತ್ತದೆ. ಹಾಗೂ ಸಾರ್ವಜನಿಕರಿಗೆ ತಮ್ಮ ಆಸ್ತಿಯ ಇ-ಖಾತಾ ದೊರೆಯುವುದರಿಂದ ವಹಿವಾಟುಗಳನ್ನು ನಡೆಸಲು ಕೂಡ ಅನುಕೂಲವಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ -ಅಭಿಯಾನವನ್ನು ನಡೆಸಿ ನಿಯಮಿತವಾಗಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನಿಗಧಿಪಡಿಸಿದ ಸಮಯದೊಳಗೆ ಇ-ಖಾತಾ ದೊರೆಯುವಂತೆ ಕ್ರಮ ಕೈಗೊಳ್ಳಿ ಎಂದರು.
ಇದಕ್ಕೂ ಮುನ್ನ ದೇವನಹಳ್ಳಿ ಪಟ್ಟಣದ ಎಸ್.ಎಫ್.ಟಿ.ಪಿ ಘಟಕ ಹಾಗೂ ಸಿಹಿನೀರು ಕೆರೆಯ ನೀರು ಸಂಸ್ಕರಣಾ ಘಟಕಗಳಿಗೆ ಪೌರಾಡಳಿತ ಸಚಿವರು ಭೇಟಿ ನೀಡಿ, ಮಾಹಿತಿ ಪಡೆದರು.
ಸಭೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ. ಪಿ.ಎನ್ ರವಿಂದ್ರ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಚಿವರ ಆಪ್ತ ಕಾರ್ಯದರ್ಶಿ ಡಾ. ಮುರಳೀಧರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಮೇಶ್, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆ ಸುಮಿತ್ರಾ ಕೆ, ಉಪಾಧ್ಯಕ್ಷ ಎಂ. ಮಲ್ಲೇಶ್, ಪೌರಾಡಳಿತ ನಿರ್ದೇಶನಾಲಯದ ಬಸವರಾಜ ಸೇರಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
&&&&&&&&&&&&&&&&
“ಶಿವ ಶಿವ ಶಿವ ಎನ್ನಿರೋ”
ವಿಶೇಷ ದಾಸವಾಣಿ ಕಾರ್ಯಕ್ರಮ
————————————-

ಬೆಂಗಳೂರು : ತ್ಯಾಗರಾಜನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಫೆಬ್ರವರಿ 15, ಭಾನುವಾರ ಬೆಳಗ್ಗೆ ರುದ್ರ ಪಾರಾಯಣ, ಕ್ಷೀರಾಭಿಷೇಕ, ವಿಶೇಷ ಅಲಂಕಾರ, ಮಹಾ ಮೃತ್ಯುಂಜಯ ಹೋಮ, ಪೂರ್ಣಾಹುತಿ ಮಹಾಮಂಗಳಾರತಿ. ಸಂಜೆ 6-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಇವರಿಂದ “ಶಿವ ಶಿವ ಶಿವ ಎನ್ನಿರೋ” ಎಂಬ ಶೀರ್ಷಿಕೆಯಲ್ಲಿ ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಿದ್ದು, ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ, ತಬಲಾ ವಾದನದಲ್ಲಿ ಶ್ರೀ ಸರ್ವೋತ್ತಮ ಸಹಕರಿಸಲಿದ್ದಾರೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಅಡ್ಡರಸ್ತೆ ತ್ಯಾಗರಾಜನಗರ ಬೆಂಗಳೂರು-560028
ಮಹಾಶಿವರಾತ್ರಿ ಮಹೋತ್ಸವ
——————————–

