ವಿಜಯ ದರ್ಪಣ ನ್ಯೂಸ್….
ಮೇ13 ವರುಣ ವಿಧಾನಸಭಾ ಕ್ಷೇತ್ರ, 17ಕ್ಕೆ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಚಾಮುಂಡೇಶ್ವರಿ ಕಾರ್ಯಕ್ರಮಕ್ಕೆ ಎಚ್‌ಡಿಕೆ ಸಾರಥ್ಯ, ಸಿಎಂ ಕ್ಷೇತ್ರದಲ್ಲೂ ಜನರೊಂದಿಗೆ ಜನತಾದಳ

ತಾಂಡವಪುರ ಮೇ 11: ಸದ್ದಿಲ್ಲದೆ ಸಂಘಟನೆ ಶುರು ಮಾಡಿರುವ ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಮೇ13 ವರುಣ, ವಿಧಾನಸಭಾ ಕ್ಷೇತ್ರ 17ಕ್ಕೆ ಚಾಮುಂಡೇಶ್ವರಿಯಲ್ಲಿ ಆಯೋಜಿಸಲು ನಿರ್ಧರಿಸಿದ್ದು, ಈ ಶಕ್ತಿ ಪ್ರದರ್ಶನ ಕಾರ್ಯಕ್ರಮಕ್ಕೆ, ಅದರಲ್ಲೂ ವಿಶೇಷವಾಗಿ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಾರಥ್ಯವಹಿಸಲಿದ್ದಾರೆ.
ಈ ಕುರಿತು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮ ಈಗಾಗಲೇ ರಾಜ್ಯದಲ್ಲಿ 75 ಕ್ಷೇತ್ರದಲ್ಲಿ ಪೂರ್ಣಗೊಳಿಸಿದೆ. ಅದರಂತೆ ಮೇ 13ರಂದು ವರುಣ ಕ್ಷೇತ್ರದ ಮೆಲ್ಲಹಳ್ಳಿ ಸಮೀಪದ ಖಾಸಗಿ ಮದುವೆ ಮಂಟಪದಲ್ಲಿ ನಡೆಲಯಲಿದೆ.
ಮೇ 17ರಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಸಮಾರೋಪ ಸಮಾರಂಭ ಕಾರ್ಯಕ್ರಮವೂ ಅಲ್ಲೇ ನಡೆಸುವುದರಿಂದ ಅಲ್ಲಿಗೆ ಸ್ವತಃ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಆಹ್ವಾನಿಸಿದ್ದೇವೆ. ಅವರ ನೇತೃತ್ವದಲ್ಲಿಯೇ ಸಭೆ ನಡೆಯಲಿದೆ ಎಂದು ಹೇಳಿದರು.
ಜೆಡಿಎಸ್ ನ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಮಾತನಾಡಿ, ವ್ಯಭಿಚಾರ, ದರೋಡೆ, ಭ್ರಷ್ಟಾಚಾರ ಮೂರರಲ್ಲೂ ಭಾಗಿಯಾದ ಅಧಿಕಾರಿಗೆ ಕ್ಲೀನ್ ಚಿಟ್ ನೀಡುವುದಾದರೆ ಶಿಕ್ಷೆ ಕೊಡುವುದಾದರೂ ಯಾರಿಗೆ ಮುಖ್ಯಮಂತ್ರಿಗಳೇ?ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಮೇಲೆ ಗುರುತರ ಆರೋಪಗಳು ಕೇಳಿ ಬಂದಿವೆ.
ಆದರೂ ಅವರ ಮೇಲಿನ ಅಮಾನತು ರದ್ದುಪಡಿಸಿ ಮತ್ತೆ ಕರ್ತವ್ಯಕ್ಕೆ ನಿಯೋಜಿಸಿರುವುದರ ಔಚಿತ್ಯವೇನಿತ್ತು. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಆರೋಪಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ಬಟ್ಟೆ ಬ್ಯಾಗ್ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದ ಜನರು ಸಾವನ್ನಪ್ಪಲು ರೋಹಿಣಿ ಸಿಂಧೂರಿ ಪ್ರಮುಖ ಕಾರಣ. ಆದರೂ ಅವರನ್ನು ಶಿಕ್ಷಿಸುವ ಬದಲು ರಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹರಿಹಾಯ್ದರು.
