ವಿಜಯ ದರ್ಪಣ ನ್ಯೂಸ್…..
ಅಪಘಾತ ತಡೆಗೆ ಗ್ರಿಲ್ ಅಳವಡಿಕೆ: ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ

ವಿಜಯಪುರ ದೇವನಹಳ್ಳಿ ತಾಲ್ಲೂಕು: ಚಿಕ್ಕಬಳ್ಳಾಪುರ-ದೇವನಹಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತ ತಡೆಗೆ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಮುದುಗುರ್ಕಿ ಬಳಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತ ತಡೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಪೊಲೀಸರು ಹೆಚ್ಚಿನ ಮಾಹಿತಿ ಪಡೆದರು. ರಸ್ತೆಯ ಮಧ್ಯೆ ಭಾಗದ ವಿಭಜಕಕ್ಕೆ ಕಬ್ಬಿಣದ ಗ್ರೀಲ್ ಅಳವಡಿಸಲು ಸಾರ್ವಜನಿಕರು ಒಪ್ಪಿಗೆ ಸೂಚಿಸಿದರು.
ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಂಚರಿಸಲಿವೆ. ರಸ್ತೆಯಲ್ಲಿ ತೆರೆದ ವಿಭಜಕ ಇದ್ದರೆ ಪಾದಾಚಾರಿಗಳು ರಸ್ತೆ ದಾಟುವಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸುಮಾರು 2.5 ಕಿ.ಮೀ ನಷ್ಟು ರಸ್ತೆಯ ಮಧ್ಯೆ ವಿಭಜಕಕ್ಕೆ ಕಬ್ಬಿಣದ ಗ್ರೀಲ್ ಬಳಸಿ ತಡೆಗೋಡೆ ನಿರ್ಮಿಸಲಾಗುವುದು ಎಂದು ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ ತಿಳಿಸಿದರು.
ಪಾದಾಚಾರಿಗಳ ಅಪಘಾತ ತಡೆ ಹಾಗೂ ಸುರಕ್ಷತೆಗಾಗಿ ಇರಿಗೇನಹಳ್ಳಿ ಗೇಟ್, ನಾಗಾರ್ಜುನ್ ಕಾಲೇಜು ಬಳಿಯ ನಿಗಧಿತ ಸ್ಥಳಗಳಲ್ಲಿ ಮಾತ್ರ ರಸ್ತೆ ದಾಟಲು ಅವಕಾಶ ಇರಲಿದೆ. ಹೆದ್ದಾರಿಯ ಸರ್ವಿಸ್ ರಸ್ತೆಯನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಮತ್ತು ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಬಳಸಿ, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬೇಡಿ, ಮದ್ಯಪಾನ್ ಮಾಡಿ ವಾಹನ ಚಲಾಯಿಸದಂತೆ ಸಲಹೆ ನೀಡಿದರು.
ಹೆದ್ದಾರಿಯ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ವಾಹನ ಸವಾರರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸಭೆಯಲ್ಲಿ ಸಾರ್ವಜನಿಕರಿಗೆ ಭರವಸೆ ನೀಡಿದರು.
ಹೆದ್ದಾರಿ ರಸ್ತೆಯ ಎರಡು ಬದಿಗಳಲ್ಲಿ ಟಿಪ್ಪರ್, ಲಾರಿಗಳ ನಿಲುಗಡೆಯಿಂದ ವಾಹನ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಮಾಡದಂತೆ ಪೊಲೀಸರು ಚಾಲಕರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸಾರ್ವಜನಿಕರು ಒತ್ತಾಯಿಸಿದರು.
ಸ್ಥಳೀಯ ಮುಖಂಡರಾದ ಬಯಪ್ಪ ಸದಸ್ಯ ವೆಂಕಟಗಿರಿಕೋಟೆಯ ರಾಮಚಂದ್ರಪ್ಪ, ಹೆದ್ದಾರಿ ವ್ಯವಸ್ಥಾಪಕ ಯೋಗೇಶ್, ಎಸ್ ಐ ಸುನೀಲ್ ಕುಮಾರ್, ಮಹೇಶ್ ಬಾಬು, ಪ್ರದೀಪ್, ವೆಂಕಟೇಶ್, ಅರುಣ್, ಇದ್ದರು.