ಐಪಿಎಸ್ ಅಧಿಕಾರಿ ತಮ್ಮ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿ ಜತೆ ಹಿರಿಯ ಅಧಿಕಾರಿ ಅನೂಚಿತವಾಗಿ ನಡೆದುಕೊಂಡಿದ್ದರು. ವಿಡಿಯೋಗಳು ವೈರಲ್ ಆಗಿದ್ದವು. ಅವರಿಗೆ ಸರ್ಕಾರ ಕ್ಲೀನ್‌ಚಿಟ್ ಕೊಟ್ಟಿದೆ. ರನ್ಯಾ ರಾವ್ ತಂದೆಯ ಸರ್ಕಾರಿ ಕಾರಿನಲ್ಲಿ ರಾಜಾರೋಷವಾಗಿ ಓಡಾಡಿದ್ದು ದೃಢಪಟ್ಟಿತ್ತು.
ಅದೇ ಅಧಿಕಾರಿಗೆ ಇಲವಾಲ ಜಂಕ್ಷನ್‌ನಲ್ಲಿ ಹಲವು ವರ್ಷಗಳ ಹಿಂದೆ ನಡೆದ ದರೋಡೆ ಕೇಸ್‌ನಲ್ಲೂ ಸಿದ್ದರಾಮಯ್ಯ ಅವರು ಕ್ಲೀನ್‌ಚಿಟ್ ಕೊಟ್ಟಿದ್ದರು. ಈಗ ಅಮಾನತು ವಾಪಸ್ ಪಡೆಯುವ ಮೂಲಕ ವಿನಾಯಿತಿ ನೀಡಲಾಗಿದೆ.
ಇನ್ನೊಬ್ಬ ಮಹಿಳಾ ಐಎಎಸ್ ಅಧಿಕಾರಿ ಪಾರಂಪರಿಕ ಕಟ್ಟಡದ ಅನಧಿಕೃತ ನವೀಕರಣ, ಪೀಠೋಪಕರಣ ಕಳ್ಳತನ, ಅಧಿಕಾರ ದುರುಪಯೋಗದಂತಹ ಅನೇಕ ಅಕ್ರಮಗಳನ್ನು ಎಸಗಿದ್ದರು. ಹೈಕೋರ್ಟ್ ತೀರ್ಪಿನ ಬಳಿಕ ಸುಪ್ರೀಂಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.
ಇದ್ಯಾವುದೂ ವೈಯುಕ್ತಿಕ ವ್ಯವಹಾರ ಅಲ್ಲ. ಸುಪ್ರೀಂಕೋರ್ಟ್ಗೆ ಹೋಗಲು ಆ ಅಧಿಕಾರಿ ಸರ್ಕಾರದಿಂದ ಅನುಮತಿ ಪಡೆದಿದ್ದಾರೆಯೇ?, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 32 ಜನರು ಮೃತಪಟ್ಟರು. ಅದಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕೈಗೊಂಡ ಕ್ರಮ ಏನು? ಆ ಸಾವುಗಳಿಗೆ ಕೊಟ್ಟ ಬೆಲೆ ಏನು? ಘಟನೆ ನಡೆದಾಗ ವೀರಾವೇಷದಿಂದ ಬಂದು ತನಿಖೆಗೆ ಆಗ್ರಹಿಸಿದ್ದ ಈಗಿನ ಸಿದ್ದರಾಮಯ್ಯ ಅವರೇ, ತನಿಖಾ ವರದಿ ಏನಾಯಿತು? ಮುಖ್ಯ ಕಾರ್ಯದರ್ಶಿ ಯಾವ ಒತ್ತಡಕ್ಕೆ ಮಣಿದು ಸುಮ್ಮನಾದರು ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಹಾಗು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಅಶ್ವಿನ್ ಕುಮಾರ್, ಮಾಜಿ ಮೇಯರ್ ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಜೆಡಿಎಸ್ ನಗರಾಧ್ಯಕ್ಷ ಎಸ್ ಬಿಎಂ ಮಂಜು, ಮುಖಂಡರಾದ ರಮೇಶ್, ಅಭಿಷೇಕ್, ಕೆ.ಟಿ.ಚಲುವೇಗೌಡ, ಯುವಘಟಕದ ಅಧ್ಯಕ್ಷ ಮದನ್ ಸೋಮು, ಅಭಿಷೇಕ್, ರಮೇಶ್(ರವಿ), ಚಂದ್ರಹಾಸ್, ರಘುರಾಮ್, ರಿಜ್ವಾನ್, ಪ್ರಕಾಶ್, ಹೇಮಾವತಿ, ಇನ್ನಿತರರು ಉಪಸ್ಥಿತರಿದ್ದರು.
ನನ್ನ ಹುಟ್ಟು-ಸಾವು ಕೆ.ಆರ್.ನಗರದಲ್ಲೇ: ಸಾರಾ
ಮೈಸೂರು: ನಾನು ಕೆ.ಆರ್. ನಗರ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ, ನನ್ನ ರಾಜಕೀಯ ಹುಟ್ಟು-ಸಾವು ಎರಡೂ ಕೂಡ ಕೆ.ಆರ್.ನಗರ ಕ್ಷೇತ್ರದಲ್ಲಿ ಮಾತ್ರ. ಹೊರತಾಗಿ ಯಾವ ಕ್ಷೇತ್ರಕ್ಕೂ ನಾನು ಹೋಗುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.
ಇವತ್ತಿನ ರಾಜಕೀಯ ವ್ಯವಸ್ಥೆಯನ್ನು ನೋಡಿದರೆ ನಾವು ರಾಜಕಾರಣಿಗಳು ಎಂದು ಹೇಳಿಕೊಳ್ಳಲು ಅಸಹ್ಯವಾಗುತ್ತಿದೆ. ನಾನು ಬದುಕಿರುವವರೆಗೂ ನನ್ನ ಕುಟುಂಬದ ಯಾರೊಬ್ಬರು ಸಹ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ವೇಳೆ ನನ್ನ ಕುಟುಂಬದ ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೆ ನಾನು ಆ ಕೂಡಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕೆ.ಆರ್.ನಗರದ ಜನರೇ ಅಷ್ಟು ಪ್ರೀತಿ, ವಿಶ್ವಾಸ, ಅಭಿಮಾನ ತೋರಿಸುತ್ತಿರುವಾಗ ನಾನ್ಯಾಕೆ ಬೇರೆ ಕ್ಷೇತ್ರಕ್ಕೆ ಹೋಗಲಿ. ನಮ್ಮ ಕುಟುಂಬಕ್ಕೆ ಕೆ.ಆರ್.ನಗರ ಕ್ಷೇತ್ರದ ಜನರ ಋಣವಿದೆ. ಹೀಗಾಗಿ ವೈದ್ಯನಾಗಿ ಡಾ.ಧನುಷ್ ಸೇವೆ ಮಾಡುತ್ತಿದ್ದಾನೆ. ಯಾವುದೇ ಕಾರಣಕ್ಕೂ ನನ್ನ ಕುಟುಂಬದ ಯಾರೊಬ್ಬರೂ ಚುನಾವಣೆಗೆ ಬರುವುದಿಲ್ಲ ಎಂದು ಪುನರುಚ್ಛರಿಸಿದರು.
ಒಡೆಯರ್ ವಾರಿಯರ್ ಪೋಸ್ಟರ್ ಬಿಡುಗಡೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಜನತಾ ದಳ ಪ್ರೀಮಿಯರ್ ಲೀಗ್(ಜೆಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಮೈಸೂರು ತಂಡದ ಪೋಸ್ಟರ್ ಅನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಅಶ್ವಿನ್ ಕುಮಾರ್, ಮೇ 18ರಂದು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಮೈಸೂರು ಜಿಲ್ಲೆಯ ತಂಡಕ್ಕೆ ಒಡೆಯರ್ ವಾರಿಯರ್ ಎಂದು ಹೆಸರಿಟ್ಟಿದ್ದು, ವಿವಿಧ ತಾಲೂಕುಗಳ ಆಟಗಾರರನ್ನೂ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.









